ADVERTISEMENT

ಅಂತಿಮ ಟೆಸ್ಟ್ ರೋಚಕ ಡ್ರಾ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 19:30 IST
Last Updated 26 ನವೆಂಬರ್ 2011, 19:30 IST
ಅಂತಿಮ ಟೆಸ್ಟ್ ರೋಚಕ ಡ್ರಾ
ಅಂತಿಮ ಟೆಸ್ಟ್ ರೋಚಕ ಡ್ರಾ   

ಮುಂಬೈ: ಅಯ್ಯೋ...! ಎಂದು ಪ್ರೇಕ್ಷಕರು ನೊಂದುಕೊಂಡರು. ಇನ್ನೊಂದು ರನ್‌ಗಾಗಿ ರವಿಚಂದ್ರನ್ ಅಶ್ವಿನ್ ಓಡಲಿಲ್ಲವೆಂದು ಕೊರಗಿದ್ದೂ ಸಹಜ. ತುದಿಗಾಲಲ್ಲಿಯೇ ನಿಂತು ಸವಿದ ಆ ಕೊನೆಯೊಂದು ಓವರ್ ರೋಮಾಂಚನವು ಗೆಲುವಿನ ಸಂಭ್ರಮದಲ್ಲಿ ಕೊನೆಯಾಗಲಿಲ್ಲ. ಅದೇ ಭಾರಿ ಬೇಸರಕ್ಕೆ ಕಾರಣ.

ಜಯ ಖಂಡಿತ ಸಾಧ್ಯವಿತ್ತು. ಅಂತಿಮ ಎಸೆತದಲ್ಲಿ ಗಳಿಸಬೇಕಾಗಿದ್ದು ಎರಡು ರನ್. ಫಿಡೆಲ್ ಎಡ್ವರ್ಡ್ಸ್ ಎಸೆದ ಚೆಂಡನ್ನು ಹಿಂದೆ ಸರಿದು `ಲಾಂಗ್ ಆನ್~ ಕಡೆಗೆ ತಳ್ಳಿದರು ಅಶ್ವಿನ್. ಅದೇ ವೇಗದಲ್ಲಿ ಒಂದು ರನ್‌ಗಾಗಿ ಓಡಿ ಇನ್ನೊಂದು ಕಡೆಗೆ ಬ್ಯಾಟ್ ಊರಿ ನಿಂತುಬಿಟ್ಟರು. ಅದೇ ಅವರು ಮಾಡಿದ ತಪ್ಪು.

ತಮ್ಮಂದಿಗಿದ್ದ ವರುಣ್ ಆ್ಯರನ್ ರೀತಿಯಲ್ಲಿ ಮಿಂಚಿನಂತೆ ನುಗ್ಗಿ ಇನ್ನೊಂದು ರನ್ ಗಳಿಸಲು ಹಿಂದೇಟು ಹಾಕಿದರು. ಓಡಿದ್ದರೆ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಜಯಕ್ಕಾಗಿ ಪ್ರಯತ್ನಿಸಿದ ಸಮಾಧಾನವಾದರೂ ಸಿಗುತ್ತಿತ್ತು.

