ADVERTISEMENT

ನೂರೆಂಟು ಬಣ್ಣಗಳ ಕಾಮನಬಿಲ್ಲೇ,

ಪ್ರೇಮಪತ್ರ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಪತ್ರ

ಪ್ರಮೋದ್ ಯು.ವಿ
Published 13 ಫೆಬ್ರುವರಿ 2013, 19:59 IST
Last Updated 13 ಫೆಬ್ರುವರಿ 2013, 19:59 IST
ನೂರೆಂಟು ಬಣ್ಣಗಳ ಕಾಮನಬಿಲ್ಲೇ,
ನೂರೆಂಟು ಬಣ್ಣಗಳ ಕಾಮನಬಿಲ್ಲೇ,   

ಸಮಯಕ್ಕೆ ಸರಿಯಾಗಿ ಬರದ ಬಸ್ಸು, ಬಂದರೂ ಒಂಟಿ ಕಾಲಲ್ಲಿ ನಿಲ್ಲಲೂ ಆಗದಷ್ಟು ಜನಸಂದಣಿ. ಇವೆಲ್ಲದರ ಮಧ್ಯೆ ಸದ್ದಿಲ್ಲದೇ ನನ್ನೆದೆಯ ಚಿನ್ನದ ಪಲ್ಲಕ್ಕಿಯಲ್ಲಿ ಕುಳಿತು ನೀನು ಮೆರವಣಿಗೆಗೆ ಅಣಿಯಾಗಿದ್ದು ನನ್ನ ಗಮನಕ್ಕೇ ಬರಲಿಲ್ಲ! ಅಂದು ನಿನ್ನ ಅರಳುಕಂಗಳ ನೋಡುವವರೆಗೂ ಹಗಲಲ್ಲಿ ನಕ್ಷತ್ರಗಳು ಮಿನುಗಲಾರವು ಎಂದೇ ನಂಬಿದ್ದೆ. ಅಂದಿನಿಂದ ನಮ್ಮಿಬ್ಬರ ನಡುವೆ ಅದು ಹೇಗೋ ಕಣ್ಣೋಟಗಳ ಕವಾಯತು ಶುರುವಾಗಿಯೇ ಬಿಟ್ಟಿತು. ರೆಪ್ಪೆಗಳ ಕಾವಲು ದಾಟಿ ಕಂಗಳಲ್ಲಿಣುಕುವ ಕಾತರ, ಬೇಕೋ ಬೇಡವೋ ಎಂಬ ಚೌಕಾಸಿಯ ಮುಗುಳ್ನಗೆ, ಅನುವಾದಕ್ಕೆ ಕಾದು ಕುಳಿತ ಕವಿತೆಯಂತಹ ಮುಂಗುರುಳು.

ನೇಸರನ ದಿನದ ಕೊನೆ ಕಂತಿನ ಕಿತ್ತಳೆ ಬೆಳಕಿನಲ್ಲಿ ಮಿಂದೆದ್ದಂತಿರುವ ಮೈಬಣ್ಣ ಇವೆಲ್ಲದರ ಸೆಳವಿಗೆ ಸಿಲುಕಿ ಒಂದು ದಿನ ನಿನ್ನನ್ನು ಮಾತಾಡಿಸಿಯೇ ಬಿಡುವುದೆಂದು ನಿಶ್ಚಯಿಸಿ ನಿನ್ನ ಬಳಿಗೆ ಬಂದಾಗ `ಹಾಯ್, ನನ್ನ ಹೆಸರು ಹರ್ಷಿತಾ' ಎಂದು ಹೇಳಿ ನೀನೇ ಸ್ನೇಹಹಸ್ತ ಚಾಚಿದಾಗ ನನ್ನ ಖುಷಿಗೆ ಪಾರವೇ ಇಲ್ಲ, ಹೃದಯದ ಮಿಡಿತ ದೇವರೇ ಬಲ್ಲ!

