ADVERTISEMENT

ಬಾಲ್ಯಕ್ಕೊಮ್ಮೆ ಹಣಕಿ ಹಾಕಿದಾಗ...

ನಳಿನಿ ಟಿ.ಭೀಮಪ್ಪ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಬಾಲ್ಯಕ್ಕೊಮ್ಮೆ ಹಣಕಿ ಹಾಕಿದಾಗ...
ಬಾಲ್ಯಕ್ಕೊಮ್ಮೆ ಹಣಕಿ ಹಾಕಿದಾಗ...   

ಮೊನ್ನೆ ಯಜಮಾನರು ಬ್ಲೇಡಿನಲ್ಲಿ ಪೆನ್ಸಿಲ್ ಕೆತ್ತುತ್ತಿದ್ದರು. ಮಗಳಿಗೆ ಆಶ್ಚರ್ಯವೋ ಆಶ್ಚರ್ಯ!‘ಪಪ್ಪಾ, ಶಾರ್ಪ್‌ನರ್ ಇರುವಾಗ ಬ್ಲೇಡಿನಿಂದ ಯಾಕೆ ಕೆತ್ತುತ್ತಿದ್ದೀಯಾ, ಕೈ ಕೊಯ್ಯುವುದಿಲ್ಲವಾ ಎಂದು ಪ್ರಶ್ನಿಸಿದಳು. ‘ಇಲ್ಲ ಪುಟ್ಟೀ, ನನಗೆ ಚೂಪಾದ ತುದಿ ಇರುವುದು ಬೇಡ, ಮೊಂಡ ತುದಿ ಬೇಕಿತ್ತು, ನಮಗೆಲ್ಲಾ ಚಿಕ್ಕವರಿದ್ದಾಗ ಹೀಗೆ ಕೆತ್ತಿ ರೂಢಿ ಇದೆ’ ಎಂದರು ಯಜಮಾನರು. ಹೌದಲ್ಲ! ಇಂತಹ ಚಿಕ್ಕ ಚಿಕ್ಕ ಖುಷಿ ಕೊಟ್ಟ ಕೆಲಸಗಳು, ವಸ್ತುಗಳು, ಅನುಭವಗಳು ಬಾಲ್ಯದಲ್ಲಿ ಕಟ್ಟಿಕೊಟ್ಟ ಸಂತೋಷದ ಕ್ಷಣಗಳು ಅದೆಷ್ಟು ಅಮೂಲ್ಯವಾಗಿದ್ದವು ಎನಿಸಿ ಬಾಲ್ಯದ ನೆನಪುಗಳು ಅದರೊಂದಿಗೆ ಗರಿಗೆದರತೊಡಗಿದವು.

ಚಿಕ್ಕವರಿದ್ದಾಗ ನಾವೆಲ್ಲಾ ಈ ಶಾರ್ಪ್‌ನರ್ ಇಲ್ಲದ ಕಾಲದಲ್ಲಿ ಹೀಗೇ ಪೆನ್ಸಿಲ್‍ಗಳನ್ನು ಬ್ಲೇಡಿನಲ್ಲಿ ಕೆತ್ತುತ್ತಿದ್ದೆವು. ಅದೂ ಎಂತಹ ಬ್ಲೇಡು ಎನ್ನುತ್ತೀರಿ? ಅಜ್ಜ, ಅಪ್ಪ, ಚಿಕ್ಕಪ್ಪ ಎಲ್ಲರೂ ಮೊಂಡಾಗುವ ತನಕ ಶೇವ್ ಮಾಡಲು ಉಪಯೋಗಿಸಿದ ಮೇಲೆ ಆ ಬ್ಲೇಡು ಮನೆಯಲ್ಲಿ ಉಗುರು ಕತ್ತರಿಸಲು, ಪೆನ್ಸಿಲ್ ಕೆತ್ತಲು, ಮನೆಯೊಳಗಿನ ರೆಡ್ ಆಕ್ಸೈಡ್ ನೆಲದ ಮೇಲೆ ಹಾಕಿದ ರಂಗೋಲಿ ಕೆರೆಯಲು, ಉಗುರು ಬಣ್ಣ ಹೆರೆಯಲು (ಆಗಿನ ಕಾಲದಲ್ಲಿ ನೇಲ್ ಪೇಂಟ್ ರಿಮೂವರ್ ಇರಲಿಲ್ಲ) ಉಪಯೋಗವಾಗುತ್ತಿತ್ತು. ಅದನ್ನು ಎರಡು ತುಂಡು, ನಾಲ್ಕು ತುಂಡು ಮಾಡಿ ಕೊಡುತ್ತಿದ್ದರು. ಅದನ್ನು ಬಂಗಾರ ಕಾಪಾಡುವ ಹಾಗೆ ಕಾಪಾಡುತ್ತಿದ್ದೆವು. ಪೆನ್ಸಿಲ್ ಕೆತ್ತುವಾಗ ಎಷ್ಟೋ ಸಲ ಕೈಬೆರಳೆಲ್ಲಾ ಕೊರೆದು ಗಾಯಗಳಾಗುತ್ತಿತ್ತು. ಶಾಲೆಯ ಸೀಸದ ಕಡ್ಡಿ ಜೊತೆ ಮೊಂಡು ಬ್ಲೇಡು ಕಾಯಂ ಜೊತೆಗಿರುತ್ತಿತ್ತು. ನಂತರ ಮೆಂಡರ್‌ಗಳು ಬಂದರೂ ಅದನ್ನು ಕೊಳ್ಳುವಷ್ಟು ಸ್ಥಿತಿವಂತರಿರಲಿಲ್ಲ, ಹಾಗಾಗಿ ಬ್ಲೇಡೇ ಗತಿಯಾಗಿತ್ತು. ಪೆನ್ಸಿಲ್ ಅಂತೂ ಅರ್ಧ ಇಂಚು ಆಗಿ ಇನ್ನೇನು ಹಿಡಿಯಲು ಬಾರದಷ್ಟು ಚಿಕ್ಕದಾದಾಗ ಮಾತ್ರ ಅದಕ್ಕೆ ಮುಕ್ತಿ ಸಿಗುತ್ತಿತ್ತು.

