ADVERTISEMENT

ರೋಲ್ಸ್‌ ರಾಯ್ಸ್ ಕಲಿನಿಯನ್

ಜಯಸಿಂಹ ಆರ್.
Published 6 ಜೂನ್ 2018, 19:40 IST
Last Updated 6 ಜೂನ್ 2018, 19:40 IST
ರೋಲ್ಸ್‌ ರಾಯ್ಸ್ ಕಲಿನಿಯನ್
ರೋಲ್ಸ್‌ ರಾಯ್ಸ್ ಕಲಿನಿಯನ್   

ಬೆಟ್ಟ–ಗುಡ್ಡಗಳಲ್ಲಿ, ಕೆಸರು ತುಂಬಿದ ನದಿ ಪಾತ್ರಗಳಲ್ಲಿ, ಮರಳುಗಾಡಿನ ದಿಬ್ಬಗಳಲ್ಲಿ ಹೀಗೆ ಸಾಮಾನ್ಯ ಕಾರುಗಳ ಚಾಲನೆ ಸಾಧ್ಯವೇ ಇಲ್ಲದ ಕಡೆಗಳಲ್ಲೆಲ್ಲಾ ನಿರಾಯಾಸವಾಗಿ ಚಲಾಯಿಸಬಹುದಾದ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಯಾನೆ ಎಸ್‌ಯುವಿಗಳ ಮಹಿಮೆ ಮತ್ತು ಗೈರತ್ತು ಅವುಗಳನ್ನು ಚಲಾಯಿಸಿದವರಿಗಷ್ಟೇ ಗೊತ್ತು. ಹೀಗಾಗಿ ಜಗತ್ತಿನ ಬಹುತೇಕ ಎಲ್ಲಾ ಕಾರು ತಯಾರಿಕಾ ಕಂಪನಿಗಳೂ ತಮ್ಮದೂ ಒಂದು ಎಸ್‌ಯುವಿ ಇರಲಿ ಎನ್ನುತ್ತಾ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ಐಷಾರಾಮಿ ಸೆಡಾನ್‌ಗಳಿಗೆ ಹೆಗ್ಗುರುತು ಎಂದೆನಿಸಿದ್ದ ಕಂಪನಿಗಳೂ ಎಸ್‌ಯುವಿಗಳ ವಿನ್ಯಾಸದತ್ತ ಇಳಿದಿರುವುದಕ್ಕೆ, ಎಸ್‌ಯುವಿಗಳಿಗಿರುವ ಜನಪ್ರಿಯತೆಯೇ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಸೆಡಾನ್‌ಗಳು ಕೊಡುವ ಐಷಾರಾಮಿತನವನ್ನು ಎಸ್‌ಯುವಿಗಳು ಕೊಡಬಲ್ಲವು. ಆದರೆ ಎಸ್‌ಯುವಿಗಳು ಹೋಗುವೆಡೆಯಲ್ಲೆಲ್ಲಾ ಸೆಡಾನ್‌ಗಳು ಹೋಗಲಾರವು, ಅವು ಎಷ್ಟೇ ದುಬಾರಿಯಾಗಿದ್ದರೂ. ಐಷಾರಾಮಿ ಸೆಡಾನ್‌ಗಳ ಹೆಗ್ಗುರುತಾಗಿರುವ ಜಾಗ್ವಾರ್ ಇ–ಪೇಸ್ ಮತ್ತು ಎಫ್‌–ಪೇಸ್ ಎಂಬ ಎಸ್‌ಯುವಿಗಳನ್ನು, ಬೆಂಟ್ಲಿ ಬೆಂಟ್ಯೆಗಾ ಎಂಬ ಸ್ಪೋರ್ಟ್ಸ್‌ ಕಾರುಗಳಿಗೆ ಹೆಸರಾದ ಲ್ಯಾಂಬರ್ಗಿನಿ ಸಹ ಯೂರಸ್ ಎಂಬ ಎಸ್‌ಯುವಿಗಳನ್ನು ಈಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಸಿರಿವಂತಿಕೆಗೆ ‘ರೋಲ್ಸ್‌ ರಾಯ್ಸ್‌’ನಂಟು