ಕಾಲೇಜಿನ ಕಾರಿಡಾರಿನಲ್ಲಿ ಹೀಗೆ ಶುರುವಾದ ಒಡನಾಟ ಅದ್ಯಾವ ಅಮೃತಘಳಿಗೆಯಲ್ಲಿ ಪ್ರೀತಿಯಾಗಿ ಪಲ್ಲವಿಸಿತೋ ಬಲ್ಲವರು ಯಾರು? ನಿನ್ನ ಸಾಂಗತ್ಯದ ಬಿಸುಪು ಚಳಿಗಾಲದ ಇಳಿಸಂಜೆಯ ಹಬೆಯಾಡುವ ಚಹಾದಂತೆ ಬೆಚ್ಚಗೆ ನನ್ನಿಡೀ ಅಸ್ತಿತ್ವವನ್ನೇ ಆವರಿಸಿಕೊಂಡಿತ್ತು. ಭೇದಿಸಲಾಗದ ನನ್ನೆದೆಯ ಕತ್ತಲ ಕೋಟೆಗೆ ಲಗ್ಗೆಯಿಟ್ಟ ಬೆಳಕು ನೀನು. ನಿನ್ನ ಕಣ್ಣಯಕ್ಷಿಣಿಗೆ ಸಮ್ಮೊಹನಗೊಳಿಸುವ ಮಾಂತ್ರಿಕ ಶಕ್ತಿಯಿದೆ. ನನ್ನ ಬೆರಳುಗಳ ನಡುವೆ ಸಿಗರೇಟು ಬುಸುಗುಡುವುದು ನಿಂತದ್ದು ಅಮ್ಮನ ಮಾತಿನ ಪೆಟ್ಟಿನಿಂದಲ್ಲ, ನಿನ್ನ ಮೌನದ ಉಳಿಪೆಟ್ಟಿನಿಂದ.

ಹಾಗೆ ನೋಡಿದರೆ ನಮ್ಮಿಬ್ಬರ ನಡುವೆ ಯಾವ ಹೋಲಿಕೆಯೂ ಇಲ್ಲ. ನಾನಂತೂ ಪ್ರಥಮ ವಿಭಕ್ತಿ ಏಕವಚನದ ಸಾಕಾರಪುರುಷ, ಆ ಬ್ರಹ್ಮ ಶುದ್ಧ ಅಹಂಕಾರಕ್ಕೆ ಮೂಳೆ ಮಾಂಸ ಸೇರಿಸಿ ನನ್ನನ್ನು ಸೃಷ್ಟಿ ಮಾಡಿದ. ನೀನು ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲೆಂದೇ ಹುಟ್ಟಿದವಳು! ಸಕ್ಕರೆ ಬೆರೆಸಿದ ಅಚ್ಚ ಬಿಳುಪಿನ ಹಾಲಿನಂಥ ನಿನಗೆ ಜೊತೆಯಾದ ನಾನು ಪರಿಶುದ್ಧ ಕಾಫಿ ಡಿಕಾಕ್ಷನ್ನು! ಹೇಗಿದ್ದರೂ ನಾನೇ ನಿನಗೆ ಸರಿಯಾದ ಜೋಡಿ, ಸಹೃದಯಿ ಓದುಗನಿಲ್ಲದ ಕಾವ್ಯಕ್ಕೆ ಸಾರ್ಥಕ್ಯವೆಲ್ಲಿಯದು?
ಎಷ್ಟೇ ಸಲುಗೆ ಬೆಳೆದರೂ ಪ್ರೇಮನಿವೇದನೆಯ ವಿಷಯಕ್ಕೆ ಬಂದಾಗ ಎಂಥಾ ಉಗ್ರಪ್ರತಾಪಿಗೂ ನಡುಕ ಹುಟ್ಟುತ್ತದೆ.

