ಸಾಂದರ್ಭಿಕ ಚಿತ್ರ
ಮಾನವಶಾಸ್ತ್ರಜ್ಞರು ಹೇಳುವಂತೆ ಈ ಭೂಮಿಯಲ್ಲಿ ಮನುಷ್ಯನ ಜೀವಾಂಕುರವಾಗಿ ಆರೇಳು ಲಕ್ಷ ವರ್ಷಗಳು ಸಂದಿವೆ. ಅಂತೆಯೇ ಮಾನವನಲ್ಲಿ ಪ್ರಜ್ಞೆಯೆಂಬುದು ಉದಿಸಿ ಅಜಮಾಸು ಐವತ್ತು ಸಾವಿರದಿಂದ ಒಂದುವರೆ ಲಕ್ಷ ವರ್ಷಗಳು. ಹಾಗಿದ್ದೂ ಇವತ್ತಿನ ಮನುಕುಲಕ್ಕೆ ಬಹಳ ಅಚ್ಚಾಗಿ ನೆನಪಿರುವ ಮತ್ತು ಸಾಕಷ್ಟು ದಾಖಲೆಯಿರುವ ಇತಿಹಾಸಕ್ಕೆ ನಾಲ್ಕರಿಂದ ನಾಲ್ಕುವರೆ ಸಾವಿರ ವರ್ಷ ಪ್ರಾಯ. ಅಂದರೆ ಈ ಭೂಖಂಡದ ಮೇಲೆ ಇರುವ ಮಾನವ ಸಮುದಾಯಗಳನ್ನು ಬೇರೆ ಬೇರೆ ನಾಗರಿಕತೆಗಳನ್ನಾಗಿ ಗ್ರಹಿಸುವಷ್ಟು ಗುಣಲಕ್ಷಣಗಳೊಂದಿಗೆ ಅವು ವಿಕಾಸವಾಗಿ ಅಷ್ಟು ಕಾಲ ಸಂದಿದೆ.
ನೆನಪಿನಲ್ಲಿರುವ ಈ ಅಷ್ಟೂ ಸಹಸ್ರಮಾನಗಳುದ್ದಕ್ಕೂ ಮನುಷ್ಯನು ಸೃಜಿಸಿಕೊಂಡು ಬಂದಿರುವ ವಿಚಾರಸಾಹಿತ್ಯವನ್ನು, ಕಾವ್ಯಾದಿಗಳನ್ನು ಮತ್ತು ನಾನಾ ಬಗೆಯ ಸಿದ್ಧಾಂತಗಳನ್ನು ಒಮ್ಮೆ ಕಣ್ದೆರೆದು ಅವಲೋಕಿಸಿದರೆ ನಮಗಲ್ಲಿ ಸರ್ವತ್ರ ಸಮಾನವಾದೊಂದು ಅಂಶ ಕಾಣಸಿಗುತ್ತದೆ. ಎಲ್ಲ ಕಾಲದಲ್ಲಿಯೂ, ಎಲ್ಲ ಪ್ರದೇಶಗಳಲ್ಲಿಯೂ ಮನುಷ್ಯನಿಗೆ ಈ ಜಗತ್ತನ್ನು ಅರ್ಥಮಾಡಿಕೊಳ್ಳುವಲ್ಲಿ ಕುತೂಹಲವಿತ್ತು ಮತ್ತು ಆ ಕುತೂಹಲವೇ ಮಾನವ ಬದುಕಿನ ನಾನಾ ಆಯಾಮಗಳನ್ನು ನಾನಾ ವಿಧದಲ್ಲಿ ತುಂಬಿಕೊಂಡಿದೆ ಎಂಬುದೇ ಆ ಸಮಾನ ಅಂಶ.
ಅರಿವಿನ ಕುರಿತಾದ ಈ ಹಸಿವು ಎಲ್ಲ ನಾಗರಿಕತೆಗಳಲ್ಲಿಯೂ ಗುರುತಿಸಬಹುದಾದ್ದೇ ಆದರೂ ಅದು ತೋರಿಕೊಂಡ ಬಗೆ, ಬೆಳೆದುಬಂದ ರೀತಿ ಮತ್ತು ಅಭಿವ್ಯಕ್ತವಾಗುವ ಶೈಲಿ ಒಂದರಿಂದಿನ್ನೊಂದು ಭಿನ್ನ. ಈ ಭಿನ್ನತೆಗಳಾದರೋ ಇವತ್ತಿಗೂ ನಾವು ಗುರುತಿಸಬಹುದಾದಷ್ಟು ಸ್ಪಷ್ಟವಾಗಿ ಇವೆ, ಮತ್ತು ಹಾಗಾಗಿಯೇ ಅವು ಆಯಾ ನಾಗರಿಕತೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮಗೆ ಒದಗುವ ಸಾಧನಗಳಾಗಿಯೂ ಕೆಲಸ ಮಾಡುತ್ತವೆ.
