ಸಾವಿ ... ಹಿಂಗ ಪತ್ರ ಬರೆದರ ಹೆಂಗ್? ನನ್ನ ಮನಸ ನೋಡಬೇಕಂತ ಬರ್ದೀಯೊ ... ಇಲ್ಲಾ ನಿನ್ನೊಳಗ ಗುಮಾನಿ ಶುರುವಾಗ್ಯದೋ ... ಅಥವಾ ಮೊನ್ನೆ ನಡೆದ ಗದ್ದಲಕ ಬ್ಯಾಸತ್ತು, ಯಾರೂ ಬ್ಯಾಡಂತ ನನ್ನ ಹಂಪ ಹರಕೊಂಡು ನಿಶ್ಚಿಂತೆಯಿಂದ ಪರಭಾರಿ ಇರಬೇಕಂತ ನಿರ್ಧಾರ ಮಾಡ್ಕೊಂಡೇ ಪತ್ರ ಬರ್ದೀಯೋ ತಿಳೀವಲ್ದು. ಆದ್ರೂ ... ನನ್ನ ನೆನಪ ... ಅಲ್ಲ ಅಲ್ಲ ... ನಾ ಕಾಡೀನಿ ಹೌದಿಲ್ಲೊ? ಹಾಂ... ಇದೊಂದ ಎಳಿ ಹಿಡದು ನನ್ನ ಹಳವಂಡಾ ಬಿಚ್ತೀನಿ, ಜರಾ ಖ್ಯಾಲಿಟ್ಟ ಪತ್ರಾ ಓದು.
ನಾನು ಪರಿಸ್ಥಿತಿಯ ಕೈಗೊಂಬಿ ಆದದ್ದು ಯಾರಿಂದ ಅನ್ನೋದ ಗೂಂದಲಾಗಿ ಈತನಕಾ ಕಾಡಾಕ್ಹತ್ತೇದ. ಕಾಡ್ಲಿ ಕಾಡ್ಲೀ ಸಾವಿ... ಉಂಡ ನೀರ ಉಗಳಾಕ ಬಂದು, ಕಿಡಕಿಗೆ ಕಟ್ಟಿದ ನಿನ್ನ ಕೈವಸ್ತ್ರ ನೋಡಿ ಉಗಳ ನುಂಗಿ ಉಪವಾಸ ಬಿದ್ದು ನಿದ್ದಿ ಕೆಡಿಸಿಕೊಂಡವ ನಾನು! ನಿನ್ನ ನೆನಪಿನ ಅಂಗಳದಾಗ ನಿನಗಾಗೇ ಪುರಮಾಸಿ ಗುದ್ದಾಡಿ ನನ್ನವರ ಸಂಬಂಧ ಕೆಡಿಸಿಕೊಂಡವ...! ಸಾವಿ... ಹೆಂಗಾರ ನಿನಗ ಈ ಪತ್ರ ಬರಿಬೇಕ ಅನಸ್ತು? ನಾಯೇನ್ ನಿನ್ನ ಮ್ಯಾಲ ಆಪಾದನಿ ಕೊಟ್ಟಾಂವಲ್ಲ. ಆಕಿದು? ನಮ್ಮ ಅಕ್ಕನ ಮಗಳು ಆಶಾಂದೇನರ ತಪ್ಪಾ? ಊಹುಂ... ಆಕೀದು ತಪ್ಪಲ್ಲ.
