ಬುಡಕಟ್ಟು ಜನರಿಗೆ ನೀಡಲ್ಪಟ್ಟ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಯೋಜನೆಯ ವಿವಿಧ ಹಂತಗಳಲ್ಲಿ ಬುಡಕಟ್ಟು ಜನರಿಗೆ ವಿಶೇಷ ಒತ್ತು ನೀಡುವುದನ್ನು ಖಾತರಿಪಡಿಸುವುದು ಮುಖ್ಯ.
ಈ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನವು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ರಚಿಸಿತು.
l ಪರಿಶಿಷ್ಟ ಪಂಗಡಗಳ ಹಿತ ರಕ್ಷಣೆಯ ಕಾವಲುಗಾರನಾಗಿ ಮತ್ತು ಬೌದ್ಧಿಕಕೇಂದ್ರವಾಗಿ ಕಾರ್ಯನಿರ್ವಹಿಸುವುದು ಆಯೋಗದ ಕರ್ತವ್ಯವಾಗಿದೆ.
l ಬುಡಕಟ್ಟು ಸಮುದಾಯದ ರಕ್ಷಣೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಬುಡಕಟ್ಟು ಸಮುದಾಯಗಳ ಕಲ್ಯಾಣದ ಜವಾಬ್ದಾರಿಯನ್ನು ಖಾತರಿಪಡಿಸಿಕೊಳ್ಳುವುದು ಆಯೋಗದ ಆದ್ಯತೆಯ ಕಾರ್ಯವಾಗಿದೆ.
l ಎನ್‌ಸಿಎಸ್‌ಟಿ ಭಾರತೀಯ ಸಂವಿಧಾನದ 338 ಎ ವಿಧಿ ಅಡಿಯಲ್ಲಿ ಸ್ಥಾಪನೆಯಾಗಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ.
ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ರಚನೆ :
* ಭಾರತದ ರಾಷ್ಟ್ರಪತಿಗಳಿಂದ ನೇಮಕವಾದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮೂವರು ಸದಸ್ಯರು ಇರುತ್ತಾರೆ.
* ಅಧ್ಯಕ್ಷರು ಕೇಂದ್ರ ಸಚಿವರ ಸ್ಥಾನಮಾನವನ್ನು ಹೊಂದಿದ್ದರೆ, ಉಪಾಧ್ಯಕ್ಷರು ಸಹಾಯಕ ಸಚಿವರ ಸ್ಥಾನವನ್ನು ಪಡೆಯುತ್ತಾರೆ ಹಾಗೂ ಸದಸ್ಯರು ಭಾರತ ಸರ್ಕಾರ ಕಾರ್ಯದರ್ಶಿಯ ಸ್ಥಾನಮಾನವನ್ನು ಹೊಂದಿರುತ್ತಾರೆ.
* ಶಾಶ್ವತ ಕಾರ್ಯದರ್ಶಿ ಕಚೇರಿಯು ನವದೆಹಲಿಯಲ್ಲಿದೆ ಹಾಗೂ ದೇಶಾದ್ಯಂತ ಆರು ವಿಭಾಗೀಯ ಕಚೇರಿಗಳನ್ನು ಹೊಂದಿದ್ದು ಇದು ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಹೊಂದಿದೆ.
ಆಯೋಗದ ಕಾರ್ಯಗಳು :
* ಪರಿಶಿಷ್ಟ ಪಂಗಡಗಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ತನಿಖೆ ನಡೆಸುವುದು ಮತ್ತು ನಿಗಾವಹಿಸುವುದು.
* ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ಕಾಯ್ದುಕೊಳ್ಳಲು ಮತ್ತು ಹಿತರಕ್ಷಣೆ ಮಾಡಲು ನಿರ್ದಿಷ್ಟ ದೂರುಗಳ ವಿರುದ್ಧ ವಿಚಾರಣೆ ನಡೆಸುವುದು.
* ಪರಿಶಿಷ್ಟ ಪಂಗಡಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಯೋಜನಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು, ಸಲಹೆ ನೀಡುವುದು ಮತ್ತು ಕೇಂದ್ರಾಡಳಿತ ಪ್ರದೇಶ ಹಾಗೂ ಯಾವುದೇ ರಾಜ್ಯದಲ್ಲಿ ಈ ಬಗೆಗಿನ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು.
*ಪರಿಶಿಷ್ಟ ಪಂಗಡಗಳ ರಕ್ಷಣೆಗೆ, ಕಲ್ಯಾಣಕ್ಕೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಕೇಂದ್ರಾಡಳಿತ ಪ್ರದೇಶ ಅಥವಾ ಯಾವುದೇ ರಾಜ್ಯವು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವುದು ಹಾಗೂ ಶಿಫಾರಸು ನೀಡುವುದು.
