ADVERTISEMENT

ಮಹಿಳೆಗೆ ಪಂಚಾಯಿತಿಯೇ ಗತಿ!

ಪ್ರಜಾವಾಣಿ ವಿಶೇಷ
Published 9 ಫೆಬ್ರುವರಿ 2014, 19:30 IST
Last Updated 9 ಫೆಬ್ರುವರಿ 2014, 19:30 IST

1987ರಿಂದಲೂ ರಾಜಕೀಯದಲ್ಲಿರುವ ಸುನಿತಾ ವೀರಪ್ಪ ಗೌಡ ಅವರೂ ಕೂಡ ಶಾಸಕಿಯಾಗಿ ಕಾರ್ಯ ನಿರ್ವಹಿಸಿದ ನಂತರ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ ಗೆದ್ದವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. 1987ರಿಂದ 92 ಹಾಗೂ 1995ರಿಂದ 2000ದವರೆಗೆ ಅವರು ಮೈಸೂರು ಜಿಲ್ಲಾ ಪಂಚಾಯಿತಿ  ಸದಸ್ಯೆಯಾಗಿದ್ದರು. 1998ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದರು. 2004ರಲ್ಲಿ ಬನ್ನೂರು ಕ್ಷೇತ್ರದ ಶಾಸಕಿಯಾದ ಅವರಿಗೆ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.  ವಿಧಾನಸಭೆ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಬನ್ನೂರು ಕ್ಷೇತ್ರ ತಿ.ನರಸೀಪುರ ಕ್ಷೇತ್ರದಲ್ಲಿ ವಿಲೀನವಾಯಿತು. ಅಲ್ಲದೆ ತಿ.ನರಸೀಪುರ ಕ್ಷೇತ್ರ ಮೀಸಲು ಕ್ಷೇತ್ರವಾಯಿತು. ಅದರಿಂದಾಗಿ ವಿಧಾನಸಭೆಗೆ ಸ್ಪರ್ಧಿಸಲು ಸುನಿತಾ ವೀರಪ್ಪ ಗೌಡ ಅವರಿಗೆ ಕ್ಷೇತ್ರವೇ ಇಲ್ಲದಂತಾಯಿತು. ಅದರಿಂದಾಗಿ ಅವರು ಜಿಲ್ಲಾ ಪಂಚಾಯಿತಿಗೆ ಸೋಮನಾಥಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದರು. ಅಲ್ಲದೆ ಮತ್ತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆದರು.

ಶಾಸಕಿಯಾಗಿದ್ದವರು ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗುವುದು ರಾಜಕೀಯವಾಗಿ ಒಂದು ಹಂತ ಕೆಳಗೆ ಇಳಿದ ಹಾಗೆ ಅಲ್ಲವೆ? ಎಂದು ಪ್ರಶ್ನಿಸಿದರೆ ‘ಮಹಿಳೆಯರಿಗೆ ಇದು ಅನಿವಾರ್ಯ. ಹಲವಾರು ವರ್ಷಗಳಿಂದ ರಾಜಕೀಯದಲ್ಲಿದ್ದ ನನಗೆ ಮನೆಯಲ್ಲಿ ಕುಳಿತುಕೊಳ್ಳಲು ಮನಸ್ಸು ಇರಲಿಲ್ಲ. ಕ್ಷೇತ್ರದ ಜನರು ಬಂದು ವಿನಂತಿಸಿಕೊಂಡಿದ್ದರಿಂದ ಜಿಪಂಗೆ ಸ್ಪರ್ಧೆ ಮಾಡಿದೆ. ಅಲ್ಲದೆ ಕಳೆದ ಬಾರಿ ಲೋಕಸಭಾ ಚುನಾವಣೆಗೆ ಜನತಾ ದಳದ ಟಿಕೆಟ್‌ ಸಿಗಲಿಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಟಿಕೆಟ್‌ ಕೇಳಿದೆ. ಅನಿವಾರ್ಯ ಕಾರಣದಿಂದ ಟಿಕೆಟ್‌ ನೀಡಲಾಗಲಿಲ್ಲ ಎಂದು ಪಕ್ಷದ ವರಿಷ್ಠರು ಹೇಳಿದರು. ರಾಜಕೀಯದಲ್ಲಿ ಮಹಿಳೆಗೆ ಇನ್ನೂ 2ನೇ ದರ್ಜೆ ಸ್ಥಾನವಿದೆ’ ಎಂದು ಅವರು ಉತ್ತರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.