ADVERTISEMENT

ಐಪಿಎಸ್, ಐಎಎಸ್‌ ಇರುಸು ಮುರುಸು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ಐಪಿಎಸ್, ಐಎಎಸ್‌ ಇರುಸು ಮುರುಸು
ಐಪಿಎಸ್, ಐಎಎಸ್‌ ಇರುಸು ಮುರುಸು   

ಒಂದು ಸಾವಿರ ದಿನಗಳನ್ನು ಪೂರೈಸಿರುವ ಸಿದ್ದರಾಮಯ್ಯ ಸರ್ಕಾರ ಎದುರಿಸಿದ ಬಿಕ್ಕಟ್ಟುಗಳ ಪೈಕಿ, ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಸಾವೂ ಒಂದು. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿದ್ದ ರವಿ ಅವರು ಬೆಂಗಳೂರಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ 2015 ಮಾರ್ಚ್‌ 16ರಂದು ನೇಣಿಗೆ ಕೊರಳೊಡ್ಡಿದರು. ‘ಅವರದ್ದು ಸಾವಲ್ಲ, ಕೊಲೆ’ ಎಂದು ಸಾರ್ವಜನಿಕರಲ್ಲಿ ಒಂದು ವರ್ಗ ಹೇಳಿತು. ಸಾವಿನ ಕುರಿತು ಸಿಬಿಐ ತನಿಖೆಯೇ ಆಗಬೇಕು ಎಂದು ಪ್ರತಿಪಕ್ಷಗಳು, ವಿವಿಧ ಸಂಘ–ಸಂಸ್ಥೆಗಳು ತೀವ್ರ ಹೋರಾಟ ನಡೆಸಿದವು.

‘ಸಿಐಡಿ ತನಿಖೆ ಸಾಕು, ಸಿಬಿಐ ಬೇಕಿಲ್ಲ’ ಎಂದು ಆರಂಭದಲ್ಲಿ ಹೇಳಿದ ಸರ್ಕಾರ, ನಂತರ ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ಆದೇಶಿಸಿತು.  ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳು, ‘ರವಿ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

****
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಅಕ್ರಮವಾಗಿ ಹಣ ಗಳಿಸಿದ ಆರೋಪಕ್ಕೆ ಗುರಿಯಾದರು. ಅಲ್ಲದೆ, ಅವರ ಕುಟುಂಬಕ್ಕೆ ಸೇರಿದ ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಸಿ.ಡಿ. ತನಿಖಾಧಿಕಾರಿಗಳಿಗೆ ದೊರೆಯಿತು.

ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್‌ ದಂಧೆಗೆ ಸೇರಿದೆ ಎನ್ನಲಾದ ಹಣ ಬೆಂಗಳೂರಿನ ‘ಗೋಲ್ಡನ್‌ ಗ್ರ್ಯಾಂಡ್’ ಅಪಾರ್ಟ್‌ಮೆಂಟ್‌ನಲ್ಲಿರುವ ಬಗ್ಗೆ ದೊರೆತ ಮಾಹಿತಿ ಆಧರಿಸಿ, ಸಿಐಡಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ತಂಡ 2015ರ ಆಗಸ್ಟ್‌ನಲ್ಲಿ ಅಪಾರ್ಟ್‌ಮೆಂಟ್ ಶೋಧಿಸಿತ್ತು. ಆಗ ಕಪಿಲ್‌ ಕುಟುಂಬಕ್ಕೆ ಸೇರಿದ ಫ್ಲ್ಯಾಟ್‌ನಲ್ಲಿ ₹ 4.37 ಕೋಟಿ ನಗದು, 2.5 ಕೆ.ಜಿ ಚಿನ್ನ, 37 ಕ್ಯಾರೆಟ್ ವಜ್ರ, 20 ಸಿ.ಡಿ, 22 ಡಿವಿಡಿ, ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ ಹಾಗೂ ಹಲವು ಮಹತ್ವದ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿದ್ದವು. ಈ ಕುರಿತು ತನಿಖೆ ನಡೆಯುತ್ತಿದೆ.
****
ಐಎಎಸ್‌ ಅಧಿಕಾರಿ ರಶ್ಮಿ ವಿ. ಮಹೇಶ್ ಅವರ ಮೇಲೆ ಮೈಸೂರಿನಲ್ಲಿ ಹಲ್ಲೆ ನಡೆಯಿತು. ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿ ಆಗಿದ್ದ ಸಂದರ್ಭದಲ್ಲಿ ರಶ್ಮಿ ಅವರಿಗೆ ಗುಂಪೊಂದು ಚಪ್ಪಲಿಯಿಂದ ಹಲ್ಲೆ ನಡೆಸಿತು. ಸಂಸ್ಥೆಯ ಹಿಂದಿನ ನಿರ್ದೇಶಕರ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ರಶ್ಮಿ ಅವರು ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆಯಿತು. ‘ರಾಜ್ಯದಲ್ಲಿ ಐಎಎಸ್‌ ಅಧಿಕಾರಿಯೊಬ್ಬರಿಗೆ ರಕ್ಷಣೆಯೂ ಇಲ್ಲವೇ?’ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.

