ADVERTISEMENT

ನಿಜವಾದ ಬಾಂಬ್ ಹೇಗಿರುತ್ತೆ ಗೊತ್ತಿಲ್ಲ!

ಡಿ.ಕೆ.ರಮೇಶ್
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST
ನಿಜವಾದ ಬಾಂಬ್ ಹೇಗಿರುತ್ತೆ ಗೊತ್ತಿಲ್ಲ!
ನಿಜವಾದ ಬಾಂಬ್ ಹೇಗಿರುತ್ತೆ ಗೊತ್ತಿಲ್ಲ!   

ಹೆಸರು ಅನಿಲ್ ಕುಮಾರ್, ಅಲಿಯಾಸ್ ಬಾಂಬ್ ಅನಿಲ್, ಅಲಿಯಾಸ್ ಗನ್ ಅನಿಲ್! ಹುಟ್ಟೂರು ಕೇರಳದ ಕೊಲ್ಲಂ. ಈಗಿನ ವಾಸಸ್ಥಳ ಬೆಂಗಳೂರು. ಇಷ್ಟಕ್ಕೇ ಇವರ ಚರಿತ್ರೆ ಮುಗಿಯದು. ಸಾವಿರಾರು ಬಾಂಬ್‌ಗಳನ್ನು ಸಿಡಿಸಿದ, ನೂತನಾತಿನೂತನ ಗನ್‌ಗಳನ್ನು ತಯಾರಿಸಿದ ದೊಡ್ಡ `ಆರೋಪ~ವೇ ಇವರ ಮೇಲಿದೆ. ಬೇರೆಯವರು ಇದೇ ಕೆಲಸ ಮಾಡಿದ್ದರೆ ಜೈಲು ಸೇರಿರುತ್ತಿದ್ದರು. ಆದರೆ ಅನಿಲ್ ಮಾತ್ರ ಇಬ್ಬರ ಪಾಲಿಗೆ ಕಣ್ಮಣಿಯಾಗಿದ್ದಾರೆ; ಚಿತ್ರೋದ್ಯಮಿಗಳಿಗೆ ಹಾಗೂ ಪೊಲೀಸಿನವರಿಗೆ!

ಪೊಲೀಸಿನವರಿಗೆ ಹೇಗೆ ಕಣ್ಮಣಿಯಾದರು ಎನ್ನುವುದಕ್ಕೂ ಮೊದಲು ಇವರ `ಕೇಸ್ ಹಿಸ್ಟರಿ~ ಕೊಂಚ ನೋಡೋಣ. ಕೊಲ್ಲಂನಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಂದರ್ಭ. ಶಾಲೆಯಲ್ಲಿ ಚುನಾವಣೆ ನಡೆದಿತ್ತು. ಗಲಾಟೆಯೋ ಗಲಾಟೆ. ಯಾರೋ ಯಾರ ಮೇಲೊ ಹಲ್ಲೆ ನಡೆಸಿದರು. ಸಿಕ್ಕಿ ಹಾಕಿಕೊಂಡದ್ದು ಇದೇ ಹುಡುಗ. ತಕ್ಷಣ ದೊಡ್ಡಮ್ಮ ಬೆಂಗಳೂರಿಗೆ ಕರೆದುಕೊಂಡು ಬಂದರು. ಎರಡು ದಿನ ಇದ್ದು ಹೋಗಲೆಂದು ಬಂದವನು ಕಾಯಂ ಆಗಿ ಉಳಿದುಬಿಟ್ಟ. ಕೊಲ್ಲಂಗಿಂತಲೂ ಬೆಂಗಳೂರು ತಣ್ಣಗೆ ಕಂಡಿತು. ಆಗ ಶಾಲೆ ಬಿಟ್ಟ ಹುಡುಗನಿಗೆ ಮತ್ತೆ ಓದಲು ಸಾಧ್ಯವಾಗಲೇ ಇಲ್ಲ.

