ADVERTISEMENT

ಪ್ರಾಣಿಗಳೋ? ಮನುಷ್ಯರೋ?

ಪಶ್ಚಿಮದ ಅರಿವು /ಹಾರಿತಾನಂದ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಪ್ರಾಣಿಗಳೋ? ಮನುಷ್ಯರೋ?
ಪ್ರಾಣಿಗಳೋ? ಮನುಷ್ಯರೋ?   

ಜೆ. ಕೃಷ್ಣಮೂರ್ತಿ ನಮ್ಮ ಕಾಲದ ಶ್ರೇಷ್ಠ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ಡೇವಿಡ್‌ ಬಾಮ್‌ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ಅವರಿಬ್ಬರ ನಡುವೆ ಎಷ್ಟೋ ಗಹನವಾದ ಸಂವಾದಗಳು ನಡೆದಿವೆಯೆನ್ನಿ! ಅದರಲ್ಲಿಯ ಒಂದು ಸಂವಾದದ ಆರಂಭವೇ ಸ್ವಾರಸ್ಯಕರವಾಗಿದೆ.

‘ಮನುಷ್ಯರು ಇನ್ನೂ ಪಶುಪ್ರವೃತ್ತಿಗಳ (animal insticts) ಪ್ರಕಾರವೇ ನಡೆದುಕೊಳ್ಳುತ್ತಿದ್ದಾರೆ ಎಂದೆನಿಸುತ್ತಿದೆಯೆ?’ – ಎಂದು ಕೃಷ್ಣಮೂರ್ತಿ ಅವರು ಡೇವಿಡ್‌ ಅವರನ್ನು ಪ್ರಶ್ನಿಸುವ ಮೂಲಕ ಈ ಸಂವಾದವನ್ನು ಆರಂಭಿಸಿದ್ದಾರೆ. ‘ಹೌದು’ ಎನ್ನುವುದು ಡೇವಿಡ್‌ ಅವರ ಉತ್ತರ. ಈ ಪಶುಪ್ರವೃತ್ತಿ ಎಳವೆಯಿಂದಲೇ ಆರಂಭವಾಗುತ್ತದೆ ಎನ್ನುತ್ತಾರೆ, ಅವರು. ‘ಇದರ ಅರ್ಥ, ಲಕ್ಷಾಂತರ ವರ್ಷಗಳಿಂದಲೂ ನಾವಿನ್ನೂ ನಮ್ಮ ಪೂರ್ವಜರಂತೆಯೇ ಮೂಲಪ್ರವೃತ್ತಿಗೆ ಅಂಟಿಕೊಂಡಿದ್ದೇವೆ ಎಂದಾಗುತ್ತದಲ್ಲವೆ?’ ಇದು ಕೃಷ್ಣಮೂರ್ತಿ ಅವರ ಪ್ರಶ್ನೆ. ಚರ್ಚೆ ಮುಂದುವರೆಯುತ್ತ, ಗಹನವಾಗುತ್ತ ಹೋಗುತ್ತದೆ.

ಇಲ್ಲಿ ನೆನಪಾಗುವುದು ಪ್ರಸಿದ್ಧ ಶ್ಲೋಕವೊಂದು:
ಆಹಾರ ಭಯ ನಿದ್ರಾ ಮೈಥುನಂ ಚ ಸಮಾನಮೇತತ್‌ ಪಶುಭಿರ್ನರಾಣಾಂ|
ಏಕೋ ವಿವೇಕೋ ಹ್ಯದಿಕೋ ಮನುಷ್ಯೇ ತೇನೈವ ಹೀನಾಃ ಪಶುಭಿಃ ಸಮಾನ ||

ADVERTISEMENT

ಇದರ ತಾತ್ಪರ್ಯ: ಆಹಾರ ಭಯ ನಿದ್ರೆ ಮತ್ತು ಮೈಥುನ– ಇವು ಮನುಷ್ಯರಿಗೂ ಪಶುಗಳಿಗೂ ಸಮಾನವಾಗಿರುವಂಥ ಗುಣಗಳು. ಹಾಗಾದರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಪ್ರತ್ಯೇಕವಾಗಿಸುವಂಥದ್ದು ಏನು? ಅದೇ ವಿವೇಕ; ಅದೊಂದಿಲ್ಲದಿದ್ದರೆ ಮನುಷ್ಯನೂ ಪಶುವೇ ಸರಿ.’

