ADVERTISEMENT

ನವಮಾಧ್ಯಮದ ನಗೆಲೋಕ

ಅಭಿಲಾಷ ಬಿ.ಸಿ.
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ನವಮಾಧ್ಯಮದ ನಗೆಲೋಕ
ನವಮಾಧ್ಯಮದ ನಗೆಲೋಕ   

‘ಈ ಸಲ ಕಪ್‌ ನಮ್ದೆ’ ನೆಟಿಜನ್ನರ ಸಾಮಾಜಿಕ ಮಾಧ್ಯಮಗಳ ಗೋಡೆಯಲ್ಲಿನ ಸದ್ಯದ ಘೋಷವಾಕ್ಯವಿದು. ಹೌದು ಕಳೆದ 10 ಐಪಿಎಲ್‌ ಸರಣಿಗಳಲ್ಲಿ ಗೆಲುವು ಕಾಣದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸದ್ಯ ಟ್ರೋಲ್‌ಗೊಳಗಾಗಿದೆ. ಆರ್‌ಸಿಬಿ ಗೆಲುವಿಗೆ ಪಣತೊಟ್ಟಿರುವವರ ಪರಿ ಹೇಗಿದೆ ಎಂದರೆ, ಕ್ರಿಕೆಟ್‌ನ ಕಡುಮೋಹಿಯೊಬ್ಬ ಸತ್ತು ಯಮಲೋಕಕ್ಕೆ ತೆರಳಿದಾಗ, ‘ಕೆಂಪು ಕುಂಕುಮ, ಕಪ್ಪು ಕುಂಕುಮ’ ಎಂದು ಪುನರಾವರ್ತಿಸುವಂತೆ ಯಮಧರ್ಮ ಆದೇಶಿಸಿದರೂ ಆತ ಉದ್ಧರಿಸುವುದು ಮಾತ್ರ ‘ಈ ಬಾರಿ ಕಪ್‌ ನಮ್ದೆ’ ಎಂದು.

ಇನ್ನು ಯುಗಾದಿ ಸಂದರ್ಭದಲ್ಲಿ ಹರಿದು ಬಂದ ಶುಭಾಶಯಗಳ ಮಹಾಪೂರವನ್ನು ಡಿಲೀಟ್‌ ಮಾಡಲು ಒಬ್ಬ ಒಳ್ಳೆಯ ಕಂಪ್ಯೂಟರ್ ಎಂಜಿನಿಯರ್‌ನನ್ನು ನೇಮಿಸಿಕೊಳ್ಳುವ ಸನ್ನಾಹದಲ್ಲಿದ್ದವರಿಗೆ ರಾಮನವಮಿಯ ಶುಭಾಶಯ ಹೊತ್ತ ಮೀಮ್ಸ್‌, ನಗೆಹನಿಗಳು ಮೊಬೈಲ್‌ನ ಮೆಮೊರಿಯನ್ನು ತಿಂದು ತೇಗಿ ಶಾಕ್‌ ನೀಡಿವೆ.

‘ಕೋಸಂಬರಿ, ಪಾನಕ ತಯಾರಿಸುವ ಅಂದದ ಆಂಟಿಯರಿಗೂ, ಅವುಗಳನ್ನು ಚಾಚೂ ತಪ್ಪದೆ, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಿಗೆ ಅಪ್‌ಲೋಡ್‌ ಮಾಡುವ ಚಂದದ ಹುಡುಗಿಯರಿಗೂ, ತಯಾರಾದ ಭಕ್ಷ್ಯಗಳನ್ನು ತಿಂದು ತೇಗುವ ಮರ್ಯಾದ ಪುರುಷೋತ್ತಮರಿಗೂ ರಾಮ ನವಮಿ ಶುಭಾಶಯಗಳು’ ಎನ್ನುವ ಜೋಕ್‌ಗಳಿಂದ ಹಿಡಿದು, ‘ರಾಮ ನಂಥ ಗಂಡ, ಸೀತೆ ಯಂತಹ ಹೆಂಡತಿ ಸಿಕ್ಕು, ರಾಮಾಯಣದಂಥ ಸಂಸಾರ ನಿಮ್ಮದಾಗಲಿ’ ಎನ್ನುವ ಪುರಾಣದ ಪಾತ್ರಗಳನ್ನೆಲ್ಲಾ ಹೊತ್ತ ತರಹೇವಾರಿ ನಗೆ ಹನಿಗಳು ಸಾಮಾಜಿಕ ಮಾಧ್ಯಮಗಳಲ್ಲೀಗ ರಾರಾಜಿಸುತ್ತಿವೆ.

