ADVERTISEMENT

2012 ಎಸ್‌ಯುವಿ ಮತ್ತು ವಿಲಾಸಿ ಕಾರುಗಳ ವರ್ಷ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST
2012 ಎಸ್‌ಯುವಿ ಮತ್ತು ವಿಲಾಸಿ ಕಾರುಗಳ ವರ್ಷ
2012 ಎಸ್‌ಯುವಿ ಮತ್ತು ವಿಲಾಸಿ ಕಾರುಗಳ ವರ್ಷ   

ಭಾರತೀಯ ಮಾರುಕಟ್ಟೆಗೆ ಡೀಸೆಲ್ ಕಾರುಗಳು ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿದ್ದ ಸಂದರ್ಭದಲ್ಲೇ ಮಾರುತಿ ಆಲ್ಟೋ, ವ್ಯಾಗನ್ ಆರ್, ಹ್ಯುಂಡೈ ಐ10, ಇಯಾನ್ ಕಾರುಗಳು ಪೆಟ್ರೋಲ್ ಎಂಜಿನ್ ಹೊಂದಿದ್ದರೂ ಮಾರಾಟದಲ್ಲಿ ಡೀಸೆಲ್ ಕಾರುಗಳಿಗಿಂತ ಕೊಂಚ ಮುಂದಿವೆ. ಈ ಮೂಲಕ ಕಡಿಮೆ ಬೆಲೆಯ ಪೆಟ್ರೋಲ್ ಕಾರುಗಳು ಇಂದಿಗೂ ಬೇಡಿಕೆ ಉಳಿಸಿಕೊಂಡಿವೆ ಎಂಬುದಕ್ಕೆ ನಿದರ್ಶನ ಸಿಕ್ಕಂತಾಗಿದೆ.

ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿಯದ್ದೇ ಸಿಂಹಪಾಲು. ಅದು ಈ ವರ್ಷವೂ ಮುಂದುವರಿದಿದೆ. ಶೇ. 40ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಮಾರುತಿಯ ಸ್ವಿಫ್ಟ್ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿದ್ದರೂ, ಕಾಯುವ ಸಮಯ ದೀರ್ಘವಾಗಿದ್ದರಿಂದ ಮಾರಾಟದಲ್ಲಿ ಹಿಂದೆ ಬಿದ್ದಿದ್ದ ರಿಟ್ಜ್‌ನ ಮಾರಾಟ ಈಗ ಚುರುಕುಗೊಂಡಿದೆ. ಜತೆಗೆ ನೂತನ ಪ್ರವೇಶ ಎರ್ಟಿಗಾ ಮಾರಾಟವೂ ಎಂಪಿವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಅದರೊಂದಿಗೆ ಓಮ್ನಿ, ಇಕೊ ಹಾಗೂ ಇತ್ತೀಚೆಗೆ ಬಿಡುಗಡೆಗೊಂಡ ಆಲ್ಟೊ 800 ಕೂಡಾ ಮಾರುತಿ ಸುಜುಕಿಯ ಅಗ್ರಶ್ರೇಯಾಂಕವನ್ನು ಕಾಪಾಡುವಲ್ಲಿ ನೆರವಾಗಿದೆ. ಆದರೂ ಈ ವರ್ಷ ನೌಕರರ ಮುಷ್ಕರದಲ್ಲಿ ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರ ಕೊಲೆಯಾಗಿದ್ದು ಕಂಪೆನಿಯ ಪ್ರತಿಷ್ಠೆಗೆ ಒಂದು ಕಪ್ಪು ಚುಕ್ಕೆಯಾಗಿ ಉಳಿಯಿತು.
ಮತ್ತೊಂದು ಕಾರು ತಯಾರಿಕಾ ಕಂಪೆನಿ ಹ್ಯುಂಡೈ ತನ್ನ ಐ10, ಐ20, ಇಯಾನ್‌ಗಳ ಮಾರಾಟದ ಎದುರು ಅದೇ ಕಂಪೆನಿಯ ಸ್ಯಾಂಟ್ರೊ ಸೊರಗಿದೆ.

ಸೊನಾಟಾ ಮಾರಾಟ ಅಷ್ಟೇನೂ ಆಶಾದಾಯಕವಾಗಿಲ್ಲ. ಆದರೂ ದೇಶದಲ್ಲಿ ಶೇ 14ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಹ್ಯುಂಡೈ ಎರಡನೇ ಸ್ಥಾನದಲ್ಲಿದೆ. ಈ ವರ್ಷ  ಕಡಿಮೆ ಬೆಲೆಯ ಸಣ್ಣ ಕಾರು ಬಿಡುಗಡೆಯ ಮೂಲಕ ಹ್ಯುಂಡೈ ಕೆಳ ಮಧ್ಯಮವರ್ಗದವರ ಮನೆಗೆ ಲಗ್ಗೆ ಇಟ್ಟಿದೆ.