ಮನುಷ್ಯನೂ ಪ್ರಾಣಿಯೇ ಹೌದು. ವಿಜ್ಞಾನವೂ ಹೀಗೇ ಹೇಳುತ್ತದೆ. ಆದರೆ ವಿಕಾಸಕ್ರಮದಲ್ಲಿ ಮನುಷ್ಯನಿಗೆ ‘ಮೆದುಳು’ ಬದಲಾವಣೆಯನ್ನು ಹೊಂದುತ್ತ ಅವನು ಬುದ್ಧಿವಂತನಾದ. ಅದರ ಕಾರಣದಿಂದ ಅವನು ಪ್ರಾಣಿಗಳಲ್ಲಿ ಶ್ರೇಷ್ಠನಾಗಿದ್ದಾನೆ. ಈ ನಿಲುವು ವಿಜ್ಞಾನಕ್ಕೂ ಸಮ್ಮತ.

ಎಂದರೆ, ಮನುಷ್ಯರನ್ನು ಪ್ರಾಣಿಗಳ ವ್ಯಾಪ್ತಿಯಿಂದ ಪ್ರತ್ಯೇಕವಾಗಿಸಿರುವುದು ‘ವಿವೇಕ’ ಎನ್ನುವುದು ಒಂದು ವಾದವಾದರೆ, ‘ಬುದ್ಧಿ’ ಎನ್ನುವುದು ಇನ್ನೊಂದು ವಾದ.

ಡೇವಿಡ್‌ ಅವರು ಹೇಳಿರುವ ಮಾತು ಇಲ್ಲಿ ಗಮನಾರ್ಹ: ‘Probably our behaviour is also complicated by thought’ - ‘ಬುದ್ಧಿಶಕ್ತಿಯಿಂದಾಗಿಯೇ ನಮ್ಮ ನಡವಳಿಕೆ ಸಂಕೀರ್ಣವಾಗುತ್ತಿದೆ.’ ಮಾತ್ರವಲ್ಲ, ಪಶುಪ್ರವೃತ್ತಿಯು ಬುದ್ಧಿಶಕ್ತಿಯೊಂದಿಗೆ ಬೆರೆತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ – ಎಂದೂ ಅವರು ಪ್ರತಿಪಾದಿಸುತ್ತಾರೆ. ನಮ್ಮ ದ್ವೇಷಕ್ಕೂ ನಮ್ಮ ಬುದ್ಧಿಶಕ್ತಿಗೂ ಸಂಬಂಧವಿರುವುದನ್ನೂ ಅವರು ಎತ್ತಿತೋರಿಸಿದ್ದಾರೆ.

ಬುದ್ಧಿಶಕ್ತಿಗೂ ವಿವೇಕಕ್ಕೂ ವ್ಯತ್ಯಾಸವಿದೆ. ಇವೆರಡರ ನಡುವೆ ನಿಲ್ಲುವಂಥದ್ದು ‘ವಿಚಾರಶಕ್ತಿ’. ಸಾಮರಸ್ಯವನ್ನು ಎಲ್ಲೆಲ್ಲೂ ನೆಲೆಗೊಳಿಸಬಲ್ಲದ್ದೇ ವಿಚಾರಶಕ್ತಿ (rationality). ಬುದ್ಧಿಶಕ್ತಿಯ ವ್ಯವಹಾರ ನಡೆಯುವುದು ಕತ್ತಲೆಯಲ್ಲಿ. ಅದು ತನ್ನ ಕತ್ತಲೆಯನ್ನು ತಾನೇ ಸೃಷ್ಟಿಕೊಳ್ಳುತ್ತದೆ. ಈ ಕತ್ತಲೆಯಿಂದ ಹೊರಬರಲು ಬುದ್ಧಿಗೆ ಬೇಕಾಗಿರುವುದು ‘ಅಂತಃಪ್ರಜ್ಞೆ’.