ADVERTISEMENT

****
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಹರ್ಷ ಗುಪ್ತ ಅವರನ್ನು ಸರ್ಕಾರ ದಿಢೀರ್‌ ಎಂದು ವರ್ಗಾವಣೆ ಮಾಡಿತು. ಕಾಳಸಂತೆಕೋರರು, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಗುಪ್ತ ಅವರು ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದೇ ವರ್ಗಾವಣೆಗೆ ಕಾರಣ ಎಂಬ ಮಾತು ಆವಾಗ ಕೇಳಿಬಂದಿತ್ತು. ಈಗ ಅವರು ಮೈಸೂರು ಕಾಗದ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈಗಲೂ ಸಚಿವ ಕಿಮ್ಮನೆ ರತ್ನಾಕರ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
****
ಐಎಎಸ್‌ ಅಧಿಕಾರಿ ಎಂ.ಎನ್. ವಿಜಯಕುಮಾರ್ ಅವರು ಕರ್ತವ್ಯದಿಂದ ನಿವೃತ್ತರಾಗಲು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದವು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿತು. ವಿಜಯಕುಮಾರ್ ಅವರು ಪ್ರಾಮಾಣಿಕರಾಗಿ ಕೆಲಸ ಮಾಡಿದ್ದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ಅವರ ಕಡ್ಡಾಯ ನಿವೃತ್ತಿಗೆ ಕಾರಣವಾಯಿತು ಎಂಬ ಮಾತುಗಳು ಆಗ ಕೇಳಿಬಂದಿದ್ದವು.
****
ಮಂಡ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆಯ ಸುಧಾರಣೆಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಐಎಎಸ್‌ ಅಧಿಕಾರಿ ಡಾ.ಎಚ್‌.ಆರ್‌.ಮಹದೇವ ಅವರನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದ್ದು ಕೂಡ ಇತ್ತೀಚೆಗೆ ನಡೆಯಿತು. ವರ್ಗಾವಣೆಯನ್ನು ಸಕ್ಕರೆ ಸಚಿವ ಮಹದೇವ ಪ್ರಸಾದ್‌ ಪ್ರತಿಭಟಿಸಿ, ಮೈಷುಗರ್ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೂಡ ಕೊಟ್ಟರು. ನಂತರ ಮುಖ್ಯಮಂತ್ರಿಯವರು ಪ್ರಸಾದ್‌ ಮನವೊಲಿಸಿ, ಅದೇ ಸ್ಥಾನದಲ್ಲಿ ಮುಂದುವರಿಯುವಂತೆ ಮಾಡಿದರು.

****
ಸುನೀಲ್‌ ಅಗರ್‌ವಾಲ್‌ ಜಾಗೃತದಳದ ಐಜಿಪಿ ಆಗಿದ್ದಾಗ ದೆಹಲಿಯಲ್ಲಿ ಒಂದು ಸಮಾವೇಶ ಮುಗಿಸಿ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಗೆ ಹೋದ ಲಾಟರಿ  ಹಗರಣದ ಕಿಂಗ್‌ಪಿನ್‌ ಮಾರ್ಟಿನ್‌, ಅಗರ್‌ವಾಲ್‌ ಅವರಿಗೆ ₹ 60 ಲಕ್ಷ ಸಂದಾಯ ಮಾಡಿದ್ದ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.

***
ಬೆಂಗಳೂರಿನ ಕೆಫೆಯೊಂದರಲ್ಲಿ ಯುವತಿಯೊಬ್ಬಳ ಚಿತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ಕ್ಲಿಕ್ಕಿಸಿದ ಆರೋಪಕ್ಕೆ ಐಪಿಎಸ್‌ ಅಧಿಕಾರಿ ಡಾ.ಪಿ. ರವೀಂದ್ರನಾಥ್ ಗುರಿಯಾದರು. ಯುವತಿ ನೀಡಿದ ದೂರು ಕುರಿತು ತನಿಖೆ ನಡೆಸುವಂತೆ ಸಿಐಡಿಗೆ ಸರ್ಕಾರ ಆದೇಶಿಸಿತ್ತು.

ಈ ವಿವಾದ ಸಾರ್ವಜನಿಕ ಚರ್ಚೆಯ ವಿಷಯವಾಗಿದ್ದ ಸಂದರ್ಭದಲ್ಲಿ ರವೀಂದ್ರನಾಥ್‌ ಅವರು, ‘ನಾನು ದಲಿತ ಎಂಬ ಕಾರಣಕ್ಕೆ ಕೆಲವು ಮೇಲಧಿಕಾರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.