ADVERTISEMENT

ಬನೆಲ್ಲಿ ಟಿಎನ್‌ಟಿ 300 ಪಕ್ಕಾ ಮಾಡರ್ನ್‌

ನೇಸರ ಕಾಡನಕುಪ್ಪೆ
Published 28 ಜನವರಿ 2015, 19:30 IST
Last Updated 28 ಜನವರಿ 2015, 19:30 IST

ಡಿಎಸ್‌ಕೆ ಮೋಟೋವೀಲ್ಸ್‌ ಭಾರತದ ರಸ್ತೆಗಳಲ್ಲಿ ಸಂಚಲನ ಮೂಡಿಸಲು ಸಿದ್ಧವಾಗೇಬಿಟ್ಟಿದೆ. ಅದೂ ಬನೆಲ್ಲಿ ಬೈಕ್‌ಗಳ ಮೂಲಕ. ಇದರಲ್ಲಿ ಅಚ್ಚರಿಯೇನು ಎಂದು ನೀವು ಕೇಳಬಹುದು. ಟ್ರೈ ನೈಟ್ರೊ ಟಾಲ್ವಿನ್‌ (ಟಿಎನ್‌ಟಿ) ಎಂಬ ಹೆಸರನ್ನು ನೀವು ಕೇಳಿದ್ದೀರಿ ಅಲ್ಲವೆ? ಇದೊಂದು ಶಕ್ತಿಶಾಲಿ ಬಾಂಬ್‌. ಇಂದಿಗೂ ಅಣುಬಾಂಬ್‌ನ ಶಕ್ತಿಯನ್ನು ಅಳೆಯುವ ಮಾನದಂಡವಾಗಿ ಇದನ್ನೇ ಬಳಸಲಾಗುತ್ತಿದೆ. ಅಂದರೆ ಅಷ್ಟು ಶಕ್ತಿಶಾಲಿ ಬಾಂಬ್‌ ಎನ್ನುವುದು ಟಿಎನ್‌ಟಿಯ ಹೆಗ್ಗಳಿಕೆ.

ಈ ಹೆಸರಿನ ಬೈಕ್‌ ಭಾರತದ ರಸ್ತೆಗಳ ಮೇಲೆ ಸಂಚರಿಸಲಿದೆ ಎಂದರೆ ಅದೆಷ್ಟು ಬಲಶಾಲಿ ಎಂಬುದನ್ನು ಊಹಿಸಿಕೊಳ್ಳಿ. ಈಗ ಬಿಡುಗಡೆ ಆಗುತ್ತಿರುವ ಈ ಬೈಕ್‌ 300 ಸಿಸಿ ಸಾಮರ್ಥ್ಯದ್ದು. 4 ಸ್ಟ್ರೋಕ್‌ ಎಂಜಿನ್‌ ಜತೆಗೆ ಟ್ವಿನ್‌ ಎಂಜಿನ್‌ ಹೃದಯ ಈ ಬೈಕ್‌ನ ವಿಶೇಷ.