ಆದರೆ ಯಡವಟ್ಟು ಮಾಡಿದ ಚೆನ್ನೈನ ಈ ಕ್ರಿಕೆಟಿಗ. ಅರೆಮನಸ್ಸಿನಿಂದ ಓಡಿದ್ದರಿಂದ ಇನ್ನೂ ನಾಲ್ಕು ಹೆಜ್ಜೆ ಮುಂದಿಡುವ ಮುನ್ನವೇ ರನ್‌ಔಟ್ ಬಲೆಗೆ ಬಿದ್ದರು. ಒಂದೇ ಉಸಿರಿನಲ್ಲಿ ಎರಡು ರನ್‌ಗಾಗಿ ಮುನ್ನುಗ್ಗಿದ್ದರೆ ಖಂಡಿತ ಹೀಗೆ ಆಗುತ್ತಿರಲಿಲ್ಲ. ಆದ್ದರಿಂದ ಒಂದೇ ರನ್ ಅಂತರದಲ್ಲಿದ್ದ ಜಯ ಕೈತಪ್ಪಿತು. ಪರಿಣಾಮ ಸ್ಕೋರ್ ಸಮನಾದ ಐತಿಹಾಸಿಕ `ಡ್ರಾ~ ಟೆಸ್ಟ್ ಇದೆಂದು ಸಮಾಧಾನ ಪಡಬೇಕಾಯಿತು.
ಎದುರಾಳಿ ವೆಸ್ಟ್ ಇಂಡೀಸ್‌ನ ಯುವ ತಂಡಕ್ಕೆ ಮಾತ್ರ ಇದೇ ಅದ್ಭುತ ಸಾಧನೆ.

ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಯಿಂದ ಸಂಪೂರ್ಣ ಸರಣಿ ವಿಜಯದ ಸಂಭ್ರಮ ಕಿತ್ತುಕೊಂಡ ಸಂತಸ ಡರೆನ್ ಸಾಮಿಗೆ. ಅದಕ್ಕಿಂತ ಮುಖ್ಯವಾಗಿ ತಮ್ಮ ಕ್ಷೇತ್ರ ರಕ್ಷಕರು ಕಟ್ಟಿದ ಭದ್ರ ಕೋಟೆ ಅವರಿಗೆ ಭಾರಿ ಸಂತಸ ನೀಡಿತು. ಅಶ್ವಿನ್‌ಗೆ ಇನ್ನೊಂದು ರನ್ ಗಳಿಸಲು ಅವಕಾಶ ಮಾಡಿಕೊಡದ ಬದಲಿ ಆಟಗಾರ ದೆನೇಶ್ ರಾಮ್ದಿನ್ ಚುರುಕಾಗಿ ಪ್ರತಿಕ್ರಿಯಿಸಿದ ರೀತಿಯೂ ಮೂರನೇ ಹಾಗೂ ಅಂತಿಮ ಟೆಸ್ಟ್‌ನ ಕೊನೆಯ ದಿನದಾಟದ ರೋಚಕ ಕ್ಷಣ. ಅಷ್ಟೇ ಅಲ್ಲ ಅದೇ ನಿರ್ಣಾಯಕ ಘಟ್ಟವೂ ಆಯಿತು. ಭಾರತದವರು ಜಯ ದಕ್ಕಲಿಲ್ಲವೆಂದು ಮರುಗಲು ಕೂಡ ಕಾರಣವಾದ ಕ್ಷಣವದು.

ಮೊದಲ ಹಾಗೂ ಕೊನೆಯ ಟೆಸ್ಟ್‌ನಲ್ಲಿ `ಪಂದ್ಯ ಶ್ರೇಷ್ಠ~ನಾಗುವ ಜೊತೆಗೆ `ಸರಣಿಯ ಸರ್ವೋತ್ತಮ~ ಕೂಡ ಆದ ಅಶ್ವಿನ್ ಅವರು ಗೆಲುವೊಂದು ಸಾಧ್ಯವಾಗುವ ಇನ್ನೊಂದು ರನ್ ಗಳಿಸಿದ್ದರೆ ಸಿಗುತ್ತಿದ್ದ ಗೌರವ ಖಂಡಿತ ಭಾರಿ ದೊಡ್ಡದಾಗಿರುತಿತ್ತು. ಕ್ರಿಕೆಟ್ ಪ್ರೇಮಿಗಳು ಸದಾ ಮನದಲ್ಲಿ ಇಟ್ಟುಕೊಂಡು ಆರಾಧಿಸುತ್ತಿದ್ದರು. ಇದೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ತಂಡಕ್ಕೆ ಶತಕದ ಕೊಡುಗೆ ಕೊಟ್ಟರೂ ಎರಡನೇ ಇನಿಂಗ್ಸ್‌ನಲ್ಲಿ ಅನಿವಾರ್ಯವಾಗಿದ್ದ ಒಂದು ರನ್ ಗಳಿಸದ ಅವರ ಶ್ರಮವಂತೂ ವ್ಯರ್ಥ. `ಶತಕಕ್ಕೂ ಹಾಗೂ ಒಂದು ರನ್‌ಗೂ ಸಮನಾದ ಬೆಲೆ~ ಎಂದು ಕ್ರಿಕೆಟ್ ವಲಯದಲ್ಲಿ ಜನಪ್ರಿಯವಾಗಿರುವ ಮಾತಿದೆ. ಅಶ್ವಿನ್ ಅವರ ಈ ಪಂದ್ಯದಲ್ಲಿನ ಆಟವೇ ಅದಕ್ಕೆ ಸಾಕ್ಷಿ.