ಇನ್ನು ಮೂರನೇ ಸ್ಥಾನದಲ್ಲಿರುವ ಮಹೀಂದ್ರಾ ಬಿಡುಗಡೆ ಮಾಡಿದ ಎಕ್ಸ್‌ಯುವಿ ಭಾರೀ ನಿರೀಕ್ಷೆಯ ವಾಹನವಾಗಿತ್ತು. ಈ ಕಾರನ್ನು ಹೊಂದಲು ಎಷ್ಟಾದರೂ ಮುಂಗಡ ಹಣ ನೀಡಲು ಜನರು ಸರತಿ ಸಾಲಿನಲ್ಲಿ ನಿಂತಿದ್ದು ಸುಳ್ಳಲ್ಲ. 15 ಲಕ್ಷ ರೂಪಾಯಿ ಮೊತ್ತದಲ್ಲಿ ಭಾರತದಲ್ಲಿ ಸಿಗುವ ಉತ್ತಮ ಎಸ್‌ಯುವಿ ಇದು ಎಂಬ ಹೆಗ್ಗಳಿಕೆ ಗಳಿಸಿತ್ತು. ಆದರೆ ಇದೇ ಕಂಪೆನಿಯ ಸ್ಕಾರ್ಪಿಯೊ, ಕ್ಸೈಲೊ, ವೆರಿಟೊಗಳು ಅಷ್ಟಾಗಿ ಸದ್ದು ಮಾಡಲಿಲ್ಲ.

ಆದರೆ ಅತಿ ಹೆಚ್ಚು ಮಾರಾಟವಾಗುತ್ತಿರುವ ಮೊದಲ 20 ಕಾರುಗಳಲ್ಲಿ ಆರು ಕಾರುಗಳು ಫಿಯೆಟ್ 1.3 ಡೀಸೆಲ್ ಎಂಜಿನ್ ಬಳಸುತ್ತಿವೆ. ಆದರೆ ಮೊದಲ ಇಪ್ಪತ್ತು ಸ್ಥಾನದಲ್ಲಿ ಫಿಯೆಟ್ ಕಾರುಗಳೇ ಇಲ್ಲದಿರುವುದು ಅದರ ಮಾರಾಟ ವಿಭಾಗಕ್ಕೆ ಹಿಡಿದ ಕನ್ನಡಿ. ಮಾರುಕಟ್ಟೆಯಲ್ಲಿ ಫಿಯೆಟ್ ಪಾಲು ಕೇವಲ ಶೇ. 0.3 ಮಾತ್ರ.

2012-13ನೇ ಸಾಲಿನಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ್ದೆಂದರೆ ರಿನೊ. ಫ್ರಾನ್ಸ್ ಮೂಲದ ರಿನೊ ಮಹೀಂದ್ರಾ ಜತೆಗೂಡಿ ಲೊಗನ್ ಎಂಬ ಕಾರು ತಯಾರಿಸುವ ಮೂಲಕ ಭಾರತವನ್ನು ಪ್ರವೇಶಿಸಿತು. ಇದೀಗ ಪಲ್ಸ್, ಫ್ಯುಯೆನ್ಸ್, ಸ್ಕಾಲಾ, ಡಸ್ಟರ್ ಹಾಗೂ ಕೊಲಿಯೋಸ್ ಕಾರು ಹಾಗೂ ಎಸ್‌ಯುವಿಗಳನ್ನು ಭಾರತದ ರಸ್ತೆಗಿಳಿಸಿದೆ. ಅದರಲ್ಲೂ ಡಸ್ಟರ್ ಎಬ್ಬಿಸುತ್ತಿರುವ ದೂಳಿನಿಂದಾಗಿ ಹತ್ತು ಲಕ್ಷ ರೂಪಾಯಿಯ ಆಸುಪಾಸಿನ ಬೆಲೆಯ ಎಸ್‌ಯುವಿ ತಯಾರಿಸುತ್ತಿರುವ ಇತರ ಕಂಪೆನಿಗಳು ಕಣ್ಣು ಉಜ್ಜಿಕೊಳ್ಳುವಂತೆ ಮಾಡಿದೆ. ಭಾರತ ಪ್ರವೇಶಿಸಿ ಕೆಲವೇ ತಿಂಗಳುಗಳಲ್ಲಿ ರಿನೊ ಶೇ. 3ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ ಎಸ್‌ಯುವಿ ಹಾಗೂ ಎಂಪಿವಿಗಳ ವರ್ಷವೆಂದೇ ಹೇಳಬಹುದು. ಕಾರುಗಳ ಮಾರಾಟ ಶೇ. 8ರಷ್ಟು ಕುಸಿದಿದ್ದರೂ, ಯುವಿ ಮಾರುಕಟ್ಟೆ ಶೇ. 61ರಷ್ಟು ವೃದ್ಧಿಯಾಗಿರುವುದು ಭಾರತೀಯರ ಅಪೇಕ್ಷೆಗಳು ಬದಲಾಗಿರುವುದನ್ನು ಸಾರುತ್ತದೆ.