ಆವತ್ತು ಮಣ್ಣೆತ್ತಿನ ಅಮಾಸಿ ದಿನ ಗುಳ್ಳೌವ್‌ನ ಮೆರಸ್ಕೋಂತ ಆಕಿ ತನ್ನ ಗೆಳತೇರ ಜೋಡಿ ಹೋಗಿದ್ದು, ನನಗ ಚಲೋ ಗೊತ್ತಿತ್ತು. ನನಗೂ ಅದ ಬೇಕಿತ್ತು. ಯಾಕಂದ್ರ ಎಲ್ಲಿ ನನಗೂ ಬಾ ಅಂತ ದುಂಬಾಲ ಬೀಳ್ತಾಳೊ ಅಂತ ನಾನ ಮರಿ ಆಗಿದ್ದೆ. ಯಾಕ? ನನ್ನ ಗುಂಪಿನ್ಯಾಗ ನೀನ ಮುಂದಿರಬೇಕು. ನಿನ್ನ ಗುಳ್ಳೌವ್‌ನ ಚಂದ ಕಾಣಬೇಕು. ಅಂತ ನಿನ್ನ ಗುಳ್ಳೌವಗ ನಾನು ನತ್ತಿಟ್ಟು ಗುಲಗಂಜಿ ಚೆಕ್ಕಿಲೆ ಹಬ್ಬ ಬಿಡಸಿ, ನಿನ್ನ ತುಟಿ ಗುಳ್ಳೌವನೊಳಗ ಕಂಡಿದ್ದೆ. ಗುಳ್ಳೌವನ ಗಲ್ಲಕ ದೃಷ್ಟೀ ಬೊಟ್ಟಂತ ಗುಲಗಂಜಿ ವತ್ತಿದಾಗ ನೀನು? ‘ಏನಹತ್ತೇದ ಇಲ್ಲಿ?’ ಅಂತ ನನ್ನ ಮುಖ ತಿರುಗಿಸಿ ನನಗೆ ಗೊತ್ತಿಲ್ದಂಗ ನನ್ನ ಗದ್ದಕ್ಕ ನಿನ್ನ ಕಣ್ಣ ಕಾಡಗಿ ಬಚ್ಚಿಟ್ಟಿದ್ದಿ.
ರೇಷ್ಮಿಯಂಗ ಮೆತ್ತಗ, ಹೂವಿಗಿಂತ ಮಧುರಾದ, ನಿನ್ನ ಕೈಯಿಂದ ನನ್ನ ಗದ್ದಾ ಮುಟ್ಟಿದಾಗ ಯಾಕೋ ನಿನ್ನ ನೋಡ್ಬೇಕನಸ್ತು. ಭಾಳ ಅಂದ್ರ ಭಾಳ ಚಲೊ ಅನಸ್ತು. ಏನಂತಾರೋ ಗೊತ್ತಿಲ್ಲ... ಸಮ್ರಮಂತಾರೋ... ಸಂತೋಷಂತಾರೋ... ಹಿಗ್ಗಂತಾರೋ... ಅಂತೂ ಅವತ್ತ ಹಿಗ್ಗಿ ಹಿಗ್ಗಿ ಹೀರಿಕಾಯಿ ಆಗಿದ್ದೆ. ಅಲ್ಲದ ನಿ ಇಷ್ಟ ಜಲ್ದಿ, ಇಷ್ಟ ಹತ್ತರ ಬರ್‍್ತಿಯಂತ ಕನಸನ್ಯಾಗೂ ನೆನಸಿರಲಿಲ್ಲ. ಅವತ್ತ...? ನನ್ನ ಮಣ್ಣೆತ್ತಿನ ಬಸವಣ್ಣಗ ನೀನ ಹೊಲದಿದ್ದ ಝೂಲಾ ಹಾಕಿ, ಆ ಚಂದಾ ನೋಡಿ, ಯಾಕಹಂಗ ನನ್ನ ದಿಟ್ಟಿಸಿದ್ದಿ? ಏಕದಮ್ ನನ್ನ ಎದೀನ ಸಳ್ಳಂದಿತ್ತು! ಗುಳ್ಳೌವ್‌ನ ಮೆರವಣಿಗಿ ಅಗಸಿ ಬಾಗಲದಾಗ ಬಂದಾಗ ನಮ್ಮ ಅಪ್ಪನ್ನ ನೋಡಿದ ನೀ ‘ಕರ್ಪುರ ಕಾಯಿ ಮರ್‍್ತ ಬಂದೀನೀ ತರ್‍್ತೀನಂತ’ ಹೋದಾಕಿ ಒಮ್ಮೆಲೇ ಜಗಳಕ್ಕ ಬಂದಿದ್ದಿ.