ಸಹನಟರನ್ನು ಒದಗಿಸುವ ಕಚೇರಿಯೊಂದಕ್ಕೆ ಸೇರಿದರು. ಹೊಟ್ಟೆಪಾಡಿಗೆ. ಸುಮಾರು ಒಂದು ವರ್ಷಗಳ ಕಾಲ ಅಲ್ಲಿಕೆಲಸ. ಪುಸ್ತಕ ಕೈ ಹಿಡಿಯದಿದ್ದರೇನಂತೆ? ಬುದ್ದಿ ಕೈ ಕೊಡಲಿಲ್ಲ. ನಾರಾಯಣ ಎಂಬುವವರು ಹುಡುಗನ ಕೆಲಸವನ್ನು ಗಮನಿಸಿದರು. ಚಿತ್ರರಂಗದಲ್ಲಿ ಸಾಹಸ ದೃಶ್ಯಗಳನ್ನು ನಿರ್ವಹಿಸುತ್ತಿದ್ದ ಮುನೀರ್ ಎಂಬುವವರಿಗೆ ಪರಿಚಯಿಸಿದರು. ಎಂಟೊಂಬತ್ತು ವರ್ಷಗಳ ಕಾಲ ಮುನೀರ್ ಅವರೊಟ್ಟಿಗೆ ಅವಿರತ ದುಡಿಮೆ. ನಂತರ ಸ್ವತಂತ್ರ ಹಕ್ಕಿಯಾಗುವ ಕನಸು.

ಸ್ವಂತವಾಗಿ ಚಿತ್ರರಂಗದಲ್ಲಿ ಬೇರೂರಬೇಕು ಎಂಬ ಆಸೆಗೆ ಏನೇನೋ ಅಡ್ಡಿ ಆತಂಕಗಳು ಎದುರಾದವು. ಮೂವರು ಗೆಳೆಯರೊಂದಿಗೆ ಸಹಭಾಗಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ. ಅಂಬರೀಷ್ ಸುದೀಪ್ ಅಭಿನಯದ ಚಿತ್ರವೊಂದನ್ನು ಓಂ ಪ್ರಕಾಶ್‌ರಾವ್ ನಿರ್ದೇಶಿಸುತ್ತಿದ್ದರು. ಮರುದಿನ ಶೂಟಿಂಗ್ ಇದೆ. ಆದರೆ ಚಿತ್ರಕ್ಕೆ ಅಗತ್ಯವಾದ `ಮಾರಕಾಸ್ತ್ರಗಳನ್ನು ಒದಗಿಸುತ್ತಿದ್ದ~ ಪಾರ್ಟ್‌ನರ್ ನಾಪತ್ತೆ. ಇನ್ನು ಚಿತ್ರರಂಗದ ಸಹವಾಸವೇ ಸಾಕು ಎಂಬುದು ಆ ಗೆಳೆಯನಿಂದ ಬಂದ ಉತ್ತರ. ಬೇರೆಲ್ಲಿಂದ ಅವುಗಳನ್ನು ಬಾಡಿಗೆಗೆ ತರುವುದು ಎಂಬಷ್ಟೂ ಬುದ್ದಿ ಬಲಿಯದ ಕಾಲವದು. ರಾತ್ರೋರಾತ್ರಿ ಸಿಟಿ ಮಾರ್ಕೆಟಿಗೆ ಓಡಿದರು ಅನಿಲ್. ಸಿಕ್ಕ ಸಿಕ್ಕ ಪೈಪ್‌ಗಳನ್ನು ಖರೀದಿಸಿದರು. ಅಲ್ಲಿಂದ ಶಿವಾಜಿನಗರಕ್ಕೆ ಓಟ. ಒಬ್ಬ ವೆಲ್ಡರ್‌ನನ್ನು ಹಿಡಿದರು. ಒಪ್ಪವಾಗಿ ಕತ್ತರಿಸಿ, ಒಂದನ್ನೊಂದು ಜೋಡಿಸಿ ಬೆಸೆದರು. ಸಿದ್ಧವಾಯಿತು `ಬಂದೂಕು~!

ಬೆಳಿಗ್ಗೆ ಎದ್ದು ಶೂಟಿಂಗ್ ಸ್ಥಳಕ್ಕೆ ಹೋಗುತ್ತಾರೆ. ಅಂದುಕೊಂಡಂತೆ ಕೆಲಸ ಮಾಡುತ್ತಲೇ ಇಲ್ಲ ಅದು. ಓಂಪ್ರಕಾಶ್‌ರಾವ್ ಅವರಿಗೆ ಹುಡುಗ ಯಾಕಿಷ್ಟು ಕಷ್ಟ ಪಡುತ್ತಿದ್ದಾನಲ್ಲಾ ಎಂಬ ಅನುಮಾನ. ನಡೆದದ್ದನ್ನೆಲ್ಲಾ ಕೇಳಿ ಹೋಗಲಿ ಬಿಡು ಎಂದು ಬೆನ್ನು ಸವರಿದರು. ಏನೇನೋ ಮಾಡಿ ಬಂದೂಕಿನಿಂದ ಕಡೆಗೂ ಕಿಡಿ ಹೊರಡಿಸಲಾಯಿತು.

