ADVERTISEMENT

ಅಂತರ್ಜಾಲದಲ್ಲಿಯೂ ಕ್ರಿಕೆಟ್ ಪ್ರೀತಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:25 IST
Last Updated 26 ಫೆಬ್ರುವರಿ 2011, 17:25 IST

ಅಹಮದಾಬಾದ್ (ಪಿಟಿಐ): ಕ್ರಿಕೆಟ್ ಜ್ವರದ ಕಾವು ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಪಂದ್ಯದ ವಿವರವನ್ನು ನೀಡಲು ಹೊಸ ಹೊಸ ವೆಬ್‌ಸೈಟ್‌ಗಳು ಸಿದ್ಧಗೊಳ್ಳುತ್ತಿವೆ. ಅದರಲ್ಲೂ ವಿಶೇಷವಾಗಿ ಹಿಂದಿನ ವಿಶ್ವಕಪ್‌ನ ಬಗ್ಗೆ ಹೆಚ್ಚು ಮಾಹಿತಿಯನ್ನು ಒಳಗೊಂಡ ವೆಬ್‌ಸೈಟ್‌ಗಳು ಕಾಣಿಸಿಕೊಳ್ಳುತ್ತಿವೆ.

ವಿಶ್ವಕಪ್ ಕ್ರಿಕೆಟ್‌ಗೋಸ್ಕರವೇ ಅಂತ ವಿವಿಧ ನಮೂನೆಯ ವೆಬ್‌ಸೈಟ್‌ಗಳನ್ನು ಇಂದಿಗೂ ಅಭಿವೃದ್ಧಿ ಮಾಡಲಾಗುತ್ತಿದೆ.ಅದರಲ್ಲೂ ಪಂದ್ಯ ನಡೆಯುವ ವೇಳಾಪಟ್ಟಿ, ಹಿಂದಿನ ಪಂದ್ಯಗಳ ಫಲಿತಾಂಶ, ಇಂದಿನ ಹಾಗೂ ಹಿಂದಿನ ದಾಖಲೆಗಳು, ವಿಡಿಯೋ ತುಣುಕು ಸೇರಿದಂತೆ ಹಲವು ಸೌಲಭ್ಯಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುತ್ತದೆ. 1975ರ ವಿಶ್ವಕಪ್‌ನಿಂದ ಹಿಡಿದ ಈಗ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಪಂದ್ಯಗಳವರೆಗೆ ಆದ ಬೆಳವಣಿಗೆಗಳು, ಈ ಸಲದ ವಿಶ್ವಕಪ್‌ನ ಮುಖ್ಯಾಂಶಗಳು ಸೇರಿದಂತೆ ಹಲವು ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗುತ್ತಿದೆ.

‘ಆಟಗಾರರ ವೈಯಕ್ತಿಕ ಸಾಧನೆಯ ಅಂಕಿ ಅಂಶಗಳ ಮಾಹಿತಿ ಅಂತರ್ಜಾಲದಲ್ಲಿ ನೀಡಿದ್ದೇವೆ. ಮೊದಲಿನಿಂದಲೂ ಕ್ರಿಕೆಟ್‌ನ ಬಗ್ಗೆ ಅತೀವ ಆಸಕ್ತಿ ಹೊಂದಿದ್ದೆವು. ಕ್ರಿಕೆಟ್‌ನ ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ ರೂಪಿಸಬೇಕು ಎಂದು ಕಳೆದ ಎರಡು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದೇವೆ. ಅದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇವೆ’ ಎನ್ನುತ್ತಾರೆ   ವೈಬ್‌ಸೈಟ್ ಅಭಿವೃದ್ಧಿ ಪಡಿಸುತ್ತಿರುವ ಮಸೂದ್ ವೊರಾಜೇ.

‘ತಂತ್ರಜ್ಞಾನದ ಬಗ್ಗೆ ಕೊಂಚ ತಿಳಿದಿತ್ತು. ಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಅದರಲ್ಲೂ ವಿಶೇಷವಾಗಿ ವಿಶ್ವಕಪ್‌ಗೆ ಸಂಬಂಧಿಸಿದ ಎಲ್ಲವನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು. ಈ ವೆಬ್‌ಸೈಟ್‌ನಲ್ಲಿ ಪ್ರೇಕ್ಷಕರು ನೇರವಾಗಿ ಪಂದ್ಯವನ್ನು ವೀಕ್ಷಿಸುವ, ಹಿಂದಿನ ವಿಶ್ವಕಪ್‌ನ ಕೆಲ ಸ್ಮರಣೀಯ ನೆನಪುಗಳನ್ನು ಇದರಲ್ಲಿ ನೋಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಮಸೂದ್ ತಿಳಿಸಿದ್ದಾರೆ.

1983ರ ವಿಶ್ವಕಪ್‌ನಲ್ಲಿ ಕಪಿಲ್‌ದೇವ್ ಜಿಂಬಾಬ್ಬೆ ವಿರುದ್ಧದ ಪಂದ್ಯದಲ್ಲಿ ಗಳಿಸಿದ ಅಜೇಯ 175 ರನ್‌ಗಳ ವಿಡಿಯೋ ಹಾಗೂ ಫೋಟೊಗಳನ್ನು ಹಾಕಲಾಗಿದೆ. ಪಂದ್ಯ ಮುಗಿದ ನಂತರ ಸಾಮಾಜಿಕ ತಾಣ ಫೇಸ್‌ಬುಕ್ ಸೇರಿದಂತೆ ಇತರೆ   ತಾಣಗಳಲ್ಲಿ ಪಂದ್ಯಗಳ ಕುರಿತು ಚರ್ಚೆ ಸಹ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.