ADVERTISEMENT

ಭವಿಷ್ಯದ ಸ್ಟೈಲಿಶ್ ಸ್ಕೂಟರ್

ಎಂಪಿ3 ಹೈಬ್ರಿಡ್

ಪೃಥ್ವಿರಾಜ್ ಎಂ ಎಚ್
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST
ಭವಿಷ್ಯದ ಸ್ಟೈಲಿಶ್ ಸ್ಕೂಟರ್
ಭವಿಷ್ಯದ ಸ್ಟೈಲಿಶ್ ಸ್ಕೂಟರ್   

ಆರಾಮದಾಯಕ ಸವಾರಿಗೆ ಬೈಕ್‌ಗಳಿಗಿಂತಲೂ ಸ್ಕೂಟರ್ ಸವಾರಿ ಹೆಚ್ಚು ಅಪ್ಯಾಯಮಾನ. ಸ್ಕೂಟರ್ ಚಲಿಸುವಾಗ ಕ್ಲಚ್ ಮತ್ತು ಗೇರ್ ಬದಲಿಸುವ ಕಿರಿಕಿರಿ ಇರುವುದಿಲ್ಲ. ಹಾಗಾಗಿ ಸ್ಕೂಟರ್ ಸವಾರಿ ಒಂದು `ಹಿತಾನುಭವ'ವೇ ಸರಿ.

ಬೈಕ್‌ಗಳ ಮಾರುಕಟ್ಟೆಗೆ ಸರಿ ಸಮಾನವಾಗಿ ಸ್ಕೂಟರ್‌ಗಳ ಮಾರುಕಟ್ಟೆ ಬೃಹತ್ತಾಗಿ ಬೆಳೆಯುತ್ತಿದೆ. ಸ್ಕೂಟರ್‌ಗಳ ಅತ್ಯಾಕರ್ಷಕ ವಿನ್ಯಾಸ ಯುವಜನರನ್ನು ಸೆಳೆಯುತ್ತಿದೆ. ಈಗ ಬಿಡುಗಡೆಯಾಗುತ್ತಿರುವ ನೂತನ ಸ್ಕೂಟರ್‌ಗಳು ಇಂಧನ ಕ್ಷಮತೆಯನ್ನು ಹೆಚ್ಚು ಹೊಂದಿದ್ದು ಬೈಕ್‌ಗಳಷ್ಟೇ ಮೈಲೇಜ್ ನೀಡುತ್ತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ, ಹೀರೊ, ಯಮಹಾ, ಟಿವಿಎಸ್, ಮಹೀಂದ್ರಾ, ಸುಜುಕಿ ಸೇರಿದಂತೆ ಇನ್ನಿತರ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿಗಳು ಸ್ಕೂಟರ್ ತಯಾರಿಕೆಯಲ್ಲಿ ಅಗ್ರಸ್ಥಾನ ಪಡೆದಿವೆ.

ಭಾರತದಲ್ಲಿ ಹೆಚ್ಚು ಸ್ಕೂಟರ್‌ಗಳು ಮಾರಾಟವಾಗುತ್ತಿರುವುದನ್ನು ಮನಗಂಡಿರುವ ವಿವಿಧ ಅಂತರರಾಷ್ಟ್ರೀಯ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳು ಇಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿವೆ. ಇವುಗಳಲ್ಲಿ ಇಟಲಿ ಮೂಲದ ಪಿಯಾಜಿಯೊ ಕಂಪೆನಿ ಭಾರತೀಯ ರಸ್ತೆಗಳಿಗೆ ಎಂಪಿ3 ಹೈಬ್ರಿಡ್ ಸ್ಕೂಟರ್  ಪರಿಚಯಿಸಲು ಸಜ್ಜಾಗಿದೆ.

ಕಳೆದ ವರ್ಷ ದೆಹಲಿಯಲ್ಲಿ ನಡೆದ ಆಟೊ ಎಕ್ಸ್‌ಪೋ-2012ರಲ್ಲಿ ಪಿಯಾಜಿಯೊ ಮೂರು ಚಕ್ರಗಳಿರುವ ಹೈಬ್ರಿಡ್ ಸ್ಕೂಟರ್ ಅನ್ನು ಪ್ರದರ್ಶಿಸುವ ಮೂಲಕ 2013ರ ಅಂತ್ಯದ ವೇಳೆಗೆ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು. 

