ADVERTISEMENT

ಇನ್ಮುಂದೆ ಇ– ಬೈಕ್ ಸ್ಕೂಟರ್ ದುನಿಯಾ

ಹೊಸ ಕಾರುಗಳ ಕಾರುಬಾರು, ವಿದ್ಯುಚ್ಛಾಲಿತ ಸ್ಕೂಟರ್‌ಗಳ ಮೋಡಿ

ನೇಸರ ಕಾಡನಕುಪ್ಪೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಇನ್ಮುಂದೆ ಇ– ಬೈಕ್ ಸ್ಕೂಟರ್ ದುನಿಯಾ
ಇನ್ಮುಂದೆ ಇ– ಬೈಕ್ ಸ್ಕೂಟರ್ ದುನಿಯಾ   

2017ರ ವಾಹನ ಪ್ರಪಂಚ ಸಾಕಷ್ಟು ರೋಚಕವಾಗಿತ್ತು. ನಾಲ್ಕು ಚಕ್ರ ವಾಹನ ಕ್ಷೇತ್ರದಲ್ಲಿ ಕೆಲವೇ ಹೊಸ ಕಾರುಗಳು ರಸ್ತೆಗಿಳಿದವು.

ದ್ವಿಚಕ್ರವಾಹನಗಳಲ್ಲೂ ಸಾಧನೆ ಸರಳವಾಗೇ ಇತ್ತು. ಆದರೆ, 2018 ಸಾಕಷ್ಟು ಕುತೂಹಲ ಮೂಡಿಸಿದೆ. ಜಾಗತಿಕ ಮಟ್ಟದ ಗುಣಮಟ್ಟವುಳ್ಳ ಕಾರು, ಬೈಕ್‌ ಹಾಗೂ ಸ್ಕೂಟರ್‌ಗಳು ಹೊರಬರುತ್ತಿವೆ. ದ್ವಿಚಕ್ರ ವಾಹನಗಳ ಪೈಕಿ ಹೇಳಿಕೊಳ್ಳುವಂತಹ ಸಾಧನೆಯೇನೂ 2017ರಲ್ಲಿ ಕಂಡಿಲ್ಲ. ಈ ವರ್ಷ ದ್ವಿಚಕ್ರ ವಾಹನ ಲೋಕ ಹೇಗಿರಬಹುದು? ಅದರ ಮುನ್ನೋಟ...

ವಿದ್ಯುತ್‌ಮಯವಾಗಲಿದೆ ದ್ವಿಚಕ್ರ ವಾಹನಲೋಕ

ADVERTISEMENT

ಬಹುತೇಕ ಎಲ್ಲ ಕಂಪೆನಿಗಳ ಪ್ರಸಿದ್ಧ ಸ್ಕೂಟರ್‌ಗಳು ವಿದ್ಯುಚ್ಛಾಲಿತ ಅವತರಣಿಕೆಯಲ್ಲಿ ಹೊರುಬರುತ್ತಿರುವುದು ಹೊಸ ಟ್ರೆಂಡ್ ಶುರುವಾಗುತ್ತಿರುವುದನ್ನು ಸೂಚಿಸಲಿದೆ. ಪೆಟ್ರೋಲ್‌ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿರುವುದರಿಂದ ಮಧ್ಯಮ ವರ್ಗದ ಜನತೆ ಬಸವಳಿದಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ವಿದ್ಯುಚ್ಛಾಲಿತ ಸ್ಕೂಟರ್‌ಗಳು ಅಷ್ಟಾಗಿ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಇದೇ ಕಾರಣಕ್ಕೆ ಗ್ರಾಹಕರು, ಕಷ್ಟವಾದರೂ ಪೆಟ್ರೋಲ್‌ ಸ್ಕೂಟರ್‌ಗಳನ್ನೇ ಓಡಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಪ್ರಸಿದ್ಧ ಕಂಪೆನಿಗಳು ತಮ್ಮ ಕಂಪೆನಿಯ ಸ್ಕೂಟರ್‌ಗಳನ್ನೇ ವಿದ್ಯುತ್‌ ಅವತರಣಿಕೆಯಲ್ಲೂ ಹೊರಬಿಡುತ್ತಿವೆ.