* ಪರಿಶಿಷ್ಟ ಪಂಗಡಗಳ ರಕ್ಷಣೆ, ಕಲ್ಯಾಣ, ಅಭಿವೃದ್ಧಿಗೆ ಸಂಬಂಧಿಸಿದಂತೆ ಇತರ ಕೆಲಸಗಳನ್ನು ನಿರ್ವಹಿಸುವುದರ ಜತೆಗೆ
* ಸಮುದಾಯಗಳ ಹಿತ ರಕ್ಷಣೆಗೆ ಸಂಬಂಧಿಸಿದಂತೆ ವಾರ್ಷಿಕವಾಗಿ ಅಥವಾ ಆಯೋಗಕ್ಕೆ ಯಾವುದೇ ಸಮಯದಲ್ಲಿ ಸೂಕ್ತ ಎನಿಸಿದರೆ ರಾಷ್ಟ್ರಪತಿಗಳಿಗೆ ವರದಿ ನೀಡುವುದು.
* ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರಬಲ್ಲ ನೀತಿ ನಿರೂಪಣೆಗಳ ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಪ್ರತಿ ರಾಜ್ಯ ಸರ್ಕಾರಗಳು ಆಯೋಗದೊಂದಿಗೆ ಸಮಾಲೋಚನೆ ನಡೆಸಬೇಕು.
ಎಸ್‌ಸಿ, ಎಸ್‌ಟಿಗೆ ಇರುವ ಅಧಿಕಾರ:
* ದೂರುಗಳ ವಿಚಾರಣೆಯ ಸಂದರ್ಭದಲ್ಲಿ ಈ ಕೆಳಗಿನ ವಿಚಾರಗಳಲ್ಲಿ ಏನ್ ಸಿ ಎಸ್ ಟಿ ಗೆ ಸಿವಿಲ್ ನ್ಯಾಯಾಲಯಕ್ಕೆ ಇರುವ ಎಲ್ಲಾ ಅಧಿಕಾರವೂ ಇರುತ್ತದೆ
* ಭಾರತದ ಯಾವುದೇ ಭಾಗದಲ್ಲಿರುವ ವ್ಯಕ್ತಿಯನ್ನು ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವುದು ಹಾಗೂ ವ್ಯಕ್ತಿಯನ್ನು ಪರೀಕ್ಷಿಸುವುದು.
* ಯಾವುದೇ ದಾಖಲೆಗಳ ಅನ್ವೇಷಣೆ ಮತ್ತು ಸಲ್ಲಿಕೆಯ ಅಗತ್ಯಗಳ ಸಂದರ್ಭ ಬಂದಾಗ ಅಫಿದವಿತ್ ಆಧಾರದ ಮೇಲೆ ಸಾಕ್ಷಿ ಪಡೆಯಬಹುದು.
* ನ್ಯಾಯಾಲಯ ಅಥವಾ ಕಚೇರಿಯಿಂದ ದಾಖಲೆಗಳನ್ನು ಅಥವಾ ಅದರ ಪ್ರತಿಯನ್ನು ಪಡೆಯುವ ಕೋರಿಕೆ.
*ಸಮನ್ಸ್ ಜಾರಿ ಮಾಡುವುದು ಅಥವಾ ಸಾಕ್ಷಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ಸಂಬಂಧ ಸಂವಹನ ನಡೆಸುವುದು.
* ಸಂವಿಧಾನದ ವಿಧಿ 338 ರ ಪ್ರಕಾರ ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರಬಲ್ಲಂತಹ ಎಲ್ಲಾ ಪ್ರಮುಖ ನೀತಿ ನಿರೂಪಣೆ ವಿಚಾರಗಳ ಸಂಬಂಧ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯೋಗದ ಸಲಹೆಯನ್ನು ಪಡೆಯಬೇಕು.
* ಬುಡಕಟ್ಟು ಸಮುದಾಯಗಳ ಮೂಲಭೂತ ವಿಚಾರಗಳಿಗೆ ಸಂಬಂಧಿಸಿದಂತೆ ನೀತಿ ಅನುಷ್ಠಾನ ಮತ್ತು ತನಿಖೆಗಾಗಿ ಏನ್ ಸಿ ಎಸ್ ಟಿ 10 ವಲಯಗಳನ್ನು ಗುರುತಿಸಿದ್ದು ಅವು ಹೀಗಿವೆ.
