ADVERTISEMENT

ಶಿವಾರಪಟ್ಟಣದ ಯುವ ಶಿಲ್ಪಿಗಳು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 19:30 IST
Last Updated 29 ನವೆಂಬರ್ 2017, 19:30 IST
ಶಿವಾರಪಟ್ಟಣದ ಯುವ ಶಿಲ್ಪಿಗಳು
ಶಿವಾರಪಟ್ಟಣದ ಯುವ ಶಿಲ್ಪಿಗಳು   

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದ ಇನ್ನೊಂದು ಹೆಸರೇ ‘ಶಿಲ್ಪಗಳ ಊರು’. ಗ್ರಾಮದಲ್ಲಿರುವ 424 ಮನೆಗಳಲ್ಲಿ 150 ಕುಟುಂಬಗಳು ಕಲ್ಲಿನ ಕೆತ್ತನೆ ಕೆಲಸವನ್ನೇ ನಂಬಿ ಬದುಕುತ್ತಿವೆ. ಐದು ತಲೆಮಾರುಗಳಿಂದ ಪಾರಂಪರಗತವಾಗಿ ಬಂದ ಉದ್ಯೋಗವಿದು. ಅದರಲ್ಲೂ ಯುವಕರು ಹೆಚ್ಚಾಗಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ದೇವರ ಮೂರ್ತಿಗಳು, ಪೂಜನೀಯರ ಶಿಲ್ಪಗಳು, ಪ್ರಾಣಿ–ಪಕ್ಷಿಗಳ ಪ್ರತಿಕೃತಿಗಳು... ಹೀಗೆ ನಿತ್ಯ ಹತ್ತಾರು ವಿಧದ ಶಿಲ್ಪಗಳು ಇಲ್ಲಿ ಜನ್ಮ ಪಡೆಯುತ್ತವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮೀಯರು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂರ್ತಿ ಕೆತ್ತಲು ಎಲ್ಲಾ ಕಲ್ಲುಗಳು ಸೂಕ್ತವಲ್ಲ. ಕೃಷ್ಣಶಿಲೆಯನ್ನು ಚಿತ್ರದುರ್ಗದ ಹೆಗ್ಗೇರಿಯಿಂದ, ಬಳಪದ ಕಲ್ಲನ್ನು ಮೈಸೂರಿನ ಎಚ್.ಡಿ. ಕೋಟೆಯಿಂದ ಖರೀದಿಸುತ್ತಾರೆ. ಒಂದು ಟನ್ ಕಲ್ಲಿಗೆ ₹12,000 ನೀಡಬೇಕು. ಒಂದು ಲೋಡ್‌ನಲ್ಲಿ 30 ಟನ್ ಕಲ್ಲನ್ನು ತರಲಾಗುತ್ತದೆ. ವರ್ಷದಲ್ಲಿ ಐದಾರು ಬಾರಿ ಕೆತ್ತನೆಗೆ ಬೇಕಾದ ಕಲ್ಲು ತರುತ್ತಾರೆ.

ವರ್ಷದುದ್ದಕ್ಕೂ ಇಲ್ಲಿನ ಕಲ್ಲುಗಳು ಬಗೆಬಗೆಯ ಆಕಾರವನ್ನು ಪಡೆಯುತ್ತವೆ. ಥಾಯ್ಲೆಂಡ್‌ಗೆ ಅನಂತಪದ್ಮನಾಭನ ಮೂರ್ತಿ, ಆಫ್ರಿಕಾಕ್ಕೆ ಈಶ್ವರನ ಮೂರ್ತಿ ಹೀಗೆ ವಿದೇಶಗಳಿಗೂ ಇಲ್ಲಿಂದ ಮೂರ್ತಿಗಳು ಸಾಗಾಟವಾಗುತ್ತವೆ.

ADVERTISEMENT

ಶಾಲೆಗೆ ಹೋಗುವ ಮಕ್ಕಳು ಕೂಡ ಕೆತ್ತನೆ ಕೆಲಸದ ಕಲೆಯನ್ನು ಕಲಿತುಕೊಂಡು ಬೆಳಿಗ್ಗೆ ಮತ್ತು ಸಂಜೆಯ ಬಿಡುವಿನ ವೇಳೆ ಕೆತ್ತನೆ ಕೆಲಸದಲ್ಲಿ ತೊಡಗುತ್ತಾರೆ. ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಪ್ರತಿ ಮನೆಗಳಲ್ಲೂ ಕಲ್ಲುಗಳಿಗೆ ಸುತ್ತಿಗೆ, ಕಬ್ಬಿಣದಿಂದ ಬಡಿಯುವ ಶಬ್ದ ಕೇಳುತ್ತಿರುತ್ತದೆ.