ಈ ಪ್ರಜ್ಞೆಯೇ ಬೆಳಕು. ಅದು ನಮಗೊಂದು ದೃಷ್ಟಿಕೋನವನ್ನು ಒದಗಿಸುತ್ತದೆ. ಇದೇ ವಿಚಾರಶಕ್ತಿ. ಯಾವುದೇ ಪೂರ್ವಗ್ರಹಗಳಿಲ್ಲದೆ ‘ಕ್ರಮ’ (order)ವನ್ನು ಅರಿತು, ಅದರಂತೆ ಕಾರ್ಯಪ್ರವೃತ್ತರಾಗಲು ಒದಗುವ ನೋಟವೇ ‘ವಿಚಾರಶಕ್ತಿ’. ಇದು ಅವರಿಬ್ಬರ ಸಂವಾದದ ಸಂಗ್ರಹ.

ವಿಚಾರಶಕ್ತಿ ಮತ್ತು ಪೂರ್ವಗ್ರಹವಿಲ್ಲದ ಕ್ರಿಯಾಶಕ್ತಿ – ಇವೆರಡರ ಸಂಗಮವೇ ‘ವಿವೇಕ’. ಪ್ರಾಣಿಗಳಿಗೆ ಇಂಥ ವಿವೇಕ ದಕ್ಕುವುದು ಸುಲಭವಲ್ಲ; ದಕ್ಕದು ಎಂದೂ ಹೇಳಲಾದೀತು. ಈ ಮಾತನ್ನು ಇನ್ನೂ ಒಂದು ರೀತಿಯಲ್ಲಿ ಹೇಳಬಹುದು. ಇಂಥ ವಿವೇಕಶಕ್ತಿ ಇಲ್ಲದ ಮನುಷ್ಯನೂ ಪ್ರಾಣಿಯೇ ಹೌದು.

ಬುದ್ಧಿ ಇದ್ದವರು ಮನುಷ್ಯರು– ಎಂದು ನಾವೆಲ್ಲರೂ ಎಣಿಸುತ್ತೇವೆ. ಆದರೆ ನಮ್ಮ ಎಲ್ಲ ಕೇಡುಗಳಿಗೂ ಮೂಲಕಾರಣವೇ ‘ಬುದ್ಧಿ’. ನಮಗೆ ಸಮಸ್ಯೆಗಳು ಎದುರಾಗುತ್ತಿರುವುದು ನಮಗೆ ಬುದ್ಧಿ ಇಲ್ಲ – ಎಂದಲ್ಲ; ಬುದ್ಧಿ ಮಾತ್ರವೇ ಇರುವುದು ಸಮಸ್ಯೆಯಾಗಿದೆ. ನಮಗೆ, ಈ ಕ್ಷಣಕ್ಕೆ ಯಾವುದು ಸರಿ ಮತ್ತು ಸುಖ ಎನಿಸುತ್ತದೆಯೋ ಅದನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕು ಎಂದು ಹೊಂಚುಹಾಕುವುದು ಬುದ್ಧಿಯ ಕೆಲಸ. ಆದರೆ ನಮಗೆ ಬೇಕಿರುವುದಾಗಲೀ, ನಮ್ಮಲ್ಲಿ ಇರುವುದಾಗಲೀ ನಿಜಕ್ಕೂ ಬೇಕೇ ಅಥವಾ ಬೇಡವೇ ಎಂದು ವಿಚಾರಮಾಡಿ, ನಿರ್ಧರಿಸಿ, ಅದರಂತೆ ನಡೆದುಕೊಳ್ಳುವುದು ವಿವೇಕದ ದಾರಿ.

ನಾವು ಪ್ರಾಣಿಗಳೋ? ಅಥವಾ ಮನುಷ್ಯರೋ? ನಮ್ಮ ಆಯ್ಕೆಗಳೇ ಈ ಪ್ರಶ್ನೆಗೆ ಉತ್ತರವಾಗಿರುತ್ತದೆಯಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.