ಇನ್ನು ಶಾಲೆಯಲ್ಲಿ ಗುರುಗಳು ಪಾಠ ಮಾಡುತ್ತಿದ್ದಾಗ ಚಾಕ್‍ಪೀಸ್ ಚಿಕ್ಕದಾಗುತ್ತಿದ್ದ ಹಾಗೆ ನೆಲಕ್ಕೆ ಒಗೆಯುತ್ತಿದ್ದರು. ಅದರ ಮೇಲೇ ಕಣ್ಣಿಟ್ಟು, ಅವರು ಹೊರ ಹೋಗುತ್ತಲೇ ನನಗೆ, ತನಗೆ ಎಂದು ಮುಗಿಬೀಳುತ್ತಿದ್ದೆವು. ಸಿಕ್ಕವರಿಗೆ ಖುಷಿಯೋ ಖುಷಿ. ಗಲಾಟೆ ಮಾಡುವಾಗಲೂ ಗುರುಗಳು ಚಾಕ್‍ಪೀಸ್ ಗುರಿಯಿಟ್ಟು ಒಗೆದರೆ ಗಬಕ್ಕನೆ ಅದನ್ನು ತೆಗೆದುಕೊಂಡು ಒಳಗಿಟ್ಟುಕೊಳ್ಳುತ್ತಿದ್ದೆವು. ಬೈಯ್ದ ಅವಮಾನಕ್ಕಿಂತ ಚಾಕ್‍ಪೀಸ್ ಸಿಕ್ಕಿದ್ದು ಬಹುಮಾನವಾಗಿ ಕಾಣುತ್ತಿತ್ತು. ಅದನ್ನು ಇಂಕ್‍ಪೆನ್ನಿನ ಇಂಕ್ ಹೀರಿಸಲು ಉಪಯೋಗಿಸುತ್ತಿದ್ದೆವು. ಸ್ಲೇಟಿನಲ್ಲಿ ಬಳಪದ ಜೊತೆ ಚಾಕ್‍ಪೀಸಿನಲ್ಲಿ ದಪ್ಪನಾಗಿ ಬರೆಯುವುದು ಖುಷಿ ಕೊಡುತ್ತಿತ್ತು. ಉಗುಳಿನಿಂದ ಸ್ಲೇಟನ್ನು ಒರೆಸಿ, ಅದನ್ನು ಲಂಗದಿಂದ ಚೆನ್ನಾಗಿ ತಿಕ್ಕಿ ಲಕಲಕ ಹೊಳೆಯುವಂತೆ ಮಾಡುತ್ತಿದ್ದೆವು. ಒಮ್ಮೊಮ್ಮೆ ಗುರುಗಳ ಗಮನಕ್ಕೆ ಬಿದ್ದು, ಸರಸ್ವತಿಗೆ ಉಗುಳು ಹಚ್ಚುವಿರಾ ಎಂದು ಎರಡೂ ಕೈಗೆ ಕೋಲಿನಿಂದ ಏಟು ನೀಡುತ್ತಿದ್ದರು. ತಪ್ಪಾಗಿ ಬರೆದರೆ ಬಸ್ಕಿ ಹೊಡೆಯಬೇಕಾಗಿತ್ತು, ಇಲ್ಲವಾದರೆ ಸರಿ ಬರೆದವರು ತಪ್ಪಾಗಿ ಬರೆದವರ ಮೂಗು ಹಿಡಿದು ಎರಡೂ ಕೆನ್ನೆಗೆ ಹೊಡೆಯುವಂತೆ ಗುರುಗಳ ಅಪ್ಪಣೆಯಾಗುತ್ತಿತ್ತು. ಕೈಕಟ್ಟಿ ಬಾಯಿ ಮೇಲೆ ಬೆರಳಿಟ್ಟು ಕುಳಿತವರಿಗೆ ಹೊಸ ಚಾಕ್‍ಪೀಸ್ ಬಹುಮಾನವಾಗಿ ಕೊಡುತ್ತಿದ್ದರು. ಅದನ್ನು ಅಂದು ಶಾಲೆಯಲ್ಲಿ, ಮನೆಯಲ್ಲಿ ಎಲ್ಲರಿಗೂ ತೋರಿಸಿದ್ದೇ ತೋರಿಸಿದ್ದು.

