ADVERTISEMENT

ಪ್ಲಾಸ್ಟಿಕ್ ರಸ್ತೆ: ವಿದ್ಯಾರ್ಥಿಗಳ ಪ್ರಯೋಗ

ಆರ್.ಜಿತೇಂದ್ರ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಹುಬ್ಬಳ್ಳಿಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಅಂತಿಮ ವರ್ಷದ ಈ  ವಿದ್ಯಾರ್ಥಿಗಳ ಹೆಸರು ಕ್ಯಾಲ್ವಿನ್ ಕ್ರಿಸ್ಟೋಫರ್ ಮತ್ತು ಅನಿತಾ ಜೋಶ್. ಇವರಿಬ್ಬರೂ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸುವ ಯೋಜನೆಯನ್ನು ಕಂಡುಕೊಂಡಿದ್ದಾರೆ. ಬೆಂಗಳೂರಿನ ವಿಜನ್ ಗ್ರೂಪ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಹಯೋಗದಲ್ಲಿ ಈ ಯೋಜನೆ ಸಿದ್ಧವಾಗಿದೆ.

ಸದ್ಯ ಕಾಲೇಜಿನ ಅಂಗಳದಲ್ಲೇ ಈ ಪ್ಲಾಸ್ಟಿಕ್ ರಸ್ತೆ ಪ್ರಯೋಗ ನಡೆದಿದೆ. ಎಲ್‌ಡಿಪಿಇ ಪ್ಲಾಸ್ಟಿಕ್ ಹಾಗೂ ಬಿಟುಮಿನ್ ಅನ್ನು ಬಳಸಿ ರಸ್ತೆ ಸಿದ್ಧಪಡಿಸಲಾಗಿದೆ. 9/4 ಅಡಿ ಹಾಗೂ 9/3 ಅಡಿ ಉದ್ದದ ರಸ್ತೆ ಮೇಲೆ ಈ ಪ್ರಯೋಗ ನಡೆದಿದೆ.

ಒಂದು ರಸ್ತೆಗೆ ಶೇ. 5 ರಷ್ಟು ಪ್ಲಾಸ್ಟಿಕ್ ಹಾಗೂ ಇನ್ನೊಂದು ರಸ್ತೆಗೆ ಶೇ. 8ರಷ್ಟು ಪ್ಲಾಸ್ಟಿಕ್ ಬಳಸಲಾಗಿದೆ. ಶೇ. 5 ರಷ್ಟು ಪ್ಲಾಸ್ಟಿಕ್ ಬಳಸಿ ತಯಾರಿಸಿದ ರಸ್ತೆಯು ನುಣುಪಾಗಿದ್ದು,  ದೀರ್ಘಕಾಲ ಬಾಳಿಕೆ ಬರುವಂತದ್ದಾಗಿದೆ.

ಕ್ಯಾಂಪಸ್‌ನಲ್ಲಿ ಸಿಗುವ ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿರುವುದು ವಿಶೇಷ. ಕೆಎಲ್‌ಇ ಸಂಸ್ಥೆಯ ಆವರಣದಲ್ಲಿ ಸಿಕ್ಕ 1 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಜೊತೆಗೆ 20 ಕೆ.ಜಿ.ಗೂ ಅಧಿಕ ಬಿಟುಮಿನ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ 20 ಎಂ.ಎಂ ಗಾತ್ರದ ರಸ್ತೆಗಳನ್ನು ಸಿದ್ಧಪಡಿಸಿ, ಅವುಗಳ ಮೇಲೆ ಸಂಚಾರದ ಪ್ರಯೋಗ ನಡೆಸಿ ಅದರ ಫಲಿತಾಂಶವನ್ನೂ ಈ ವಿದ್ಯಾರ್ಥಿಗಳು ತಮ್ಮ ಪ್ರಯೋಗದಲ್ಲಿ ಕಂಡುಕೊಂಡಿದ್ದಾರೆ.