ADVERTISEMENT

ಅದು ದೀಪಾವಳಿಯೇ ಇರಲಿ, ಬಕ್ರೀದೇ ಬರಲಿ, ಕ್ರಿಸ್‌ಮಸ್ಸೇ ಆಗಿರಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಶುಭಾಶಯ ಸಲ್ಲಿಸುವ ಜೊತೆಯಲ್ಲಿ ನಮ್ಮನ್ನು ಒಂದಿಷ್ಟು ರಂಜಿಸಲು ನೆಟಿಜನ್ನರು ಸದಾ ಸಿದ್ಧ. ಹ್ಞಾಂ ‘ಸದಾ ಸಿದ್ಧ’ ರಾಜ್ಯ ಸರ್ಕಾರ ಜಾಹೀರಾತು ಘೋಷಣೆಯಿಂದ ಅಷ್ಟೇ ಚೆನ್ನಾಗಿ ವಿಡಂಬಿಸಿ ಬಳಕೆಯಾಗುತ್ತಿದೆ. ‘ನುಡಿದಂತೆ ಒಡೆದ ಸರ್ಕಾರ. ಜಾತಿ, ಧರ್ಮಗಳನ್ನು ಒಡೆದು ಆಳುವಲ್ಲಿ ಸದಾ ಸಿದ್ಧ ಸರ್ಕಾರ’ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿದ ರೀತಿ ಇದು.

ಸಮಕಾಲೀನ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಬೆಳವಣಿಗೆಗಳಿಗೆ ತಕ್ಷಣದಲ್ಲಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಸಮೂಹವೊಂದು ನವಮಾಧ್ಯಮಗಳಲ್ಲಿ ಮೋಡಿ ಮಾಡುತ್ತಿದೆ. ಪ್ರಚಲಿತ ವಿದ್ಯಮಾನಗಳನ್ನು ಪ್ರಶ್ನಿಸುತ್ತಾ, ಚರ್ಚಿಸುತ್ತಾ, ಕೆಲವೊಮ್ಮೆ ಪ್ರತಿಭಟನೆಗಳಿಗೆ ಪ್ರೋತ್ಸಾಹಿಸುವ ಪ್ರವೃತ್ತಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತವಾಗಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಹೇಳಲಾರದ, ಚರ್ಚಿಸದ ವಿಷಯಗಳ ಮೇಲೆ ವಿಡಂಬನಾತ್ಮಕವಾಗಿ, ಹಾಸ್ಯಲೇಪಿತವಾಗಿ ಬೆಳಕು ಚೆಲ್ಲುವ ವೇದಿಕೆಯೂ ಆಗಿದೆ. ಗುಂಡ, ಬಸ್ಯಾ, ಪುಟ್ಟ, ಕೋಲ್ಯ ಪಾತ್ರಗಳು ಪ್ರಸ್ತುತ ವಿದ್ಯಮಾನಗಳಿಗೆ ನಮ್ಮೊಳಗಿನ ಅಭಿವ್ಯಕ್ತಿ ಎನ್ನುವಷ್ಟು ಆಪ್ತವಾಗುತ್ತಿವೆ.

