ಸೈನ್ಯದಲ್ಲಿ, ಪೊಲೀಸ್ ಇಲಾಖೆಯಲ್ಲಿ ಬಳಕೆಯಿದ್ದ ರಾಯಲ್ ಎನ್‌ಫೀಲ್ಡ್‌ನ ಬುಲೆಟ್, ನಗರದ ರಸ್ತೆಗಳಲ್ಲೂ ಜನ ಸಾಮಾನ್ಯರು ಕೊಂಡು ಓಡಿಸುವುದು ಹಿಂದೆ ವಿರಳವಾಗಿತ್ತು. ದುಬಾರಿ ಬೆಲೆ, ಕಡಿಮೆ ಮೈಲೇಜ್ ಇದಕ್ಕೆ ಕಾರಣವಿರಬಹುದು. ಆದರೆ ಇದೇ ಕಾರಣ ಬುಲೆಟ್‌ನ ಮೇಲೆ ಅತೀವ ಕುತೂಹಲವನ್ನು ಜನಮನದ ಮೇಲೆ ಛಾಪೊತ್ತಲೂ ಕಾರಣವಾಯಿತು. ಆರಂಭದಲ್ಲಿ 2 ಸ್ಟ್ರೋಕ್ ಇದ್ದ ಬುಲೆಟ್ ನಂತರ 4 ಸ್ಟ್ರೋಕ್‌ಗೆ ಬಹು ಹಿಂದೆಯೇ ಬದಲಿಸಿಕೊಂಡಿತು.
ಇದರ ಮಧ್ಯೆ 1990 ರಲ್ಲಿ ರಾಯಲ್ ಎನ್‌ಫೀಲ್ಡ್ ಡೀಸೆಲ್ ಬುಲೆಟ್ ಹೊರಬಿಟ್ಟು ಯಶಸ್ಸು ಗಳಿಸಿತ್ತು. 350 ಸಿಸಿ ಎಂಜಿನ ಈ ದೈತ್ಯ ಲೀಟರ್ ಡೀಸೆಲ್‌ಗೆ 80 ಕಿಲೋಮೀಟರ್ ಮೈಲೇಜ್ ನೀಡುತ್ತಿದ್ದದ್ದು ಮತ್ತೊಂದು ಅಚ್ಚರಿಯ ಸಂಗತಿ. ಕೆಲವು ಬೈಕ್ ಉತ್ಸಾಹಿಗಳು ಪೆಟ್ರೋಲ್ ಎಂಜಿನ್‌ನ ಬುಲೆಟ್‌ಗೆ ಡೀಸೆಲ್ ಎಂಜಿನ್ ಕೂರಿಸುತ್ತಿದ್ದರು. ಈಗಲೂ ಈ ಪದ್ಧತಿ ಜಾರಿಯಲ್ಲಿದೆ.
ಕೊಯಮತ್ತೂರಿನಲ್ಲಿ ಈ ರೀತಿ ಬುಲೆಟ್ ಮಾರ್ಪಾಟು ಮಾಡುವ ಮೆಕಾನಿಕ್‌ಗಳೇ ಇದ್ದಾರೆ. ಈ ಬೈಕ್‌ಗಳೂ ಲೀಟರ್ ಡೀಸೆಲ್‌ಗೆ 80 ಕಿಲೋ ಮೀಟರ್ ಮೈಲೇಜ್ ನೀಡುತ್ತವೆ. ಆದರೆ ಅತೀವ ಕಂಪನ (ವೈಬ್ರೇಷನ್), ಶಬ್ದ ಅವುಗಳ ಕೊರತೆ ಎಂದೇ ಕರೆಯಬಹುದಿತ್ತು. ಜತೆಗೆ, ಎಂಜಿನ್‌ನಲ್ಲಿ ಕಾರ್ಬನ್ ಸೇರಿ, ಶುಚಿಗೊಳಿಸುವುದೇ ಹಿಂಸೆಯಾಗಿತ್ತು.
ಡೀಸೆಲ್ ಬೈಕ್ ಸರದಿ
ಆದರೆ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಡೀಸೆಲ್ ಕಾರುಗಳು ಪ್ರಸಿದ್ಧಿ ಪಡೆಯುತ್ತಿರುವುದು ತಿಳಿದ ಸಂಗತಿಯೇ. ಇದರ ಸಾಲಿಗೆ ಡೀಸೆಲ್ ಬೈಕ್‌ಗಳು ಸೇರ ಹೊರಟಿರುವುದು ಅಚ್ಚರಿ ಹಾಗೂ ಸಂಚಲನ ಮೂಡಿಸಿದೆ. ಭಾರತದ ಅತಿ ಹಳೆಯ ರಾಯಲ್ ಎನ್‌ಫೀಲ್ಡ್ ಕಂಪೆನಿ ಡೀಸೆಲ್ ಬುಲೆಟ್ ಪರಿಚಯಿಸಲಿದೆ.