ಸಖತ್ ಸ್ಟೈಲಿಶ್ ಆಗಿರುವ ಈ ಸ್ಕೂಟರ್ ಈಗಾಗಲೇ ವಿದೇಶಗಳಲ್ಲಿ  ಭಾರೀ ಜನಪ್ರಿಯತೆ ಪಡೆದಿದೆ. ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ಸ್ಕೂಟರ್ ಎಂಬ ಹೆಗ್ಗಳಿಕೆ ಇದರದ್ದು. ಪೆಟ್ರೋಲ್ ಮತ್ತು ಬ್ಯಾಟರಿ ಚಾಲಿತ ಈ ಸ್ಕೂಟರ್ ಪರಿಸರಸ್ನೇಹಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಏಕೆಂದರೆ ಇದು ಹೊಗೆಯನ್ನು ಉಗುಳುವುದಿಲ್ಲವಂತೆ!
ಇದರ ವಿನ್ಯಾಸ ಕೂಡ ಆಕರ್ಷಣೀಯ. ಫೈಬರ್‌ನಿಂದ ನಿರ್ಮಿಸಲಾಗಿರುವ ದೇಹ, ಮುಂದೆ ಎರಡು ಮತ್ತು ಹಿಂದೆ ಒಂದು ಚಕ್ರವಿದ್ದು, ನೋಡಲು ಅತ್ಯಾಕರ್ಷಕ. ಸವಾರರಿಗೆ ಬ್ಯಾಲೆನ್ಸ್ ಸಮಸ್ಯೆ ಇಲ್ಲದಿರುವುದರಿಂದ ಮಹಿಳೆಯರು , ವೃದ್ಧರು ಮತ್ತು ದೈಹಿಕವಾಗಿ ದೌರ್ಬಲ್ಯ ಹೊಂದಿರುವವರು ಸುಲಭವಾಗಿ ಚಾಲನೆ ಮಾಡಬಹುದು. ಮುಂದಿನ ಎರಡು ಚಕ್ರಗಳು ಬಾಗುವ ಸೌಲಭ್ಯ ಹೊಂದಿರುವುದರಿಂದ ರಸ್ತೆಯ ಮೇಲೆ ಬೈಕ್ ರೈಡರ್ಸ್‌ಗಳಂತೆ  ಮಲಗಿಸಿ ಚಾಲನೆ ಮಾಡಬಹುದು. ಈಗಾಗಲೇ ವೆಸ್ಪಾ ಸ್ಕೂಟರ್ ಅನ್ನು ಪರಿಚಯಿಸಿರುವ ಪಿಯಾಜಿಯೊ, ಅದರ ಮಾರಾಟ ಆಶಾದಾಯಕವಾಗಿಲ್ಲದ ಕಾರಣ ಹೈಬ್ರಿಡ್ ಸ್ಕೂಟರ್ ಅನ್ನು ಪರಿಚಯಿಸಲು ಮುಂದಾಗಿದೆ.

ಸ್ಕೂಟರ್‌ನ ವೈಶಿಷ್ಟ್ಯಗಳು..
ಮೂರು ಚಕ್ರಗಳ ಎಂಪಿ3 ಹೈಬ್ರಿಡ್ ಸ್ಕೂಟರ್ ಪೆಟ್ರೋಲ್ ಮತ್ತು ಬ್ಯಾಟರಿ ಚಾಲಿತ ಎಂಜಿನ್‌ನಿಂದ ನಿರ್ಮಿಸಲಾಗಿದೆ. ಲೀಥಿಯಂ ಐಯಾನ್‌ನಿಂದ ನಿರ್ಮಿಸಲಾಗಿರುವ ಇದರ ಬ್ಯಾಟರಿ ಅತ್ಯಂತ ಶಕ್ತಿಶಾಲಿ ಎನ್ನಲಾಗಿದೆ. ಮುಂದಿನ ಎರಡು ಚಕ್ರಗಳು ಬಾಗುವ ಸೌಲಭ್ಯವನ್ನು ಹೊಂದಿವೆ. ಹಾಗಾಗಿ ಸ್ಕೂಟರನ್ನು ಹೇಗೆ ಬೇಕಾದರೂ ಹಾಗೇ ಚಾಲನೆ ಮಾಡಬಹುದು. ಕಲ್ಲು, ತಗ್ಗು ಮತ್ತು ದಿಬ್ಬದ ಪ್ರದೇಶಗಳಲ್ಲೂ ಈ ಸ್ಕೂಟರ್ ಅನ್ನು  ಸುಲಭವಾಗಿ ಓಡಿಸಬಹುದು.

ವಿದೇಶಿ ರಸ್ತೆಗಳಲ್ಲಿ ಓಡುತ್ತಿರುವ ಈ ಸ್ಕೂಟರ್‌ನಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್‌ಗಳನ್ನು ಜೋಡಿಸಲಾಗಿದೆ.

  ಪೆಟ್ರೋಲ್ ಎಂಜಿನ್ ಲೀಟರ್ ಪೆಟ್ರೋಲ್‌ಗೆ 60 ಕಿ.ಮೀ ಮೈಲೇಜ್ ನೀಡುತ್ತಿದೆ. ಶೇ. 65ರಷ್ಟು ಹೈಬ್ರಿಡ್ ಲೀಥಿಯಂ ಇಂಧನ ಹಾಗೂ ಶೇ.35ರಷ್ಟು ಎಲೆಕ್ಟ್ರಿಕಲ್ ಪವರ್‌ನೊಂದಿಗೆ ಹೈಬ್ರಿಡ್ ಎಂಜಿನ್ ಕಾರ್ಯ ನಿರ್ವಹಿಸುತ್ತದೆ.