ನನಗೂ ಹಾಗೇ ಆಯಿತು. ನನ್ನೆದೆಯೊಳಗೆ ಭಯದ ಜೇಡರ ಹುಳುವೊಂದು ಇನ್ನೂ ಎಳೆಗಳ ಬಲೆ ನೇಯುತ್ತಿರುವಾಗಲೇ ಕ್ಲಾಸು ಮುಗಿದಾದ ಮೇಲೆ ಖಾಲಿ ಕೊಠಡಿಯಲ್ಲಿ ಮನದಾಳದ ಮೆಲುದನಿಗಳ ಕೇಳಿಸಿದೆ. ಆ ಕ್ಷಣದಲ್ಲಿ ಇಡೀ ಕೊಠಡಿಯನ್ನು ಮೌನ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಏನಾಗುತ್ತದೋ ಎಂಬ ಚಡಪಡಿಕೆಯಲ್ಲಿ ಏರುಪೇರಾದ ಎದೆಬಡಿತ ಮೃದಂಗ ನುಡಿಸುತ್ತಿತ್ತು.

ನೀನು `ಹ್ಞೂಂ' ಎನ್ನಲಿಲ್ಲವಾದರೂ ಸಮ್ಮತಿಯ ಮೌನವನ್ನು ಕಂಗಳಲ್ಲಿ ಮಾತಾಗಿ ತುಳುಕಿಸುವ ಭಾಷ್ಯದಲ್ಲಿ ಆ ಒಪ್ಪಿಗೆಯ ಅನುರಣನವಿತ್ತು. ನನ್ನ ಕೈಯನ್ನು ನಿನ್ನ ಕೈಯೊಳಗೆ ಸೇರಿಸಿ ಮೆಲ್ಲಗೆ ಅದುಮಿ ಹಿಡಿದಾಗ ಅಚಾನಕ್ಕಾದ ಆಹ್ಲಾದವೊಂದು ನಮ್ಮಿಬ್ಬರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಮನದಲ್ಲಿ ನವಿಲೊಂದು ಧಿಮಿಕಿಟತೋಂ ಎಂದು ಕುಣಿದಂತಾಗಿ ಮೈಗೆಲ್ಲಾ ಪುಳಕದ ಮಲ್ಲಿಗೆ ಬಳ್ಳಿ ಹಬ್ಬಿಕೊಂಡಿತು. ಸಂಜೆಯ ಮಬ್ಬು ಕತ್ತಲಾಗಿ ಹಬ್ಬತೊಡಗಿದ ಸಮಯದಲ್ಲಿ ನಮ್ಮಿಬ್ಬರ ಬಾಳಲ್ಲಿ ಶಾಶ್ವತ ಸೂರ್ಯೋದಯವೊಂದು ಘಟಿಸಿಬಿಟ್ಟಿತು!

ಗೆಳತೀ..... ನನ್ನಲ್ಲಿ ಕಳೆದುಹೋಗಿದ್ದ ನನ್ನದೇ ಆದ ಏನೋ ಒಂದನ್ನು ನಿನ್ನ ಸಾನಿಧ್ಯ ಚಿಗುರಿಸಿದೆ. ನನ್ನೊಡಲು ಉರಿಯನ್ನೆಲ್ಲ ಬೆಳಕಾಗಿಸಿದೆ. ಇಷ್ಟಕ್ಕೂ ನಿನ್ನ ಪೂರ್ವಾಪರ, ಜಾತಿ, ಮತ ಮುಂತಾದವನ್ನು ವಿಚಾರಿಸುವ ಗೋಜಿಗೇ ಹೋಗಿಲ್ಲ. ದಾಸವಾಳದ ಹೂವಲ್ಲಿ ದಳಗಳೆಷ್ಟಿವೆ, ಯಾವ ಬಣ್ಣದ್ದಿವೆ ಎನ್ನುವ ವಿಷಯ ದುಂಬಿಗೆ ಬೇಕಾಗಿಲ್ಲ. ಅಂತರಂಗದ ಹೂ ಮಕರಂದವೊಂದೇ ಸಾಕು ಅದರ ಸಂತೃಪ್ತಿಗೆ. ನನಗೂ ಅಷ್ಟೇ, ನನ್ನ ಪ್ರೇಮತಪಸ್ಸಿಗೆ ಒಲಿದು ತುಸು ನಾಚಿ ತುಟಿಯಂಚಿನ ನಗುವಿನಲ್ಲೇ `ತಥಾಸ್ತು' ಎಂದದ್ದೇ ನನ್ನಿಡೀ ಜೀವನಕ್ಕೆ ಸಾಕು.

