ADVERTISEMENT

ಸರಿಯಾದ ನಿರ್ಧಾರ ಬೇಕು...

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಸ್ಟುಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್~ ಎನ್ನುವ ಮಾತಿದೆ. ಅದು ನಿಜವೂ ಹೌದು. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅತ್ಯಗತ್ಯ. ಏಕೆಂದರೆ ನಾವು ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವು ಪಡೆಯುವ ಕಾಲ. ಹಾಗಾಗಿ ಪರೀಕ್ಷೆ ಮುಗಿದ ಬಳಿಕ ಮುಂದಿನ ಶಿಕ್ಷಣದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ.

ಪಿಯುಸಿ ಹಂತದಲ್ಲಿ ಸೈನ್ಸ್ ತೆಗೆದುಕೊಂಡವರಿಗಂತೂ ಮುಂದಿನ ಶಿಕ್ಷಣದ ಕುರಿತು ಆಯ್ಕೆ ಬಹಳ ಕಷ್ಟದ ವಿಷಯವೇ ಸರಿ. ಪ್ರವೇಶ ಪರೀಕ್ಷೆ ಬರೆದು ವೃತ್ತಿಪರ ಶಿಕ್ಷಣಕ್ಕೆ ಹೋಗಬೇಕೇ ಅಥವಾ ತಮಗಿಷ್ಟವಿರುವ ವಿಷಯದಲ್ಲಿ ಪದವಿ ಗಳಿಸಬೇಕೇ ಎನ್ನುವ ಗೊಂದಲ ಬಹುತೇಕ ವಿದ್ಯಾರ್ಥಿಗಳಲ್ಲಿರುತ್ತದೆ.

ಇನ್ನು ವೃತ್ತಿಪರ ಶಿಕ್ಷಣದ  ವಿಷಯಕ್ಕೆ ಬಂದಾಗಲಂತೂ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವುದು ಇನ್ನೂ ಕಷ್ಟ. ಕಷ್ಟದ ವಿಷಯ ಯಾವುದೆಂದರೆ ಅದೇ ಸಾಂಪ್ರದಾಯಿಕ ಕೋರ್ಸ್‌ಗಳಾದ ಎಂಜಿನಿಯರಿಂಗ್ ಅಥವಾ ವೈದ್ಯಕೀಯವೇ ಅಥವಾ ನಿಜವಾಗಿಯೂ ಆಸಕ್ತಿ ಇರುವ ಕೋರ್ಸ್‌ಗಳನ್ನೇ ಆಯ್ಕೆ ಮಾಡಿ ಅದರಲ್ಲಿ ಮುಂದುವರಿಯಬೇಕೇ ಎನ್ನುವ ತಳಮಳ ವಿದ್ಯಾರ್ಥಿಗಳದ್ದು.

ಆದರೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಂತೆ ತಮ್ಮ ಆಸಕ್ತಿಯ ಕೋರ್ಸ್‌ಗಳಿಂದ ಆರ್ಥಿಕ ಲಾಭ ಇಲ್ಲ ಎಂಬುದು ವಿದ್ಯಾರ್ಥಿಗಳಿಗೂ ಗೊತ್ತು. ಹಾಗಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವೇಳೆ ಹಲವು ವಿಷಯಗಳತ್ತ ಅವರು ಗಮನ ಹರಿಸಲೇ ಬೇಕು.

ಅಂತೆಯೇ ಹಾಗೆಯೇ ಆ ವೇಳೆ ಹಲವು ಕಾರಣಗಳು ಅವರ ಮೇಲೆ  ಪ್ರಭಾವ ಬೀರುತ್ತವೆ. ಈ ಹಿನ್ನೆಲೆಯಲ್ಲಿ ಮನೆಮಂದಿಯ, ಹೆತ್ತವರ ನಿರ್ಧಾರವೂ ಪ್ರಭಾವ ಬೀರುತ್ತದೆ. ಹೆತ್ತವರ ಒತ್ತಡದಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕೋರ್ಸ್‌ಗಳನ್ನು ಹಾಗೇ ಬಿಟ್ಟು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡುತ್ತಾರೆ.