ಹೀರೊ ಡ್ಯುಯೆಟ್‌ ಇ: ಹೀರೊ ಕಂಪೆನಿಯ ಪ್ರಸಿದ್ಧ ಡ್ಯುಯೆಟ್‌ ಸ್ಕೂಟರ್‌ ವಿದ್ಯುತ್‌ ಅವತರಣಿಕೆಯಲ್ಲಿ ಹೊರಬರುತ್ತಿದೆ. 5 ಕಿಲೊವ್ಯಾಟ್‌, 15 ಎನ್‌ಎಂ ಟಾರ್ಕ್‌ ಉಳ್ಳ ವಿದ್ಯುತ್ ಮೋಟಾರ್‌ ಇರಲಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಇದರಲ್ಲಿ 60 ಕಿಲೋ ಮೀಟರ್‌ ದೂರ ಕ್ರಮಿಸುತ್ತದೆ. ಕಾರ್ಯಕ್ಷಮತೆಯಲ್ಲೂ ಈ ಸ್ಕೂಟರ್‌ ಉತ್ತಮವಾಗಿದೆ. ಕೇವಲ 6.5 ಸೆಕೆಂಡ್‌ಗಳಲ್ಲಿ 60 ಕಿಲೋಮೀಟರ್‌ ವೇಗ ತಲುಪಬಲ್ಲದು. ಬೆಲೆ ಅಂದಾಜು ₹ 55 ಸಾವಿರ (ಎಕ್ಸ್ ಶೋರೂಂ).

ಟಿವಿಎಸ್‌ ಎನ್‌ಟಾರ್ಕ್‌: ಟಿವಿಎಸ್‌ ಕಂಪೆನಿಯ ಹೊಸ ಪೆಟ್ರೋಲ್‌ ಚಾಲಿತ ಸ್ಕೂಟರ್‌ ಎನ್‌ ಟಾರ್ಕ್‌ ಎರಡು ಅವತರಣಿಕೆಗಳಲ್ಲಿ ಹೊರಬರಲಿದೆ. 210 ಸಿಸಿ ಹಾಗೂ 125 ಸಿಸಿ ಎಂಜಿನ್‌ ಇರಲಿದೆ. ಅತ್ಯಾಧುನಿಕ ನೋಟ, ಶ್ರೇಷ್ಠ ತಂತ್ರಜ್ಞಾನಗಳು ಇರುವುದು ಈ ಸ್ಕೂಟರ್‌ನ ವಿಶೇಷ. ತೂಕವನ್ನು ಕಡಿಮೆಗೊಳಿಸಲು ಅತಿ ಹೆಚ್ಚು ಅಲ್ಯೂಮಿನಿಯಂ ಅಲಾಯ್‌ ಬಳಕೆಯಾಗಿದೆ.

ಇದರಿಂದ ಮೈಲೇಜ್‌ ಹೆಚ್ಚಲಿದೆ. 1 ಲೀಟರ್‌ ಪೆಟ್ರೋಲಿಗೆ ಇದು ಗರಿಷ್ಠ 60 ಕಿಲೋ ಮೀಟರ್‌ ಮೈಲೇಜ್‌ ನೀಡಲಿದೆ. ಬೆಲೆ ₹ 65 ಸಾವಿರ(ಎಕ್ಸ್‌ಶೋರೂಂ) ದಿಂದ ಆರಂಭ.

ವೆಸ್ಪಾ ಜಿಟಿಎಸ್ 300: ಇಟಲಿ ಮೂಲದ ಪ್ರಸಿದ್ಧ ಬೈಕ್‌ 2018ರಲ್ಲಿ ತನ್ನ ಸುಪ್ರೀಂ ಸ್ಕೂಟರ್‌ ಬಿಡುಗಡೆಗೊಳಿಸಲಿರುವುದು ವಿಶೇಷ. ತನ್ನ ಜಿಟಿಎಸ್ 300 ಸ್ಕೂಟರ್‌ ಅನ್ನು ರಸ್ತೆಗಳಿಗೆ ಪರಿಚಯಿಸಲಿದೆ. 300 ಸಿಸಿ ಪೆಟ್ರೋಲ್‌ ಎಂಜಿನ್‌ ಇರುವ ವಿಶೇಷ ಸ್ಕೂಟರ್‌ ಇದು. ಆದರೆ ಬೆಲೆ ಹೌಹಾರುವಂತಿದೆ. ಎಕ್ಸ್ ಶೋರೂಂ ₹4 ಲಕ್ಷ ಇರಲಿದೆ.

