ADVERTISEMENT

ಬೆಂಗಳೂರು ವಲಯದ ಸ್ಪರ್ಧೆ: ಕೇಂಬ್ರಿಡ್ಜ್ ಶಾಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:51 IST
Last Updated 24 ಜನವರಿ 2018, 19:51 IST
ಬೆಂಗಳೂರು ವಲಯ ಮಟ್ಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಾರ್ ರೇಸ್‌ ಡ್ರೈವರ್ ಹರ್ಷಿತಾ ಗೌಡ, ನಟ ಬಾಲು ನಾಗೇಂದ್ರ ಬಹುಮಾನ ವಿತರಿಸಿದರು. ರೆಸಿಡೆನ್ಸಿ ಶಾಲೆಯ ಶ್ರೇಯಸ್ ಮತ್ತು ಪೂರ್ಣಚಂದ್ರ ತೇಜಸ್ವಿ, ಶ್ರೀಕುಮಾರನ್ ಶಾಲೆಯ ಅನನ್ಯಾ ಮತ್ತು ಅಚ್ಯುತ್, ಕೇಂಬ್ರಿಡ್ಜ್‌ ಪಬ್ಲಿಕ್‌ ಶಾಲೆಯ ಹರಿಕೃಷ್ಣ ಮತ್ತು ಅಭಿಜ್ಞ ವಿಜೇತರು –ಪ್ರಜಾವಾಣಿ ಚಿತ್ರ
ಬೆಂಗಳೂರು ವಲಯ ಮಟ್ಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಾರ್ ರೇಸ್‌ ಡ್ರೈವರ್ ಹರ್ಷಿತಾ ಗೌಡ, ನಟ ಬಾಲು ನಾಗೇಂದ್ರ ಬಹುಮಾನ ವಿತರಿಸಿದರು. ರೆಸಿಡೆನ್ಸಿ ಶಾಲೆಯ ಶ್ರೇಯಸ್ ಮತ್ತು ಪೂರ್ಣಚಂದ್ರ ತೇಜಸ್ವಿ, ಶ್ರೀಕುಮಾರನ್ ಶಾಲೆಯ ಅನನ್ಯಾ ಮತ್ತು ಅಚ್ಯುತ್, ಕೇಂಬ್ರಿಡ್ಜ್‌ ಪಬ್ಲಿಕ್‌ ಶಾಲೆಯ ಹರಿಕೃಷ್ಣ ಮತ್ತು ಅಭಿಜ್ಞ ವಿಜೇತರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಷಿಪ್‌ನ ಬೆಂಗಳೂರು ವಲಯದ ಸ್ಪರ್ಧೆಯಲ್ಲಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಹರಿಕೃಷ್ಣ ಮತ್ತು ಅಭಿಜ್ಞ ಪ್ರಥಮ ಸ್ಥಾನ ಪಡೆದರು.

ಮಲ್ಲಸಂದ್ರದ ಶ್ರೀಕುಮಾರನ್ ಚಿಲ್ಡ್ರನ್ಸ್ ಹೋಮ್ ಶಾಲೆಯ ಅನನ್ಯ ಮತ್ತು ಅಚ್ಯುತ ದ್ವಿತೀಯ ಸ್ಥಾನ ಹಾಗೂ ನಂದಿನಿ ಲೇಔಟ್ ಪ್ರೆಸಿಡೆನ್ಸಿ ಶಾಲೆಯ ಶ್ರೇಯಸ್ ಮತ್ತು ಪೂರ್ಣಚಂದ್ರ ತೇಜಸ್ವಿ ತೃತೀಯ ಸ್ಥಾನ ಪಡೆದರು.

ನಗರದ 220 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 20 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಿ ಪ್ರಧಾನ ಸುತ್ತಿಗೆ 6 ತಂಡಗಳನ್ನು ಆಯ್ಕೆ ಮಾಡಲಾಯಿತು. 18 ಅಂಕ ಪಡೆದು ಮುಂಚೂಣಿಯಲ್ಲಿದ್ದ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ವಲಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆದ್ದುಕೊಂಡಿತು. ಆದರೆ, ರಾಜ್ಯ ಮಟ್ಟದ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.

ADVERTISEMENT

ವಿಜೇತ ವಿದ್ಯಾರ್ಥಿಗಳಿಗೆ ಕಾರು ರ‍್ಯಾಲಿ ಪಟು ಹರ್ಷಿತಾ ಗೌಡ ಮತ್ತು ಚಿತ್ರನಟ ಬಾಲು ನಾಗೇಂದ್ರ ಬಹುಮಾನ ವಿತರಿಸಿದರು.

ಪ್ರಶ್ನೆಗೆ ಉತ್ತರಿಸಿ ದೀಪ ಹಚ್ಚಿದರು!

ಸಭಿಕರ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಮೂರು ಪ್ರಶ್ನೆ ಕೇಳಿ, ಸರಿ ಉತ್ತರ ನೀಡಿದ ಮೂವರಿಂದ ದೀಪ ಬೆಳಗಿಸಿ ಕ್ವಿಜ್‌ ಸ್ಪರ್ಧೆಗೆ ಚಾಲನೆ ಕೊಡಿಸಲಾಯಿತು.