 `ವಿದ್ಯಾರ್ಥಿಗಳ ನಿರ್ಧಾರದ ಮೇಲೆ ಕೇವಲ ಹೆತ್ತವರು ಮತ್ತು ಸ್ನೇಹಿತರು ಮಾತ್ರವಲ್ಲ, ಅವರು ಪಡೆದ ಶಿಕ್ಷಣವೂ ಸಾಕಷ್ಟು ಪ್ರಭಾವ ಬೀರುತ್ತದೆ. ಕೆಲವೊಮ್ಮೆ ನಮ್ಮ ಅನುಭವಗಳು ಮತ್ತು ನಾವು ಅಲ್ಲಿಯವರೆಗೆ ಮಾಡಿರುವ ಕೆಲವು ಪ್ರಾಜೆಕ್ಟ್‌ಗಳು ನಮಗೆ ಕೆಲವು ನಿರ್ದಿಷ್ಟ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುತ್ತವೆ.

ನಮ್ಮ ನಿರ್ಧಾರದಲ್ಲಿ ಹೆತ್ತವರು ಬಹುದೊಡ್ಡ ಪಾತ್ರ ವಹಿಸುತ್ತಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನೋಡುವುದಾದಲ್ಲಿ ಹೆತ್ತವರಿಗೂ ಹೊಸ ಹೊಸ ಕೋರ್ಸ್‌ಗಳ ಬಗ್ಗೆ ಅರಿವಿದೆ.ಹಾಗಾಗಿ ಹೊಸ ಕೋರ್ಸ್‌ಗಳ ಆಯ್ಕೆಯಲ್ಲಿ ಅವರೂ ಮಕ್ಕಳಿಗೂ ನೆರವು ನೀಡುತ್ತಾರೆ. ಇದೇ ಕಾರಣಕ್ಕಾಗಿಯೇ ನಾನು ಇಂಜಿನಿಯರಿಂಗ್ ಬಿಟ್ಟು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ~ ಎನ್ನುತ್ತಾರೆ ಪರಿಸರ ವಿಜ್ಞಾನ ಕುರಿತು ಆಸಕ್ತಿ ಹೊಂದಿರುವ ಕೋಮಲ್.

`ಎಂಜಿನಿಯರಿಂಗ್ ಮತ್ತು ಮೆಡಿಸಿನ್ ಮಾಡಿದಲ್ಲಿ ಕೆಲಸ ದೊರೆಯುವುದು ಖಂಡಿತ ಎನ್ನುವುದು ವಿದ್ಯಾರ್ಥಿಗಳಿಗೆ ತಿಳಿದಿದೆ. ಹಾಗಾಗಿ ಅವರು ಆ ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಾರೆ~ ಎಂಬುದು ಅಭಿಷೇಕ್ ಅವರ ಅಭಿಪ್ರಾಯ. `ಎಂಜಿನಿಯರಿಂಗ್ ಬಹುತೇಕ ವಿದ್ಯಾರ್ಥಿಗಳ ಆಯ್ಕೆಯಾಗಿದೆ.

ಏಕೆಂದರೆ ಎಲ್ಲರೂ ತಮ್ಮ ಬದುಕಲ್ಲಿ ಬಹುಬೇಗ ಸೆಟಲ್ ಆಗಲು ಬಯಸುತ್ತಾರೆ. ಇದು ಪ್ರಾಕ್ಟಿಕಲ್ ಆದ ತೀರ್ಮಾನ. ನೀವು ಮಧ್ಯಮ ವರ್ಗದವರಾಗಿದ್ದಲ್ಲಿ ಭವಿಷ್ಯದ ಕುರಿತು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈಗಂತೂ ವಿದ್ಯಾರ್ಥಿಗಳು ಇರುವ ಅವಕಾಶಗಳ ಕುರಿತು ಚೆನ್ನಾಗಿ ಅರಿತುಕೊಂಡಿದ್ದಾರೆ. 

ಯಾವ ಕೋರ್ಸ್ ಎನ್ನುವುದಕ್ಕಿಂತ ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಅನ್ನು ಆಸಕ್ತಿಯಿಂದ ಕಲಿತು ಅದರ ಸದುಪಯೋಗ ಪಡೆದುಕೊಳ್ಳುವುದು ಅತ್ಯವಶ್ಯ.

ಈಗಂತೂ ಎಲ್ಲಾ ಕಡೆ ಕೌನ್ಸೆಲಿಂಗ್ ಸೆಂಟರ್‌ಗಳೂ ಈ ಕುರಿತು ಮಾರ್ಗದರ್ಶನ ನೀಡುತ್ತವೆ. ಜೊತೆಗೆ ಬೇಕಿದ್ದಲ್ಲಿ ಶಿಕ್ಷಣ ತಜ್ಞರ ಬಳಿ ಮಾಹಿತಿ ಪಡೆದೂ ತಮಗೆ ಸೂಕ್ತವಾದುದು ಯಾವ ಕೋರ್ಸ್ ಎಂದು ವಿದ್ಯಾರ್ಥಿಗಳು ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.