ಈಗಾಗಲೇ ನಮ್ಮಲ್ಲಿ 300 ಸಿಸಿ ಮೀರಿದ ಬೈಕ್‌ಗಳು ಇರುವುದಾದರೂ ಟ್ವಿನ್‌ ಎಂಜಿನ್‌ ಬೈಕ್‌ಗಳು ಇಲ್ಲವೇ ಇಲ್ಲ. ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳು ಇದಕ್ಕೆ ಉದಾಹರಣೆ. ಹ್ಯೋಸಂಗ್‌ ಅಕ್ವಿಲಾ ಬೈಕ್‌ಗಳು ಇದಕ್ಕೆ ಅಪವಾದ ಎಂಬಂತೆ ಟ್ವಿನ್‌ ಎಂಜಿನ್‌ ಜತೆ ಹೊರಬಂದು ಅಚ್ಚರಿ ಮೂಡಿಸಿದ್ದವು. ನಂತರ ಕವಾಸಾಕಿ ಬೈಕ್‌ಗಳೂ ಟ್ವಿನ್‌ ಎಂಜಿನ್‌ ಜತೆ ಹೊರಬಂದಿದ್ದವು.
ಇದೀಗ ಬನೆಲ್ಲಿಯ ಸರದಿ. ಟ್ವಿನ್‌ ಎಂಜಿನ್‌ ಹೆಡ್‌ ಇದರಲ್ಲಿದೆ. ಟಿಎನ್‌ಟಿ ಸುಮಾರು 4 ಬೈಕ್‌ಗಳ ಸರಣಿಯಲ್ಲಿ ಹೊರಬರಲಿದೆ. ಅವುಗಳ ಪೈಕಿ ಟಿಎನ್‌ಟಿ 300 ಅತಿ ಕಡಿಮೆ ಸಾಮರ್ಥ್ಯದ್ದು. ಗರಿಷ್ಠ ಸಾಮರ್ಥ್ಯದ ಬೈಕ್‌ 1130 ಸಿಸಿ ಎಂಜಿನ್‌ ಒಳಗೊಂಡಿರುತ್ತದೆ. ಈಗಿನದು ಅವಕ್ಕೆ ಹೋಲಿಸಿದರೆ ಸಾಮಾನ್ಯ ಸಾಮರ್ಥ್ಯದ್ದೇ ಎನ್ನಬಹುದು.

ಆದರೂ ವಿಶೇಷವಿದೆ
ತನ್ನ ಸರಣಿಯಲ್ಲೇ ಕಡಿಮೆ ಶಕ್ತಿಯದು ಎನ್ನುವುದು ಹೌದಾದರೂ, ತನ್ನದೇ ಆದ ವೈಶಿಷ್ಟ್ಯವನ್ನು ಬನೆಲ್ಲಿ ಟಿಎನ್‌ಟಿ 300 ಹೊಂದಿದೆ. ಬರೋಬ್ಬರಿ 36.2 ಬಿಎಚ್‌ಪಿ ಶಕ್ತಿ (11,500 ಆರ್‌ಪಿಎಂ) ಹಾಗೂ 2.75 ಕೆಜಿಎಂ ಟಾರ್ಕ್‌ ಹೊಂದಿರುವುದು ವಿಶೇಷ. 300 ಸಿಸಿ ಎಂಜಿನ್‌ಗೆ ಇದು ಸಾಕಾಗಿ ಮಿಗುವಷ್ಟು ಶಕ್ತಿ! ಅಂದರೆ ಆರಂಭದ ಪಿಕಪ್‌ ಹಾಗೂ ಗರಿಷ್ಠ ವೇಗ ಸಾಧನೆಗೆ ಅನುಕೂಲಕಾರಿ. ಹಾಗಾಗಿ ಈ ಬೈಕ್‌ ಗರಿಷ್ಠ 157 ಕಿಲೋಮೀಟರ್‌ ವೇಗ ತಲಪುವಲ್ಲಿ ಯಶಸ್ಸು ಪಡೆಯುತ್ತದೆ. ಅಲ್ಲದೇ, 0 ಇಂದ 60 ಕಿಲೋಮೀಟರ್‌ ವೇಗವನ್ನು ಕೇವಲ 3.5 ಸೆಕೆಂಡ್‌ಗಳಲ್ಲಿ ಮುಟ್ಟುತ್ತದೆ. 0 ಇಂದ 100 ಕಿಲೋಮೀಟರ್‌ ಮುಟ್ಟಲು ತೆಗೆದುಕೊಳ್ಳುವ ಸಮಯ 8.5 ಸೆಕೆಂಡ್‌ಗಳು. ಇದು ತೀರಾ ಶ್ರೇಷ್ಠ ಎನ್ನುವ ಕಾರ್ಯಕ್ಷಮತೆ ಅಲ್ಲವಾದರೂ, ಭಾರತದ ಹಾಲಿ ಬೈಕ್‌ಗಳ ನಡುವೆ ಇದು ಗಮನ ಸೆಳೆಯುತ್ತದೆ.