ADVERTISEMENT

ಸ್ವಾತಂತ್ರ್ಯಪೂರ್ವ ಭಾರತದ ವಿವಿಧ ಸಂಸ್ಥಾನಗಳ ರಾಜಮಹಾರಾಜರಿಗೆ ಇದ್ದ ಕಾರುಗಳ ಮೋಹದ ಜತೆಗೆ ‘ರೋಲ್ಸ್‌ರಾಯ್ಸ್‌’ ಹೆಸರು ತಳಕು ಹಾಕಿಕೊಂಡಿರುತ್ತದೆ. ಅಂದಿನಿಂದ

ಇಂದಿನವರೆಗೂ ರೋಲ್ಸ್‌ರಾಯ್ಸ್‌ನ ವಿವಿಧ ಸೆಡಾನ್‌ಗಳು ಐಷಾರಾಮಿ ಸೆಡಾನ್‌ ಎಂಬ ಹೆಸರಿಗೆ ಪರ್ಯಾಯ ಹೆಸರು ಎಂಬಂತಾಗಿವೆ. ಹೀಗೆ ಸೆಡಾನ್‌ಗಳೇ ಜೀವನಾಡಿಯಾಗಿದ್ದ ರೋಲ್ಸ್‌ರಾಯ್ಸ್ ಸಹ ಎಸ್‌ಯುವಿ ವಿನ್ಯಾಸಕ್ಕೆ ಹೆಜ್ಜೆಯಿರಿಸಿದೆ. ‘ನಾವೂ ಎಸ್‌ಯುವಿ ತಯಾರಿಸುತ್ತೇವೆ’ ಎಂದು ರೋಲ್ಸ್‌ರಾಯ್ಸ್‌ ಮೋಟರ್ಸ್ 2016ರಲ್ಲಿ ಹೇಳಿತ್ತು. ಕಳೆದ ತಿಂಗಳಷ್ಟೇ ತನ್ನ ಮೊದಲ ಎಸ್‌ಯುವಿ ‘ಕಲಿನಿಯನ್’ ಎಂದು ಜಾಗತಿಕವಾಗಿ ಬಿಡುಗಡೆ ಮಾಡಿತು.

ಭಾರತದ ಮಾರುಕಟ್ಟೆಯಲ್ಲಿ ‘ಕಲಿನಿಯನ್’ ಮಾಡೆಲ್ ಈಗ ಲಭ್ಯವಿಲ್ಲ. ಆದರೆ, 2019ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಇಳಿಯುವ ನಿರೀಕ್ಷೆ ಇದೆ. ಆದರೆ, ಈವರೆಗಿನ ಯಾವ ಎಸ್‌ಯುವಿಗಳಲ್ಲೂ ಇಲ್ಲದ ಅತಿ ಐಷಾರಾಮದ ಕೆಲವು ಸವಲತ್ತುಗಳನ್ನು ಕಲಿನಿಯನ್ ಸಾಧ್ಯವಾಗಿಸಿದೆ. ಈ ಕಾರಣದಿಂದ ಜಾಗತಿಕ ಆಟೊಮೊಬೈಲ್ ಕ್ಷೇತ್ರದಲ್ಲಿ ಕಲಿನಿಯನ್ ಹೊಸ ಭಾಷ್ಯ ಬರೆದಿದೆ.