ಹೆಚ್ಚಿನ ಮಂದಿ ಕೆತ್ತನೆ ಕೆಲಸಗಳಲ್ಲಿ ಸ್ವತಃ ತೊಡಗಿಕೊಂಡಿದ್ದರೆ, ಇನ್ನೂ ಕೆಲವು ಮಂದಿ ಇತರರ ಮನೆಗೆ ಕೆತ್ತನೆ ಕೆಲಸಕ್ಕೆ ಹೋಗುವ ಮೂಲಕ ದಿನಕ್ಕೆ
₹600 ರಿಂದ ₹1600ರವರೆಗೆ ದುಡಿಯುತ್ತಾರೆ. ತಂದ ಕಲ್ಲಿನಲ್ಲಿ ರಪ್ಪಿಂಗ್, ಪಾಲಿಷಿಂಗ್, ಡಿಸೈನಿಂಗ್, ಬಪ್ಪಿಂಗ್, ಎಂಬರಿಂಗ್, ಹೀಗೆ ಏಳು ಹಂತಗಳ ಕೆಲಸ ಮುಗಿದಾಗ ಮೂರ್ತಿ ಆಕಾರ ಪಡೆಯುತ್ತದೆ. ಕೃಷ್ಣ, ಮಾರಿಯಮ್ಮ, ಈಶ್ವರ, ಪಾರ್ವತಿ, ದೇವರ ಪೀಠ, ಗರ್ಭಗುಡಿ ವಿಗ್ರಹ, ಬಾಗಿಲು, ಧ್ವಜಸ್ತಂಭ, ರೂಪಕ, ಪ್ರತಿಮೆ, ಮುಖವಾಡ, ಮಹಾತ್ಮರ ಮೂರ್ತಿ... ಹೀಗೆ ಮೂರು ಅಡಿಗಳಿಂದ ಮೂವತ್ತು ಅಡಿಗಳವರೆಗೆ ಕಲ್ಲಿನ ಮೂರ್ತಿಗಳನ್ನು ಇವರು ಕೆತ್ತುತ್ತಾರೆ.

ಮಾರಿಯಮ್ಮನ ಮೂರ್ತಿಗೆ ಬಹುಬೇಡಿಕೆಯಿದೆ. ಪ್ರತಿಮನೆಯಲ್ಲಿ ನಾಲ್ಕೈದು ಮೂರ್ತಿಗಳನ್ನು ಸಿದ್ಧಪಡಿಸಿ ಇಟ್ಟಿರುತ್ತಾರೆ. ‘ಮೂರ್ತಿ ಯಾವ ದೇವರದ್ದೇ ಆಗಿರಲಿ, ಕೆಲಸವನ್ನು ಆದಷ್ಟು ಬೇಗ ಮುಗಿಸಬೇಕು. ಮೂರ್ತಿ ತಯಾರಿಸುವ ದಿನಗಳಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಯಾವುದೇ ಕಾರಣಕ್ಕೂ ಮೂರ್ತಿ ತಯಾರಿಸುವ ಕೊಠಡಿಯೊಳಗೆ ಚಪ್ಪಲಿಯನ್ನು ಹಾಕುವಂತಿಲ್ಲ’ ಎನ್ನುವುದು ಇಲ್ಲಿನ ಜನತೆ ರೂಢಿಸಿಕೊಂಡು ಬಂದಿರುವ ಪದ್ಧತಿ.

ಮೂರು ಅಡಿ ಎತ್ತರದ ಕೃಷ್ಣನ ಮೂರ್ತಿಗೆ ₹45,000 ದರವಂತೆ. ಈ ವಿಗ್ರಹ ತಯಾರಿಗೆ ಒಂದು ತಿಂಗಳು ಬೇಕಾಗುತ್ತದೆ. ಪ್ರತಿ ತಿಂಗಳು ಹತ್ತರಿಂದ ಹದಿನೈದು ಮೂರ್ತಿಗಳು ಪ್ರತಿ ಮನೆಗಳಿಂದ ಮಾರಾಟವಾಗುತ್ತವೆ.

ದೂರದ ಊರುಗಳಿಂದ ಬಂದು ಖರೀದಿಸುವವರ ಸಂಖ್ಯೆ ಸಾಕಷ್ಟಿದೆ. ತುಮಕೂರು, ಬೆಂಗಳೂರಿನ ಅಂಗಡಿಗಳಿಗೂ ಇವರು ಮೂರ್ತಿ ಕೆತ್ತಿ ನೀಡುತ್ತಾರೆ. ತಯಾರಿಸಿದ ಮೂರ್ತಿಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಮಾರಾಟ ಮಾಡುವಂತಿಲ್ಲ. ಶಾಸ್ತ್ರದ ಪ್ರಕಾರ ಪೂಜೆ ಮಾಡಿ ಮೊದಲಾಗಿ ಕಾಯ್ದಿರಿಸಿದವರಿಗೆ ನೀಡಬೇಕೆಂಬ ಸಂಪ್ರದಾಯವು ಇಲ್ಲಿದೆ. ದೇವರ ಮೂರ್ತಿ ಕೆತ್ತನೆಯಲ್ಲಿ ಒಂಚೂರೂ ಲೋಪವಾಗದಂತೆ ಎಚ್ಚರಿಕೆ ವಹಿಸುತ್ತಾರೆ.

ಯಾವುದೇ ರೀತಿಯ ಮೂರ್ತಿಗಳನ್ನು ಬೇಕಾದರೂ ಇವರು ಮಾಡಿಕೊಡಲು ಸಿದ್ಧ. ಎಲ್ಲಾ ಕೆಲಸಗಳಿಗೂ ಯಂತ್ರಗಳು ಲಗ್ಗೆ ಇಡುತ್ತಿರುವ ಈ ದಿನಗಳಲ್ಲೂ ಕಲ್ಲಿಗೆ ರೂಪ ನೀಡುವ ಈ ಕಲೆಯನ್ನು ಕಲಿಯಲು ಇಲ್ಲಿನ ಯುವಕರು ಆಸಕ್ತಿ ತೋರುತ್ತಿರುವುದು ನೆಮ್ಮದಿಯ ಸಂಗತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.