124 ಸಿಸಿಯಿಂದ 500ಸಿಸಿವರೆಗಿನ ಸ್ಕೂಟರ್‌ಗಳು ತಯಾರಾಗುತ್ತಿವೆ. 1490ಎಂ.ಎಂ. ವಿಸ್ತಾರದ ವಿಲ್‌ಬೇಸ್ ಇದ್ದು, ಇದರ ಒಟ್ಟಾರೆ ತೂಕ 275 ಕೆ.ಜಿ.  ಕೆಂಪು, ನೀಲಿ, ಕಂದು, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಈ ಸ್ಕೂಟರ್ ಲಭ್ಯವಿವೆ. 

ವಿಎಂಎಸ್ (ವೆಹಿಕಲ್ ಮ್ಯಾನೇಜ್ಮೆಂಟ್ ಸಿಸ್ಟಂ) ಹಾಗೂ ಪಿಸಿಎಸ್ (ಪವರ್ ಕಂಟ್ರೋಲ್  ಸಿಸ್ಟಂ) ತಂತ್ರಜ್ಞಾನದಿಂದ ಈ ಸ್ಕೂಟರ್ ತಯಾರಿಸಲಾಗಿದೆ.

ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ಥಳೀಯ ಪ್ರಯಾಣಕ್ಕೆ ಅನುಕೂಲಕರವಾಗಿವೆ. ಆದರೆ ದೂರದ ಪ್ರಯಾಣ ಕಷ್ಟ ಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ದೂರದ ಪ್ರಯಾಣಕ್ಕೂ ಅನುಕೂಲವಾಗುವಂತೆ ಈ ಸ್ಕೂಟರ್‌ಗಳನ್ನು ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಭಾರತದಲ್ಲಿ ಈ ಸ್ಕೂಟರ್‌ನ ಕೈಗಾರಿಕ ಘಟಕ ಇನ್ನೂ ಆರಂಭವಾಗಿಲ್ಲ. ಹಾಗಾಗಿ 2013ರ ಅಂತ್ಯದ ವೇಳೆಗೆ ಈ ಸ್ಕೂಟರ್‌ಗಳು ಮಾರುಕಟ್ಟೆಗೆ ಬರುವುದು ಅಸಾಧ್ಯ ಎನ್ನಲಾಗಿದೆ.

ಈ ಸ್ಕೂಟರ್‌ಗಳು ಭಾರತೀಯ ರಸ್ತೆಗಳಿಗೆ ಹೊಂದುವುದಿಲ್ಲ ಎಂದು ಸ್ಕೂಟರ್ ಪರಿಣಿತರು ಅಭಿಪ್ರಾಯ ಪಡುತ್ತಾರೆ. ಅಲ್ಲದೇ ಇವುಗಳ ಬೆಲೆ ಕೂಡ ದುಬಾರಿ. ಹಾಗಾಗಿ ಭಾರತದ ಮಾರುಕಟ್ಟೆಯಲ್ಲಿ ಈ ಹೈಬ್ರಿಡ್ ಸ್ಕೂಟರ್‌ಗಳಿಗೆ ಬೇಡಿಕೆ ಸಿಗಲಾರದು ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಭಾರತೀಯ ದ್ವಿಚಕ್ರ ವಾಹನಗಳ ಮಾರುಕಟ್ಟೆಯು ಮಧ್ಯಮ ವರ್ಗವನ್ನು ಕೇಂದ್ರೀಕರಿಸಿಕೊಂಡಿದೆ. 50 ರಿಂದ 60 ಸಾವಿರ ರೂಪಾಯಿ ಬೆಲೆಯ ಸ್ಕೂಟರ್ ಅಥವಾ ಬೈಕ್‌ಗಳಿಗೆ ಬೇಡಿಕೆ ಇದೆ. ಆದರೆ 2 ರಿಂದ 3 ಲಕ್ಷ ರೂಪಾಯಿ ತೆತ್ತು ಈ ಸ್ಕೂಟರ್‌ಗಳನ್ನು ಮಧ್ಯಮ ವರ್ಗದ ಜನರು ಬಹುಶಃ ಕೊಂಡುಕೊಳ್ಳಲಾರರು ಎಂದು ಮಾರುಕಟ್ಟೆ ವಿಶ್ಲೇಷಕರು ಆಭಿಪ್ರಾಯ ವ್ಯಕ್ತಪಡಿಸುತ್ತಿರುವುದರಿಂದ  ಪಿಯಾಜಿಯೊ  ಇಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಪಿಯಾಜಿಯೊ ಕಂಪೆನಿ ಮನಸ್ಸು ಮಾಡಿ ಸ್ಕೂಟರ್ ತಯಾರಿಕೆಯನ್ನು ಆರಂಭಿಸಿದರೆ ಬರುವ 2014 ಅಥವಾ 2015ರ ವೇಳೆಗೆ ಈ ಹೈಬ್ರಿಡ್ ಸ್ಕೂಟರ್‌ಗಳು ಇಲ್ಲಿನ ರಸ್ತೆಗಳ ಮೇಲೆ ಸಂಚರಿಸುವುದರಲ್ಲಿ ಎರಡು ಮಾತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT