ADVERTISEMENT

ಇದೇ ನನ್ನ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಇದೇ ನನ್ನ ನಿರ್ಧಾರ
ಇದೇ ನನ್ನ ನಿರ್ಧಾರ   

ರೇಷನ್‌ ಪಟ್ಟಿಗಿಂತ ಉದ್ದ

ಹೊಸತು ಎಂಬ ಶಬ್ದವೇ ಖುಷಿ. ಎಂಥದ್ದೋ ಸಂಭ್ರಮವನ್ನು ಒಳಗೆ ಹುಟ್ಟುಹಾಕುತ್ತದೆ. ಬದುಕಿಗೆ ಆತ್ಮವಿಶ್ವಾಸ ನೀಡುತ್ತದೆ. ಇಂತಹ ಹೊಸ ವರ್ಷದಲ್ಲಿ ನನ್ನ ಕನಸಿನ ಪಟ್ಟಿ ರೇಷನ್ ಪಟ್ಟಿಗಿಂತಲೂ ಉದ್ದವಾಗಿ ಬೆಳೆದು ನಿಂತಿದೆ.

ಅನವಶ್ಯಕವಾಗಿ ಯಾರ ಮೇಲೂ ಕೋಪಿಸಿಕೊಳ್ಳಬಾರದು, ಮನದ ಸಂದಿ ಮೂಲೆಯಲ್ಲಿ ಅಡಗಿ ಕೂತಿರುವ ಅಹಂಕಾರವನ್ನು ಒದ್ದು ಓಡಿಸಬೇಕು, ಅಮ್ಮನ ಕನಸನ್ನು ನನಸು ಮಾಡಬೇಕು. ಆದಷ್ಟು ಕ್ಲಾಸ್‌ನಲ್ಲಿ ಡಿಸ್ಟರ್ಬ್ ಆಗದೆ, ಯಾವೊಬ್ಬ ಮಗುವನ್ನು ಬೈಯ್ಯದೆ ನನ್ನನ್ನು ನಾನೇ ಬ್ಯಾಲೆನ್ಸ್ ಮಾಡಿಕೊಳ್ಳಬೇಕು.

ADVERTISEMENT

ಸ್ವ ಅನುಕಂಪ ಬಿಡಬೇಕು, ಯಾವ ನಿರೀಕ್ಷೆಗಳಿಲ್ಲದೆ, ಯಾವುದನ್ನೂ ಕಂಪ್ಲೇಂಟ್ ಮಾಡದೆ ಬದುಕಬೇಕು. ಇದ್ದುದ್ದನ್ನು ಇದ್ದ ಹಾಗೆ ಸ್ವೀಕರಿಸಬೇಕು. ಸಾಧ್ಯವಾದರೆ ಕುಪ್ಪಳ್ಳಿಯ ಕವಿಶೈಲದ ಬಂಡೆ ಮೇಲೆ ಕೂತು ಒಂದಿಷ್ಟು ಧ್ಯಾನಿಸಬೇಕು. ಸ್ನೇಹಿತರ ಮನೆಗೆ ಹೋಗಿಬರಬೇಕು. ನಿಂತುಹೋಗಿರುವ ಪತ್ರ ಬರೆಯುವ ಖಯಾಲಿಯನ್ನು ಮುಂದುವರೆಸಬೇಕು.

ಕಾರಂತರ ಮೂಕಜ್ಜಿ, ಟ್ಯಾಗೋರರ ಗೀತಾಂಜಲಿಯನ್ನು ಮತ್ತೊಮ್ಮೆ ಓದಬೇಕು. ಎರಡು ವರ್ಷ ಪ್ರಯತ್ನ ಪಟ್ಟರೂ ಬರದೇ ಇರುವ ಸ್ಕೂಟಿಯನ್ನು ಈ ವರ್ಷ ಓಡಿಸಲೇಬೇಕು.

ಅರ್ಧವಾಗಿರುವ ಉಲ್ಲನ್ನಿನ ತೋರಣವನ್ನು ಪೂರ್ತಿ ಮಾಡಬೇಕು. ಮಾಡಬೇಕೆಂದಿದ್ದ ಪೇಂಟಿಂಗ್ ಅನ್ನು ಈ ವರ್ಷ ಮುಗಿಸಬೇಕು. ಪ್ರತಿ ಕ್ಷಣವನ್ನು ಇನ್ನಷ್ಟು ತೀವ್ರವಾಗಿ ಬದುಕಬೇಕು. ಬಿಡಿ, ಈ ಪಟ್ಟಿ ಇನ್ನೂ ಉದ್ದವಿದೆ. ಈ ಎಲ್ಲದಕ್ಕೂ ಈ ವರ್ಷ ಫಿಕ್ಸ್ ಆಗಿದೆ.

ಹರ್ಷಿತ ಕೆ. ಶಿವಮೊಗ್ಗ

***

ಪಕ್ಷಿಗಳ ಮಾತು ಕೇಳಬೇಕು!

ಇದು ಕಳೆದ ಬಾರಿಯ ಸೋಲೂ ಹೌದು, ಅದರ ಹಿಂದಿನ ಬಾರಿಯ ಸೋಲು ಕೂಡ ಹೌದು!

ಅಕ್ಟೋಬರ್, ನವೆಂಬರ್ ವೇಳೆಗೆ ನಿರ್ಧರಿಸಿ, ಜನವರಿ ಒಂದಕ್ಕೆ ಜಾರಿಗೆ ತಂದು, ಫೆಬ್ರುವರಿ ಬರುವ ವೇಳೆಗಾಗಲೇ ಕೈ ಬಿಟ್ಟಿರುತ್ತೇನೆ. ಈ ಬಾರಿ ನಾನಾ ಅಥವಾ ಅದಾ? ತೀರ್ಮಾನವಾಗಲೇಬೇಕು. ಈ ಬಾರಿ ಖಂಡಿತ ಸೋಲಲಾರೆ!

ನನ್ನ ಹಟವನ್ನು, ಗುರಿಯನ್ನು ಹೀಗೆ ಬರೆದುಕೊಂಡು ಸೋತರೆ ನನ್ನ ನಡೆಸುತ್ತಿರುವ ಬಿಳಿ ಹಾಳೆ ಮತ್ತು ಕಪ್ಪು ಅಕ್ಷರಗಳು ಯಾವತ್ತೂ ಕ್ಷಮಿಸಲಾರವು.

ಐದಕ್ಕೆಲ್ಲಾ ಎದ್ದು ನಗರದ ಮಧ್ಯದಲ್ಲಿ ಬಿದ್ದಿಕೊಂಡಿರುವ ಸ್ಟೇಡಿಯಂನಲ್ಲಿ ಹತ್ತಾರು ಸುತ್ತು ಓಡಬೇಕು ಇಲ್ಲವೇ ನಗರದಿಂದ ಓಡಿ ಹೊರಟಿರುವಂತೆ ಕಾಣುವ ರಸ್ತೆಗುಂಟ ಸಾಗಿ ಹಸಿರು ಮತ್ತು ಇಬ್ಬನಿಗಳ ಪ್ರಣಯ, ಪಕ್ಷಿಗಳ ತೊದಲು ಆಲಿಸಬೇಕು. ವಾಪಸ್ಸು ಬರುವಾಗ ಬಿಸಿ ಬಿಸಿಯಾದ ಪತ್ರಿಕೆ ಕೊಂಡು ಸುದ್ದಿ ಆರುವ ಮುನ್ನವೇ ಓದಬೇಕು, ಗೆಳೆಯರೊಂದಿಗೆ ಹರಟಿ ಕಾಫಿ ಕುಡಿದು ಆರಕ್ಕೆಲ್ಲಾ ಮನೆಗೆ ಬಂದು ಬಿಡಬೇಕು. ಇದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡ ನಿರ್ಧಾರ. ಆದರೆ ಸೋಲುತ್ತಾ ಬಂದಿದ್ದೇನೆ.

ಈ ಬಾರಿ ನಿರ್ಧಾರ ತುಂಬಾ ಧೃಢವಾಗಿದೆ, ಉಕ್ಕಿನಷ್ಟೇ! ಎಂತಹ ಸಿಹಿ ನಿದ್ದೆಯನ್ನೂ ಒದ್ದು ಎದ್ದು ಬಿಡುವ, ಬೆಚ್ಚನೆ ಹೊದಿಕೆಯನ್ನು ಒಮ್ಮೆಲೆ ಎತ್ತಿ ಬಿಸಾಡುವ, ಅಲಾರಂ ಇಲ್ಲದೆ ಐದು ಗಂಟೆಗೆ ಧಡಾರನೆ ಎದ್ದು ಕೂರುವ ನಿರ್ಧಾರ ಮಾಡಿದ್ದೇನೆ. ನನಗೆ ಸಂಶಯ: ತಿಂಗಳಿಗೆಲ್ಲಾ ಸೋತು ಬಿಡುವ ಭಯ ಕಾಡಬಹುದಾ ಅಂತ! ಇಲ್ಲ, ಅದಕ್ಕೆ ಆಸ್ಪದವೇ ಇಲ್ಲ. ನನ್ನ ಹೊಟ್ಟೆ ನನಗಿಂತ ಚೆನ್ನಾಗಿ ಬೆಳೆದು ನಿಂತಿದೆ. ಜನ ನನ್ನ ಮುಖ ನೋಡುವ ಮೊದಲು ಹೊಟ್ಟೆಯನ್ನು ನೋಡುವುದರಿಂದ ಆ ಕ್ಷಣ ಆಗುವ ಅವಮಾನ ಐದು ಗಂಟೆಗೆ ಚುಚ್ಚಿಸಿ ಏಳಿಸುತ್ತದೆ. ನನಗೂ ಆ ಸ್ಟೇಡಿಯಂ, ಹಚ್ಚನೆ ಮರದ ದಾರಿಗಳು ಕಾದಿವೆ. ಹೊಸ ವರ್ಷ, ಹಳೆಯ ನಿರ್ಧಾರವನ್ನು ಹೊಸದಾಗಿ ಮಾಡಿಕೊಂಡು ಹೊರಟಿದ್ದೇನೆ. ಈ ಬಾರಿ ಗೆಲ್ಲುವೆ!

–ಸದಾಶಿವ ಸೊರಟೂರು ಚಿಂತಾಮಣಿ

***

ಸ್ಮಾರ್ಟ್‌ ಕ್ಲಾಸ್ ಆರಂಭಿಸುವೆ

‘ಶಿಕ್ಷಣ’ ಇಂದು ಹಣವಿದ್ದವರ ಪಾಲಾಗುತ್ತಿದೆ. ವಿದ್ಯಾದಾನ ಮಾಡಿದ್ರೆ ವಿದ್ಯೆ ಹೆಚ್ಚಾಗುತ್ತೆ. ಹೆಚ್ಚು ಬುದ್ಧಿವಂತನಾಗುತ್ತಾನೆ ಎಂಬುದು ನಮ್ಮ ಹಿರಿಯರ ಅಭಿಮತ. ಆದರೆ ಇತ್ತೀಚಿನ ವರ್ಷಗಳಲ್ಲಿ ಆದ ಬದಲಾವಣೆಗಳು ಶಿಕ್ಷಣ ಕ್ಷೇತ್ರವನ್ನು ಘಾಸಿಗೊಳಿಸುವಂತೆ ಮಾಡಿವೆಯೆಂದರೆ ತಪ್ಪಾಗಲಾರದು.

ಜೊತೆಗೆ ಬಡವರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗುವಂಥ ಪರಿಸ್ಥಿತಿಯೂ ಬಂದಿದೆ. ಹೀಗಾಗಿ ಸರಕಾರಿ ಶಾಲೆಯ ಶಿಕ್ಷಕನಾಗಿರುವ ನಾನು, ಖಾಸಗಿ ಶಾಲೆಯಲ್ಲಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನನ್ನ ಸರಕಾರಿ ಶಾಲೆಯಲ್ಲಿ ನೀಡಬೇಕೆಂದು ತೀರ್ಮಾನ ಮಾಡಿದ್ದೇನೆ.

ಇದು ಈ ವರ್ಷದ ನನ್ನ ಬಹುಮುಖ್ಯ ಗುರಿಯೂ ಹೌದು. ನನ್ನ ಕನಸಾದ ‘ಸ್ಮಾರ್ಟ್ ಕ್ಲಾಸ್’ ಪ್ರಾರಂಭಿಸಬೇಕು. ಜೊತೆಗೆ ‘ಗ್ರೀನ್ ಬೋರ್ಡ್’ ಪ್ರತಿ ತರಗತಿಯಲ್ಲಿರುವಂತೆ ನೋಡಿಕೊಳ್ಳುವುದು. ಅಷ್ಟೇ ಅಲ್ಲ, ಇಂಗ್ಲೀಷ್ ಅನ್ನು ಒಂದು ಭಾಷೆಯನ್ನಾಗಿ ಪರಿಣಾಮಕಾರಿಯಾಗಿ ಕಲಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನನ್ನ ಶಾಲೆಯಲ್ಲಿ ಪ್ರಾರಂಭಿಸಬೇಕು ಎಂಬ ಆಸೆ ನನ್ನದು. ಇದಕ್ಕೆಲ್ಲಾ ಬೇಕಾಗುವ ಹಣವನ್ನು ಸರಕಾರದ ವಿವಿಧ ಮೂಲದಿಂದ, ನಮ್ಮ ಶಾಲೆಯ ಸಿಬ್ಬಂದಿ ವರ್ಗದವರ ನೆರವಿನಿಂದ ಸಂಗ್ರಹಿಸಿ ‘ಸ್ಮಾರ್ಟ್‌ ಕ್ಲಾಸ್’ ಪ್ರಾರಂಭ ಮಾಡೇ ಮಾಡುತ್ತೇನೆ ಎಂಬುದೇ ನನ್ನ ಅಚಲವಾದ ನಿರ್ಧಾರ.

–ಮಲ್ಲಪ್ಪ ಫ. ಕರೇಣ್ಣನವರ ಹನುಮಾಪುರ

***

ಪ್ಲಾಸ್ಟಿಕ್ ಬಳಸೊಲ್ಲ

ಒಂದು ಗಟ್ಟಿ ನಿರ್ಧಾರಕ್ಕೆ ಬರುವುದೆಂದರೆ, ದೊಡ್ಡದೊಂದು ಜವಾಬ್ದಾರಿಯನ್ನು ಬೆನ್ನಮೇಲೆ ಹಾಕಿಕೊಂಡಂತೆ ಎಂದು ಯೋಚಿಸುವವ ನಾನು. ಹಾಗಾಗಿ, ಎಲ್ಲವನ್ನೂ ಒಟ್ಟೊಟ್ಟಿಗೆ ನನ್ನಲ್ಲಿ ನಾನು ನಿರ್ಧರಿಸಿ ಅವುಗಳು ಕಾರ್ಯರೂಪಕ್ಕೆ ಬರಲು ಶತಾಯಗತಾಯ ಪ್ರಯತ್ನ ಮಾಡಲು ನಿರ್ಧರಿಸುತ್ತೇನೆ. ಇಂದಿನ ನಮ್ಮ ವೇಗದ ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕೂಡ ಕಷ್ಟ ಸಾಧ್ಯವೇ ಸರಿ ಬಿಡಿ. ಈ ಎಲ್ಲಾ ಆಗುಹೋಗುಗಳನ್ನೂ ಮೀರಿ ನಾನು ಹೊಸ ವರ್ಷಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದೇನೆ.

ಅದೇನೆಂದರೆ, ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆಯನ್ನು ತಪ್ಪಿಸುವುದು. ನಾನು ಮಾತ್ರವಲ್ಲ, ನಮ್ಮ ಸುತ್ತಲಿನ ಜನರ ನಡುವೆಯೂ ಪ್ಲಾಸ್ಟಿಕ್‌ ಬಳಸುವುದನ್ನು ತಪ್ಪಿಸಲು ಪ್ರಯತ್ನಿಸುವುದು. ಈ ಕುರಿತು ಜಾಗೃತಿ ಮೂಡಿಸುವುದು.

ಸಾಧ್ಯವಾದಷ್ಟರ ಮಟ್ಟಿಗೆ ಗಿಡ–ಮರಗಳನ್ನು ಉಳಿಸಿ ಬೆಳೆಸಲು ನನ್ನ ಸಮಯವನ್ನು ಮೀಸಲಿಡಬೇಕೆಂದಿರುವೆ. ಈ ನಿಟ್ಟಿನಲ್ಲಿ ನನ್ನಂತೆ ಕೆಲಸ ಮಾಡಲು ಬಯಸುವ ಸಮಾನಮನಸ್ಕರನ್ನು ಸಂಪಾದಿಸಿ ಇನ್ನಷ್ಟು ಪರಿಸರಸ್ನೇಹಿ ಕೆಲಸವನ್ನು ಮಾಡುವುದು. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಆದಷ್ಟು ಕಲುಷಿತಗೊಳಿಸದೆ ಬೇರೆಯವರಿಗೆ ತೊಂದರೆ ಕೊಡದೆ ಈ ಬರುವ ಒಂದು ವರ್ಷವನ್ನು ಕಳೆಯೋಣ ಎಂದುಕೊಂಡಿದ್ದೇನೆ. ಏಕೆಂದರೆ, ‘ಇರುವುದೊಂದೇ ಭೂಮಿ. ಅದನ್ನು ಉಳಿಸೋಣ, ಇರುವುದೊಂದೇ ಜನ್ಮ, ಒಳಿತನ್ನು ಮಾಡೋಣ’ ಎನ್ನುವುದು ನನ್ನ ಧ್ಯೇಯ.

–ಉಮಾ ಮಂಜುನಾಥ್‌ ಕನಕಪುರ

***

ಸಂಗೀತ ಕಲಿತೇ ತೀರುವೆ

ಮೂರು ವರುಷದವಳಿದ್ದಾಗ ನನ್ನನ್ನು ಅಜ್ಜನ ಮನೆಯ ಹತ್ತಿರದ ಮದುವೆಯಲ್ಲಿ ನಡೆಯುತ್ತಿದ್ದ ಆರ್ಕೇಸ್ಟ್ರಾದವರ ಜೊತೆಯಲ್ಲಿ ಹಾಡಿಸಿದಾಗ ಅವರ ಹಿನ್ನೆಲೆ ಸಂಗೀತಕ್ಕೆ ಸರಿಯಾಗಿ ದನಿಗೂಡಿಸಿ ಹಾಡಿದ್ದೆ. ನನ್ನ ಅಜ್ಜನಿಗೆ ಖುಷಿಯೋ ಖುಷಿ. ಮೂರು ವರುಷದ ಈ ಹಂಬಲ ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ನನ್ನ ಪಂಚ ಪ್ರಾಣವಾಯ್ತು.

ಸಂಗೀತದ ಕೌಟುಂಬಿಕ ಹಿನ್ನೆಲೆ ಇಲ್ಲದೆ, ಕೇಳಿ ಕಲಿತ ಹಾಡುಗಳನ್ನು ನೋಡದೆ, ಸರಾಗವಾಗಿ ಅನುಕರಿಸಿ ಹಾಡುವ ನನ್ನ ಬಗ್ಗೆ ನನಗೇ ಆಶ್ಚರ್ಯ. ಸಣ್ಣ ಪುಟ್ಟ ಕಾರ‍್ಯಕ್ರಮಗಳಲ್ಲಿ ಹಾಡುವ ನನ್ನನ್ನು ಎಷ್ಟೋ ಜನ ಕೇಳಿದ್ದಿದೆ. ‘ಸಂಗೀತಾ ಕಲಿತಿದ್ದೀರಾ?’ ಎಂದು. ಇದೇ ದೊಡ್ಡ ಕೊರಗು. ಇವತ್ತಿಗೂ ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಸಿಸಲು ಆಗೇ ಇಲ್ಲ. ಹುಟ್ಟಿ ಬೆಳೆದಿದ್ದು ಗ್ರಾಮೀಣ ಪ್ರದೇಶವಾದ್ದರಿಂದ ಕಲಿಯಲು ಸರಿಯಾದ ಪರಿಸರ ಇಲ್ಲವಾಗಿತ್ತು. ಮದುವೆಯಾಗಿ ‘ಸಂಗೀತದ ಕಾಶಿ’ ಎಂದು ಹೆಸರಾದ ಗದಗ ನಗರಕ್ಕೆ ಬಂದರೂ ಕೌಟುಂಬಿಕ ಒತ್ತಡಗಳಿಂದ ಸಂಗೀತ ಕಲಿಯಲು ಆಗಲೇ ಇಲ್ಲ. ಇದರಲ್ಲಿ ನನ್ನ ಇಚ್ಛಾಶಕ್ತಿಯ ಕೊರತೆ, ಹಿಂಜರಿಕೆ, ಸೋಮಾರಿತನದ ಪಾಲೂ ಇದೆ. ಪ್ರತಿ ವರ್ಷ ಪ್ರಾರಂಭವಾಗುವಾಗ, ಈ ವರ್ಷ ಖಂಡಿತವಾಗಿ, ಒಳ್ಳೆಯ ಗುರುವಿನ ಮಾರ್ಗದರ್ಶನದಲ್ಲಿ ಸಂಗೀತ ಕಲಿಯಬೇಕೆಂದುಕೊಳ್ಳುತ್ತೇನೆ. ಸಂಗೀತಗಾರ್ತಿ ಎನಿಸಿಕೊಳ್ಳುತ್ತಿದ್ದರೂ ನನ್ನ ಖುಷಿಗಾಗಿ, ಆತ್ಮ ಸಂತೋಷಕ್ಕಾಗಿಯಾದರೂ ಸಂಗೀತ ಕಲಿತು ರಾಗ, ತಾಳ, ಭಾವ, ಲಯ ಇವುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನ ಪಡೆಯಬೇಕೆಂದಿದ್ದೇನೆ.

ನೋವಿರಲಿ, ನಲಿವಿರಲಿ, ಹಾಡು ನನ್ನ ಸಂಗಾತಿ. ಇವುಗಳೆಲ್ಲವ ಮೀರಿ ನಿಂತು ಸಂಗೀತದ ಸ್ವಲ್ಪ ಜ್ಞಾನವನ್ನಾದರೂ ಪಡೆಯ ಬೇಕೆನ್ನುವುದು ನನ್ನ ಜೀವನದ ದೊಡ್ಡ ಕನಸು ಮತ್ತು ಏಕೈಕ ಗುರಿ. ಹೊಸ ವರುಷಕ್ಕೆ ಇದೇ ನನ್ನ ಗಟ್ಟಿ ನಿರ್ಧಾರ ಕೂಡ.

–ಲಲಿತಾ ಆರ್‌. ಇಂಗಳಳ್ಳಿ ಗದಗ

***

ಮಕ್ಕಳಿಗೆ ಗಣಿತ ಹೇಳಿಕೊಡುವೆ

ಹೌದು. ಹೊಸ ವರ್ಷದ ಸಂದರ್ಭದಲ್ಲಿ ಇದೇ ನನ್ನ ಗಟ್ಟಿ ನಿರ್ಧಾರ. ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ. ಪ್ರತಿ ಕ್ಷಣವನ್ನೂ ಅತಿಮಧುರವಾಗಿಸಲು, ನಾನೂ ಖುಷಿಯಾಗಿರುವೆ, ಎಲ್ಲರನ್ನೂ ಖುಷಿಯಾಗಿಡುವೆ.

‘ಸಾಯುವವರೆಗೂ ಬದುಕಿರೋಣ, ಬದುಕಿರುವವರೆಗೂ ನಗು ನಗುತಿರೋಣ’ ಎಂದಿದ್ದಾರೆ ಷೇಕ್ಸ್‌ಪಿಯರ್ ಹಾಗೂ ಬೀchi. ಹಾಗೆಂದೇ ನಾನಿದ್ದಲ್ಲಿಯೇ, ನನಗಿರುವುದರಲ್ಲಿಯೇ ನೆಮ್ಮದಿ ಕಂಡುಕೊಳ್ಳುವ ಜಾಯಮಾನ ಮುಂದುವರಿಸಲು ನನ್ನ ತೀರ್ಮಾನ.

ಮುಂಜಾನೆ ನಿದ್ದೆಯಿಂದ ಎಚ್ಚರವಾದೊಡನೆ, ಇಂದೇ ನನ್ನ ಜೀವನದ ಕೊನೆಯ ದಿನವಾಗಿರಬಹುದು ಅಂದುಕೊಳ್ಳುವೆ. ‘ಜಗತ್ತು ಒಂದು ಸಂತೆ ಇದ್ದಂತೆ, ಕೆಲವರಿಗೆ ವ್ಯಾಪಾರ ಗಿಟ್ಟುತ್ತದೆ, ಕೆಲವರಿಗೆ ಗಿಟ್ಟುವುದಿಲ್ಲ’ ಎಂಬ ಟಿ.ಪಿ. ಕೈಲಾಸಂ ನುಡಿಗಳು ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಲು ಪ್ರೇರಣೆ ನೀಡುತ್ತದೆ.

ಸಾಹಿತ್ಯ ಬದುಕನ್ನು ಕಟ್ಟಿಕೊಡುತ್ತದೆ ಎಂಬ ಅಚಲ ವಿಶ್ವಾಸ ನನ್ನದು. ಹಾಗೆಂದೇ ಈ ನೂತನ ವರ್ಷದಲ್ಲಿ ಕನಿಷ್ಠ ಹತ್ತು ಶ್ರೇಷ್ಠ ಕೃತಿಗಳನ್ನು ಓದುವ ಬಯಕೆ. ಆ ಕೃತಿಗಳಲ್ಲಿನ ಆದರ್ಶಗಳಲ್ಲಿ ಶೇಕಡ 25ರಷ್ಟನ್ನಾದರೂ ನಿಜ ಜೀವನದಲ್ಲಿ ರೂಢಿಸಿಕೊಳ್ಳುವ ಆಸೆ.

ವ್ಯಕ್ತಿತ್ವ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಸಮಾಜದ ಕೊಡುಗೆಯನ್ನು ಕಿಂಚಿತ್ತಾದರೂ ಮರಳಿಸುವ ಅಭಿಲಾಷೆ. ಅದಕ್ಕೆಂದೇ ನಾನು ಹಿಡಿತ ಸಾಧಿಸಿರುವ ‘ಗಣಿತ’ವನ್ನು ಮಕ್ಕಳಿಗೆ ಬೋಧಿಸುವುದೆಂದರೆ ಪರಮಾನಂದ! ಸೂತ್ರಗಳ ಸರಿಯಾದ ಅಳವಡಿಕೆಯೊಂದಿಗೆ, ಸರಳವಾಗಿ ಸಮಸ್ಯೆ ಬಿಡಿಸುವ ಕಲೆಯ ಮನವರಿಕೆಯನ್ನು ವಿದ್ಯಾರ್ಥಿಗಳಿಗೆ ಮಾಡಲು ಸಮಯ ಮೀಸಲು.

ಸಮಯ ಸಾಲದು ಎಂಬ ವ್ಯರ್ಥ ಆಲಾಪನೆಯಿಲ್ಲದೆ, ಸಮಯಕ್ಕನುಗುಣವಾಗಿ ಕರ್ತವ್ಯ ನಿರ್ವಹಣೆಗೆ ಒತ್ತು ನೀಡುವೆ. ದಿನದಂತ್ಯದಲ್ಲಿ ನನ್ನ ನಿರ್ಧಾರಗಳಲ್ಲಿ ಎಷ್ಟನ್ನು ಪಾಲಿಸಿರುವೆ ಎಂದು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳುವೆ. ಇದೇ ನನ್ನ ಈ ವರ್ಷದ ಗುರಿಗಳು.

–ದಿನೇಶ್ ಕೆ. ಕಾರ್ಯಪ್ಪ ಮಡಿಕೇರಿ

***

ಹೊಸ ಪರಿಚಯ ಮಾಡ್ಕೋಬೇಕ್ರೀ

ದಿನಗಳು ಉರುಳಿ ಕಾಲದ ಗರ್ಭ ಸೇರ‍್ಲಿಕ್ಕ ತಡಾನೇ ಇಲ್ಲ ಅಂತೀನಿ. ಹೀಂಗ ಕಣ್ಣ ಮುಚ್ಚಿ ಕಣ್ಣ ತೆಗಿದ್ರಾಗ 2018 ಬಂದೈತ್ರಿ. ಈ ಕಾಲss ಅನ್ನೂ ದೇವ್ರ ಏಗ್ದಮ್ ಫಾಸ್ಟ್‌ ಅದಾನ್ ಬಿಡ್ರಿ. ಅವ್ನ ಜೋಡಿ ನಾವೂ ಓಡssಬೇಕಲ್ರಿ. ದರ ವರ್ಷದ್ಹಂಗ ಈ ವರ್ಷನೂ ಒಂದು ರೆಸೊಲ್ಯೂಷನ್ ಮಾಡೇನ್ರಿ.

ಒಂದ್ ಫರಕ್ ಏನ್ ಅಂದ್ರ ಈ ಸಲ ಒಂದ ತಿಂಗಳ ಅಗಾವ್ ಯೋಚ್ನಿ ಛಾಲೂ ಆಗೈತಿ. ಅಂದ್ಹಂಗ ಪ್ರತಿ ಸಲದ್ಹಂಗ ಈ ಸಲ ಹಾಕ್ಕೊಂಡಿದ್ದ ಯೋಜನಾ ಮರಿದಿನಾನೇ ಮುರದಬೀಳಬಾರ‍್ದ ನೋಡ್ರಿ. ಈ ಇಪ್ಪತ್ತು ಹದಿನೆಂಟರಾಗ ನಾನು ಒಟ್ಟss ಸಿಟ್ಟಿಗೇರಬಾರ‍್ದು ಅನ್ಕೊಂಡಿನ್ರಿ. ಹಂಗಂತ ನಾ ಏನ್ ಭಾಳ ಸಿಟ್ಟ ಮಾಡ್ಕೊಳುದಿಲ್ಲ. ಈ ವರ್ಷ ಪೂರಾ ಅಗ್ದಿ ಚೆಂದ ನಕ್ಕೊಂತ ತಾಳ್ಮೆಯಿಂದ ಇರೂದು ಅಂತ ತೀರ್ಮಾನ ಆಗೈತಿ ನೋಡ್ರಿ. ಇನ್ನss ಎರಡನೆಯದ್ದು ಎನಪಾ ಅಂತ ಅಂದ್ರ; ದರss ವರ್ಷದ್ಹಂಗ ಈ ವರ್ಷನೂ ಹೊಸಾ ಡೈರಿ ಬರಿಯೂದು, ಅದು ಒಂದ ದಿನಾನೂ ಬಿಡದ್ಹಂಗ. ಈ ಡೈರಿ ಬರಿಯೂದು ಈ ವರ್ಷದಾಗ ಒಂದ ದಿನಾನೂ ತಪ್ಪಬಾರ‍್ದು ಅಂತ ತೀರ್ಮಾನ ಮಾಡೇನ್ರಿ; ನೋಡಬೇಕ ಏನ್ ಆಕ್ಕೈತಿ ಅಂತ.

ಇನ್ನss ಈ ಇಪ್ಪತ್ತು ಹಂದಿನೆಂಟ್ರಾಗ ಕನಿಷ್ಠ ಅಂದ್ರೂ ಒಂದ್ ಹತ್ತರೇss ಹೊಸ ‍ಊರ ನೋಡಬೇಕ್ ಅಂತ ಯೋಚ್ನಿ ಮಾಡೇನಿ. ಆದ್ರ ಇದಕ್ಕ ನಮ್ಮ ಅಪ್ಪಾಜಿ ಮನಸ್ಸ ಮಾಡಬೇಕಲ್ರಿ. ಅವ್ರು ಕರ‍್ಕೊಂಡಹೋದ್ರ ಅಷ್ಟss ನೋಡುದು. ಇಲ್ಲಾ ಅಂದ್ರ ಈ ರೆಸೊಲ್ಯೂಶನ್ ಮುಂದಿನ್ ವರ್ಷಕ್ಕ ಸಾಗ ಹಾಕ್ಕೂದು. ಇನ್ನ ಈ ವರ್ಷದ ಜೂನ್ದಾಗ ನನ್ನ ಕೈಲಾದಷ್ಟು ಗಿಡಗೋಳ ಹಚ್ಚಬೇಕ್ರಿ. ಆss ಗಿಡ ಇಲ್ದಿದ್ರ ಏನ್ ಐತ್ರಿ? ಎಲ್ಲಾ ಖಾಲಿ.

ಈ ಹೊಸ ವರ್ಷದಾಗ್ ಹೊಸದಾಗಿ ಏನಿಲ್ಲಾ ಅಂದ್ರೂ ಒಂದ್ ಇಪ್ಪತ್ತ ಮಂದಿದರೇ ಹೊಸ ಪರಿಚಯ ಮಾಡ್ಕೊಬೇಕ್ರಿ. ಯಾಕಂದ್ರ ನಾವೂ ಮನಷ್ಯಾರು, ಸಂಘ ಜೀವಿಗಳು ಅನ್ನೂದು ಮರಿಯೂ ಹಂಗಿಲ್ಲ ನೋಡ್ರಿ. ಅದ್ಕ 2018ರಾಗ ತಿಂಗಳಿಗಿ ಒಂದ್ರಂಗ ಒಟ್ಟ ಹನ್ನೆರಡು ಪುಸ್ತಕ ಓದೇ ಬಿಡುದು; ಇದು ಮಾತ್ರ ಮರಿಯೂ ಹಂಗಿಲ್ಲ ಬಿಡ್ರಿ. ಇನ್ನ ಒಂದಿಸ್ ಹೊಸಾವ್ ಅಡಿಗಿ ಕಲಿಯೂದು.

ಕಡಿದಾಗಿ ಒಂದ್ ಭಾಳ ಮುಖ್ಯವಾದ ಕೆಲ್ಸಾ ಆಗಬೇಕ್ರಿ ಈ ವರ್ಷ: ಅದೇನ್ ಅಂಥಾ ಮುಖ್ಯ ಅಂತೀರೇನು? ನೋಡ್ರಿ ಅಷ್ಟಕ್ಕ ಇಷ್ಟಕ್ಕೇಲ್ಲಾ ಮನಸಿಗಿ ಹಚ್ಕೊಂಡು ಅಳಕೊಂತ್ತ ಕುಂಡ್ರು ನಮ್ಮ ಅಮ್ಮಾಗ ಗಟ್ಟಿ ಮಾಡುದೈತ್ರಿ. ಅವರು ಈ ವರ್ಷದಾಗ ಅಗ್ದಿ ಆರಾಮ್ ನಕ್ಕೊಂತ ಇರ‍್ಲಿಕ್ಕ ನನ್ನಿಂದೇನನ್ ಸಾಧ್ಯಾನೋ ಅದನ್ನೆಲ್ಲಾ ಮಾಡ್ಬೇಕು ಅಂತ ಖಡಕ್ ತೀರ್ಮಾನ ಮಾಡಿ ಆಗ್ಬಿಡ್ತ್ರಿ ಈಗ.

ನಾ ಮನಸ್ಸ ಮಾಡಿದ್ರ ಗ್ಯಾರಂಟಿ ಆಗ್ತೈತಿ ಅನ್ನೂದ್ರಾಗ ಎರಡ ಮಾತಿಲ್ಲ ಬಿಡ್ರಿ...

- ಸುಕೃತ ಜಗದೀಶ ಪಟ್ಟಣಶೆಟ್ಟಿ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.