ADVERTISEMENT

ಪಾಠ 1 ಮೊಬೈಲ್ ಫೋನ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಜನರನ್ನು ಅತಿವೇಗವಾಗಿ ತಲುಪಿದ ಸಂಪರ್ಕ ತಂತ್ರಜ್ಞಾನ ಎಂದರೆ ಮೊಬೈಲ್ ಫೋನ್. ಲ್ಯಾಂಡ್‌ಲೈನ್‌ಗಳು ತಲುಪದೇ ಇರುವ ಸ್ಥಳಕ್ಕೂ, ತಲುಪಲು ಸಾಧ್ಯವಾಗದ ವರ್ಗಕ್ಕೂ ಇಂದು ಮೊಬೈಲ್ ಫೋನ್‌ಗಳು ತಲುಪಿವೆ. ಈ ವೇಗವನ್ನು ಮೊದಲೇ ಗ್ರಹಿಸಿ ಅಲ್ಲಿ ಸೃಷ್ಟಿಯಾಗಬಹುದಾದ ಉದ್ಯೋಗವೊಂದಕ್ಕೆ ತರಬೇತಿ ನೀಡುವ ದೂರಾಲೋಚನೆಯಿದ್ದವರ ಸಂಖ್ಯೆ ಬಹಳ ಸಣ್ಣದು. ಅಂಥವರಲ್ಲೊಬ್ಬರು ಹುಬ್ಬಳ್ಳಿ ಅಶೋಕ್ ವಿ. ಬದ್ದಿ.

ಇವರ ಬ್ಲೂಸ್ಟಾರ್ ಅಕಾಡೆಮಿ ಆಸಕ್ತರಿಗೆ ಮೊಬೈಲ್ ಫೋನ್‌ಗಳ ರಿಪೇರಿ ಮಾಡುವ ವಿದ್ಯೆಯನ್ನು ಕಲಿಸುತ್ತದೆ. ಸದ್ಯಕ್ಕೆ ಈ ಸಂಸ್ಥೆ ದೇಶದ ಅತಿ ದೊಡ್ಡ ಮೊಬೈಲ್ ರಿಪೇರಿ ತರಬೇತಿ ಕೇಂದ್ರ.

ಭಾರತದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ಕೆಲಸ ಯಾವತ್ತೂ `ಶಿಷ್ಟ ವಿದ್ಯೆ~ ಅಲ್ಲ. ಇದು ಅನುಭವದ ಆಧಾರದಿಂದ ತಜ್ಞತೆಗಳಿಸಿಕೊಳ್ಳುವ ಪ್ರಕ್ರಿಯೆ. ಮೊಬೈಲ್ ಫೋನ್ ರಿಪೇರಿಯ ಕೆಲಸವೂ ತೀರಾ ಇತ್ತೀಚಿನವರೆಗೂ ಹೀಗೆಯೇ ಇತ್ತು. ಆದರೆ ತಂತ್ರಜ್ಞಾನ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋದಂತೆ ಕೇವಲ ಅಂದಾಜಿಗೆ ರಿಪೇರಿ ಮಾಡುವ, ಪ್ರಯೋಗಗಳ ಮೂಲಕ ಮೊಬೈಲ್ ಫೋನ್ ಸರಿಪಡಿಸುವ ಕೆಲಸ ಈಗ ಸಾಧ್ಯವಿಲ್ಲ.
 
ಅದಕ್ಕಿಂತ ಹೆಚ್ಚಾಗಿ ಎಲ್ಲಾ ದೊಡ್ಡ ದೊಡ್ಡ ಬ್ರಾಂಡ್‌ಗಳೂ ತಮ್ಮ `ಅಧಿಕೃತ ಸೇವಾ ಕೇಂದ್ರ~ಗಳನ್ನು ಹೊಂದಿರುವುದರಿಂದ ಈ ಸ್ವತಂತ್ರ ದುರಸ್ತಿಗಾರರ ಬಳಿ ಬರುವವರ ಸಂಖ್ಯೆಯೂ ಕಡಿಮೆಯೇ. ಈ ಎಲ್ಲಾ ಸವಾಲುಗಳಿಗೆ ಅಶೋಕ್ ವಿ ಬದ್ದಿಯವರ ತರಬೇತಿಯಲ್ಲಿ ಉತ್ತರವಿದೆ.