2018ರ ಅಂತ್ಯಕ್ಕೆ ಮತ್ತೂ ಒಂದು ವೆಸ್ಪಾ ಸ್ಕೂಟರ್ ಬಿಡುಗಡೆ ಆಗುವ ಅಂದಾಜಿದೆ. ಅದು 946 ಎಂಪಾರಿಯೊ ಅರ್ಮಾನಿ. ಇದರ ಬೆಲೆ ಬರೋಬ್ಬರಿ ಎಕ್ಸ್ ಶೋರೂಂ ₹12 ಲಕ್ಷ ಇರಲಿದೆ! ವೆಸ್ಪಾ ಸ್ಕೂಟರ್‌ಗಳನ್ನು ಕೊಳ್ಳುವ ವರ್ಗ ಹಣಕ್ಕಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮೈಲೇಜನ್ನು ಸಹ ಲೆಕ್ಕಿಸುವುದಿಲ್ಲ. ಅವರಿಗೆ ಬೇಕಿರುವುದು ಅತ್ಯದ್ಭುತ ಸ್ಕೂಟರ್‌ಗಳಷ್ಟೇ. ಇವು ಅತ್ಯದ್ಭುತ ಎಂಬುದರಲ್ಲಿ ಯಾವುದೇ ಸಂದೇಹವಂತೂ ಬೇಕಿಲ್ಲ.

ಹೀರೊ ಜೆಡ್‌ಐಆರ್: ವೆಸ್ಪಾದಂತೆಯೇ ಹೀರೊ ಕಂಪೆನಿ ಸಹಾ ಸುಪ್ರೀಂ ಸ್ಕೂಟರ್‌ ಬಿಡುಗಡೆಗೊಳಿಸುತ್ತಿದೆ. ಇದು ಹೀರೊ ಜೆಡ್‌ಐಆರ್‌ 150. ಇವನ್ನು ಮ್ಯಾಕ್ಸಿ ಸ್ಕೂಟರ್‌ಗಳ ವರ್ಗಕ್ಕೆ ಸೇರಿಸಬೇಕು. ಅಂದರೆ, ಮೋಟಾರ್‌ಸೈಕಲ್‌ಗಳ ಕಾರ್ಯಕ್ಷಮತೆ ಈ ಸ್ಕೂಟರ್‌ಗಳಿಗೆ ಇರುತ್ತದೆ. 150 ಸಿಸಿ ಎಂಜಿನ್‌ ಇರಲಿದೆ. ಇದಕ್ಕೆ ಪೂರಕವಾಗಿ ಅತ್ಯುತ್ತಮವಾದ 13.8 ಬಿಎಚ್‌ಪಿ ಶಕ್ತಿ ಹಾಗೂ 12.7 ಎನ್‌ಎಂ ಟಾರ್ಕ್‌ ಇರಲಿರುವುದು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರ ಬೆಲೆ ಅಂದಾಜು ಎಕ್ಸ್‌ ಶೋರೂಂ ₹1 ಲಕ್ಷ ಇರಲಿದೆ. ಮೈಲೇಜ್‌ ಸುಮಾರು 1 ಲೀಟರ್‌ ಪೆಟ್ರೋಲಿಗೆ 40 ಕಿಲೋ ಮೀಟರ್‌ ನೀಡುತ್ತದೆ.

