
ಶಿವ ಥಾಪಾ
ಬಾಕ್ಸರ್ ಶಿವ ಥಾಪಾ ಅಸ್ಸಾಂ ಮೂಲದ 18 ವರ್ಷದ ಯುವಕ. ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಅತ್ಯಂತ ಕಿರಿಯ ಬಾಕ್ಸರ್ ಎಂಬ ಗೌರವ ಇವರಿಗೆ ಒಲಿದಿದೆ. 56 ಕೆ. ಜಿ ವಿಭಾಗದ ಸ್ಪಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 19 ವರ್ಷದ ದೇವೆಂದ್ರೊ ಸಿಂಗ್ ಒಲಿಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅತ್ಯಂತ ಕಿರಿಯ ಬಾಕ್ಸರ್ ಎನಿಸಿಕೊಂಡಿದ್ದ. ಈ ದಾಖಲೆಯನ್ನು ಥಾಪಾ ಮುರಿದಿದ್ದಾರೆ.
ಏಷ್ಯನ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಥಾಪಾ ಒಲಿಂಪಿಕ್‌ಗೆ ಅವಕಾಶ ಪಡೆದಿದ್ದಾರೆ. ಶಿವ ಸೆಮಿಫೈನಲ್‌ನಲ್ಲಿ 31-17 ಪಾಯಿಂಟ್ಸ್‌ಗಳಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ಜಪಾನ್‌ನ ಸಂತೋಷಿ ಸಿಮಿಜು ಎದುರು ಗೆಲುವು ಪಡೆದಿದ್ದರು.
ಆ ಬಳಿಕ ಫೈನಲ್‌ನಲ್ಲೂ ಜಯ ಸಾಧಿಸಿ ಚಿನ್ನದ ಪದಕ ಜಯಿಸಿದ್ದಾರೆ. `ನಾನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ಹೊತ್ತಿದ್ದೆ. ಅದೀಗ ನನಸಾಗಿದೆ. ಲಂಡನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ~ ಎಂದು ಶಿವಥಾಪಾ ಹೇಳಿಕೊಂಡಿದ್ದಾರೆ.
ಗೀತಾ

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಗೌರವ ಗೀತಾ ತಮ್ಮದಾಗಿಸಿಕೊಂಡಿದ್ದಾರೆ. 23 ವರ್ಷದ ಗೀತಾ ಹರಿಯಾಣದ ಬಿವಾನಿ ಜಿಲ್ಲೆಯವರು.
ಕುಸ್ತಿಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ ಗೀತಾ ಏಷ್ಯನ್ ಅರ್ಹತಾ ಪಂದ್ಯದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಲಂಡನ್‌ನಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿದ್ದಾರೆ. 55 ಕೆ.ಜಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಗೀತಾರಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ತವಕವಿದೆ.
ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದ ಅವರು ಒಲಿಂಪಿಕ್ಸ್‌ನಲ್ಲಿಯೂ ದಿಟ್ಟ ಪ್ರದರ್ಶನವನ್ನು ತೋರುವ ಹಂಬಲ ಹೊತ್ತಿದ್ದಾರೆ. ಮೂಲತಃ ಕ್ರೀಡಾ ಕುಟುಂಬದಿಂದ ಬಂದ ಗೀತಾ ಅವರಿಗೆ ಕ್ರೀಡೆ, ಸಾಧಿಸುವ ಮನೋಧೈರ್ಯವೂ ಕುಟುಂಬದಿಂದಲೇ ಬಂದಿತ್ತು. ಗೀತಾ ಅವರ ನಾಲ್ವರು ಸಹೋದರಿಯರೂ ಕೂಡ ಕುಸ್ತಿಯಲ್ಲಿ ಖ್ಯಾತಿ ಗಳಿಸಿದ್ದಾರೆ.
`ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದು ಖುಷಿ ತಂದಿದೆ, ನನ್ನ ಕುಟುಂಬವೇ ನನಗೆ ಶಕ್ತಿ~ ಎಂದು ಗೀತಾ ಹೇಳಿಕೊಂಡಿದ್ದಾರೆ. ಕುಸ್ತಿಯಲ್ಲಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಗೌರವ ಕೂಡಾ ನನ್ನ ಕನಸಿಗೆ ರೆಕ್ಕೆ ಮೂಡಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
2003, 2004, 2005ರಲ್ಲಿ ನಡೆದ ಏಷ್ಯನ್ ಕೆಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಗೀತಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. 2010ರಲ್ಲಿ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಸಾಧನೆಗೆ ಮುನ್ನುಡಿ ಬರೆದಿದ್ದರು.
ವಿಜೇಂದರ್ ಸಿಂಗ್
ಒಲಿಂಪಿಕ್‌ಗೆ ಸತತ ಮೂರನೇ ಬಾರಿ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್ ಎಂಬ ಗೌರವವನ್ನು ವಿಜೇಂದರ್ ಸಿಂಗ್ ತಮ್ಮದಾಗಿಸಿಕೊಂಡಿದ್ದಾರೆ. ಕಜಕಸ್ತಾನದ ಅಸ್ತಾನದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಅವರು ಲಂಡನ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನ್ನದೇ ಛಾಪು ಮೂಡಿಸಲು ಹೊರಟಿದ್ದಾರೆ.
ವಿಜೇಂದರ್ 75 ಕೆ ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 26ರ ಹರೆಯದ ವಿಜೇಂದರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇವರು 2004ರ ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು.
ವಿಕಾಸ್ ಗೌಡ
ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕದ ವಿಕಾಸ್‌ಗೌಡ ಕೂಡಾ ಒಲಿಂಪಿಕ್‌ಗೆ ಅರ್ಹತೆ ಪಡೆದಿರುವ ಭಾರತದ ಇನ್ನೊಬ್ಬ ಅಥ್ಲೀಟ್. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ ವೇಳೆ ಅವರು ಡಿಸ್ಕ್‌ನ್ನು 64.05 ಮೀ. ದೂರ ಎಸೆದಿದ್ದರು. ಈ ಸಾಧನೆ ಅವರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.
28 ವರ್ಷ ವಯಸ್ಸಿನ ವಿಕಾಸ್ ಕಾಮನ್‌ವೆಲ್ತ್ ಕೂಟದಲ್ಲಿ ಎರಡನೇ ಸ್ಥಾನ ಮತ್ತು 2010ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು.
ಇದೀಗ ವಿಕಾಸ್ ಒಲಿಂಪಿಕ್‌ಗೆ ಆಯ್ಕೆಯಾದ ಭಾರತದ ಒಂಬತ್ತು ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ಕನಸನ್ನೂ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.