ಮುಂದಿನ ಚರ್ಚೆಗೆ ಹೋಗುವುದಕ್ಕಿಂತ ಮುಂಚೆಯೇ ನಾವು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಿಕೊಂಡುಬಿಡಬೇಕು. ನಾಗರಿಕತೆ ಎಂಬುದಾಗಿ ಚರ್ಚೆ ಮಾಡುವಾಗ ಭೂಭಾಗ, ಆ ಭೂಭಾಗ ಹಾಗೂ ಭೌಗೋಳಿಕ ಸ್ಥಿತಿಗಳ ಜೊತೆಗೆ ಆಯಾ ಭೂಭಾಗದ ಜನತೆಗೆ ಇರುವ ಸಂಬಂಧ, ಅಲ್ಲಿ ಬೆಳೆದು ಬಂದ ಆಚಾರ, ವಿಚಾರ, ಲೋಕದೃಷ್ಟಿ ಮತ್ತು ಜೀವನವಿಧಾನಗಳು ಮಾತ್ರವೇ ನಮಗೆ ಮುಖ್ಯವಾಗುತ್ತವೆ. ಇಲ್ಲಿ ರಿಲಿಜನ್ನುಗಳು, ಮತ–ಪಂಥಗಳು, ಆ ಪಂಥಗಳಿಗೆ ಮೂಲವಾದ ಪವಿತ್ರಗ್ರಂಥಗಳು ಹಾಗೂ ರಾಜನೈತಿಕ ಮಹತ್ತ್ವಾಕಾಂಕ್ಷೆಗಳು ಹಿನ್ನೆಲೆಗೆ ಸರಿಯುತ್ತವೆ.
ಜಗತ್ತನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಬೇರೆ ಬೇರೆ ಕಾಲಮಾನದಲ್ಲಿ ಬೇರೆ ಬೇರೆ ನಾಗರಿಕತೆಗಳು ನಾನಾ ವಿಧದಲ್ಲಿ ಜಗತ್ತನ್ನು ಗ್ರಹಿಸಿದ್ದಷ್ಟೇ ಅಲ್ಲ, ಆ ಗ್ರಹಿಕೆಯ ಆಧಾರದ ಮೇಲೆಯೇ ಅವುಗಳ ಭಾಷೆ, ವ್ಯವಹಾರ, ಕುಟುಂಬ, ಸಮಾಜವ್ಯವಸ್ಥೆ, ಸಂಬಂಧಗಳು – ಹೀಗೆ ಮಾನವಜೀವನದ ಹಲವಾರು ಸಂಗತಿಗಳು ರೂಪಿತವಾಗಿವೆ.
ಆದರೆ ನೋಡಿ, ಕಾಲ ಒಂದೇ ರೀತಿ ಉಳಿಯಲಿಲ್ಲ. ಆಯಾ ನಾಗರಿಕತೆಗಳ ಎಲ್ಲ ಗುಣಲಕ್ಷಣಗಳು ಸಾದ್ಯಂತವಾಗಿ ಮುಕ್ಕಾಗದೆ ಉಳಿದುಕೊಂಡು ಬರುವ ಆದರ್ಶಮಯ ಕಲ್ಪನೆಯನ್ನೇನೂ ನಾವು ಮಾಡಿಕೊಳ್ಳಬೇಕಿಲ್ಲ. ನಾಗರಿಕತೆಗಳ ನಡುವೆ ಸಂವಹನಗಳಾದುವು, ದಾಳಿಗಳಾದುವು, ಕೊಡುಕೊಳ್ಳು ವ್ಯವಹಾರ ಎಲ್ಲ ಆದುವು. ಪರಿಣಾಮತಃ ಒಂದು ನಾಗರಿಕತೆಯ ಚಿಂತನೆ, ಆಚರಣೆ, ವ್ಯವಹಾರ ಇತ್ಯಾದಿಗಳ ಮೇಲೆ ಇನ್ನೊಂದು ನಾಗರಿಕತೆಯ ಪ್ರಭಾವ ಸಹಜವಾಗಿಯೇ ಆಯಿತು. ಎಲ್ಲ ಬಾರಿಗೆ ಈ ಪ್ರಭಾವವೇನೂ ಸಕಾರಾತ್ಮಕ ರೀತಿಯಲ್ಲೇ ಆಯಿತು ಅನ್ನುವಂತಿಲ್ಲ; ಬದಲಾಗಿ ದಾಳಿಗಳು ಮತ್ತು ರಾಜಕೀಯ ಒತ್ತಡದ ಕಾರಣಕ್ಕೆ, ಇನ್ನು ಕೆಲವೊಮ್ಮೆ ಪ್ರಕೃತಿವಿಕೋಪದ ಕಾರಣಕ್ಕೂ ಆಯಿತೆನ್ನಬಹುದು.
ದಾಳಿಗಳಿಗೆ ಉದಾಹರಣೆ - ಪಶ್ಚಿಮದಲ್ಲಿ ಬ್ಯಾಬಿಲೋನ್ ನಾಗರಿಕತೆಯ ಮೇಲೆ ಅಸ್ಸೀರಿಯನ್ನರು ಮತ್ತು ಪರ್ಶಿಯನ್ನರ ಅಲೆ ಅಲೆಯಾದ ದಾಳಿಯಿಂದಾಗಿ ಬ್ಯಾಬಿಲೋನ್ ತೀರಾ ನಿಶ್ಶಕ್ತವಾಯಿತು. ಕೊನೆಗೊಮ್ಮೆ ಸಾಮಾನ್ಯ ಶಕದ ಎರಡನೆಯ ಶತಮಾನದಲ್ಲಿ ಗ್ರೀಕ್ ನಾಗರಿಕತೆಯ ರಾಜಕೀಯ ಒಳಗೊಳ್ಳುವಿಕೆಯಿಂದ ಬ್ಯಾಬಿಲೋನ್ ನಾಗರಿಕತೆಯೇ ಅಳಿಸಿಹೋಯಿತು. ಮಾಯನ್ನರು ಮತ್ತು ಇಂಕನ್ನರು ಪ್ರಕೃತಿವಿಕೋಪ ಮತ್ತು ನಾನಾ ಬಗೆಯ ಸಮೂಹಜಾಡ್ಯಗಳ ಕಾರಣಕ್ಕೆ ನಾಶವಾದರು. ಈಜಿಪ್ತ್, ಮೆಸಪೊಟಮಿಯ, ಚೀನಾ ಮತ್ತು ಭಾರತವೆಂಬೋ ನಾಲ್ಕು ನದೀತೀರದ ಸೋದರ ನಾಗರಿಕತೆಗಳಲ್ಲಿ ಇವತ್ತು ಉಳಿದಿರುವುದು ಭಾರತ ಮತ್ತು ಚೀನಾ ಮಾತ್ರ. ಇನ್ನು ಸಾಂಸ್ಕೃತಿಕ ದಾಳಿಗಂತೂ ಯಾವ ನಾಗರಿಕತೆಯೂ ಹೊರತಾಗಿಲ್ಲ. ಭಾರತದ ಮೇಲೆ ನಡೆದ ಸಾಂಸ್ಕೃತಿಕ ಪ್ರಭಾವಗಳಿಗೆ ಮತ್ತು ಆಕ್ರಮಣಗಳಿಗೆ ಸಾವಿರ ವರ್ಷದ ಪರಂಪರೆಯೇ ಇದೆ. ಗ್ರೀಕರಿಂದ ಆರಂಭಿಸಿ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಎಂಬ ರಿಲಿಜನ್ನುಗಳು, ಹಾಗೂ ವಸಾಹತಿಗರವರೆಗೆ ಭಾರತವನ್ನು ನಾನಾ ವಿಚಾರಗಳು ಕಾಡಿವೆ ಮತ್ತು ಪ್ರಭಾವಿಸಿವೆ. ಹೀಗೆ ಎಲ್ಲ ನಾಗರಿಕತೆಗಳ ಕಥೆಯಲ್ಲಿ ಹತ್ತು ಹಲವು ತಿರುವುಗಳನ್ನು ನಾವು ಗುರುತಿಸಬಹುದು.