ಕ್ವಿಜ್‌ ಮಾಸ್ಟರ್‌ ರಾಘವ ಚಕ್ರವರ್ತಿ ಅವರು, ವರ್ಗಾವಣೆಯಿಂದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯಾವ ಜಿಲ್ಲೆಯಲ್ಲಿದ್ದಾರೆಂದು ಮೊದಲ ಪ್ರಶ್ನೆ ಕೇಳಿದರು. ಲಿಟ್ಲ್‌ ಏಂಜಲ್‌ ಶಾಲೆಯ ಗಗನ ‘ಹಾಸನ ಜಿಲ್ಲೆ’ ಎಂಬ ಉತ್ತರ ನೀಡಿದರು. ಆಸ್ಕರ್‌ಗೆ 13 ವಿಭಾಗಗಳಲ್ಲಿ ನಾಮನಿರ್ದೇಶನವಾಗಿರುವ ಚಿತ್ರ ಯಾವುದೆಂಬ ಎರಡನೇ ಪ್ರಶ್ನೆಗೆ ಯಲಹಂಕ ನ್ಯೂಟೌನ್‌ನ ಮೌಂಟ್‌ ಮೇರಿ ಶಾಲೆಯ ನೀತುಶ್ರೀ ‘ಶೇಪ್‌ ಆಫ್‌ ವಾಟರ್‌’ ಎಂಬ ಉತ್ತರ ಕೊಟ್ಟರು. ಪಾಚಿ ಯಾವ ಲೋಹದ ಅಂಶ ಹೀರಿಕೊಳ್ಳುತ್ತದೆ ಎಂಬ ಪ್ರಶ್ನೆಗೆ ನಂದಿನಿ ಲೇಔಟ್‌ ಪ್ರೆಸಿಡೆನ್ಸಿ ಪಬ್ಲಿಕ್‌ ಶಾಲೆಯ ಪೂರ್ಣಚಂದ್ರ ತೇಜಸ್ವಿ ‘ಸೀಸ’ ಎಂಬ ಉತ್ತರ ನೀಡಿದರು. ಈ ಮೂವರು ವಿದ್ಯಾರ್ಥಿಗಳು ಗಣ್ಯರೊಂದಿಗೆ ದೀಪ ಬೆಳಗಿಸಿದರು.

ಉತ್ತರ ಕೊಡಲು ಪೈಪೋಟಿ: ಕ್ವಿಜ್‌ನಲ್ಲಿ ಸ್ಥಳೀಯತೆಯಿಂದ ಜಾಗತಿಕ ಮಟ್ಟದ ತಿಳಿವಳಿಕೆವರೆಗೂ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಅಳೆಯುವಂತೆ ಪ್ರಶ್ನೆಗಳಿದ್ದವು. ಉತ್ತರ ನೀಡಲು ವಿದ್ಯಾರ್ಥಿಗಳಲ್ಲಿ ಉತ್ಸಾಹವೂ ಎದ್ದು ಕಾಣುತ್ತಿತ್ತು. ಪ್ರಶ್ನೆಗಳು ಪರದೆ ಮೇಲೆ ಮೂಡಿದ ತಕ್ಷಣವೇ ಕ್ಷಣಾರ್ಧದಲ್ಲಿ ಉತ್ತರ ಕೊಡುತ್ತಿದ್ದ ವಿದ್ಯಾರ್ಥಿಗಳ ಗ್ರಹಿಕೆಯ ಸಾಮರ್ಥ್ಯ ಎಲ್ಲರೂ ತಲೆದೂಗುವಂತಿತ್ತು. ಕಠಿಣ ಪ್ರಶ್ನೆಗಳಿಗೆ ಪೈಪೋಟಿಗೆ ಇಳಿದು ಉತ್ತರ ಕೊಟ್ಟಾಗ ಸಭಾಂಗಣದಲ್ಲಿ ಚಪ್ಪಾಳೆಯ ಸದ್ದು ಮಾರ್ದನಿಸುತ್ತಿತ್ತು.

ಸರಿ ಉತ್ತರ ಕೊಟ್ಟ ಸ್ಪರ್ಧಿಗಳ ಅಂಕಗಳು ಏರುತ್ತಲೇ ಸಾಗಿ, ಮುಖದಲ್ಲಿ ಗೆಲುವಿನ ನಗೆ ಅರಳಿದರೆ, ತಪ್ಪು ಉತ್ತರ ನೀಡಿದವರು ಅಂಕ ಕಳೆದುಕೊಂಡು ಸಪ್ಪೆ ಮೋರೆ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಸ್ಪರ್ಧಿಗಳು ಉತ್ತರಿಸಲಾಗದ ಪ್ರಶ್ನೆಗಳಿಗೆ ಸಭಿಕರ ಸಾಲಿನಲ್ಲಿದ್ದ ವಿದ್ಯಾರ್ಥಿಗಳು ಪೈಪೋಟಿಯಿಂದ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.