ತಮಿಳು, ತೆಲುಗು, ಕನ್ನಡ ಹಿಂದಿ ಸೇರಿದಂತೆ ಸುಮಾರು ಒಂದೂವರೆ ಸಾವಿರ ಚಿತ್ರಗಳಿಗೆ ಲೆಕ್ಕವಿಲ್ಲದಷ್ಟು ಬಾಂಬ್‌ಗಳನ್ನು ಸಿಡಿಸಿದ್ದಾರೆ, ಬಂದೂಕುಗಳನ್ನು ಪೂರೈಸಿದ್ದಾರೆ ಅನಿಲ್. 20 ವರ್ಷಗಳಿಂದ ಇವರಿಗೆ ಅನ್ನ ನೀಡುತ್ತಿರುವುದು ಇವೇ `ಕ್ರೂರ~ ಆಯುಧಗಳು.

ಸರ್ಕಲ್ ಇನ್ಸ್‌ಪೆಕ್ಟರ್ ಸಿನಿಮಾದ ಚಿತ್ರೀಕರಣದ ಸಂದರ್ಭ. ಸಹಕಲಾವಿದರು ಓಡುತ್ತಿರಬೇಕು. ಪಕ್ಕದಲ್ಲೇ ಬಾಂಬ್‌ಗಳು ಸಿಡಿಯುತ್ತಿರಬೇಕು. ಸುಮಾರು 20 ಬಾಂಬ್‌ಗಳನ್ನು ಹುದುಗಿಸಿಡಲಾಗಿತ್ತು. ನಿರ್ದೇಶಕರು `ಆ್ಯಕ್ಷನ್~ ಹೇಳಿದರು. ಕಲಾವಿದರು ಓಡತೊಡಗಿದರು. ಆದರೆ ಇಟ್ಟಿದ್ದ ಬಹುತೇಕ ಬಾಂಬ್‌ಗಳು ಸ್ಫೋಟಿಸಲೇ ಇಲ್ಲ. ನಿರ್ದೇಶಕರ ಕೆಂಗಣ್ಣು ಅನಿಲ್ ಮೇಲೆ. ಹತ್ತಿರ ಹೋಗಿ ನೋಡಿದಾಗಲೇ ತಿಳಿದದ್ದು; ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆತುರದಲ್ಲಿ ಕಲಾವಿದರು ಓಡಿದಾಗ ಬಾಂಬ್‌ಗಳಿಗೆ ಸಂಪರ್ಕ ಕಲ್ಪಿಸಿದ್ದ ವೈರುಗಳು ಕಳಚಿ ಬಿದ್ದಿದ್ದವು!

ಚಿತ್ರ `ಅರ್ಜುನ~. ತಮಿಳುನಾಡಿನ ರಾಮೇಶ್ವರದಲ್ಲಿ ಚಿತ್ರೀಕರಣ. ಸಮುದ್ರ ತೀರದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಬಾಂಬ್ ಸಿಡಿಸುವ ದೃಶ್ಯ ಬಂತು. ಅನಿಲ್ ಟ್ರಯಲ್ ನೋಡಿದರು. ಪಟಪಟನೆ ಬಾಂಬ್‌ಗಳು ಸಿಡಿದು ಬೆಂಕಿಯ ಕೆನ್ನಾಲಿಗೆ ಚಾಚಿ ಪೋಸು ಕೊಟ್ಟವು. ಈಗ ರಿಯಲ್ ಶೂಟಿಂಗ್ ಆದರೆ ಎಲ್ಲಿಯ ಬಾಂಬ್ ಎಲ್ಲಿಯ ಸ್ಫೋಟ! ಎಲ್ಲಾ ಠುಸ್ ಪಟಾಕಿ. ಅರೆ ಟ್ರಯಲ್‌ನಲ್ಲಿ ಎಲ್ಲಾ ಸರಿಯಾಗಿದೆ ಆದರೆ ಶೂಟಿಂಗ್‌ಗೆ ಇಳಿದಾಗ ಯಾಕೆ ಹೀಗೆ ಎಂಬ ಪೇಚಾಟ. ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ಹೋದಾಗ ಅನಿಲ್ ಕೆಲ ಗೆಳೆಯರ ಮೊರೆ ಹೋದರು. ಸಮುದ್ರದಿಂದ ಬೀಸುತ್ತಿದ್ದ ತೇವ ಭರಿತ ಗಾಳಿಯೇ ಇದಕ್ಕೆಲ್ಲಾ ಕಾರಣ ಎಂಬುದು ಕಡೆಗೂ ಪತ್ತೆಯಾಯಿತು. ಇಂತಹ ಅನೇಕ ಕಷ್ಟದ ಸಂದರ್ಭಗಳನ್ನು ಅನುಭವಿಸಿದ್ದಾರೆ ಅನಿಲ್.