ಸಾವಿ... ನಾ ಏನ್ಮಾಡ್ಲೇ? ನೀ ಮನಿಗ್ಹೋದಾಕಿ ಒಬ್ಬಾಕಿನೇ ಹೋಗಿರ್‍್ಲಿಲ್ಲ. ನನ್ನ ಮನಸ್ಸೂ ತುಗೊಂಡ ಹೋಗಿದ್ದಿ... ಇಲ್ಲಾ... ಇಲ್ಲಾ... ನನ್ನ ಮನಸ್ಸೂ ಕರಕೊಂಡ ಹೋಗಿದ್ದಿ. ನಾನು...? ಗುಳ್ಳೌವ್‌ನ ಬಸವಣ್ಣನ ಮಣಿ ಮ್ಯಾಲಿಟಗೊಂಡು ಕಾಲೆಳಕೋತ ಕೆರಿ ಮುಟ್ಟಿದೆ ಖರೆ, ಆದ್ರ... ಮನಸ್ಸು ನಿನ್ನ ಮ್ಯಾಲೇ ಇತ್ತು.
ಕೆರಿದಂಡ್ಯಾಗ ಗೆಳೆಯರ ಸಿಕ್ರು... ಗೆಳತೇರ ಸಿಕ್ರು... ಅದರ ನೀನ ಇರಲಿಲ್ಲ. ಸಂಗೀತ, ಸುಮಿತ್ರಾ, ಮಲ್ಲಿ, ಎಲ್ಲ ನಿನ್ನ ಕೇಳವ್ರೆ! ಆಗ ಬಾಯತುಂಬ ಬಟ್ಟೆ ತಪ್ಪಲ ಕಾಚ ತಿನಕೋಂತ, ಎಲಿ ತೊಂಬ್ಲ ಪಿಚಕ್ ಪಿಚಕ್ ಉಗಳಕೊಂತ ಡೌಲ ಮಾಡಕೊಂಡ ನಮ್ಮ ಅಕ್ಕನ ಮಗಳು ಆಶಾ ಬಂದು ‘ಎಲ್ಲಿ ಹೋಗಿದ್ದಿ? ನಿನ್ನ ಸಲವಾಗಿ ಕಾದ ಕಾದ ಸಾಕಬೇಕಾಯ್ತ ಮರಾಯ...! ಹೆಂಗೂ ಬರ್ತಿಯಂತ ನಾ ಗೆಳತೇರ ಕೂಡ ಬಂದೆ. ಅಲ್ಲಿ ಬಾ... ಗುಬ್ಬಿಮನಿ ಕಟ್ಟಾಕ್ಹತ್ತಾರ’ ಅಂತ ಕೈ ಹಿಡದ್ಲು ಕೊಸರಿಕೊಂಡೆ, ಎಳಕೊಂಡ ಜಗ್ಗಿದ್ಲು, ನಾಚಿಕೆನಸ್ತು. ದೋಸ್ತರನ್ನ ನೋಡಿದೆ, ಅವರು... ‘ಹೋಗಲೇ ನಿಮ್ಮ ಅಕ್ಕನ ಮಗಳೇ ಹೌದಲ್ಲ? ಹೋಗು’ ಅಂದ್ರು, ಸಾವಿ... ನೀ ಬಂದ್ರ ಎಲ್ಲಾರೂ ಅಲ್ಲಿಗೇ ಬರ್ರಿ ಅಂತಾ ಹೇಳಿ ನಾ ಬಂದೆ. ಅಲ್ಲಿ? ಕೆರಿ ದಂಡಿ ತುಂಬ ಎರಡೆರಡು ಮನಸ್ಸುಗಳು ಕೂಡಿ ಕಟ್ಟಿದ ತರಾವರಿ ಆ ಗುಬ್ಬಿ ಮನಿ! ಅಬ್ಬಾ!
