ADVERTISEMENT

ಹಳ್ಳಿ ಹುಡುಗರ ಹೊಸ ಕಾರ್... !

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಕಾರು ಓಡಿಸಲು ಏನು ಬೇಕು? ಪೆಟ್ರೋಲ್ ಅಥವಾ ಡೀಸೆಲ್ ಎಂಬ ನಿಮ್ಮ ಉತ್ತರವೇನೋ ಸರಿ. ಆದರೆ ಈ ಕಾಲೇಜು ವಿದ್ಯಾರ್ಥಿಗಳು ಇಂಧನದ ಹಂಗೇ ಇಲ್ಲದೆ ಸೂರ್ಯನ ಬೆಳಕಿನಲ್ಲಿ ಸರಾಗವಾಗಿ ಓಡಿಸಬಲ್ಲಂತ ಕಾರೊಂದನ್ನು ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಸಾಧನೆ ಇದು.

ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ  ವಿದ್ಯಾರ್ಥಿಗಳಾದ ಅರ್ಚನ್, ಕೆ.ಎನ್. ಮೋಹನ್ ಕುಮಾರ್ ಮತ್ತು ನಾರಾಯಣ ಬಿ. ಕೈರರ್ ಅವರುಗಳ ಸೃಜನಶೀಲ ಸೃಷ್ಟಿಯೇ ಈ ಕಾರು.
 
ಸೋಲಾರ್ ಪ್ಯಾನಲ್ ಮೂಲಕ ಚಲಿಸಬಲ್ಲ ಕಾರು ಸೂರ್ಯನ ಬೆಳಕು ಇಲ್ಲದಿದ್ದಾಗ ಗಾಳಿಯಂತ್ರದ  ಮೂಲಕವೂ  ಮುಂದಕ್ಕೆ ಓಡಬಲ್ಲುದು. ಹೌದು!. ಇವೆರಡೂ ಲಭಿಸದಿದ್ದಾಗ 12 ವೋಲ್ಟ್ ಶಕ್ತಿಯ ಬ್ಯಾಟರಿ ಮುಖಾಂತರವೂ ಕಾರು ಚಲಿಸುತ್ತದೆ..! ಮೂರು ರೀತಿಯ ಶಕ್ತಿ ಮೂಲಗಳನ್ನು ಬಳಸಿಕೊಂಡು  ಪೆಟೋಲ್, ಡೀಸೆಲ್‌ನ ಹಂಗಿಲ್ಲದೆ ಕಾರು ಚಲಿಸಬಲ್ಲುದಾಗಿದೆ.

ಕಾರಿನ ಹಿಂಬದಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಚಾಲಕನ ಆಸನದ ಪಕ್ಕದಲ್ಲೇ ಗಾಳಿಗೆ ತಿರುಗುತ್ತಾ ಶಕ್ತಿ ಉತ್ಪಾದಿಸಬಲ್ಲ ಎರಡು ಗಾಳಿಯಂತ್ರಗಳನ್ನು ಜೋಡಿಸಲಾಗಿೆ. ಕಾರಿನ 2 ಬದಿಗಳಲ್ಲಿಯೂ ನಾಲ್ಕು ಬ್ಯಾಟರಿಗಳನ್ನು ಹೊಂದಿರುವ ಬಾಕ್ಸ್ ಅಳವಡಿಸಲಾಗಿದೆ. ಉಳಿದಂತೆ ಎಲ್ಲ ಕಾರುಗಳಿಗಿರುವಂತೆ ಬ್ರೇಕ್, ಎಕ್ಸಲೇಟರ್, ಕ್ಲಚ್ ಸಹ ಇದ್ದು, ರಾತ್ರಿ ವೇಳೆ ಸಾಗಲು ಲೈಟನ್ನು ಸಹ ಈ ಕಾರ್ ಹೊಂದಿದೆ.

ಕಾಲೇಜಿನ ಸಂಗ್ರಹಾಗಾರದಲ್ಲಿ  ಮೂಲೆ ಪಾಲಾಗಿದ್ದ ವಿವಿಧ ಉಪಕರಣಗಳು, ಗುಜರಿಯಿಂದ ಆಯ್ದ ವಿವಿಧ ವಸ್ತುಗಳನ್ನು ಬಳಸಿ ವಿದ್ಯಾರ್ಥಿಗಳು ಈ ಕಾರು ನಿರ್ಮಿಸಿದ್ದಾರೆ. ನಿರುಪಯುಕ್ತ ಸಾಮಗ್ರಿಗಳಿಂದಲೇ ಹೊಚ್ಚ ಹೊಸದೇನೋ ಎಂಬ ಭಾವನೆ ಬರುವಂತೆ ಸುಂದರವಾದ ಪುಟಾಣಿ ಕಾರ್ ್ಙ42,000 ವೆಚ್ಚದಲ್ಲಿ ಸೃಷ್ಟಿಯಾಗಿದೆ. ಅಂದಹಾಗೆ, ಕಾರಿನಲ್ಲಿ ಚಾಲಕ ಮಾತ್ರ ಕೂರಬಹುದಾಗಿದ್ದು, ಏಕಾಸೀನ ಹೊಂದಿದೆ.