ನಿನ್ನ ಸನಿಹದಲ್ಲಿರುವಾಗ ಅಮ್ಮನ ಮಡಿಲಲ್ಲಿ ಮಲಗಿದಂಥ ಸಂತೃಪ್ತಭಾವ ನನ್ನನ್ನಾವರಿಸಿಕೊಳ್ಳುತ್ತದೆ. ಬಿಸಿಲಲ್ಲಿ ಬಾಡಿ ಕರಕಲಾಗುತ್ತಿದ್ದ ನನ್ನ ಎಷ್ಟೋ ಕನಸುಗಳು ನಿನ್ನ ದುಪ್ಪಟ್ಟಾದ ತಣ್ಣಗಿನ ನೆರಳಿನಲ್ಲಿ ರಂಗುರಂಗಾಗಿ ಅರಳಿ ಅಮರತ್ವವನ್ನು ಪಡೆದುಕೊಂಡಿವೆ. ನನ್ನ ಉಡುಗೆ-ತೊಡುಗೆಯಿಂದ ಹಿಡಿದು ಎಲ್ಲದರ ಬಗ್ಗೆಯೂ ನೀನು ವಹಿಸುವ ಕಾಳಜಿ ಕಂಡು ಫೋಟೊದೊಳಗಿನ ನನ್ನ ಮುದ್ದಿನ ಅಜ್ಜಿ ನಕ್ಕಂತಾಗುತ್ತದೆ.

ಅಸಂಖ್ಯ ಆಸೆಯ ಮೊಗ್ಗುಗಳು ನಿನ್ನ ಆರೈಕೆಯಲ್ಲಿ ಪಕಳೆಗಳಾಗಿ ಮೈಬಿರಿಯುತ್ತವೆ. ಆದರೆ ನಾನು ನಿನ್ನ ಬಗ್ಗೆ ಬೆಳೆಸಿಕೊಂಡಿರುವ ಪ್ರೀತಿ, ಮಮಕಾರ ಎಷ್ಟು ಗಾಢವೆಂದು ನನಗೆ ಮನದಟ್ಟಾಗುವುದು ನಿನ್ನ ಘಮ ಮೈಯೊಳಗೆ ಸುಳಿದು ಘೀಳಿಟ್ಟಾಗ ಅಲ್ಲ, ಮೈಯ ನರನರದೊಳಗೆ ನಿನ್ನ ಸೊಗಸು ಮದಿರೆಯ ನದಿಯಾಗಿ ಹರಿಯುವಾಗ ಅಲ್ಲ, ಲಗಾಮಿಲ್ಲದ ಬಯಕೆಗಳ ಹುಚ್ಚುಕುದುರೆ ಕೆನೆಯುವಾಗ ಅಲ್ಲ. ಆ ಪ್ರೀತಿಯ ತೀವ್ರತೆ ನನಗರಿವಾಗುವುದು ನೀನು ಬೇರೊಬ್ಬ ಹುಡುಗನೊಂದಿಗೆ ನಗುನಗುತ್ತ ಮಾತಾಡುವಾಗ ನನ್ನೆದೆಯಾಳದಲ್ಲೆಲ್ಲೋ ಚೇಳು ಕುಟುಕಿದಂತಾಗುತ್ತದಲ್ಲ-ಆವಾಗ. ನಾನೇನು ಮಾಡಲಿ? ನನ್ನ ಮನಸ್ಸು ಮಹಾವ್ಯಾಮೋಹಿ.