ಹುಬ್ಬಳ್ಳಿಯ `ಬ್ಲೂ ಸ್ಟಾರ್ ಅಕಾಡೆಮಿ~ ಮೊಬೈಲ್ ರಿಪೇರಿಗೆ ಶೈಕ್ಷಣಿಕ ಸ್ವರೂಪ ಕೊಟ್ಟಿದೆ. ಇದು ವಸತಿ ಸಹಿತ ಮೊಬೈಲ್ ರಿಪೇರಿ ತರಬೇತಿ ಕೇಂದ್ರ. ಮೂರುಸಾವಿರ ಮಠದ ಆವರಣದಲ್ಲಿರುವ ಈ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ಕಲೆಯನ್ನು ಕಲಿತವರು ಸಾವಿರಾರು ಮಂದಿ.
 
ಕರ್ನಾಟಕದಲ್ಲಿ ಮಾತ್ರವಲ್ಲ, ರಾಜಸ್ತಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ಮುಂತಾದ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಬಂದು ಮೊಬೈಲ್ ರಿಪೇರಿ ಶಿಕ್ಷಣ ಪಡೆಯುತ್ತಿದ್ದಾರೆ.

ತರಬೇತಿ ಸಂಪೂರ್ಣ ಗಣಕೀಕೃತವಾಗಿದ್ದು, ವಿಡಿಯೋ ಪ್ರೊಜೆಕ್ಟರ್, ಲೇಸರ್ ಗನ್ ಮೂಲಕ ತರಬೇತಿ ನೀಡಲಾಗುತ್ತದೆ. ಈ ಸಂಸ್ಥೆ ಕೊಡುವ ಪ್ರಮಾಣ ಪತ್ರ ಬಳಸಿ ಸರ್ಕಾರದ ವಿವಿಧ ಯೋಜನೆಗಳಿಂದ ಸಾಲ ಪಡೆದು ಸ್ವ-ಉದ್ಯೋಗ ಕೈಗೊಂಡಿದ್ದಾರೆ, ಸ್ವಾವಲಂಬಿಗಳಾಗಿದ್ದಾರೆ.

ಬ್ಲೂಸ್ಟಾರ್ ಅಕಾಡೆಮಿಯ ಅಶೋಕ್ ಅವರ ಮುಂದೆ ಕುಳಿತರೆ ಇಡೀ ಮೊಬೈಲ್ ಪ್ರಪಂಚವೇ ತೆರೆದುಕೊಳ್ಳುತ್ತದೆ. ಮೊಬೈಲ್‌ನ ಒಂದೊಂದೂ ಕಣಗಳ ಮಾಹಿತಿಯೂ ಅವರ ಬಳಿಯಿದೆ. ಚೈನಾ ಮೊಬೈಲ್‌ಗಳ ಪರಂಪರೆಯನ್ನೇ ಅವರು ಬಿಚ್ಚಿಡುತ್ತಾರೆ.

ವಿಧ ವಿಧ ವಿದೇಶಿ ಮೊಬೈಲ್‌ಗಳ ತಂತ್ರಜ್ಞಾನದ ಗುಟ್ಟು ಅವರಿಗೆ ಗೊತ್ತಿದೆ. ಹಳೆಯ ಆಂಟೆನಾ ಮೊಬೈಲ್‌ನಿಂದ ಹಿಡಿದು ಇವತ್ತಿನ ಆರು ಪದರಗಳಿರುವ ಹೊಸ ತಂತ್ರಜ್ಞಾನದ ಸಣ್ಣ ಮೊಬೈಲ್ ಫೋನ್‌ಗಳ ಒಳಗಿನ ಮತ್ತು ಹೊರಗಿನ ಮಾಹಿತಿ ಅವರ ಬಳಿ ಇದೆ. ನಿತ್ಯವೂ ಹೊಸ ಹೊಸದಾಗಿ ಬರುವ ಮೊಬೈಲ್ ತಂತ್ರಜ್ಞಾನಗಳನ್ನು ಅಶೋಕ್ ಅಧ್ಯಯನ ಮಾಡಿದ್ದಾರೆ.
 
ಮಾರುಕಟ್ಟೆಗೆ ಯಾವುದೇ ಹೊಸ ಹ್ಯಾಂಡ್‌ಸೆಟ್ ಬಂದರೂ ಅದರ ರಚನೆಯನ್ನು ತಕ್ಷಣ ಅರ್ಥ ಮಾಡಿಕೊಳ್ಳುತ್ತಾರೆ. ಅಶೋಕ್ ಅವರಿಗೆ ಮೊಬೈಲ್ ಫೋನ್‌ಗಳ ಮೇಲೆ ಬಹುದೊಡ್ಡ ಕ್ರೇಜ್. ಕನಸಿನಲ್ಲೂ ಮೊಬೈಲ್ ಫೋನ್‌ಗಳನ್ನೇ ತುಂಬಿಕೊಂಡಿರುವ ಅವರು ಮೊಬೈಲ್ ಕನಸುಗಾರ.