1. ಅರಣ್ಯ ಹಕ್ಕು
2.ಗಣಿ ಸಂಬಂಧಿತ ಸಮಸ್ಯೆಗಳು
3. ಹಣಕಾಸು ವಿಚಾರಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನ
4. ದೌರ್ಜನ್ಯ
5. ಕುಂದುಕೊರತೆ
6. ಒಳಗೊಳ್ಳುವಿಕೆ ಮತ್ತು ಹೊರಹಾಕುವಿಕೆಯ ಅಂಶಗಳು
7. ಆರೋಗ್ಯ ಮತ್ತು ಪೌಷ್ಟಿಕಾಂಶ
8. ಶಿಕ್ಷಣ
9. ಕಾನೂನು ಮತ್ತು ಸಂವಿಧಾನಾತ್ಮಕ ವಿಚಾರ
10. ಕಲ್ಯಾಣ ಯೋಜನೆಗಳಲ್ಲಿ ಪರಿಶಿಷ್ಟ ಪಂಗಡಗಳ ಅಂಶ
ಈ 10 ಅಂಶಗಳಿಗೆ ಸಂಬಂಧಿಸಿದಂತೆ ಆಯೋಗವು 'ಕುಂದುಕೊರತೆ ನಿವಾರಣೆ ಮತ್ತು ಯೋಜನೆ' ಕಾರ್ಯವನ್ನು ಕೈಗೊಳ್ಳುತ್ತದೆ.
ಕುಂದುಕೊರತೆ ಪರಿಹಾರ :
* ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಮೇಲೆ ನಡೆಯುತ್ತಿರುವ
ಅನ್ಯಾಯಗಳ ಬಗ್ಗೆ ಜನರಿಂದ, ನಾಗರಿಕ ಸಂಸ್ಥೆಗಳಿಂದ
ಮತ್ತು ಸರ್ಕಾರಿ ಇತರ ಸಂಸ್ಥೆಗಳಿಂದ ಆಯೋಗವು ಅನೇಕ ಪತ್ರಗಳನ್ನು ಸ್ವೀಕರಿಸುತ್ತದೆ.
* ಈ ಪಂಗಡಗಳ ಜನರ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ ಮತ್ತು ಸಾಮಾಜಿಕ ಅನ್ಯಾಯದ ಬಗ್ಗೆಗೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬೆಳಕು ಚೆಲ್ಲುತ್ತವೆ.
l ಯಾವುದೇ ಅನ್ಯಾಯದ ಪ್ರಕರಣಗಳು ಗಮನಕ್ಕೆ ಬರುತ್ತಿದ್ದಂತೆಯೇ ಆಯೋಗವು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನ ಮಾಡುತ್ತದೆ. ಇದನ್ನು ಸಾಧಿಸಲು ಆಯೋಗಕ್ಕೆ ರಾಜ್ಯದ ಎಲ್ಲಾ ಅಂಗಗಳಿಂದ ಸಹಕಾರ ಮತ್ತು ನೆರವು ಸಿಗುತ್ತದೆ.
* ಆಯೋಗದ ಸದಸ್ಯರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ ಹಾಗೂ ಬುಡಕಟ್ಟು ಜನರಿಗೆ ತಮ್ಮ ಕುಂದುಕೊರತೆಗಳಿಗೆ ತಮ್ಮ ಸ್ಥಳದಲ್ಲಿ ಪರಿಹಾರವನ್ನು ಪಡೆಯಲು ಶ್ರಮಿಸುತ್ತಾರೆ.
* ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸಲು ಎನ್ ಸಿ ಎಸ್ ಟಿ ಯು ತನ್ನದೇ ಆದ ಪೋರ್ಟಲ್ ಅನ್ನು ಕೂಡ ಸ್ಥಾಪಿಸಿದೆ.
ಭಾರತದಲ್ಲಿ ಬುಡಕಟ್ಟು ಸಮುದಾಯದ ನಿರ್ದಿಷ್ಟ ಅಗತ್ಯಗಳು
ಭಾರತದಲ್ಲಿ ಬುಡಕಟ್ಟು ಸಮುದಾಯವು ಆಯಾ ಭೌಗೋಳಿಕ ಪ್ರದೇಶಗಳಿಗೆ ತಕ್ಕಂತೆ ವಿಶೇಷವಾದ ಸಾಂಸ್ಕೃತಿಕ ವಿನ್ಯಾಸಗಳನ್ನು ಹೊಂದಿರುವುದರಿಂದ ಅದರ ಸ್ವರೂಪ ವಿಶಿಷ್ಟವಾಗಿರುತ್ತದೆ ಮತ್ತು ಅವರ ಸಮಸ್ಯೆಗಳು ಭಿನ್ನವಾಗಿರುತ್ತದೆ. l ಅವರು ಸುಸ್ಥಿರ ಅಭಿವೃದ್ಧಿಯ ಹರಿಕಾರರಾಗಿದ್ದು ಬುಡಕಟ್ಟು ಜನಾಂಗದವರು ಎಲ್ಲಿಯೇ ವಾಸಿಸಲಿ ಅವರು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ನಿಸರ್ಗದ ಶಿಶುಗಳಾಗಿದ್ದಾರೆ.ಇವರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಹಿತರಕ್ಷಣೆಗಾಗಿ ಎನ್‌ಸಿಎಸ್‌ಟಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.