ಅಂತೂ ಇಂತೂ ಈ ಕಾರ್ಗಲ್ಲ ಬೆಟ್ಟದ ಮೇಲೆ ನಿನ್ನ ಬೆಚ್ಚಗಿನ ಬೆಳದಿಂಗಳು ಬೇರುಬಿಟ್ಟಿದೆ. ಅಂತಿಂಥ ಬೆಳದಿಂಗಳಲ್ಲ, ಭಾವಗಳ ಹಾವಾಡಿಸುವ ಬೆಳದಿಂಗಳು ನಿನ್ನೊಂದಿಗಿದ್ದಾಗ ಕಾಶ್ಮೀರಕ್ಕೇ ಕಡ ಕೊಡುವಷ್ಟು, ಅದರ ಮೇಲೊಂದಿಷ್ಟು ಮಿಗುವಷ್ಟು ಚಳಿ ನನ್ನೊಳಗೆ ಹಿತವಾದ ನಡುಕ ಹುಟ್ಟಿಸುತ್ತದೆ.

ದಿಕ್ಕುದೆಸೆಯಿಲ್ಲದೆ, ಗೊತ್ತುಗುರಿಯಿಲ್ಲದೆ ಕೊತ ಕೊತ ಕುದಿಯುತ್ತಿದ್ದ ನನ್ನ ಮನಸ್ಸಿಗೆ ಸಿಲುಕಿ ಅರೆಬೆಂದ ಪೂರ್ಣಚಂದಿರ ಈಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಾನೆ! ನಿನ್ನ ಕಣ್ಣ ಕಿಡಿ ಸೋಕಿ ಮನದ ಮೇಣ ಕರಗಿ ಮಿನುಗುಬೆಳಕು ಮೂಡಿದೆ. ಎದೆಗೂಡಿನಲ್ಲಿ ಹಾಡುಹಕ್ಕಿಯೊಂದು ಹಿಡಿಪ್ರೀತಿಗಾಗಿ ಹಂಬಲಿಸಿದೆ. ನಿನ್ನ ಇಂಚರ ಆದಷ್ಟೂ ಬೇಗ ರೆಕ್ಕೆ ಮೂಡಿಸಿಕೊಂಡು ಹಾರಿಬಂದೇ ಬರುತ್ತದೆಂಬ ಚಿರನಿರೀಕ್ಷೆಯನ್ನು ಜೋಪಾನವಾಗಿ ಇಟ್ಟಿದ್ದೇನೆ.

ಒಳಗೆ ಏನೂ ಇಟ್ಟುಕೊಳ್ಳದೆ ಎಲ್ಲವನ್ನೂ ನಿರ್ಭಿಡೆಯಿಂದ ದಂಡೆಗೆಸೆಯುವ ಕಡಲಿನಂತಹ ಮನಸ್ಸು ನನ್ನದು, ನೀನು ಉಪ್ಪು ನೀರನ್ನೇ ಹೀರಿಕೊಂಡು ತನ್ನೊಳಗೊಂದು ಎಳನೀರು ಸೃಜಿಸುವ ಕಡಲ ಕಿನಾರೆಯ ತೆಂಗಿನ ಮರದಂಥವಳು. `ಪ್ರೀತಿ' ಎಂಬ ಪದದ ವ್ಯಾಖ್ಯೆಗೂ ಮೀರಿ ನಿನ್ನನ್ನು ಮನಸಾರೆ ಪ್ರೀತಿಸುತ್ತೇನೆ. ಈ ಹುಚ್ಚು ಪ್ರೀತಿಯನ್ನು ಮುಚ್ಚಟೆ ಮಾಡುವ ಜವಾಬ್ದಾರಿ ನಿನ್ನದು. ಆಗಸದ ತೆಳುನೀಲಿ ಹೂದೋಟದ ತಿಳಿಗುಲಾಬಿಯ ಕಿವಿಯಲ್ಲಿ ಪಿಸುಗುಟ್ಟಿದ ಗಪ್‌ಚುಪ್‌ಗಳ ಗುಟ್ಟು ನಮಗೆ-ನಮ್ಮಿಬ್ಬರಿಗೆ ಮಾತ್ರ ಹೀಗೇ ಸದಾ ಗೊತ್ತಾಗುತ್ತಿರಲಿ.
-ಇಂತಿ ನಿನ್ನವ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.