ರಿಪೇರಿಯಿಂದ ತರಬೇತಿಯವರೆಗೆ
ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ಕಲಿತಿರುವ ಅಶೋಕ್, ಮೊಬೈಲ್ ತಂತ್ರಾಂಶಗಳ ಹಿಂದೆ ಬಿದ್ದವರು. ಬೆಂಗಳೂರಿನ ಸೆಂಟರ್ ಫಾರ್ ಎಲೆಕ್ಟ್ರಾನಿಕ್ಸ್ ಟೆಸ್ಟ್ ಎಂಜಿನಿಯರಿಂಗ್‌ನಲ್ಲಿ (ಸಿಇಟಿಇ) ಮೊಬೈಲ್ ಫೋನ್‌ನ ಆವಿಷ್ಕಾರಗಳಾದ ಎಸ್‌ಎಂಡಿ (ಸರ‌್ಫೇಸ್ ಮೂಮೆಂಟ್ ಡಿವೈಸ್) ಮತ್ತು ಬಿಜಿಎ (ಬಾಲ್ ಗ್ರಿಡ್ ಆ್ಯರೆ) ತಂತ್ರಜ್ಞಾನಗಳ ಕುರಿತ ಕೋರ್ಸ್ ಕೂಡ ಮಾಡಿದ್ದಾರೆ.

1998ರಲ್ಲಿ ಹುಬ್ಬಳ್ಳಿಯಲ್ಲೊಂದು ಸಣ್ಣ ಮೊಬೈಲ್ ರಿಪೇರಿ ಅಂಗಡಿ ಆರಂಭಿಸಿದರು. ಅದು ಮೊಬೈಲ್ ಕ್ರಾಂತಿಯ ಆರಂಭ ಕಾಲ. ಶ್ರೀಮಂತರ ಸ್ವತ್ತಾಗಿದ್ದ ಮೊಬೈಲ್ ಫೋನ್‌ಗಳು ಎಲ್ಲಾ ವರ್ಗದ ಜನರ ಜೇಬಿಗೆ ಬಂದವು. ಮೊಬೈಲ್ ರಿಪೇರಿ ಒಂದು ಉದ್ಯೋಗವಾಗಿ ರೂಪುಗೊಂಡಿತು.

ಬಹಳ ಮಂದಿ ಯುವಕರು ಮೊಬೈಲ್ ರಿಪೇರಿ ಮಾಡುವುದನ್ನು ಕಲಿಯಲು ಮುಂದೆ ಬಂದರು. ರಿಪೇರಿಯನ್ನು ಹೇಳಿಕೊಡುವಂತೆ ಅಶೋಕ್ ಅವರ ಬೆನ್ನು ಬಿದ್ದರು. ಆರಂಭದಲ್ಲಿ ಅಂಗಡಿಯಲ್ಲೇ ರಿಪೇರಿ ಕಲಿಸಿಕೊಡುತ್ತಿದ್ದ ಅಶೋಕ್ 2000ರಲ್ಲಿ  ಮೂರುಸಾವಿರ ಮಠದ ಆವರಣದಲ್ಲಿ  ಬ್ಲೂ ಸ್ಟಾರ್ ಅಕಾಡೆಮಿ ಸ್ಥಾಪಿಸಿದರು.

ಮೊಬೈಲ್ ರಿಪೇರಿಯಲ್ಲಿ ಸ್ವಂತ ಉದ್ಯೋಗದ ಮಹತ್ವ ಅರಿತಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಶೋಕ್ ಬದ್ದಿ ಅವರ ಪ್ರಯತ್ನಕ್ಕೆ ನೀರೆರೆದು ಆಶೀರ್ವದಿಸಿದರು.

ಆಸಕ್ತಿಯೊಂದೇ ಅರ್ಹತೆ
ಬ್ಲೂ ಸ್ಟಾರ್ ಅಕಾಡೆಮಿಯ ಕೋರ್ಸ್‌ಗೆ ಸೇರಲು ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ. ಆಸಕ್ತಿಯೇ ಅರ್ಹತೆ. ಮೂವತ್ತು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‌ಗಳ ರಚನೆ ಮತ್ತು ರಿಪೇರಿಯನ್ನು ಪ್ರಾಯೋಗಿಕ ಮತ್ತು ಸೈದ್ಧಾಂತಿಕವಾಗಿ ಕಲಿಸಿಕೊಡಲಾಗುತ್ತದೆ.