ಅನಂತಾ... ಮಾಂತುನ ಕಾಲ್ಹಿಡಕೊಂಡ ಸುಮಿತ್ರಾ, ಸುನಂದಾ... ಅವರ ಕಾಲ್ಮ್ಯಾಲಿ ಉಸಕ ಏರೇರ್ಸಿ ಮಣಕಾಲತನಕ ವತ್ತಾಕ್ಹತ್ತಿದ್ರು, ನನ್ನ ಕಾಲ ನೋಡ್ಕೋತ ನಗ ನಗತಾ ಬಂದ ಆಶಾ – ಕಾಲ್ತಾ? ಅಂದ್ರು, ನಾ ವಲ್ಲಂತ್ ಹಿಂದಕ ಸರ್ದೆ. ಆಕಿ ‘ಐ! ಗುಬ್ಬಿ ಗಟ್ಟ್ಯಾದ್ರ ಮದವಿ ಗಟ್ಟ್ಯಾಗ್ತದಂತ... ತಾ ಕಾಲ್ತಾ’ ಅಂತ ಕಾಲ್ಹಿಡದು ಗಟ್ಟ್ಯಾಗಿ ಕುಂತ್ಲು. ಆಕಿ ಗೆಳತೇರು... ನನ್ನ ಪಾದದಿಂದ ಮೀನಕಂಡದ ತನ ಉಸಕೇರ್‍್ಸುವಾಗ ತೊಡಿತನ ನನಗ ಗುಳು ಗುಳು ಅಂತಿತ್ತು.
‘ಏಯ್ ಮಿಸಕ್ಯಾಡಬ್ಯಾಡಂತ’ ಆಶಾ... ನನ್ನ ಗಲ್ಲಕ ಬೆಲ್ಲಾ ಕೊಟ್ಲು. ಆಕಿ ತಿಂದ ಎಲಿ ತೊಂಬ್ಲದ ತುಟಿಕೆಂಪ ನನ್ನ ಗಲ್ಲದ ಮ್ಯಾಲೆ ಮಾಡಿತ್ತು. ಅದನ್ನ ನೋಡಿ ನಿನ್ನ ಕಣ್ಣ ಕೆಂಡಾಕಾರ್‍್ತಿದ್ದುವು. ನೀ ನನ್ನ ದಿಟ್ಟಿಸಿದಾಕಿನೇ... ಎಲ್ಲಾರ್ನೂ ನುಗಿಸಿ ನನ್ನ ಕಾಲಕಿತ್ತು ‘ನಡಿ ಹೋಗೋಣ’ ಅಂತ ನೀನು ಬಿಡಲ್ಲಂತ ಅಕಿ, ನಿಮ್ಮಿಬ್ಬರ ಜಗಳದಾಗ ಎಲ್ಲಿ ನನ್ನ ಕಾಲ ಮುರೀತದೊ ಅಂತ ನಾನು ಘಾಬರ್‍್ಯಾಗಿದ್ದೆ... ನೀನೂ ನನ್ನ ಗಮನಿಸಲಿಲ್ಲ. ಆದ್ರ ಯಾವ ಮಾಯದಿಂದ ತುಗೊಂಡಿದ್ದ್ಯೊ ಗೊತ್ತಿಲ್ಲ... ಗುಳ್ಳೌವ್‌ನ ತಾಬಂಡಿ ತುಗೊಂಡು ಆಶಾನ ಹಣೆಮ್ಯಾಲ ಹೆಟ್ಟಿದ್ದಿ. ಆಶಾನ ಹಣೆಯಿಂದ ಚಿಮ್ಮಿದ ರಾಮಾರಗತ ನೋಡಿದ ಎಲ್ಲಾರೂ ದಿಕ್ಕಾಪಾಲಾಗಿ ಹೋಗಿದ್ರು. ಅವರಪ್ಪ ಬಂದು ನಿಮ್ಮ ಮನಿಮುಂದ ಪಂಚಾಯ್ತಿ ಮಾಡಿದ್ದ. ಅದು ನಿನಗೂ ಗೊತ್ತೈತಿ. ನನಗೂ ಗೊತ್ತೈತಿ.