ಜಗತ್ತಿನ ಬೇರೆಲ್ಲಾ ಅತ್ಯಂತ ಶಕ್ತಿಶಾಲಿ ಎಸ್‌ಯುವಿಗಳಷ್ಟೇ ಸಾಮರ್ಥ್ಯ (6,750 ಸಿ.ಸಿ. ಸಾಮರ್ಥ್ಯದ ಎಂಜಿನ್/ 750 ಬಿಎಚ್‌ಪಿ ಶಕ್ತಿ/ 850 ನ್ಯೂಟನ್ ಮೀಟರ್ ಟಾರ್ಕ್), ಚಾಣಾಕ್ಯ ಆಲ್‌ವ್ಹೀಲ್ ಡ್ರೈವ್ ಸಿಸ್ಟಂ ಇದರಲ್ಲಿದೆ. ಹೀಗಾಗಿ ಕಲಿನಿಯನ್‌ನ ಕಾರ್ಯಕ್ಷಮತೆ ವಿವರಣೆ ಇಲ್ಲಿ ಅನವಶ್ಯಕ. ಅದಕ್ಕಿಂತಲೂ ಅದು ಕೊಡಮಾಡಿರುವ ವಿನೂತನ ಸವಲತ್ತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ.

‘ಜಗತ್ತಿನಲ್ಲಿ ಈಗ ಇರುವ ಎಲ್ಲಾ ಅತ್ಯುತ್ತಮ ಎಸ್‌ಯುವಿಗಳ ಅಂಶಗಳನ್ನು ಪರಿಗಣಿಸಿ, ಅವುಗಳನ್ನು ಮತ್ತಷ್ಟು ಅತ್ಯುತ್ತಮವಾಗಿಸುವ ಹಾಗೂ ಅವುಗಳಲ್ಲಿ ಇಲ್ಲದೇ ಇರುವ ಸವಲತ್ತಗಳನ್ನು ಸೇರಿಸಿ ಕಲಿನಿಯನ್‌ ಅನ್ನು ರೂಪಿಸಲಾಗಿದೆ’ ಎಂದು ಸ್ವತಃ ರೋಲ್ಸ್‌ರಾಯ್ಸ್ ಹೇಳಿಕೊಂಡಿದೆ. ಅವುಗಳಲ್ಲಿ ಕೆಲವು ಅಭೂತಪೂರ್ವ ಸವಲತ್ತುಗಳು ಈ ಕೆಳಕಂಡಂತಿವೆ.

ಕಲಿನಿಯನ್‌ ಒಳಗೆ ಪ್ರವೇಶಿಸಲು ಡೋರ್‌ಗಳ ಹ್ಯಾಂಡಲ್‌ ಸ್ಪರ್ಶಿಸಿದರೆ ಸಾಕು, ಅವು ತೆರೆದುಕೊಳ್ಳುತ್ತವೆ. ಆನಂತರ ವಾಹನದೊಳಗಿನ ಆಸನ 40 ಮಿಲಿಮೀಟರ್‌ನಷ್ಟು ಕೆಳಗೆ ಕುಗ್ಗಿ, ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಒಳಗೆ ಕುಳಿತು ನಂತರ ಒಳಗಿರುವ ಗುಂಡಿ ಒತ್ತಿದರೆ, ಡೋರ್‌ಗಳು ಸ್ವತಃ ತಾವೇ ಮುಚ್ಚಿಕೊಳ್ಳುತ್ತವೆ. ಆನಂತರ ಎಂಜಿನ್ ಚಾಲೂ ಮಾಡಿದರೆ, ಕುಗ್ಗಿದ್ದ ಆಸನ, ಪುನಃ 40 ಮಿಲಿಮೀಟರ್‌ನಷ್ಟು ಎತ್ತರ ಹೆಚ್ಚಿಸಿಕೊಂಡು ಮೂಲ ಸ್ಥಿತಿಗೆ ಬರುತ್ತದೆ.

ತ್ರಿ ಬಾಕ್ಸ್ ಎಸ್‌ಯುವಿ

‘ಇದು ತ್ರಿ ಬಾಕ್ಸ್ ಎಸ್‌ಯುವಿ’ ಎಂದು ರೋಲ್ಸ್‌ ರಾಯ್ಸ್ ಹೇಳುತ್ತದೆ. ಅಂದರೆ ಕಲಿನಿಯನ್‌ ಅನ್ನು ರೋಲ್ಸ್‌ ರಾಯ್ಸ್ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳಾಗಿ ಪ್ರತ್ಯೇಕಿಸಿದೆ. ಇದನ್ನೇ ಅದು ‘ತ್ರಿ ಬಾಕ್ಸ್‌ ಎಸ್‌ಯುವಿ’ ಎನ್ನುತ್ತಿರುವುದು. ಈ ಪ್ರತ್ಯೇಕತೆ ಏನು ಎಂಬುದನ್ನು ನೋಡೋಣ.