ವಿಂಡೀಸ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 134 ರನ್‌ಗಳಿಗೆ ನಿಯಂತ್ರಿಸಿದ್ದ ಭಾರತದ ಮುಂದೆ ಇದ್ದ ಗುರಿ 243 ರನ್. ಜಯದ ನಿರೀಕ್ಷೆಯೊಂದಿಗೆ ದಿನದ ಕೊನೆಯ ಎರಡು ಅವಧಿಯ ಆಟದಲ್ಲಿ ಹೋರಾಡಿದ ಆತಿಥೇಯರು ಕೊನೆಯೊಂದು ಓವರ್‌ನಲ್ಲಿ ಗಳಿಸಬೇಕಾಗಿದ್ದು ಕೇವಲ ಮೂರು ರನ್.

ಎಡ್ವರ್ಡ್ಸ್ ದಾಳಿಯಲ್ಲಿ ಮೂರು ಎಸೆತ ಪೋಲು ಮಾಡಿದ ವರುಣ್ ಆ್ಯರನ್ ಒಂದು ರನ್ ಗಿಟ್ಟಿಸಿದರು. ಆಗ `ಸ್ಟ್ರೈಕ್~ ಸಿಕ್ಕಿದ್ದು ಅಶ್ವಿನ್‌ಗೆ. ಮತ್ತೊಂದು ಎಸೆತ ವ್ಯರ್ಥ. ಆಗ ಕಾವೇರಿದ ವಾತಾವರಣ. ಬೇಕಿದ್ದ ಎರಡು ರನ್‌ಗಳಲ್ಲಿ ಅಶ್ವಿನ್ ಗಳಿಸಿದ್ದು ಕೇವಲ ಒಂದು. ಪರಿಣಾಮ ಭಾರತದ ಎರಡನೇ ಇನಿಂಗ್ಸ್‌ನ ಒಟ್ಟು ಮೊತ್ತ 9 ವಿಕೆಟ್ ನಷ್ಟಕ್ಕೆ 242. ಅಲ್ಲಿಗೆ ಸ್ಕೋರ್ ಸಮ. ಪಂದ್ಯ `ಡ್ರಾ~!

ಸ್ಕೋರ್ ಸಮವಾಗಿ ಪಂದ್ಯ `ಡ್ರಾ~ ಆಗಿದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಬಾರಿ. ಈ ಹಿಂದೆ 1996 (ಬುಲವಾಯೊ) ರಲ್ಲಿ ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ಹೀಗೆಯೇ ಅಂತ್ಯ ಕಂಡಿತ್ತು.