ಸಾರ್ವಭೌಮ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ನಾಯಕ ನಟ ಶಿವರಾಜ್‌ಕುಮಾರ್. ಅವರು ಹಾರಿ ಬೀಳುತ್ತಿದ್ದಂತೆ ಅವರ ಎದೆಗೆ `ಗುಂಡು~ ತಾಕಬೇಕು.  ಇತ್ತ ಗನ್‌ನಿಂದ ಎಲೆಕ್ಟ್ರಾನಿಕ್ ಕಿಡಿಗಳು ಹೊರಟವು. ಶಿವಣ್ಣನ ಎದೆಯಲ್ಲಿ ಅವಿತಿಟ್ಟ ಗುಂಡುಗಳು ಎದೆಯ ಮೇಲಿನ ಸುರಕ್ಷಿತ ಸ್ಥಳದಲ್ಲಿ ಸಿಡಿಯದೇ ಕೆನ್ನೆಗೆ ಬಡಿದವು. ಪೆಟ್ಟಾಯಿತು. ಅನೇಕರು ಅನಿಲ್‌ಗೆ ಬೈಯಲು ಮುಂದಾದರು.

`ಶಿವಣ್ಣ ನಿಜಕ್ಕೂ ಗ್ರೇಟ್. ಏಯ್ ನಿಲ್ರೊ ಅವನ್ದೇನೋ ತಪ್ಪು. ಸರಿಯಾಗಿ ಹಾರಿ ಬೀಳಬೇಕಾಗಿದ್ದು ನಾನು. ಪಾಪ ಆತ ಏನು ಮಾಡ್ತಾನೆ ಎಂದರು. ನನ್ನನ್ನು ಸಮಾಧಾನ ಮಾಡಿದರು~ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅವರು ವೃತ್ತಿಯಲ್ಲಿ ಒಂದು ಸ್ಥಾನ ಕಂಡುಕೊಳ್ಳುವುದಕ್ಕೆ ನಿರ್ಮಾಪಕ ರಾಮು, ನಟ ಟೈಗರ್ ಪ್ರಭಾಕರ್, ಓಂ ಪ್ರಕಾಶ್‌ರಾವ್ ಅವರ ಪ್ರೋತ್ಸಾಹ ಕಾರಣವಂತೆ.

ಇಷ್ಟೆಲ್ಲಾ ಪಡಿಪಾಟಲು ಪಡುವ ವೃತ್ತಿಯನ್ನು ಬದಲಿಸಲು ಮನಸ್ಸು ಮಾಡಲಿಲ್ಲವೇ ಎಂಬ ಪ್ರಶ್ನೆಗೆ `ನಂಗೆ ಈ ಕೆಲಸ ಬಿಟ್ಟರೆ ಬೇರೇನೂ ಕೆಲಸ ಗೊತ್ತಿಲ್ಲ. ಬೇರೇನೂ ಮಾಡಬೇಕು ಅಂತಲೂ ಅನ್ನಿಸುವುದಿಲ್ಲ. ಜೀವನ ಸಾಗುತ್ತೆ. ಊಟ ಬಟ್ಟೆಗೆ ತೊಂದರೆ ಇಲ್ಲ~ ಎನ್ನುತ್ತಾರೆ.

ಸಿನಿಮಾರಂಗದಲ್ಲೇ ಬೇರೇನಾದರೂ ವೃತ್ತಿಗೆ ಬಡ್ತಿ ಪಡೆಯಬಹುದಲ್ಲವೇ ಎಂಬುದಕ್ಕೂ ಅವರಿಂದ ನಕಾರಾತ್ಮಕ ಉತ್ತರ. `ಆಸೆಗಳೇನೋ ಸಾಕಷ್ಟು ಇರುತ್ತವೆ. ಆದರೆ ಎಲ್ಲವೂ ಈಡೇರುವುದಿಲ್ಲ. ನಟನಾಗಬೇಕು ಅಂದುಕೊಂಡೆ ಆದರೆ ಸಾಧ್ಯವಾಗಲಿಲ್ಲ. ಒಂದೇ ಕ್ಷೇತ್ರದಲ್ಲಿದ್ದರೂ ವೃತ್ತಿ ಬದಲಿಸುವುದು ಕಷ್ಟದ ಕೆಲಸ~ ಎಂಬ ಬೇಸರ ಅವರೊಳಗಿದೆ.