ಐಷರ್ ಕಂಪನಿ ಮಾಲಿಕತ್ವಕ್ಕೆ ಸೇರುವ ರಾಯಲ್ ಎನ್‌ಫೀಲ್ಡ್ ಮತ್ತೆ ಈ ಸಾಹಸಕ್ಕೆ ಕೈ ಹಾಕಿದೆ. ರಾಯಲ್ ಎನ್‌ಫೀಲ್ಡ್ ಮುಖ್ಯ ಕಾರ್ಯನಿರ್ವಾಹಕ ವೆಂಕಟೇಶ್ ಪದ್ಮನಾಭನ್ ಈಗಾಗಲೇ ಈ ಸೂಚನೆ ನೀಡಿದ್ದಾರೆ. ಡೀಸೆಲ್ ಬೈಕ್ ನಿರ್ಮಾಣಕ್ಕೆ ಇದು ಸಕಾಲವಾಗಿದೆ. ಈಗ ತಾನೇ ವಿದೇಶಿ ಬೈಕ್ ಕಂಪೆನಿಗಳು ಭಾರತೀಯ ಮಾರುಕಟ್ಟೆ ಕಡೆ ನೋಟ ಬೀರಲಾರಂಭಿಸಿದ್ದಾರೆ. ಅವರಿಗೂ ಮುನ್ನ ನಾವು 750 ಸಿಸಿಯ, ಟ್ವಿನ್ ಎಂಜಿನ್ ಉಳ್ಳ ಡೀಸೆಲ್ ಬುಲೆಟ್ ಪರಿಚಯಿಸುತ್ತೇವೆ ಎಂದಿದ್ದಾರೆ.
ಹಾಗಾಗಿ ಚೆನೈ ಮೂಲದ ಎನ್‌ಫೀಲ್ಡ್ ಮತ್ತೊಂದು ಹೊಸ ಪ್ಲಾಂಟ್ ತೆರೆಯ ಹೊರಟಿದೆ. ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಹಾಗೂ, ಕ್ಲಾಸಿಕ್ ಬೈಕ್ ಪರಿಚಯದ ನಂತರ, ಬೇಡಿಕೆ ಹೆಚ್ಚಿದ್ದು, ಬೈಕ್ ತಯಾರಿಯೇ ಕಷ್ಟವಾಗಿದೆ. 2012 ರ ಅಂತ್ಯದೊಳಗೇ ಪ್ರಸಿದ್ಧ ಥಂಡರ್‌ಬರ್ಡ್‌ನ 500 ಸಿಸಿ ಬೈಕ್ ಸಹ ಹೊರಬರಲಿದೆ.
ಇದರಲ್ಲಿ 20 ಲೀಟರ್ ಪೆಟ್ರೋಲ್ ಹಿಡಿಸುವ ಪೆಟ್ರೋಲ್‌ಟ್ಯಾಂಕ್, ಕಾರ್ಬುರೇಟರ್ ಬದಲಿಗೆ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ, ಜ್ಯಾಪರ್ ಟಯರ್‌ಗಳು ಇರುವುದು ವಿಶೇಷ.
ಇದರ ಜತೆಗೇ 70 ರ ದಶಕದಲ್ಲಿ ಪ್ರಸಿದ್ಧವಾಗಿದ್ದ ರಾಯಲ್ ಎನ್‌ಫೀಲ್ಡ್ ಕೆಫೆ ರೈಡರ್ ಬೈಕ್ ಮತ್ತೆ ಬಿಡುಗಡೆಗೊಳ್ಳಲಿದೆ. ಈಗಾಗಲೇ ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಇದರ ಪ್ರದರ್ಶನವಾಗಿದೆ. ಅತ್ಯಾಧುನಿಕ ಸ್ಪೋರ್ಟ್ಸ್ ಲುಕ್ ಇರುವುದು ಇದರ ಹೆಗ್ಗಳಿಕೆ. ಇದರ ಸಾಲಿಗೆ ಡೀಸೆಲ್ ಬುಲೆಟ್ ಪರಿಚಯಿಸುವ ಎನ್‌ಫೀಲ್ಡ್ ಅಚ್ಚರಿ ಮೂಡಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.