`ಮನೆಯ ಸುತ್ತ ಪ್ಲಾಸ್ಟಿಕ್ ಚೀಲಗಳು ಎಲ್ಲೆಂದರಲ್ಲಿ ಬಿದ್ದಿರುವುದನ್ನು ನಿತ್ಯ ಕಾಣುತ್ತಿದ್ದೆವು. ಈ ತ್ಯಾಜ್ಯವನ್ನೇ ಬಳಸಿಕೊಂಡು ಏಕೆ ಪ್ರಯೋಗ ಮಾಡಬಾರದು ಎಂಬ ಯೋಚನೆ ಬಂತು. ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್ ಬಳಸಿ ನಿರ್ಮಿಸಿದ ರಸ್ತೆಗಳೂ ಎಲ್ಲಿಯೂ ಇಲ್ಲ. ಹೀಗಾಗಿ ಇಂತಹದ್ದೊಂದು ಪ್ರಯೋಗ ಕೈಗೊಳ್ಳಲು ನಾವು ಬಯಸಿದೆವು.
 
ಇದೇ ಸಮಯಕ್ಕೆ ವಿಜನ್ ಗ್ರೂಪ್‌ನಿಂದ ಪ್ರಾಜೆಕ್ಟ್‌ಗೆ ಸಹಕಾರವೂ ದೊರೆಯಿತು. ವಿಭಾಗದ ಪ್ರಾಧ್ಯಾಪಕರಾದ ಡಾ. ಸುಧಾ ಪಾಟೀಲ ಮಾರ್ಗದರ್ಶನ ನೀಡಿದರು ಎನ್ನುತ್ತಾರೆ ಪ್ರಯೋಗದ ರೂವಾರಿಗಳಾದ ವಿದ್ಯಾರ್ಥಿಗಳು. 

 ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ಶೇ. 12 ರಷ್ಟು ಪ್ಲಾಸ್ಟಿಕ್ ಅನ್ನು ಬಳಸಿ ದೆಹಲಿಯಲ್ಲಿ ರಸ್ತೆ ನಿರ್ಮಿಸಲಾಗಿತ್ತು. ನಾವು ಶೇ. 5-8 ಪ್ರಮಾಣದ ಪ್ಲಾಸ್ಟಿಕ್ ಬಳಸಿ ಪ್ರಯೋಗ ನಡೆಸಲು ನಿರ್ಧರಿಸಿದೆವು. 4 ದಿನಗಳ ಕಾಲ ತಯಾರಿ ನಂತರ ರಸ್ತೆ ಸಿದ್ಧವಾಯ್ತು~ ಎಂದು ತಮ್ಮ ಪ್ರಯೋಗದ ಬಗ್ಗೆ ವಿವರಿಸುತ್ತಾರೆ ಕ್ಯಾಲ್ವಿನ್ ಕ್ರಿಸ್ಟೋಫರ್ ಹಾಗೂ ಅನಿತಾ ಜೋಶ್.

ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಿಸುವುದರಿಂದ ರಸ್ತೆಯ ಗುಣಮಟ್ಟ ಹೆಚ್ಚುತ್ತದೆ ಹಾಗೂ ದೀರ್ಘ ಬಾಳಿಕೆ ಬರುತ್ತದೆ.  ಘಟ್ಟ ಪ್ರದೇಶದ ರಸ್ತೆಗಳಿಗೆ ಇದು ಹೆಚ್ಚು ಉಪಯುಕ್ತ. ಮಳೆಗಾಲದ ಸಂದರ್ಭದಲ್ಲಿ ವಾಹನಗಳು ಸ್ಕಿಡ್ ಆಗುವುದಿಲ್ಲ. ಇದರಿಂದ ಟೈರುಗಳ ಆಯಸ್ಸೂ ಹೆಚ್ಚುತ್ತದೆ. ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳು ಸದುಪಯೋಗವಾಗಿ ಪರಿಸರದ ಮೇಲಿನ ಹೊರೆ ಕೊಂಚ ಕಡಿಮೆಯಾಗುತ್ತದೆ ಎನ್ನುವುದು ಅವರ ಹೇಳಿಕೆ.

ಸದ್ಯ ತಮ್ಮ ಈ ಪ್ರಯೋಗದಿಂದ ಖುಷಿಗೊಂಡಿರುವ ವಿದ್ಯಾರ್ಥಿಗಳು ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಇದನ್ನು ಪ್ರಯೋಗಿಸುವ ಗುರಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.