ADVERTISEMENT

ಐದನೆಯ ತರಗತಿಗೆ ಇಂಕುಪೆನ್ನು ನಮ್ಮ ಪಾಟೀಚೀಲದಲ್ಲಿ ಪ್ರವೇಶ ಪಡೆಯುತ್ತಿತ್ತು. ಅದೊಂದು ವಿಶೇಷ ವಸ್ತು ನಮ್ಮ ಪಾಲಿಗೆ. ‘ಓಹೋ, ಈಗ ಇಂಕು ಪೆನ್ನಿನಲ್ಲಿ ಬರೆಯುವಷ್ಟು ದೊಡ್ಡವಳಾಗಿದ್ದಾಳೆ’ ಎಂದು ಯಾರಾದರೂ ಹೇಳಿದರೆ ಅದೊಂದು ಹೆಮ್ಮೆಯ ಹೊಗಳಿಕೆ ನಮಗೆ. ಅದರ ಜೊತೆ ಒಂದೆರಡು ನಿಬ್ಬುಗಳು, ಒಂದು ಮಸಿಕುಡಿಕೆ ತಂದಾಗ ಅದನ್ನೆಷ್ಟು ಜೋಪಾನದಿಂದ ಕಾಯುತ್ತಿದ್ದೆವು. ಅಂದಿನ ಬಾಲ್ ಪೆನ್ನುಗಳೂ ಅಷ್ಟೆ. ಒಮ್ಮೊಮ್ಮೆ ರೀಫಿಲ್‍ನ ಇಂಕು ಅರ್ಧಂಬಂರ್ಧಕ್ಕೆ ತುಂಡು ತುಂಡಾಗಿ ಜೀಬ್ರಾ ಪಟ್ಟಿಯ ತರಹ ಆಗಿ ಬರೆಯುವಾಗ ಅರ್ಧಂಬರ್ಧ ಅಕ್ಷರ ಮೂಡುತ್ತಿದ್ದವು. ಆಗ ಹಲ್ಲಿನಿಂದ ನಿಬ್ಬನ್ನು ತೆಗೆದು ಹಿಂದಿನಿಂದ ಇಂಕನ್ನು ಊದಿ ಬರೆಯುವಂತೆ ಮಾಡುತ್ತಿದ್ದೆವು. ಬಾಲ್‍ಪೆನ್ನಿನ ಇಂಕು ತುಂಬಿಕೊಡುವ ಡಬ್ಬ ಅಂಗಡಿಗಳಿಗೆ ಹೋಗಿ ತುಂಬಿಸಿಕೊಂಡು ಬರುತ್ತಿದ್ದೆವು.