ಸಾವಿ... ಆ ಮೂರು ತಿಂಗ್ಳು ಗಡ್ಡಾಬಿಟಗೊಂಡ ಓಣಿ ಓಣಿ ತಿರುಗುವಾಗ ಹುಡುಗ್ರು ಹಂಗಿಸಿ ನಗತಿದ್ರು, ಹೆಣ್ಮಕ್ಳು ಲೊಚಗುಡತಿದ್ರು.ಆವತ್ತ? ಶನಿವಾರ ಸಂತ್ಯಾಗ... ನೀ ತೂಗಸಿದ ಮೇಣಸಿನಕಾಯಿ ನನ್ನ ಚೀಲಕ್ಕ ಹಾಕಿಸಿಕೊಂಡಾಗ ನನ್ನನ್ನ ನೋಡಿ ಮಂದ್ಯಾಗ ಮಾಯಾದಾಕಿ ನೀ ಮತ್ತ ಸಿಗಲೇಯಿಲ್ಲ. ಆದ್ರ ನಾ ಬಿಡೂದಿಲ್ಲ ಸಾವಿ... ಅವತ್ತ ಕಡದ ಮೇಣಸಿನಕಾಯಿ ತುಟಿ ಇನ್ನ ಉರಿಯಾಕ್ಹತ್ತೇದ. ನಿನ್ನ ಕಾಯಿಪಲ್ಲೇ ಚೀಲ ನನ್ನ ಬಲ್ಲೇ ಅದ.
ಜಮೀನ ದೇಕ್ರೇಕಿ ಎಲ್ಲಾ ನನಗೂಪ್ಪಿಸಿದ್ರೂ ಇನ್ನ ಮನಿ ಉಸಾಬರಿ ನನ್ನ ಕೈಗೆ ಕೊಟ್ಟಿಲ್ಲ ನಮ್ಮಪ್ಪ. ನನಗಿಂತ ಭಂಡ ನಮ್ಮಪ್ಪ, ನಮ್ಮಪ್ಪನಗಿಂತ ಭಂಡ ನಾನು. ಆದ್ರೂ... ಯಾವತ್ತೂ ನಮ್ಮಪ್ಪನಿಗೆ ಅಸಡ್ಡೆ ಮಾತಾಡಿದವನಲ್ಲ ನಾ. ಆದ್ರ ಅವತ್ರ...? ನಿನ್ನ ವಿಚಾರದಾಗ ಮಾತಿಗೆ ಮಾತ ಬೆಳೆದು ವೀರಭದ್ರ ಅವತಾರ ತಾಳಿ ನನ್ನ ಮೈತುಂಬಾ ಬಾರ್ಕೋಲಿಲೆ ಬಾರ್ಸಿ, ಹಣ್ಣಗಾಯಿ ನೀರಗಾಯಿ ಮಾಡಿ, ನನ್ನನ್ನ ಕೊಲ್ಯಾಗ ಹಾಕಿ ಕೀಲಿ ಜಡದಿದ್ದು, ಎರಡ ದಿನ ಊಟಾ ಕೊಡಬ್ಯಾಡಂತ ನಮ್ಮವ್ವಗ ತಾಕೀತ್ ಮಾಡಿದ್ದು, ಕಕಲಾತಿಗೆ ಬಿದ್ದ ನಮ್ಮವ್ವ, ಅಪ್ಪನ ತುಡಗಿಲೆ ರಾತ್ರಿ ಎರಡಕ್ಕೆದ್ದು, ಅತ್ತೂ ಕರೆದು ಬೆಲ್ಲಕಲಸಿದ ಹಾಲು ಕಿಟಕ್ಯಾಗ ಇಟ್ಟಿದ್ದು, ಕುಡಿಲಾರದ ಆ ಹಾಲಿಗೆ ಕೆಂಜಗ ಮುಕ್ರಿದ್ದು, ಅವು ನಮ್ಮಪ್ಪನ ಹಾಸ್ಗಿ ತುಂಬಾ ಹರದಾಡಿ ಅವನ ಧೋತ್ರಾ ಹೊಕ್ಕಾಗ, ಧೋತ್ರಾ ಜಾಡಿಸ್ಕೊಂತ ಕೆಂಜದ ಸಾಲ್ಹಿಡದ ನೋಡ್ಕೊಂತ ಬಂದ ನಮ್ಮಪ್ಪ ನನ್ನ ಕೋಣೆ ಕಿಲಿ ತೆರೆದಾಗ ನಿನ್ನ ದ್ಯಾಸದಾಗ ನಾ ಅತ್ತು ಅತ್ತೂ ಬಾತಗಣ್ಣಿಲೆ ಹುಳು ಹುಳು ಹುಳು ಹುಳೂ ನಮ್ಮಪ್ಪನ್ ನೋಡಿದಾಗ, ‘ಸೊಕ್ಕ ಮಾಡ್ತದಲೇ ನಿನ್ನ ಸೊಕ್ಕ!
