ADVERTISEMENT

ನಾಯಕತ್ವ ರೂಢಿಸಿದ ಯುವ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

 ಅರ್ಕಾವತಿ ನದಿಗೆ  ಕಟ್ಟಲಾಗಿರುವ ಮಂಚನಬಲೆ ಅಣೆಕಟ್ಟೆಯ ಸುತ್ತಲಿನ ಸುಂದರ ಪರಿಸರದಲ್ಲಿರುವ `ವಾಲ್ಯೂ ಲೇನ್ಸ್~ನಲ್ಲಿ ನಾಲ್ಕು ದಿನಗಳ ಕಾಲ ಹಬ್ಬದ ವಾತಾವರಣ. ಅಲ್ಲಿ ನೆರೆದಿದ್ದ ಯುವ ಸಮೂಹ ಮೌಲ್ಯಯುತವಾದ ಅನುಭವಕ್ಕೆ ಸಾಕ್ಷಿಯಾಗಿದ್ದರು.

ಅದು `ಯುವ ಸ್ಪರ್ಶ-2~ ಶಿಬಿರ. ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ (ಎಬಿಬಿಕೆಎಂ) ಆಯೋಜಿಸಿದ್ದ ಈ ಶಿಬಿರದಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಒಟ್ಟು 77 ಯುವ ಮನಸ್ಸುಗಳು ಭಾಗವಹಿಸಿದ್ದವು.ಭವಿಷ್ಯದ ಪ್ರಜೆಗಳು ಎಂದು ಕರೆಸಿಕೊಳ್ಳುವ ಯುವ ಜನತೆಗೆ ನಾಯಕತ್ವ ಗುಣ, ಅದನ್ನು ಅಭಿವೃಧ್ಧಿ ಪಡಿಸುವ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ `ಎಬಿಬಿಕೆಎಂ~ಯ ಕರ್ನಾಟಕ ಪರಿಷತ್ ಬೆಂಬಲದೊಂದಿಗೆ  ನಡೆದ ಈ ನಾಯಕತ್ವ ಶಿಬಿರದಲ್ಲಿ ವಿವಿಧ ರಾಜ್ಯಗಳ ಆಯ್ದ 16 ವರ್ಷದಿಂದ 24 ವರ್ಷದವರೆಗಿನ ಒಟ್ಟು 77 ಯುವಕ ಯುವತಿಯರು ಭಾಗವಹಿಸಿದ್ದರು.

ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಬಗ್ಗೆ ತರಬೇತಿ ಜೊತೆಗೆ ಪ್ರಾಯೋಗಿಕ ಕಾರ್ಯಕ್ರಮಗಳ ಮೂಲಕವೂ ಯುವ ಸಮೂಹ ಮಾರ್ಗದರ್ಶನ ಪಡೆಯಿತು.ತರಬೇತಿಯ ಜೊತೆಗೆ ಸಾಹಸಮಯ, ಕೌಶಲ ವೃದ್ಧಿಸುವ ಆಟ, ಮನೋರಂಜನೆ ಕಾರ್ಯಕ್ರಮಗಳು, ಪರಸ್ಪರರ ಜೊತೆ ಸಂವಾದ.. ಹೀಗೆ ಯುವ ಜನತೆಯ ಮನಸ್ಸನ್ನು ಸ್ಪರ್ಶಿಸುವ ಎಲ್ಲಾ ಕಾರ್ಯಕ್ರಮಗಳು ಅಲ್ಲಿ ಇದ್ದವು.

`ಎಬಿಬಿಕೆಎಂ~ ರಾಷ್ಟ್ರೀಯ ಅಧ್ಯಕ್ಷ ನಾರಾಯಣ ರಾವ್ ತಾತುಸ್ಕರ್, ಯುವ ಸ್ಪರ್ಶ-2ನ ಸಂಚಾಲಕ ಮತ್ತು ಅಧ್ಯಕ್ಷ ಸುಧೀರ್ ನವಲೆ, `ಎಬಿಬಿಕೆಎಂ~ಯ ಯುವ ಕರ್ನಾಟಕ ಪರಿಷತ್‌ಅಧ್ಯಕ್ಷ ಶ್ರೀನಿವಾಸ್ ಡಿ, ಯುವ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಯೋಗೇಂದ್ರ ವರ್ನೆ ಕೂಡ  ಶಿಬಿರದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬಾಲಕೃಷ್ಣ ಕ್ಷೀರಸಾಗರ, ಗೋಪಾಲರಾವ್ ಬಾಸೂತ್ಕರ್ ಮತ್ತು ಸಾಯಿನಾಥ್ ಅವಂತ್ಕರ್ ನೆರವು ನೀಡಿದರು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಟ್ಟ ಹತ್ತುವುದು, ಹಗ್ಗದ ಮೂಲಕ ಬೆಟ್ಟ ಇಳಿಯುವುದು, ಕಿರು ಹಾಸ್ಯ ರೂಪಕಗಳು, ವೇಗದ ನಡಿಗೆ, ಬೋಟ್ ಸ್ಪರ್ಧೆ ಸೇರಿದಂತೆ ಶಿಬಿರದಲ್ಲಿ ಆಯೋಜಿಸಿದ್ದ ಹಲವಾರು ಸ್ಪರ್ಧೆಗಳಲ್ಲಿ ಭಾಗಹಿಸಿದ್ದ ಯುವ ಜನತೆ ಭರಪೂರ ಮನರಂಜನೆ ಪಡೆಯುವುದರ ಜೊತೆಗೆ ತಮ್ಮ ನಾಯಕತ್ವ ಗುಣಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಭವಿಷ್ಯದ ಜೀವನಕ್ಕೆ ನೆರವಾಗುವಂತಹ ಹಲವು ಮಾಹಿತಿಗಳನ್ನು, ಅನುಭವಗಳನ್ನು ತಮ್ಮದಾಗಿಸಿಕೊಂಡರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.