ಏರಿಳಿತದ ವರ್ಷ
ವರ್ಷದ ಆರಂಭದಿಂದಲೂ ಏರುಗತಿಯಲ್ಲೇ ಸಾಗುತ್ತಿದ್ದ ಕಾರು ಮಾರಾಟ, ಆಗಸ್ಟ್ ತಿಂಗಳಲ್ಲಿ ಶೇ. 19ರಷ್ಟು ಕುಸಿತ ಕಂಡಿತು. ಮಾರ್ಚ್ 2011ರವರೆಗೆ ಸತತವಾಗಿ ಶೇ. 30ರ ದರದಲ್ಲಿ ಏರಿಕೆ ಕಂಡಿದ್ದ ಕಾರು ಮಾರಾಟ, 2012ರ ಜೂನ್-ಜುಲೈ ವೇಳೆಗೆ ಬಳಲಿದಂತೆ ಕಂಡಿತು. ಬಡ್ಡಿ ದರ ಹಾಗೂ ಇಂಧನ ಬೆಲೆ ಏರಿಕೆಯಿಂದಾಗಿ ಕೊಂಚ ಹಿನ್ನೆಡೆ ಅನುಭವಿಸಿದ್ದರೂ, ಸೆಪ್ಟೆಂಬರ್, ಅಕ್ಟೋಬರ್ ನಂತರದಲ್ಲಿ ಚೇತರಿಕೆಯ ಹಾದಿಯನ್ನು ಹಿಡಿಯಿತು. 2011ರಲ್ಲಿ 1.95 ದಶಲಕ್ಷ ಕಾರುಗಳು ಮಾರಾಟವಾಗಿದ್ದವು. ಆದರೆ ನವೆಂಬರ್ ತಿಂಗಳು ಒಂದರಲ್ಲೇ 1,59,325 ಕಾರುಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ಎಸ್‌ಐಎಎಮ್ ವರದಿ ಹೇಳಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 4.2ರಷ್ಟು ಹೆಚ್ಚಳವಾಗಿದೆ.

ಭಾರತೀಯ ಆಟೊಮೊಬೈಲ್ ತಯಾರಕರ ಸಂಘ (ಎಸ್‌ಐಎಎಮ್) ನೀಡಿರುವ ದಾಖಲೆ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2012ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಕಾರು ಮಾರಾಟ 9.62ರಷ್ಟು ಹೆಚ್ಚಾಗಿದೆ. ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್‌ಗಳು ಶೇ 1.28ರಷ್ಟು ವೃದ್ಧಿ ಕಂಡರೆ, ಎಸ್‌ಯುವಿ ಹಾಗೂ ಎಂಪಿವಿಗಳು ಭರ್ಜರಿ ಅಂದರೆ 61.69ರಷ್ಟು ವೃದ್ಧಿ ದಾಖಲಿಸಿವೆ. ಈ ಏರಿಳಿತದಿಂದ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಶೇ 2-3ರಷ್ಟಾದರೂ ವೃದ್ಧಿ ದಾಖಲಿಸಿದರೆ ಸಾಕು ಎಂದು ಕಾರು ತಯಾರಕರು ಆಶಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಯುಟಿಲಿಟಿ ವೆಹಿಕಲ್‌ಗಳು (ಎಸ್‌ಯುವಿ ಹಾಗೂ ಎಂಪಿವಿ) ನಿರೀಕ್ಷೆಗೂ ಮೀರಿ ಮಾರಾಟವಾಗುತ್ತಿವೆ. ಉಳಿದ ಬಗೆಯ ಕಾರುಗಳು ಅಷ್ಟಾಗಿ ಮಾರಾಟವಾಗದ ಕಾರಣ ಹೆಚ್ಚು ರಿಯಾಯಿತಿ ಘೊಷಿಸಿದ್ದರೂ ಈಗಾಗಲೇ ಮಾರಾಟಕ್ಕೆ ಕಾದಿರುವ ಕಾರುಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಾಗಿದೆ.