ಬೇರೆಲ್ಲಾ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೇ ಬೂಟ್‌ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳು. ಕಲಿನಿಯನ್‌ನಲ್ಲಿ ಕ್ಯಾಬಿನ್ ಮತ್ತು ಬೂಟ್ ಪ್ರತ್ಯೇಕವಾಗಿವೆ. ಬೂಟ್‌ನಲ್ಲಿ ಕೇಳುವ ಶಬ್ದ ಕ್ಯಾಬಿನ್ ಒಳಕ್ಕೆ ನುಸುಳದಂತೆ ತಡೆಯುವ ಕ್ಯಾಬಿನ್ ಮತ್ತು ಬೂಟ್ ಮಧ್ಯೆ ಗಾಜಿನ ಪರದೆ ಇದೆ. ಅದನ್ನು ಬೇಕೆಂದಾಗ ಮೇಲೇರಿಸಬಹುದು. ಬೇಡವೆಂದಾಗ ಕೆಳಗಿಳಿಸಬಹುದು.

ಕಲಿನಿಯನ್ ಹೆಸರಿನ ಹಿಂದೆ...

ಕಲಿನಿಯನ್ ಎಂಬ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಕತೆಯಿದೆ. 19ನೇ ಶತಮಾನದಲ್ಲಿ ದಕ್ಷಿಣ ಆಫ್ರಿಕಾದ ಕಲಿನಿಯನ್ ವಜ್ರ ಗಣಿಯಲ್ಲಿ 621.35 ಗ್ರಾಂ ತೂಕದ ವಜ್ರವೊಂದು ಸಿಗುತ್ತದೆ. ಅದು ಜಗತ್ತಿನಲ್ಲಿ ಈವರೆಗೆ ದೊರೆತ ಅತ್ಯಂತ ದೊಡ್ಡ ವಜ್ರ. ಅದನ್ನು ಒಡೆದು ಒಂಬತ್ತು ಬೇರೆ–ಬೇರೆ ವಜ್ರಗಳನ್ನಾಗಿ ಮಾಡಲಾಗಿದೆ. ಕಲಿನಿಯನ್ (ಆ ಗಣಿಯ ಮಾಲೀಕನ ಹೆಸರು) ಗಣಿಯಲ್ಲಿ ಸಿಕ್ಕ ಕಾರಣ ಆ ವಜ್ರಕ್ಕೆ ‘ಕಲಿನಿಯನ್’ ಎಂದೇ ಹೆಸರಿಡಲಾಗಿತ್ತು. ಈ ಎಸ್‌ಯುವಿಯೂ ವಜ್ರದಷ್ಟೇ ಕಠಿಣ ಮತ್ತು ಅಷ್ಟೇ ಐಷಾರಾಮಿ. ಹೀಗಾಗಿ ಅದಕ್ಕೆ ಕಲಿನಿಯನ್ ಎಂದು ಹೆಸರಿಡಲಾಗಿದೆ ಎಂದು ಬಿಡುಗಡೆ ವೇಳೆ ರೋಲ್ಸ್‌ ರಾಯ್ಸ್ ಹೇಳಿತ್ತು.