ವಸಾಹತುಪರ್ವದ ಬೆನ್ನಿಗೇ ಸಂಭವಿಸಿದ ಕೈಗಾರಿಕಾ ಕ್ರಾಂತಿಯಿಂದಾಗಿ ಜಗತ್ತಿನ ಎಲ್ಲ ಭಾಗದಲ್ಲಿಯೂ ಏಕಪ್ರಕಾರವಾದ ವಿಚಾರಧಾರೆ ಬೆಳೆದು ಬರುವಂತಾಯಿತು. ಈ ಹೊಸ ವಿಚಾರದಲ್ಲಿ ಹಣವೇ ಮಾನವ ಬದುಕಿನ ಕೇಂದ್ರ ಎಂಬಂತಾಯಿತು. ಶೋಷಣೆ, ಮಾನವಾಧಿಕಾರದ ನಿರಾಕರಣೆ, ಜೀವಿತದ ಅಧಿಕಾರದ ಮೇಲೆ ಕರಿನೆರಳು, ಸಂಪತ್ತಿನ ಲೂಟಿ, ಅರಾಜಕತೆ – ಹೀಗೆ ಸಮಾಜಭಂಜಕವಾದ ಹಲವು ಅಪಸವ್ಯಗಳು ಮುನ್ನೆಲೆಗೆ ಬಂದುವು. ಇದಕ್ಕೆ ಪ್ರತಿಕ್ರಿಯೆಯಾಗಿ ಶೋಷಕ ಮತ್ತು ಶೋಷಿತ, ಮಾಲಿಕ ಮತ್ತು ಕಾರ್ಮಿಕ, ಆಳುವ ಮತ್ತು ಆಳಿಸಿಕೊಳ್ಳುವ ವರ್ಗ ಎಂಬ ಮಸೂರದ ಮೂಲಕ ಜಗತ್ತನ್ನು ನೋಡಲು ಅನುವು ಮಾಡಿಕೊಡುವ ಸಿದ್ಧಾಂತಗಳು ಬೆಳೆದುವು. ವಸಾಹತುಪರ್ವ ಮತ್ತು ಕೈಗಾರಿಕೀಕರಣದ ಉಪ ಉತ್ಪನ್ನವೆಂಬಂತೆ ಜಗತ್ತಿನ ಹಲವು ಆದಿ ನಾಗರಿಕತೆಗಳು ತಮ್ಮ ಮೂಲವನ್ನು ಮರೆತವು, ಕಳೆದುಕೊಂಡವು ಹಾಗೂ ಬೆರಕೆಗೊಂಡವು.
ವಸಾಹತುಕರಣದ ದೂಳು ಮಾಸುತ್ತಿದ್ದಂತೆ ವೈಶ್ವೀಕರಣವೆಂಬೋ ಹೊಸತನವೊಂದು ಆರಂಭವಾಯಿತು. ಸಮುದಾಯ, ಸಮಾಜ, ರಾಜ್ಯ ಎಂದೆಲ್ಲ ಮಾತನಾಡುತ್ತಿದ್ದ ಜನರು ಏಕಾಏಕಿ ಜಗತ್ತು, ವಿಶ್ವ, ವೈಶ್ವಿಕ ಆರ್ಥಿಕತೆ, ವೈಶ್ವಿಕ ವಾಣಿಜ್ಯ ಎಂದೆಲ್ಲ ಮಾತನಾಡುವಂತಾಯಿತು. ಯಾವ ಕಾಲದಲ್ಲಿಯೇ ಆಗಲಿ, ವ್ಯಾಪಾರ ಮತ್ತು ವಾಣಿಜ್ಯಗಳು ಸಾಧ್ಯವಾಗಿಸಿದಷ್ಟು ವಿಚಾರ ಸಂವಹನವನ್ನು ಇನ್ಯಾವುದೇ ಸಂಗತಿಯೂ ಸಾಧ್ಯವಾಗಿಸಿಲ್ಲ. ವೈಶ್ವೀಕರಣದ ಸಂದರ್ಭದಲ್ಲಿಯೂ ಅದೇ ಆಯಿತು – ಆರ್ಥಿಕತೆಯ ಜೊತೆಯಲ್ಲೇ ಸಾಕಷ್ಟು ಚಿಂತನೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಸಂವಹಿಸಿ ಮಾನವನು ಜಗತ್ತನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಹೊಸಪಾಕವೊಂದು ಉದಯಿಸಿತು. ವಿಶ್ವಗ್ರಾಮ ಅಥವಾ ಗ್ಲೋಬಲ್ ವಿಲೇಜ್ ಅನ್ನುವ ಹೊಸದೇ ಒಂದು ಜಗದ್ದೃಷ್ಟಿಯನ್ನು ಹುಟ್ಟುಹಾಕಿದ ಕಾಲಘಟ್ಟ ಅದು.