ಗಜ್ಜುಗದ ಬೀಜವನ್ನು ಯಾವಾಗಲೂ ಪಾಟೀಚೀಲದಲ್ಲಿ ಇಟ್ಟುಕೊಂಡಿರುತ್ತಿದ್ದೆವು. ಗೆಳತಿಯರ ನಡುವೆ ಜಗಳವಾದಾಗ ಅದನ್ನು ಚೆನ್ನಾಗಿ ನೆಲಕ್ಕೆ ಉಜ್ಜಿ ಚುಯ್ ಅಂತಾ ಕೈಗೋ, ಕಾಲಿಗೋ ಇಡುತ್ತಿದ್ದೆವು. ಬಿಸಿತಾಗಿ ಚರ್ಮ ಕೆಂಪಾಗಿ ‘ಅಮ್ಮಾ’ ಎಂದು ಚೀರುತ್ತಾ, ಉಜ್ಜಿಕೊಳ್ಳುತ್ತಾ ‘ತಡೀ, ಮೇಷ್ಟ್ರಿಗೆ ಹೇಳುತ್ತೇನೆ’ ಎಂದು ಅಳುತ್ತಾ ಗುರುಗಳಿಗೆ ದೂರು ನೀಡಿದಾಗ ನಾಲ್ಕು ಏಟು ಕಾಯಂ ಬೀಳುತ್ತಿತ್ತು.

ಗೆಳತಿಯರೆಲ್ಲಾ ಸೇರಿ ಹುಣಿಸೆಬೀಜವನ್ನು ಉಜ್ಜಿ ಉಜ್ಜಿ ಒಂದು ಕಡೆ ಬೆಳ್ಳಗೆ ಮಾಡಿ ಕವಡೆ ತರಹ ಉಪಯೋಗಿಸಿ ಚೌಕಾಭಾರ ಆಡುತ್ತಿದ್ದೆವು. ತೆಂಗಿನ ಗರಿಯಲ್ಲಿ ಪೀಪಿ, ವಾಚ್ ಮಾಡುತ್ತಿದ್ದೆವು. ಗಾಳಿಪಟ ಮಾಡುವುದಕ್ಕೆ ಮನೆಯ ಕಡ್ಡಿಪೊರಕೆ ಯನ್ನೇ ಖಾಲಿ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಪೇಪರ್ ದೋಣಿಯನ್ನು ತೇಲಿ ಬಿಡುವುದು, ಆಲೀಕಲ್ಲನ್ನು ಆರಿಸಿ ಲೋಟದಲ್ಲಿ ಹಾಕಿ, ಕರಗಿದ ಮೇಲೆ ಆ ತಣ್ಣೀರನ್ನು ನಡುಗುತ್ತಾ ಕುಡಿಯುತ್ತಿದ್ದೆವು. ದೊಡ್ಡ ಆಲೀಕಲ್ಲುಗಳ ಮೇಲೆ ಪಾದ ಊರಿ ಅದು ತಣ್ಣಗೆ ಚುಚ್ಚಿ, ನೋವಾಗುವ ತನಕ ನಿಲ್ಲುತ್ತಿದ್ದೆವು. ಕರೆಂಟು ಹೋದ ಸಮಯದಲ್ಲಿ ಹೊರಗೆ ಜಗುಲಿಯಲ್ಲಿ ಸೀಮೆಎಣ್ಣೆಯ ಬುಡ್ಡಿ ದೀಪ ಹಚ್ಚಿ ಸುತ್ತಲೂ ಕುಳಿತು ಓದುತ್ತಿದ್ದೆವು.