ಐಷಾರಾಮಿ ಪರಿಕರಗಳು

ನದಿ–ಹೊಳೆ–ಹೊಂಡದ ದಡದಲ್ಲಿ ಕುಳಿತು, ನೀರಿಗೆ ಗಾಳ ಎಸೆದು, ಮೀನು ಹಿಡಿಯಬೇಕು. ಕಲಿನಿಯನ್‌ನ ಬೂಟ್‌ನಲ್ಲಿ ಗಾಳದ ಸೆಟ್‌ ಅಡಗಿ ಕೂತಿದೆ. ಕಡಲತೀರದಲ್ಲಿ ಚಾಪೆ ಹಾಸಿಕೊಂಡು, ರಾತ್ರಿಯ ನಕ್ಷತ್ರಗಳನ್ನು ಎಣಿಸಬೇಕೆ ? ಕಲಿನಿಯನ್‌ನ ಬೂಟ್‌ನಲ್ಲಿ ಅದಕ್ಕೆ ಬೇಕಾದ ವಸ್ತುಗಳನ್ನು ಒಳಗೊಂಡ ಮತ್ತೊಂದು ಸೆಟ್‌ ಇದೆ. ಕಾಡಿನಲ್ಲಿ ವನ್ಯಜೀವಿಗಳ ಫೋಟೊಗ್ರಫಿಗಾಗಿ ಹೊರಟಿದ್ದೀರಾ? ಕ್ಯಾಮೆರಾ, ಲೆನ್ಸ್‌ ಮತ್ತು ಟ್ರೈಪಾಡ್, ಬ್ಯಾಟರಿ ಚಾರ್ಜರ್‌ಗಳನ್ನು ಸುರಕ್ಷಿತವಾಗಿ ಇಡಬಹುದಾದ ಫೋಟೊಗ್ರಫಿ ಆರ್ಗನೈಸರ್ ಈ ಎಸ್‌ಯುವಿಯ ಬೂಟ್‌ನಲ್ಲಿ ಇದೆ.

ಕಲಿನಿಯನ್‌ನಲ್ಲಿ ಕುಳಿತು ಯಾವುದೋ ಬೆಟ್ಟದ ತುದಿ ತಲುಪಿದ್ದೀರಿ. ಆ ತುದಿಯಿಂದ ಸೂರ್ಯಾಸ್ತದ ಅಥವಾ ಸೂರ್ಯೋದಯದ ದೃಶ್ಯ ಅತ್ಯಂತ ರಮಣೀಯವಾಗಿ ಕಾಣುತ್ತಿದೆ. ಅಲ್ಲೊಂದೆರಡು ಕುರ್ಚಿಗಳು ಇದ್ದಿದ್ದರೆ ಅವುಗಳ ಮೇಲೆ ಕೂತು ಸೂರ್ಯೋದಯವನ್ನೋ, ಸೂರ್ಯಾಸ್ತವನ್ನೋ ಸವಿಯಬಹುದಿತ್ತು ಎಂದುಕೊಳ್ಳುತ್ತಿದ್ದೀರಾ ? ಕಲಿನಿಯನ್‌ನಲ್ಲಿ ಅದಕ್ಕೂ ವ್ಯವಸ್ಥೆ ಇದೆ. ಒಂದು ಗುಂಡಿ ಒತ್ತಿದರೆ ಸಾಕು. ಬೂಟ್‌ನ ತಳಭಾಗದಿಂದ ಹೊರಬರುವ ಒಂದು ಪ್ಲಾಟ್‌ಫಾರಂನಿಂದ ಎರಡು ಕುರ್ಚಿಗಳು ಮತ್ತು ಒಂದು ಟೀ–ಟೇಬಲ್ ರೂಪುಗೊಳ್ಳುತ್ತದೆ. ಇಂಥ ಇನ್ನೂ ಹತ್ತುಹಲವು ಕಿಟ್‌ಗಳ ಆರ್ಗನೈಸರ್‌ ಇದರಲ್ಲಿದೆ. ವಿವರಿಸುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಐಷಾರಾಮಿ ಎಸ್‌ಯುವಿ ಎಂಬ ಪರಿಭಾಷೆಗೆ ರೋಲ್ಸ್‌ ರಾಯ್ಸ್‌ ಕಲಿನಿಯನ್ ಹೊಸ ವ್ಯಾಖ್ಯಾನ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.