ADVERTISEMENT

ಮೋರೇರ ಅಂಗಳದಲ್ಲೊಂದು ದಿನ

ಡಾ.ಎಂ.ಕೆ.ದುರುಗಪ್ಪ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಮೋರೇರ ಅಂಗಳದಲ್ಲೊಂದು ದಿನ
ಮೋರೇರ ಅಂಗಳದಲ್ಲೊಂದು ದಿನ   

ಅದೊಂದು ರಮ್ಯ ಪರಿಸರದಲ್ಲಿರುವ ಚಾರಿತ್ರಿಕ ತಾಣ. ಹೆಬ್ಬಂಡೆಗಳ ನಡುವಿನ ನಿರ್ಜನ ಪ್ರದೇಶ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಆದಿಮಾನವರ ವಾಸಸ್ಥಳ ಇದಾಗಿತ್ತಂತೆ. ಈ ಸ್ಥಳಕ್ಕೆ ಬಂದು ಹೋಗಲು ಕೈ-ಕಾಲುಗಳು ಗಟ್ಟಿ ಇರಬೇಕು, ಕುಡಿಯಲು ನೀರು, ಹೊಟ್ಟೆಗೊಂದಿಷ್ಟು ಏನಾದರೂ ತಿಂಡಿ ಇರಬೇಕು. ಎಲ್ಲದಕ್ಕೂ ಮುಖ್ಯವಾಗಿ ನಿಮಗೆ ಧೈರ್ಯ ಮತ್ತು ಗುಡ್ಡವೇರುವ ಹುಮ್ಮಸ್ಸು ಇರಬೇಕು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಎಂಬ ಗ್ರಾಮದ ಬಳಿಯಿರುವ ಈ ಶಿಲಾಸಮಾಧಿಗಳ ಬೀಡಿಗೆ ಕನಕಗಿರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಮ್ಮ ತಂಡ ಯಾತ್ರೆ ಕೈಗೊಂಡಿತ್ತು.

ಈ ಸ್ಮಾರಕಗಳ ಸಮೂಹವಿರುವ ಪ್ರದೇಶಕ್ಕೆ ಕಾಲಿಟ್ಟೊಡನೆ ಯಾವುದೋ ಜನರ ಜತೆ ಮಾತನಾಡಿದಂತೆ, ಅವರ ಹೆಜ್ಜೆಗಳ ಮೇಲೆ ನಮ್ಮಗಳ ಕಿರು ಹೆಜ್ಜೆಯಿಟ್ಟಂತೆ ರೋಮಾಂಚನಕಾರಿ ಅನುಭವ. ಈ ಪ್ರದೇಶದಲ್ಲಿ ಕಾಣಸಿಗುವ ಅವರು ಬಾರಿಸುತ್ತಿದ್ದ ಕಲ್ಲು ನಗಾರಿ ಹಾಗೂ ಬರೆದ ಗವಿ-ಕಲ್ಲಾಸರೆ ವರ್ಣಚಿತ್ರಗಳು ಅವರ ಶ್ರಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಆರು ಅಡಿ ಆಳದ ವ್ಯಕ್ತಿಯೊಬ್ಬ ತನ್ನೆರಡು ಕೈ ಎತ್ತಿ ನಿಂತರೂ ಮೇಲಿನ ಕಲ್ಲು ಹೊದಿಕೆ ತಾಗದಷ್ಟು ಎತ್ತರದ ಕೋಣೆಗಳು ಇಲ್ಲಿವೆ. ಇದೊಂದು ಆದಿಮಾನವರ ಅತ್ಯಂತ ಮುಂದುವರೆದ ಸಂಸ್ಕೃತಿಯ ಸಂದರ್ಭ ಎಂಬುದಕ್ಕೆ ಈ ಸ್ಮಾರಕದಲ್ಲಿ ಹಲವು ಪುರಾವೆಗಳಿವೆ. ಈ ಪ್ರದೇಶದಲ್ಲಿ ಬಾಳಿದ ಹಿಂದಿನ ಜನ ತುಂಬಾ ಕುಳ್ಳರು, ಅವರನ್ನು ಮೋರೇರು ಎನ್ನುತ್ತಿದ್ದರು. ಈ ಮನೆಗಳಲ್ಲಿ ಅವರು ವಾಸಿಸುತ್ತಿದ್ದರು. ಇಲ್ಲಿನ ಬೃಹತ್ ಶಿಲಾಕೋಣೆಗಳನ್ನು ಮೋರೇರ ಮನೆಗಳೆಂದು ಸ್ಥಳೀಯರು ಕರೆಯುತ್ತಾರೆ ಮತ್ತು ಮೋರೇರ ಗುಡ್ಡವೆಂತಲೂ ಆ ಪ್ರದೇಶವನ್ನು ಸಂಬೋಧಿಸುತ್ತಾರೆ. ಅಂದಿನ ಜನ ಈ ಕಿಂಡಿಯಿಂದ ಹೊರಬರುತ್ತಿದ್ದರು ಎಂದು ಕಿಂಡಿ ಕೋಣೆಗಳನ್ನು ತೋರಿಸಿ ಹೇಳುತ್ತಾರಾದರೂ ಅವುಗಳು ಅಂದಿನ ಜನರು ಸತ್ತ ಮೇಲೆ ಹೂಳುತ್ತಿದ್ದ ಸಮಾಧಿಗಳಾಗಿದ್ದವು ಎಂಬುದು ಪುರಾತತ್ವಶಾಸ್ತ್ರಜ್ಞರ ವಿವರಣೆ.