ಈಗಿನ ಮಕ್ಕಳಿಗೆ ಇದ್ಯಾವುದರ ಜಂಜಾಟವೂ ಇಲ್ಲ. ನಲ್ಲಿ ತಿರುಗಿಸಿದರೆ ನೀರು ಬರುತ್ತದೆ, ಬಟನ್ ಒತ್ತಿದರೆ ಬಲ್ಬ್ ಹತ್ತುತ್ತದೆ. ಕರೆಂಟು ಇಲ್ಲದಿದ್ದರೂ ಯುಪಿಎಸ್ ಕೆಲಸ ಮಾಡುತ್ತಿರುತ್ತದೆ. ಪೆನ್ನು, ಪೆನ್ಸಿಲ್, ಇಂಕ್‍ಪೆನ್ನು ಎಲ್ಲಾ ಯೂಸ್ ಅಂಡ್ ಥ್ರೋ, ಕೇಳುವುದಕ್ಕಿಂತ ಮುಂಚೆ ಸಿಗುವ ಅವರು ಬಯಸಿದ ವಸ್ತುಗಳು, ಕೇಳಿದ್ದಕ್ಕಿಂತ ಹೆಚ್ಚು ಪಾಕೀಟುಮನಿ, ಹೊಟ್ಟೆಗೆ ತುಂಬಿ ತುಳುಕುವಷ್ಟು ತಿಂಡಿ ತೀರ್ಥಗಳು, ಆಟಕ್ಕೆ ಸಾವಿರಾರು ರೂಪಾಯಿಗಳ ಬಾರ್ಬಿ, ಜೆಸಿಬಿಯಂತಹ ಗೊಂಬೆಗಳು... ಎಲ್ಲ ರೀತಿಯ ಜೀವನದ ಅನುಕೂಲತೆಗಳು ಸಿಗುವುದರಿಂದ ದುಡ್ಡಿನ ಬೆಲೆ, ಸಮಯದ ಅರಿವು, ಸಂಪನ್ಮೂಲಗಳ ಪ್ರಾಮುಖ್ಯ ಗೊತ್ತಾಗದೇ ಹೋಗುತ್ತಿರುವುದು ವಿಷಾದನೀಯ. ಕಷ್ಟ, ಕೊರತೆಗಳ ಅರಿವು ಗೊತ್ತಾಗದಿರುವುದರಿಂದ ಜೀವನದಲ್ಲಿ ಎದುರಾಗುವ ಸಣ್ಣ ಸಣ್ಣ ಕಷ್ಟಗಳಿಗೂ ಆತ್ಮಹತ್ಯೆಯಂತಹ ದೊಡ್ಡ ಆಲೋಚನೆ ಮಾಡುವುದು ಕಂಡುಬರುತ್ತಿದೆ.

ಇಂದಿನ ಮಕ್ಕಳು ಏನೇನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ತಮ್ಮ ಬಾಲ್ಯದಲ್ಲಿ ಎಂಬ ಯೋಚನೆ ಕಾಡುತ್ತದೆ. ಎಲ್ಲ ಆಟಗಳೂ ಅಂಗೈ ಹಾಗೂ ಹೆಬ್ಬೆರಳುಗಳಿಗೆ ಮಾತ್ರ ಕೆಲಸ ಕೊಟ್ಟು, ಉಳಿದ ದೇಹವನ್ನು ಚಟುವಟಿಕೆಗಳಿಲ್ಲದೆ ಜಡ್ಡುಗೊಳಿಸುತ್ತಿರುವ ಮೊಬೈಲ್‍ನಲ್ಲೇ! ಮೊಬೈಲಿನ ಗೇಮುಗಳನ್ನು ಬಿಟ್ಟು ಮಕ್ಕಳನ್ನು ಆಟದ ಬಯಲಿಗೆ ದೂಡುವುದು ದೊಡ್ಡ ತಲೆನೋವಾಗಿದೆ.

ಮತ್ತೊಂದು ಮಗ್ಗಲಿನಿಂದ ಯೋಚಿಸಿದರೆ, ಇಂದಿನ ಮಕ್ಕಳಿಗೆ ಆಡಲು ಸಮಯವೇ ಇಲ್ಲ. ಬೇಸಿಗೆ ರಜೆಯಲ್ಲಿಯೂ ಪೋಷಕರು ಶಿಬಿರಗಳಗೆ ಮಕ್ಕಳನ್ನು ಸೇರಿಸಿಬಿಡುತ್ತಾರೆ. ನಂತರ ಶಾಲೆ, ಬಿಟ್ಟರೆ ಟ್ಯೂಷನ್, ಬಿಟ್ಟರೆ ಕರಾಟೆ, ಸಂಗೀತ ಮುಂತಾದ ಕ್ಲಾಸುಗಳು ಕಾಯುತ್ತಿರುತ್ತವೆ. ಇದೆಲ್ಲದರ ನಡುವೆ ಸಿಕ್ಕ ಚೂರುಪಾರು ಸಮಯದಲ್ಲಿ ಶಾಲೆಯ ಹೋಮ್‍ವರ್ಕ್‌, ಪ್ರಾಜೆಕ್ಟ್ ಅಂತಾ ಹತ್ತು ಹಲವಾರು ಕೆಲಸಗಳ ನಡುವೆ ತಮ್ಮಿಚ್ಛೆಯಂತೆ ಆಡುವ ವ್ಯವಧಾನವಾದರೂ ಅವಕ್ಕೆ ಎಲ್ಲಿರುತ್ತದೆ ಹೇಳಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.