ಪ್ರಾಯೋಗಿಕವಾಗಿ ಐಸಿ(ಇಂಟಿಗ್ರೇಟೆಡ್ ಸರ್ಕಿಟ್)ಯನ್ನು ಬಿಚ್ಚಿ, ಸೇರಿಸುವುದು. ಐಸಿ ಬದಲಾವಣೆ ಮಾಡುವುದು, ಮೊಬೈಲ್‌ನ ಇತರ ಅಂಗಗಳಾಗ ಪವರ್ ಆ್ಯಂಪ್ಲಿಫೈಯರ್, ರ‌್ಯಾಮ್, ಸಿಪಿಯು, ರೇಡಿಯೋ ಫ್ರೀಕ್ವೆನ್ಸಿ, ಆಂಟೆನಾ ಸ್ವಿಚ್ ಮುಂತಾದವುಗಳನ್ನು ತಮ್ಮ ಕೇಂದ್ರದಲ್ಲಿರುವ ಪ್ರೊಜೆಕ್ಟರ್‌ನಲ್ಲಿ ತೋರಿಸಿ ಅದನ್ನು ರಿಪೇರಿ ಮಾಡುವ ಬಗೆಯನ್ನು ಹೇಳಿಕೊಡುತ್ತಾರೆ. ಸಂಸ್ಥೆಯಲ್ಲಿ ಮೊಬೈಲ್ ರಿಪೇರಿಗೆ ಅವಶ್ಯಕವಾಗಿರುವ ಎಲ್ಲಾ ಆಧುನಿಕ ಉಪಕರಣಗಳಿವೆ.

ಸ್ಯಾಮ್‌ಸಂಗ್, ಮೋಟರೋಲ, ನೋಕಿಯಾ ಮುಂತಾದ ಕಂಪೆನಿಗಳ ಮೊಬೈಲ್‌ಗಳ ವಿವಿಧ ಐಸಿ ಬೋರ್ಡ್, ಎಂಎಂಎಸ್ ಮೆಮೋರಿ ಚಿಪ್, ತಾತ್ಕಾಲಿಕ ಮೆಮೋರಿಗೆ ರ‌್ಯಾಮ್ ತಂತ್ರಾಂಶ, ಡೌನ್‌ಲೋಡ್ ಪ್ರೋಗ್ರಾಮಿಂಗ್ ಮುಂತಾದ ಮೊಬೈಲ್ ಸಂಬಂಧಿತ ಎಲ್ಲಾ ಕೆಲಸಗಳನ್ನು ಇಲ್ಲಿ ಕಲಿಯಬಹುದು. ಮೊಬೈಲ್‌ನಲ್ಲಿರುವ ಕಣ್ಣಿಗೆ ಕಾಣದ ಸೂಕ್ಷ್ಮ ವಸ್ತುಗಳನ್ನೂ ಇಲ್ಲಿ ಮೈಕ್ರೋಸ್ಕೋಪ್ ಮೂಲಕ ರಿಪೇರಿ ಮಾಡುವುದನ್ನು ಕಲಿಸಲಾಗುತ್ತದೆ.

ಮೂವತ್ತು ದಿನಗಳ ಅವಧಿಯನ್ನು ಬಹಳ ಅಚ್ಚುಕಟ್ಟಾಗಿ ವಿಭಾಗಿಸಿ ಶಿಕ್ಷಣ ನೀಡಲಾಗುತ್ತಿದ್ದು, ಮೊದಲ ಏಳು ದಿನಗಳಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ರಚನೆಯ ಸಿದ್ಧಾಂತಗಳನ್ನು ಹೇಳಿಕೊಡಲಾಗುತ್ತದೆ. ನಂತರ ಒಂದು ವಾರ ಐಸಿ ಗುರುತು ಮಾಡುವುದನ್ನು (ಐಡೆಂಟಿಫಿಕೇಶನ್) ಕಲಿಸುತ್ತಾರೆ.
 
ನಂತರ ಮೂರು ದಿನಗಳ ಕಾಲ ಸೂಕ್ಷ್ಮ ವಸ್ತುಗಳನ್ನು ವೆಲ್ಡಿಂಗ್ ಮಾಡುವುದನ್ನು ಹೇಳಿಕೊಡಲಾಗುತ್ತದೆ. ನಂತರ ಮೊಬೈಲ್ ರಿಪೇರಿ ಅಂಗಡಿಗಳಿಂದ ಬರುವ ಮೊಬೈಲ್‌ಗಳನ್ನು ವಿದ್ಯಾರ್ಥಿಗಳಿಂದಲೇ ರಿಪೇರಿ ಮಾಡಿಸಲಾಗುತ್ತದೆ.