ADVERTISEMENT


 

ಮರಣ ಹೊಂದಿದವರಿಗಾಗಿ ಹಾಸು ಬಂಡೆ ಗೋರಿಗಳು, ಅರೆ ಹೂಳಿದ ಕೊಠಡಿಗಳು, ನಿಡಗಲ್ಲುಗಳು, ಕಲ್ಲಿನ ವರ್ತುಲಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಸುಮಾರು ಮೂರು ಚದರ ಕಿ.ಮೀ.ವರೆಗೂ ಹರಡಿದ ಈ ಪ್ರದೇಶ ಕರ್ನಾಟಕದ ಬೃಹತ್ ಶಿಲಾಯುಗದ ಅತ್ಯಂತ ದೊಡ್ಡ ತಾಣವಾಗಿದೆ.

ಪ್ರಾಚೀನ ಸ್ಮಾರಕಗಳ ಮತ್ತು ಪುರಾತತ್ವ ಅಧಿನಿಯಮ 1958ರ ಪ್ರಕಾರ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಈ ಪ್ರದೇಶವನ್ನು ಘೋಷಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ ನೂರು ಮೀಟರ್‌ವರೆಗಿನ ಕ್ಷೇತ್ರವನ್ನು ಸಂರಕ್ಷಿಸಲ್ಪಟ್ಟ ಪ್ರದೇಶವೆಂದು ಘೋಷಿಸಲಾಗಿದೆ. ಭಾರತ ಸರ್ಕಾರ ಪುರಾತತ್ವ ಇಲಾಖೆಯ ಅನುಮತಿ ಇಲ್ಲದೇ ಇಲ್ಲಿ ಯಾವುದೇ ನಿರ್ಮಾಣ ಅಥವಾ ಸ್ಥಳಾಂತರ ಮಾಡುವುದು ಅಪರಾಧವಾಗಿದೆ. ಇಲ್ಲಿಗೆ ಬರುವ ಕೆಲವರು ತಮ್ಮ ಹೆಸರು ಬರೆದು ಚಿತ್ರಕಲೆಗೂ ಮತ್ತು ಗೋರಿಗಳಿಗೂ ಹಾನಿ ಮಾಡುತ್ತಾರೆ. ಇವುಗಳನ್ನು ತಡೆಯುವ ಕೆಲಸ ಆಗಿಲ್ಲ.


 

ಈ ಇತಿಹಾಸದ ಸ್ಮಾರಕಗಳ ನೋಟದ ಜೊತೆಯಲ್ಲಿ ಪ್ರಾಕೃತಿಕ ಸೌಂದರ್ಯದ ಸೊಬಗನ್ನು ಸವಿಯುವ ಅವಕಾಶವೂ ಇದೆ. ಕರಡಿ, ಚಿರತೆ, ಕಾಡು ಹಂದಿ, ಕಾಡು ಕೋಳಿ, ಕೌಜಗ, ನವಿಲು, ಕೋತಿ, ಮುಂಗುಸಿ, ಮುಳ್ಳು ಹಂದಿ ಮುಂತಾದ ಪ್ರಾಣಿ ಪಕ್ಷಿಗಳು ನಿಮಗೆ ನೋಡಲು ಸಿಗಲೂಬಹುದು.

ಕೊಪ್ಪಳದಿಂದ ಹಿರೇಬೆಣಕಲ್‌ಗೆ ಬಂದು, ಅಲ್ಲಿಂದ ಕಾಲ್ನಡಿಗೆ ಮೂಲಕ ಗುಡ್ಡವೇರಬಹುದು. ಗಂಗಾವತಿ ಬಸ್ ನಿಲ್ದಾಣದಿಂದ ಅಥವಾ ಗಿಣಗೇರಾ ಕ್ರಾಸ್‌ನಿಂದಲೂ ಹಿರೇಬೆಣಕಲ್‍ಗೆ ಬರಬಹುದು. ಸರ್ಕಾರದಿಂದ ನೇಮಕವಾದ ಇಬ್ಬರು ಕಾವಲುಗಾರರ ಸಹಾಯದೊಂದಿಗೆ ಈ ಅದ್ಭುತ ತಾಣದ ಅನುಭವದ ಸವಿಯನ್ನು ಸವಿಯಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಸ್ಥಳದ ಬಗ್ಗೆ ಅಧ್ಯಯನ ಮಾಡಿದ ಸ್ಥಳೀಯ ಗಂಗಾವತಿಯ ಶರಣಬಸಪ್ಪ ಕೋಲ್ಕಾರ ಅವರ ಸಹಾಯ ಪಡೆಯಬಹುದು. ಅವರ ಸಂಪರ್ಕಕ್ಕೆ: 9845267155.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.