ಪಕ್ಕಾ ಮಾಡರ್ನ್‌ ಎನ್ನುವ ನೋಟ ಇರುವುದು ಇದು ಕ್ರೀಡಾ ಗುಣಲಕ್ಷಣಗಳನ್ನು ಒಳಗೊಂಡ ಬೈಕ್‌ ಎನ್ನುವುದನ್ನು ಸಾಬೀತು ಮಾಡು ತ್ತದೆ. ಹಿಂಬದಿ ಮಾನೊ ಶಾಕ್‌ ಅಬ್ಸಾರ್ಬರ್‌ ಹಾಗೂ ಮುಂದೆ ಇನ್‌ವರ್ಟೆಡ್‌ ಟೆಲಿಸ್ಕೋಪಿಕ್‌ ಸಸ್ಪೆನ್ಷನ್‌ ಇದ್ದು, ನೋಟವನ್ನು ದ್ವಿಗುಣಗೊಳಿಸುತ್ತವೆ. ಜತೆಗೆ ಗಾತ್ರದಲ್ಲಿ ಚಿಕ್ಕದು, ಆದರೆ ಭಯಂಕರ ಸದ್ದನ್ನು ಹೊರಡಿಸುವ ಸೈಲೆನ್ಸರ್‌ ಬೈಕ್‌ ಕಡೆಗೆ ಎಲ್ಲರೂ ತಿರುಗಿ ನೋಡುವಂತೆ ಮಾಡುತ್ತದೆ. ಎರಡೂ ಬದಿಯ ಆಕರ್ಷಕ ಅಲಾಯ್‌ ಚಕ್ರಗಳು ಚೂಪಾದ ಗಾಳಿಯನ್ನು ಸೀಳುವ ದೇಹ, ಸೀಟ್‌ಗಳು ಸಹ ನೋಟವನ್ನು ಹೆಚ್ಚಿಸಿವೆ.

ಅನುಕೂಲಕ್ಕೂ ಸೈ
ಇದು ಕೇವಲ ನೋಡಲು ವಿಶೇಷವಾದ ಬೈಕ್‌ ಅಲ್ಲ. ಬಳಕೆಗೂ ಹೌದು. ಇದರಲ್ಲಿ 16 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಇದೆ. ಇದರ ಪ್ರತಿಸ್ಪರ್ಧಿ ಯಾವ ಬೈಕ್‌ನಲ್ಲೂ ಇಷ್ಟು ದೊಡ್ಡ ಪೆಟ್ರೋಲ್‌ ಟ್ಯಾಂಕ್‌ ಇಲ್ಲ. ಕೆಟಿಎಂ ಡ್ಯೂಕ್‌, ಕವಾಸಾಕಿ ಜೆಡ್‌- 250 ಬೈಕ್‌ನಲ್ಲೂ ಚಿಕ್ಕ ಟ್ಯಾಂಕ್‌ಗಳೇ ಇವೆ. ಹಾಗಾಗಿ ಟಿಎನ್‌ಟಿ 300 ಬೈಕ್‌ ಹೆಚ್ಚು ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದ ಹಾಗಾಯಿತು. ಟ್ಯಾಂಕ್‌ ದೊಡ್ಡದಿದ್ದ ಮಾತ್ರಕ್ಕೆ ದೂರ ಹೋಗುತ್ತದೆ ಎಂದಲ್ಲ. ಇದರಲ್ಲಿ ಲಿಕ್ವಿಡ್‌ ಕೂಲ್ಡ್‌ ಎಂಪಿಎಫ್‌ಐ (ಮಲ್ಟಿ ಪಾಯಿಂಟ್‌ ಫ್ಯುಯಲ್ ಇಂಜೆಕ್ಷನ್‌) ಎಂಜಿನ್‌ ಇದ್ದು ಲೀಟರ್‍ ಪೆಟ್ರೋಲ್‌ಗೆ 27.9 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಇದು ಕೇವಲ ಕಾಗದದ ಮೇಲಿನ ಅಂಕಿಯಲ್ಲ. ನಿಜಕ್ಕೂ ರಸ್ತೆಯಲ್ಲಿ ಸಿಗುವ ಮೈಲೇಜ್‌. ಹಾಗಾಗಿ, ಇದು ಜನರ ಪ್ರೀತಿ ಗೆಲ್ಲುವಲ್ಲಿ ಅಚ್ಚರಿಯಿಲ್ಲ. ಭಾರತದ ಬೈಕರ್‌ಗಳಂತೂ ಮೈಲೇಜ್‌ ಪ್ರಿಯರೇ.