ಒಟ್ಟಾರೆಯಾಗಿ 2012ರಲ್ಲಿ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿರುವುದೇ ಸಣ್ಣ ಕಾರುಗಳು (ಶೇ 55), ಅದರ ನಂತರದ ಸ್ಥಾನ ಎಮ್‌ಯುವಿ (ಶೇ 20), ಸೆಡಾನ್ (ಶೇ 17) ಹಾಗೂ ನಾಲ್ಕನೇ ಸ್ಥಾನದಲ್ಲಿ ಎಸ್‌ಯುವಿ (ಶೇ 8)ರಷ್ಟು ಮಾರಾಟವಾಗುತ್ತಿವೆ. ಗಮನಾರ್ಹ ಬೆಳವಣಿಗೆಯಲ್ಲಿ ವಿಲಾಸಿ ಕಾರುಗಳಾದ ಬಿಎಂಡಬ್ಲೂ, ಮರ್ಸಿಡೀಸ್ ಬೆಂಜ್, ಆಸ್ಟನ್ ಮಾರ್ಟಿನ್, ಬೆಂಟ್ಲೆ ಇತ್ಯಾದಿ  ವಿಲಾಸಿ ಕಾರುಗಳ ಮಾರಾಟದಲ್ಲೂ ಸಾಕಷ್ಟು ವೃದ್ಧಿಯಾಗಿದೆ.

ರಿನೊ ಮೂಲಕ ನಿಧಾನವಾಗಿ ಒಂದೊಂದೇ ಯುರೋಪ್ ಕಾರುಗಳು ಭಾರತದ ವಾಹನ ಮಾರುಕಟ್ಟೆಯಲ್ಲಿ ತಮ್ಮ ಇರುವಿಕೆಯನ್ನು ತೋರಿಸಿಕೊಡುತ್ತಿವೆ. ಮರ್ಸಿಡೀಸ್ ಬೆಂಜ್, ಬಿಎಂಡಬ್ಲೂ, ಆಸ್ಟನ್ ಮಾರ್ಟಿನ್, ಫೋಕ್ಸ್ ವ್ಯಾಗನ್, ಫಿಯೆಟ್, ರಿನೊ, ಸ್ಕೊಡಾ, ವೊಲ್ವೊಗಳು ಭಾರತದ ಮಾರುಕಟ್ಟೆಯನ್ನು ನಿಧಾನವಾಗಿ ಆವರಿಸಿವೆ. ಇವುಗಳ ಒಟ್ಟಾರೆ ಪಾಲು ಶೇ. 7 ಆದರೂ ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗಲಿದೆ. ಸದ್ಯ ಭಾರತದಲ್ಲಿ ಜಪಾನ್ ಕಾರುಗಳದ್ದೇ ಕಾರುಬಾರು (ಶೇ 51), ಭಾರತದ ಕಾರುಗಳು ಶೇ 21ರ ಮೂಲಕ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಕೊರಿಯಾ (ಶೇ. 14) ಕಾರುಗಳು ತಮ್ಮ ಪಾರುಪತ್ಯವನ್ನು ಸಾಧಿಸುತ್ತಿವೆ.

ಭಾರತದಲ್ಲಿ ಕಾರುಗಳ ತಯಾರಿಕೆ ಶೇ 21ರಷ್ಟಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ರಫ್ತು ಪ್ರಮಾಣ ಶೇ 4.57ರಷ್ಟು ಕುಸಿತ ಕಂಡಿದೆ. ಆದರೆ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 8ರಷ್ಟು ವೃದ್ಧಿ ಕಂಡಿದೆ.  ಅದರಂತೆ ದ್ವಿಚಕ್ರ ವಾಹನಗಳ ಮಾರಾಟವೂ ಈ ಬಾರಿ ಶೇ. 4ರಷ್ಟು ಕುಸಿತ ದಾಖಲಿಸಿದೆ.

ಒಟ್ಟಾರೆಯಾಗಿ 2012ರಲ್ಲಿ ವಾಹನ ಕ್ಷೇತ್ರದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಭಾರತದ ವಾಹನ ಕ್ಷೇತ್ರದ ಮೇಲೂ ಬೀರಿರುವುದೇ ಇದಕ್ಕೆ ಕಾರಣವಿರಬಹುದು. ಆದರೂ ಕಳೆದು ಹೋದ ವರ್ಷದಲ್ಲಿನ ನಷ್ಟವನ್ನು ಮರೆತು ಬರಲಿರುವ ವರ್ಷಕ್ಕೆ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಧಾಂಗುಡಿ ಇಡಲು ಸಜ್ಜಾಗಿ ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.