ADVERTISEMENT

ಪರೀಕ್ಷೆ ಪಾಸಾಗಲೇಬೇಕು
ಇದು ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆಗಿರುವುದರಿಂದ ತರಬೇತಿಯ ಕೊನೆಯಲ್ಲಿ 100 ಅಂಕಗಳಿಗಾಗಿ ಪರೀಕ್ಷೆ ನಡೆಸಲಾಗುತ್ತದೆ. ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸದೇ ಇರುವುದರಿಂದ ಪರೀಕ್ಷೆಯಲ್ಲಿ ಥಿಯರಿ ಭಾಗ ಎಲ್ಲ. ಕೇವಲ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ.

ತರಬೇತಿ ಮುಗಿದ ಮೇಲೆ ಉದ್ಯೋಗ ಕೈಗೊಳ್ಳುವುದಕ್ಕೂ ಸಂಸ್ಥೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಗೊತ್ತಿಲ್ಲದ ವಿಷಯಗಳನ್ನು, ಹೊಸದಾಗಿ ಬರುವ ತಂತ್ರಜ್ಞಾನವನ್ನು ಇಲ್ಲಿ ಮತ್ತೆ ಬಂದು ಕಲಿತುಕೊಂಡು ಹೋಗಬಹುದು. ಒಂದು ಬಗೆಯಲ್ಲಿ ಬ್ಲೂಸ್ಟಾರ್ ಅಕಾಡೆಮಿ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸುತ್ತದೆ ಎನ್ನಬಹುದು.

ದೇಶದಾದ್ಯಂತ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಮೊಬೈಲ್ ರಿಪೇರಿ ಶಿಕ್ಷಣ ಪಡೆದಿದ್ದಾರೆ. ಶೇ 90ರಷ್ಟು ವಿದ್ಯಾರ್ಥಿಗಳು ಮೊಬೈಲ್ ರಿಪೇರಿ ಅಂಗಡಿಗಳನ್ನು ಇಟ್ಟುಕೊಂಡು ಸ್ವಾವಲಂಬಿಗಳಾಗಿದ್ದಾರೆ. ಇಲ್ಲಿಂದ ಕಲಿತು ಹೋದವರು ಬೇರೆ ಬೇರೆ ವಿದ್ಯಾರ್ಥಿಗಳನ್ನು ಇಲ್ಲಿಗೆ ಕಳಿಸುತ್ತಿದ್ದು, ಸಂಸ್ಥೆಯ ಖ್ಯಾತಿ ಹೆಚ್ಚುತ್ತಲೇ ಇದೆ. ಯೂ ಟ್ಯೂಬ್‌ನಲ್ಲಿ ಸಂಸ್ಥೆಯ ಪರಿಚಯ ಇರುವ ಒಂದು ವಿಡಿಯೋ ಇದೆ. ಅಕಾಡೆಮಿಯ ವೆಬ್‌ಸೈಟ್ (bluestaracademyinhubli.com) ಇದ್ದು ಈ ಮೂಲಕವೂ ವಿದ್ಯಾರ್ಥಿಗಳು ಮಾಹಿತಿ ಪಡೆಯುತ್ತಾರೆ.
 
ಬಹಳ ವಿಸ್ಮಯದಿಂದ ಕೂಡಿರುವ ಮೊಬೈಲ್ ಫೋನ್ ತಂತ್ರಜ್ಞಾನವನ್ನು ಯುವಕರಿಗೆ ಕಲಿಸುವ ಉದ್ದೇಶ ಹೊಂದಿರುವ ಅಶೋಕ್ ವಿ ಬದ್ದಿ, ಒಂದು ದಶಕದಿಂದ ಕ್ರೀಯಾಶೀಲವಾಗಿ ಬ್ಲೂ ಸ್ಟಾರ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.

ಅಶೋಕ್ ವಿ ಬದ್ದಿಯವರನ್ನು ಬ್ಲೂ ಸ್ಟಾರ್ ಅಕಾಡೆಮಿ, ಮೂರುಸಾವಿರ ಮಠ ಆವರಣ, ಮಹಾವೀರ ಓಣಿ, ಹುಬ್ಬಳ್ಳಿ- 28 ಅಥವಾ ಮೊಬೈಲ್ ಸಂಖ್ಯೆ 9844117066ರಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.