ಧಾರವಾಡ: ಇಲ್ಲಿ ನಡೆದ 2016ನೇ ಸಾಲಿನ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್’ನ ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಕಾರವಾರ ವಲಯದ ಸ್ಪರ್ಧೆಯಲ್ಲಿ ಶುಕ್ರವಾರ ಹುಬ್ಬಳ್ಳಿಯ ಕೆಎಲ್‌ಇಎಸ್ ಎಂ.ಆರ್. ಸಾಖರೆ ಆಂಗ್ಲ ಮಾಧ್ಯಮ ಶಾಲೆ ಅಗ್ರಸ್ಥಾನ ಗಳಿಸಿತು.
ಪ್ರಥಮ ಸ್ಥಾನ ಪಡೆದ ಕೆಎಲ್‌ಇಎಸ್ ಎಂ.ಆರ್. ಸಾಖರೆ ಸಿಬಿಎಸ್‌ಇ ಶಾಲೆ ಪ್ರತಿನಿಧಿಸಿದ್ದ ಜೆ.ಬಿ. ಹೃತಿಕ್ ಮತ್ತು ಎ.ಎಸ್. ಆಕಾಶ್ ಚುರುಕಿನಿಂದ ಉತ್ತರಗಳನ್ನು ನೀಡಿ 55 ಅಂಕ ಪಡೆದು, ಬಹುಮಾನವನ್ನು ತಮ್ಮದಾಗಿಸಿಕೊಂಡರು.
ದ್ವಿತೀಯ ಸ್ಥಾನ ಪಡೆದ ಯಲ್ಲಾಪುರದ ಸ್ನೇಹ ಸಾಗರ್ ಶಾಲೆಯ ತಂಡವನ್ನು ಸತೀಶ್ ಎಂ.ಎಚ್. ಹಾಗೂ ಕಿರಣ್ ಪ್ರತಿನಿಧಿಸಿದ್ದರು. ಕಾರವಾರದ ಶ್ರೀಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಗಳಿಸಿದ್ದು, ಅಂಜನಾ ನಾಯರ್, ಅಕ್ಷಯ್ ಗೋಡೆ ಅವರು ತಂಡವನ್ನು ಪ್ರತಿನಿಧಿಸಿದ್ದರು.
ಬಹುಮಾನ ವಿತರಣೆ: ಪ್ರಥಮ ಸ್ಥಾನ ಪಡೆದ ಜೆ.ಬಿ. ಹೃತಿಕ್ ಮತ್ತು ಎ.ಎಸ್. ಆಕಾಶ್ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಸಿ.ಎಸ್.ಹುನಶ್ಯಾಳ ಬಹುಮಾನ ವಿತರಿಸಿದರು. ಕ್ವಿಜ್ ಮಾಸ್ಟರ್ ವಿನಯ್ ಮುದಲಿಯಾರ್, ಆ್ಯಲನ್ ಕರಿಯರ್ ಇನ್‌ಸ್ಟಿಟ್ಯೂಟ್‌ನ ಗಣಿತ ಉಪನ್ಯಾಸಕ ಎನ್.ಆರ್. ಶ್ರೀನಾಥ್ ಇದ್ದರು.
ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿರುವ ಸೃಜನ ರಂಗಮಂದಿರದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾಗವಹಿಸಿದ್ದ 780 ವಿದ್ಯಾರ್ಥಿಗಳಿಗೆ ಕೇಳಲಾದ 20 ಪ್ರಶ್ನೆಗಳಲ್ಲಿ ಹೆಚ್ಚು ಸರಿ ಉತ್ತರ ನೀಡಿದ ಆರು ತಂಡಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು. ಬಿರುಸಿನ ಪೈಪೋಟಿ ನೀಡಿದ ಆರು ತಂಡಗಳ ಪೈಕಿ ಉಳಿದ ಮೂರು ತಂಡಗಳು ಇಂತಿವೆ.
ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ಪ್ರಭಂಜನ್ ಆದಿ ಮತ್ತು ಹರೀಶ್ ಸಾಗರ್ ತಂಡ. ಸೇಂಟ್ ಆ್ಯಂಟನಿ ಪಬ್ಲಿಕ್ ಶಾಲೆಯ ಮಯೂರ್ ಭಟ್, ಆದರ್ಶ ಭಟ್ ಅವರ ತಂಡ. ಎಂ.ವಿ. ಹೇರ್‌ವಾರ್‌ಕರ್ ಆಂಗ್ಲ ಶಾಲೆಯ ಯಶವಂತ್ ಕರೇಕರ್, ಪ್ರಣವ್ ಮಠದ್ ಅವರ ತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.