ನಿಗರ್ಯಾಡ ಮಗನ ಇನ್ನ ಎಷ್ಟು ನಿಗರ್ಯಾಡ್ತಿ ನಿಗರ್‍್ಯಾಡ’! ಅಂತ ಮತ್ತಕೀಲಿ ಜಡದಾಗ, ಘಾಬರ್ಯಾದ ನಮ್ಮವ್ವ ಅಡ್ರಾಸಿ ಎದ್ದು ‘ಇದ್ದೊಂದ ಮಗಾ... ಅದನ್ನೂ ಕೊಂದ ಬಿಡು! ಅದನ್ನೂ ಕೊಂದಬಿಡು’! ಅಂತ ರಂಪಾ ಮಾಡಿದಾಗ... ಮನಸು ಕರಗದ ನಮ್ಮಪ್ಪ ‘ಮಾತಕೇಳದ ಮಗಾ ಇದ್ರೆಷ್ಟು... ಸತ್ತ್ರೆಷ್ಟು’! ಅಂತ ಚಾದರ ಹೊಚಗೊಂಡ ಮಕ್ಕೊಂಡಿದ್ದೂ, ನಿನಗ ಹೆಂಗ ಹೆಳ್ಳೇ ಸಾವಿ...?
ಹಡದ ಕಳ್ಳಿನ ಸಂಕಟಾ ತಾಳಲಾರದ ನಮ್ಮವ್ವ ನನ್ನ ಕಾಲ್ಬೀಳ್ತಾಳಂತ ಗೊತ್ತಿದ್ದೇ ಆಕಿನ ದೂರದಿಂದ ತಡದು ‘ಮದುವಿ ಮಾಡಿದ್ರ ಸಾವಿಗೂಡ
ಬದುಕು... ಇಲ್ಲಾಂದ್ರ ಸಾಯ್ಲಿ ಅಂತ ಕೀಲಿ ಹಾಕು! ಅಂತ ನಾನು ಬಾಗ್ಲಾ ಹಾಕೊಂಡಿದ್ದು ನಿನಗ್ಹೆಂಗ್ ಹೇಳ್ಳಿ?
ಇವೆಲ್ಲಾ ಕತಿಯಾಗಾಕ ಬಾಳ ಚಂದ ಅನಸ್ತಾವ್ ಸಾವಿ... ಆದ್ರ ನನ್ನ ಅನುಭವದಾಗ ಇವೆಲ್ಲಾನೂ ಖರೇನೂ ಆಗ್ಯಾವಲ್ಲಾ? ಗುಟಕ ನೀರಿಲ್ದೆ ನಿನಗಾಗಿ ಕಳೆದ ಆ ಮೂರು ದಿನದ ಅನುಭವ... ಈಗ ಮೂರ ಯುಗಾನೂ ಕಾಯ ಬಲ್ಲೆ ಸಾವಿ...! ಆ ಮಾವಿನ ಮರ ಎಷ್ಟ್ ಹೂ ಬಿಟ್ಟದ ಗೊತ್ತಾ?
– ಇಂತಿ ನಿನ್ನ ಸವಿ ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.