ಅನಿಲ್ ಹೆಸರಿಗೆ ಗನ್ ಬಾಂಬ್‌ಗಳು ತಳುಕು ಹಾಕಿಕೊಂಡಿರುವ ಹಿಂದೆ ಒಂದು ಪುಟ್ಟ ಕತೆ ಇದೆ. ಯಾವುದೋ ಸಿನಿಮಾ ಶೂಟಿಂಗ್. ಅಲ್ಲಿ ಅನಿಲ್ ಎನ್ನುವವರು ಬಹಳಷ್ಟು ಮಂದಿ. ಗೊಂದಲವೋ ಗೊಂದಲ. ಕಡೆಗೆ ಗನ್ ಹಿಡಿದು ನಿಂತಿದ್ದ ಅನಿಲ್‌ನನ್ನು ಯಾರೋ `ಹೇ ಗನ್ ಅನಿಲ್~ ಎಂದು ಕರೆದರು. ಅಂದಿನಿಂದ ಆ ಹೆಸರು ಹಾಗೆಯೇ ಉಳಿಯಿತು.
 
ಅನೇಕ ವೇಳೆ ಅವರನ್ನು ಅನಿಲ್ ಎಂದು ಯಾರೂ ಕರೆಯುವುದಿಲ್ಲವಂತೆ. `ಬಾಂಬು, ಗನ್ನು ಎಂದೇ ಮಾತನಾಡಿಸುತ್ತಾರೆ~ ಎನ್ನುವಾಗ ಅವರೊಳಗೆ ಮುಗ್ಧ ನಗೆ. 8 ಎಂಎಂ ಪಿಸ್ತೂಲು, ಪೊಲೀಸ್ ರೈಫಲ್, ಒಂದು ನಳಿಕೆ, ಎರಡು ನಳಿಕೆ ಬಂದೂಕುಗಳು, ಮೆಷಿನ್‌ಗನ್ ಯಾವುದು ಕೇಳಿದರೂ ಅನಿಲ್ ಬಳಿ ಅವು ಸಿದ್ಧ. ಅತ್ಯಾಧುನಿಕ ಗನ್‌ಗಳ ಮಾದರಿ ಅಗತ್ಯ ಬಿದ್ದಾಗ ಚೆನ್ನೈ, ಮುಂಬೈ ಮುಂತಾದ ಕಡೆಗಳಿಂದ ಅವುಗಳನ್ನು ಬಾಡಿಗೆಗೆ ತರುವುದುಂಟು.

`ನಿಜವಾದ ಬಾಂಬ್ ಹೇಗಿರುತ್ತೆ ಅಂತ ನಾನೂ ನೋಡಿಲ್ಲ. ನಾನು ಸಿಡಿಸೋ ಬಾಂಬ್‌ಗಳು ನಿಜವಾದ ಬಾಂಬ್‌ಗಳಿಗಿಂತ ಕೇವಲ ಶೇಕಡ ಒಂದರಷ್ಟು ಹಾನಿ ಮಾಡುತ್ತವೆ. ಪ್ರಾಣಹಾನಿಯಂತೂ ಸಾಧ್ಯವೇ ಇಲ್ಲ~ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಮೊದಲೇ ಹೇಳಿದಂತೆ ಇವರು ಪೊಲೀಸರಿಗೂ ಕಣ್ಮಣಿ. ಅಗ್ನಿಶಾಮಕ ದಳದವರು ನಡೆಸುವ ಅಗ್ನಿ ಆಕಸ್ಮಿಕದ ಅಣಕು ಪ್ರದರ್ಶನಗಳಲ್ಲಿ ಇವರೂ ಭಾಗವಹಿಸುತ್ತಾರೆ.

ಬಾಂಬ್‌ಗಳನ್ನು ಸಿಡಿಸಿ ಅವುಗಳಿಂದ ಉಂಟಾಗುವ ಪರಿಣಾಮಗಳನ್ನು ತೋರಿಸುತ್ತಾರೆ. ಅವರಿಂದ ಶಹಬ್ಬಾಸ್‌ಗಿರಿ ಪಡೆಯುತ್ತಾರೆ. ಬಾಂಬ್‌ನಂತಹ ವಿನಾಶಕ ವಸ್ತುವೂ ಸೃಷ್ಟಿ ಸಾಧನವಾಗಿ ಅನಿಲ್ ಕೈಯಲ್ಲಿ ಅರಳಿದೆ. ಆ ತೃಪ್ತಿ ಅವರ ಹೃದಯದಲ್ಲಿ ಸದಾ ಹಬೆಯಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.