ವೈಶ್ವೀಕರಣ ಅಥವಾ ಗ್ಲೋಬಲೈಸೇಶನ್ನು ತನ್ನ ಚರಮಸೀಮೆಯನ್ನು ತಲುಪಿ ಅಲ್ಲಿಂದಾಚೆಗೆ ಅದಾಗಲೇ ಒಂದುವರೆ ದಶಕ ಕಳೆದಿದೆ. ನಿಜವೆಂದರೆ ಈ ಕಾಲಘಟ್ಟದಲ್ಲಿ ನಾವು ನಿರ್ವೈಶ್ವೀಕರಣ ಅಥವಾ ‘ಡಿ–ಗ್ಲೋಬಲೈಸೇಶನ್’ ಕುರಿತು ಚಿಂತಿಸುತ್ತಿದ್ದೇವೆ. ಗ್ರಾಮೀಣ ಆರ್ಥಿಕತೆ, ಆತ್ಮನಿರ್ಭರ ಭಾರತ – ಇವೆಲ್ಲ ಡಿಗ್ಲೋಬಲೈಸೇಶನ್ನಿನ ಕಡೆಗೆ ನಾವು ನಡೆಯುತ್ತಿರುವುದರ ಸಂಕೇತಗಳಷ್ಟೆ. ಡಿಗ್ಲೋಬಲೈಸೇಶನ್ ಜೊತೆ ಜೊತೆಗೇನೆ ನಡೆಯುತ್ತಿರುವುದು ಡಿಕೊಲನೈಸೇಶನ್ನಿನ ಪ್ರಯತ್ನಗಳು. ರಾಜನೈತಿಕವಾಗಿ ಕೊಲನೈಸೇಶನ್ ಮುಗಿದಿದ್ದರೂ ಅದರ ದೂರಗಾಮಿ ಪರಿಣಾಮಗಳಿಂದ ನಾವು ಭಾರತೀಯರು (ಅದರಂತೆ ಕೊಲನೈಸ್ ಆದ ಅಂದರೆ ವಸಾಹತಿಗೆ ಒಳಪಟ್ಟ ಯಾವುದೇ ಭೂಖಂಡದ ಜನತೆ) ಮುಕ್ತರಾಗಿಲ್ಲ. ಅದೊಂದು ದೀರ್ಘಕಾಲಿಕವಾದ ಬೌದ್ಧಿಕ ಪ್ರಕ್ರಿಯೆ. ಇವತ್ತು ಭಾರತೀಯ ಚಿಂತನೆಯಲ್ಲಿ ಬಲಗೊಳ್ಳುತ್ತಿರುವ ಡಿಕೊಲನೈಸೇಶನ್ನಿನ ಭಾಗವಾಗಿಯೇ ನಾವಿಲ್ಲಿ ‘ಭಾರತೀಯ ನಾಗರಿಕತೆಯ ಮೂಲಾಂಶಗಳೇನು’ ಎನ್ನುವ ಪ್ರಶ್ನೆಯನ್ನು ಎತ್ತಿಕೊಳ್ಳುವ ಸಂದರ್ಭ ಬಂದಿರುವುದು.
ಹಾಗಿದ್ದರೆ ಕಾಲ ಸರಿದಂತೆಲ್ಲ ಬದಲಾಗುತ್ತಿರುವ ಮಾನವನ ಆದ್ಯತೆಗಳು ಮತ್ತು ಲೋಕದೃಷ್ಟಿಯ ಹಿನ್ನೆಲೆಯನ್ನಿಟ್ಟುಕೊಂಡು ಇವತ್ತಿಗೆ ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತು ನಾವು ಯಾವ ಆಧಾರದಮೇಲೆ ಭಾರತೀಯ ನಾಗರಿಕತೆ ಎಂಬುದನ್ನು ನಿಖರವಾಗಿ ಗುರುತಿಸಬಲ್ಲೆವು? ಇದಕ್ಕೆ ಉತ್ತರವನ್ನು ಕಂಡುಕೊಂಡೆವಾದಲ್ಲಿ ಭಾರತವೆಂಬುದು ‘ರಾಜನೈತಿಕ ಅಸ್ತಿತ್ವ’ (ಪೊಲಿಟಿಕಲ್ ಎಂಟಿಟಿ) ಮಾತ್ರವೇ ಅಲ್ಲ ಬದಲಿಗೆ ಅದು ಅನೂಚಾನವಾದೊಂದು ಸಜೀವ ನಾಗರಿಕತೆಯೆಂಬುದು ಗ್ರಹಿಕೆಗೆ ಸಿಗುತ್ತದೆ. ಹಾಗೆ ‘ಭಾರತೀಯ’ ಎಂಬ ಗುರುತಿನ ಮೂಲವಾದ ಹಲವು ಮರ್ಮಸದೃಶ ಬಿಂದುಗಳನ್ನು ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.