ಬೈಕ್‌ನಲ್ಲಿ ಸಂಪೂರ್ಣ ಎಲ್‌ಸಿಡಿ ಪರದೆಯುಳ್ಳ ಇನ್‌ಸ್ಟ್ರುಮೆಂಟ್‌ ಪೆನಲ್‌ ಇದೆ. ಇದರಲ್ಲಿ 6 ಗಿಯರ್‌ ಇಂಡಿಕೇಟರ್‌, ಸಿಗ್ನಲ್‌ ಇಂಡಿಕೇಟರ್‌, ಸೈಡ್‌ ಸ್ಟ್ಯಾಂಡ್‌ ಇಂಡಿಕೇಟರ್‌, ಆರ್‌ಪಿಎಂ, ಸ್ಪೀಡೋ, ಓಡೋ ಮೀಟರ್‌ ಇವೆ. ಟ್ರಿಮ್‌ ಮೀಟರ್‌ನಲ್ಲೂ ಎರಡು ಆಯ್ಕೆಗಳಿವೆ. ಒಂದು ಬೈಕ್‌ ಕೊಂಡಾಗಿನಿಂದ ಕ್ರಮಿಸಿರುವ ದೂರ, ಮತ್ತೊಂದು ನಿಗದಿತ ಸ್ಥಳಗಳ ನಡುವಿನ ದೂರ ಲೆಕ್ಕ ಹಾಕಲು ಅನುಕೂಲಕಾರಿಯಾಗಿವೆ. ಇವೆರಡನ್ನೂ ಮತ್ತೆ ಸೊನ್ನೆಗೆ ತಂದು ನಿಲ್ಲಿಸಬಹುದಾದ ಸೌಲಭ್ಯವಿದೆ. ಈ ಸೌಲಭ್ಯ ಬಹುತೇಕ ಎಲ್ಲ ಹೊಸ ಬೈಕ್‌ಗಳಲ್ಲಿ ಈಗ ಇದೆ. ಇದರ ಜತೆಗೆ, ಸ್ವಿಚ್‌ಗಳಲ್ಲಿ ಬೆಳಕು ಹೊಮ್ಮುವ ವ್ಯವಸ್ಥೆ ಇದೆ. ಇದು ಸಾಧಾರಣ ಬಜಾಜ್‌ ಪಲ್ಸರ್‌ನಲ್ಲೇ ಇರುವುದರಿಂದ ಇದೇನು ದೊಡ್ಡ ವಿಶೇಷವಲ್ಲ. ಆದರೂ ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆಯಷ್ಟೇ.

ಇವುಗಳ ಜತೆಗೆ ಬೆಲೆಯೂ ತೀರಾ ಹೆಚ್ಚೇನೂ ಇಲ್ಲ ಎಂಬಂತೆಯೇ ಇದೆ. ಹೇಳಿ ಕೇಳಿ ಇದು ಸ್ಪೋರ್ಟ್ಸ್ ಬೈಕ್‌. ಜತೆಗೆ ಜಾಗತಿಕ ಗುಣಮಟ್ಟದ್ದು. ಹಾಗಾಗಿ ಇದರ ಬೆಲೆ 3.25 ಲಕ್ಷ ರೂಪಾಯಿ ಆಗಿರಲಿದೆ. ಕಾಸಿದ್ದವರ ಬಾದಾಮಿ ಈ ಬೈಕ್‌!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.