‘ಫೇಸಬುಕ್‌ದಾಗ ವಾಟ್ಸಪ್‌ದಾಗ 500–1000 ರೂಪಾಯಿದು ಸಿಕ್ಕಾಪಟ್ಟೆ ಜೋಕ್ಸ್‌ ಮಾಡೋದು ನೋಡಿದ್ರ, ನಮ್ಮ ದೇಶದಾಗ ಕಪ್ಪುಹಣಕ್ಕಿಂತ, ನಿರುದ್ಯೋಗನೇ ಜಾಸ್ತಿ ಐತಿ ಅಂತ ಅನ್ಸತೈತಿ’ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹರಿದಾಡುತ್ತಿದ್ದ ಈ ಮೀಮ್ಸ್‌ ನಗೆಹನಿಗಳ ಕರ್ತೃಗಳನ್ನು ತಣ್ಣಗೆ ವಿಡಂಬಿಸಿತ್ತು. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ನೆಟ್ಟಿಗರು ಹಾಸ್ಯದ ಮೂಲಕ ಅಭಿವ್ಯಕ್ತಿಸದ ವಿಷಯವಿಲ್ಲ. ತೀಕ್ಷ್ಣ ಪ್ರತಿಕ್ರಿಯೆಯ ಈ ಸಮೂಹವನ್ನು ನಿರೋದ್ಯೋಗಿಗಳು ಎನ್ನುವುದಕ್ಕಿಂತ ಕ್ರಿಯಾಶೀಲರು, ಸೃಜನಶೀಲರು ಎನ್ನುವುದೇ ಹೆಚ್ಚು ಸೂಕ್ತ. ಕೆಲವೊಮ್ಮೆ ಇವು ರಾಜಕೀಯ ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಪ್ರತಿಪಾದಿಸುವ ‘ಶಿಖರಪ್ರಾಯ’ ವ್ಯಕ್ತಿ ಮತ್ತು ಶಕ್ತಿಗಳ ಗಾಳಗಳಾಗುವುದು ವಿಪರ್ಯಾಸ.

ಇನ್ನು ರಾಜಕೀಯ ಧುರೀಣರು, ಸಿನಿಮಾ ನಟ ನಟಿಯರೆಂದರೆ, ನೆಟಿಜನ್ನರಿಗೆ ವಿಶೇಷ ಪ್ರೀತಿ. ಟ್ರೋಲ್‌ ಲೋಕದ ಚಿರಪರಿಚಿತರಿವರು, ನಗೆಹನಿಗಳ ನಾಯಕರಿವರು. ರಾಹುಲ್‌ ಗಾಂಧಿಯವರ ಬಸವಣ್ಣನ ವಚನ ವಾಚನ, ನರೇಂದ್ರ ಮೋದಿಯವರ ವಿದೇಶಿ ಪ್ರವಾಸ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾರಂಭಗಳಲ್ಲಿನ ನಿದ್ದೆ, ದೇವೇಗೌಡರ ಮಾತಿನ ವೈಖರಿ ಮೀಮ್ಸ್‌ಲೋಕಕ್ಕೆ ನಿತ್ಯ ನೂತನ ಆಹಾರ. ಹಾಸ್ಯನಟರಾದ ಸಾಧುಕೋಕಿಲ ರಂಗಾಯಣ ರಘು ಸಿನಿಮಾಗಳಿಗಿಂತ ಹೆಚ್ಚಾಗಿ ರಾರಾಜಿಸುವುದು ಇದೇ ಲೋಕದಲ್ಲಿ ಎಂದರೆ ಅತಿಶಯೋಕ್ತಿಯಾಗಲಾರದು.