ತಾವು ನಿರ್ಮಿಸಿದ ಕಾರು ಹೇಗೆ ಚಲಿಸುತ್ತದೆ ಎನ್ನುವುದರ ಪರೀಕ್ಷಾರ್ಥವಾಗಿ ಅರ್ಚನ್ ಮೈಸೂರಿನಿಂದ ಕುಶಾಲನಗರಕ್ಕೆ ಈಗಾಗಲೇ ಹೆದ್ದಾರಿಯಲ್ಲಿ ಕಾರ್ ಓಡಿಸಿಕೊಂಡು ಬಂದಿದ್ದು 96 ಕಿ.ಮೀ ಅಂತರವನ್ನು  ಕಾರ್ 3 ಗಂಟೆಗಳಲ್ಲಿ ಕ್ರಮಿಸಿದೆ.  ಗಂಟೆಗೆ 60 ಕಿ. ಮೀ ಓಡಬಲ್ಲ ಈ ಕಾರ್ ಸದ್ಯಕ್ಕೆ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದದಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರು ಅಂದಾಜು 240 ಕೆ.ಜಿಗಳಷ್ಟು ಬಾರ ಹೊರಬಲ್ಲುದು ಎನ್ನುತ್ತಾರೆ ಅರ್ಚನ್.

`ವಿದ್ಯಾರ್ಥಿಗಳು ಮನಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ಈ ವಿದ್ಯಾರ್ಥಿಗಳೇ ಮಾದರಿ.  ಕಾರಿಗೆ ಪೇಟೆಂಟ್ ಪಡೆಯಲು ಪ್ರಯತ್ನಿಸಲಾಗುತ್ತಿದೆ.

ಕಾರಿನಲ್ಲಿ ಮೂವರು ಕೂರಬಹುದಾದಷ್ಟು ವಿಶಾಲ ಜಾಗ ಸೃಷ್ಟಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಸಾಗಿದೆಎನ್ನುತ್ತಾರೆ ಕಾರು ತಯಾರಿಯಲ್ಲಿ  ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದ ಕಾಲೇಜಿನ ಸಹಾಯಕ ಪ್ರೊಫೆಸರ್ ಲಕ್ಷ್ಮಿದೇವಮ್ಮ.  ಸಾಕಷ್ಟು ಮೂಲಸೌಕರ್ಯಗಳ ಕೊರತೆ ಇದ್ದರೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಪರೂಪದ ಸಾಧನೆ ಮಾಡಿದ್ದು ಹೆಮ್ಮೆ ತಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಎಸ್. ಸತೀಶ್ ಶ್ಲಾಘಿಸುತ್ತಾರೆ.

`ನಾವು ಅಳವಡಿಸಿದ ತಂತ್ರಜ್ಞಾನವನ್ನೇ ಬಳಸಿಕೊಂಡು ದೊಡ್ಡ ಕಾರನ್ನು ಕೂಡ ತಯಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪೇಟೆಂಟ್ ಪಡೆಯಲು ಆರ್ಥಿಕ ನೆರವಿಗೆ ಪ್ರಯತ್ನ ಮಾಡುತ್ತಿದ್ದೇವೆ~ ಎನ್ನುತ್ತಾರೆ ವಿದ್ಯಾರ್ಥಿಗಳು.

ನಗರ ಪ್ರದೇಶದ ಸುಸಜ್ಜಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭಿಸುವ ಸೌಕರ್ಯಗಳು ಈ ವಿದ್ಯಾರ್ಥಿಗಳಿಗೆ  ಖಂಡಿತ ಇಲ್ಲ. ಆದರೆ ಅವರ  ಕನಸು, ಕ್ರಿಯಾಶೀಲತೆ ಈ ಸಾಧನೆಗೆ ಪ್ರೇರೇಪಿಸಿದೆ. ಸದ್ಯಕ್ಕಂತೂ ಈ ಹುಡುಗರು ತಮ್ಮ ಕಾರಿನಲ್ಲೇ ಅತ್ತಿಂದಿತ್ತ ಚಲಿಸುತ್ತಾ, ಕಾರ್, ಕಾರ್ ಕಾರ್, ಇಲ್ನೋಡಿ ಕಾರ್.. ಎಂದು ಗುನುಗುನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.