ಟಿವಿಎಸ್ ಜ್ಯುಪಿಟರ್‌ ಎಲೆಕ್ಟ್ರಿಕ್‌: ಟಿವಿಎಸ್‌ನ ಪ್ರಸಿದ್ಧ ಸ್ಕೂಟರ್‌ ಜ್ಯುಪಿಟರ್. ತನ್ನ ಬಲಿಷ್ಠ ದೇಹಕ್ಕೆ ಇದು ಪ್ರಸಿದ್ಧ. ಈ ಸ್ಕೂಟರ್‌ನ ವಿದ್ಯುತ್‌ ಅವತರಣಿಕೆ ಹೊರಬರುತ್ತಿದೆ. ಆದರೆ, ವಿದ್ಯುಚ್ಛಾಲಿತ ಜ್ಯುಪಿಟರ್‌ನಲ್ಲಿ ಗಡಸುತನ ಇರುವುದೇ ಅಥವಾ ಮೈಲೇಜಿಗಾಗಿ ಫೈಬರ್‌ ದೇಹ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ವಿದ್ಯುಚ್ಛಾಲಿತ ಜ್ಯುಪಿಟರ್‌ನ ಅಂದಾಜು ಬೆಲೆ ಎಕ್ಸ್‌ ಶೋರೂಂ ₹65 ಸಾವಿರ.

ಮಹಿಂದ್ರಾ ಗಸ್ಟೊ ಎಲೆಕ್ಟ್ರಿಕ್‌: 2015ರಲ್ಲಿ ಮಹಿಂದ್ರಾ ಗಸ್ಟೊ ಹೊರಬಂದಾಗ ಅದರ ಚುರುಕುತನದಿಂದ ಹೆಸರು ಗಳಿಸಿತ್ತು. ಇದೇ ಸ್ಕೂಟರ್‌ನ ವಿದ್ಯುತ್‌ ಅವತರಣಿಕೆ 2018ರ ವಿಶೇಷ. ಇದರ ತಾಂತ್ರಿಕ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಈಗ ಇರುವ ಗಸ್ಟೊ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿರುವ ಕಾರಣ, ವಿದ್ಯುಚ್ಛಾಲಿತ ಗಸ್ಟೊ ಸಹ ಉತ್ತಮವಾಗೇ ಇರಲಿದೆ ಎನ್ನುವುದು ಅಂದಾಜು.

ಏಥರ್‌ ಎಸ್‌ 340: ಪ್ರಸಿದ್ಧ ಕಂಪೆನಿಗಳಲ್ಲದೇ ಹೊಸ ಕಂಪೆನಿಗಳೂ ವಿಶ್ವಾಸ ಮೂಡಿಸಲಿವೆ. ಮದ್ರಾಸಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ತರುಣ್‌ ಮೆಹ್ತಾ ಹಾಗೂ ಸ್ವಪ್ನಿಲ್‌ ಜೈನ್ ಏಥರ್‌ ಎನರ್ಜಿ ಎಂಬ ಸಂಸ್ಥೆಯನ್ನು ಆರಂಭಿಸಿ ಹೊಸ ವಿದ್ಯುಚ್ಛಾಲಿತ ‘ಏಥರ್‌ ಎಸ್‌ 340’ ಸ್ಕೂಟರ್‌ ಅನ್ನು ಹೊರಬಿಡುತ್ತಿದ್ದಾರೆ. ಹೊಸ ಕಂಪೆನಿಗಳ ಪೈಕಿ ಇದು ಉತ್ತಮ ಸ್ಕೂಟರ್ ಎನ್ನಬಹುದು.

ಶೇ 90ರಷ್ಟು ಭಾರತೀಯ ತಂತ್ರಜ್ಞಾನವನ್ನೇ ಬಳಸಿಕೊಂಡು ಈ ಸ್ಕೂಟರ್ ತಯಾರಿಸುವುದು ವಿಶೇಷ. ಮಿಕ್ಕ ಕಂಪೆನಿಗಳು ಚೀನಾದಿಂದ ವಿದ್ಯುಚ್ಛಾಲಿತ ವಾಹನ ತಂತ್ರಜ್ಞಾನವನ್ನು ಪಡೆದುಕೊಳ್ಳುತ್ತವೆ. ಇದನ್ನು ಒಮ್ಮೆ ಚಾರ್ಜ್‌ ಮಾಡಿದರೆ, 140 ಕಿಲೋ ಮೀಟರ್ ಮೈಲೇಜ್‌ ನೀಡುತ್ತದೆ. ಬೆಲೆ ಅಂದಾಜು ₹60 ಸಾವಿರ (ಎಕ್ಸ್ ಶೋರೂಂ).⇒ಮುಂದಿನ ವಾರ: ಹೊಸ ಕಾರಿಲ್ಲ; ಮೇಲ್ದರ್ಜೆಯದೇ ವಿಶೇಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.