ಈ ರೀತಿಯ ನಗೆಹನಿಗಳ ಸೃಷ್ಟಿಸುವಲ್ಲಿ ಯುವಸಮೂಹದ ಶ್ರಮ ಅವಿರತ. ಕನ್ನಡ ಮೀಮ್ಸ್‌, ಉತ್ತರ ಕರ್ನಾಟಕ ಮೀಮ್ಸ್, ನಮ್ಮ ಬೆಂಗಳೂರು ಮೀಮ್ಸ್‌, ಉತ್ತರ ಕರ್ನಾಟಕ ಹೈಕಳು... ಹೀಗೆ ಎಲ್ಲ ಸಮೂಹಗಳಲ್ಲಿ ಯುವಜನರ ಪಡೆ ದೊಡ್ಡದಿದೆ. ಯುವಕರಿದ್ದ ಮೇಲೆ ಅಲ್ಲಿ ಪ್ರೀತಿ, ಪ್ರೇಮ, ಶಿಕ್ಷಣದ ವಿಷಯಗಳು ನಗೆ ಚಟಾಕಿಗಳಾಗದಿರಲು ಹೇಗೆ ಸಾಧ್ಯ? ಬೆಂಗಳೂರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುವ ಶಿಕ್ಷಣಸಂಸ್ಥೆಗಳು, ಅದರಲ್ಲೂ ಎಂಜಿನಿಯರ್‌ ಕಾಲೇಜುಗಳು ನಿತ್ಯ ಹಾಸ್ಯಕ್ಕೆ ವಸ್ತುಗಳಾಗುತ್ತಿವೆ. ‘ಬೆಂಗಳೂರಿನ ಯಾವುದೇ ಗಲ್ಲಿಯಲ್ಲಿ ನಿಂತು ಕಲ್ಲು ಹೊಡೆದರು ಅದು ಒಂದೋ ಎಂಜಿನಿಯರಿಂಗ್ ವಿದ್ಯಾರ್ಥಿಗೆ, ಇಲ್ಲವೆ, ಬೀದಿನಾಯಿಗೆ ತಗಲುತ್ತದೆ’ ಎಂದು ಒಬ್ಬರು ಪೋಸ್ಟ್‌ ಮಾಡಿದರೆ, ಅದಕ್ಕೆ ತಕ್ಷಣದಲ್ಲಿ ‘ದಯವಿಟ್ಟು ಗಮನಿಸಿ ಈ ಪೋಸ್ಟ್‌ನಲ್ಲಿನ ನಾಯಿಗೂ ವಿದ್ಯಾರ್ಥಿ ಜೀವನಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಪ್ರತಿಕ್ರಿಯಿಸುವ ಮತ್ತೊಬ್ಬರು ಹಾಸ್ಯಪ್ರಜ್ಞೆ ಮೆರೆಯುತ್ತಾರೆ.

‘ಡಿಪ್ಲೊಮಾ ಮುಗಿದ ನಂತರ ಎಂಜಿನಿಯರಿಂಗ್‌ ಮಾಡುವುದು, ಸತ್ತ ನಂತರ ತಿಥಿ ಮಾಡಿದಂತೆ. ಏನೂ ಪ್ರಯೋಜನವಿಲ್ಲದಿದ್ದರೂ ಆತ್ಮಕ್ಕೆ ಶಾಂತಿ ಸಿಗುತ್ತದೆ...’ ಈ ಬಗೆಯ ಜೋಕ್‌ಗಳಲ್ಲಿನ ಹೋಲಿಕೆ ಬೆರಗು ಹುಟ್ಟಿಸುತ್ತದೆ. ಯಾವುದೇ ಕೋರ್ಸ್‌ನ ವಿದ್ಯಾರ್ಥಿಗೂ ಕೋರ್ಸ್‌ ಕುರಿತು ಹೊಗಳಲು ಇಲ್ಲಿ ಅವಕಾಶವಿಲ್ಲ. ಆತ್ಮರತಿಯಿಂದ ಯಾರೇ ಏನನ್ನೇ ಪೋಸ್ಟ್‌ ಮಾಡಿದರೂ ಆತ್ಮಭಂಗವಾಗುವುದರಲ್ಲಿ ಸಂದೇಹವಿಲ್ಲ. ಇನ್ನು ಪ್ರೀತಿಯ ಕುರಿತ ಹಾಸ್ಯಗಳಿಗೆ ಪರಿಧಿಯೇ ಇಲ್ಲ. ಪಟ್ಟಿ ಮಾಡಹೊರಟರೆ ಬೆಳೆಯುತ್ತಲೇ ಇರುತ್ತದೆ; ಪ್ರೀತಿಯ ಆಳ–ಅಗಲದಂತೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.