ಆಗ ಜಯಿಸಲು 205 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ಆರು ವಿಕೆಟ್ ಕಳೆದುಕೊಂಡು ಗಳಿಸಿದ್ದು 204 ರನ್. ವಾಂಖೇಡೆ ಕ್ರೀಡಾಂಗಣದಲ್ಲಿಯೂ ಭಾರತ ಹಾಗೆಯೇ ಜಯದ ಹೊಸ್ತಿಲಲ್ಲಿ ನಿಂತು ಕೈಹೊಸೆದುಕೊಂಡಿತು. ಈ ಪಂದ್ಯದಲ್ಲಿ ಜಯ ಕೈತಪ್ಪಿದ್ದರಿಂದ ಸಂಪೂರ್ಣ ಸರಣಿ ವಿಜಯ ಸಾಧ್ಯವಾಗಲಿಲ್ಲ. ಆದರೆ ಮೊದಲು ಎರಡು ಪಂದ್ಯಗಳನ್ನು ಜಯಿಸಿದ್ದರಿಂದ 2-0ಯಲ್ಲಿ ಸರಣಿ ಗೆದ್ದ ಸಂತಸದೊಂದಿಗೆ `ಮಹಿ~ ಪಡೆಯು ಟ್ರೋಫಿ ಎತ್ತಿ ಹಿಡಿಯಿತು.

ಸಾಕಷ್ಟು ನಾಟಕೀಯ ತಿರುವುಗಳನ್ನು ಕಂಡ ಮೂರನೇ ಟೆಸ್ಟ್‌ನ ಕೊನೆಯ ಹಣಾಹಣಿಯಲ್ಲಿ ಕೆರಿಬಿಯನ್ನರು ಒಂದೇ ಇನಿಂಗ್ಸ್‌ನ ಬ್ಯಾಟಿಂಗ್ ಶೂರರಾಗಿಯೇ ಉಳಿದರು. ಅಶ್ವಿನ್ ಹಾಗೂ ಪ್ರಗ್ಯಾನ್ ಓಜಾ ಶನಿವಾರ ಬೆಳಿಗ್ಗೆ ಸ್ಪಿನ್ ಮೋಡಿ ಮಾಡಿದಾಗ ಎರಡನೇ ಇನಿಂಗ್ಸ್‌ನಲ್ಲಿ ಬಾಕಿ ಎಂಟು ವಿಕೆಟ್‌ಗಳನ್ನು ಸುಲಭವಾಗಿ ಒಪ್ಪಿಸಿತು ವಿಂಡೀಸ್. ಗುರಿ ಮುಟ್ಟುವುದು ಕಷ್ಟವಲ್ಲವೆಂದು ಎರಡನೇ ಇನಿಂಗ್ಸ್ ಕಾರ್ಯಾಚರಣೆ ಆರಂಭಿಸಿದ ಭಾರತವೂ ಏರಿಳಿತ ಕಂಡಿತು. ಮೂರು ಜೀವದಾನ ಪಡೆದ ವೀರೇಂದ್ರ ಸೆಹ್ವಾಗ್ (60; 87 ನಿ., 65 ಎ., 8 ಬೌಂಡರಿ) ಅವರು `ರಿವರ್ಸ್ ಪೆಡಲ್ ಶಾಟ್~ ಪ್ರಯೋಗಿಸಿದ್ದು ತಮ್ಮ ಕಾಲಿನ ಮೇಲೆ ತಾವೇ ಕೊಡಲಿ ಹೊಡೆದುಕೊಂಡ ಕಥೆಯಂತೆ. ಬ್ಯಾಟ್‌ನ ಪಕ್ಕದಂಚಿನಿಂದ ಸಿಡಿದ ಚೆಂಡು ಸಾಮಿ ಕೈಸೇರಿತ್ತು. ಆಗ `ವೀರೂ~ಗೂ ಅಚ್ಚರಿ!

ಯಥಾ ಪ್ರಕಾರ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕ್ರಮವಾಗಿ ತಮ್ಮ ಪಾಲಿನ 33 ಹಾಗೂ 31 ರನ್ ಕೊಡುಗೆ ನೀಡಿ ನಿರ್ಗಮಿಸಿದರು. ಅಂಥ ಇಕ್ಕಟ್ಟಿನಲ್ಲಿ ಆಸರೆಯಾಗಿದ್ದು ವಿರಾಟ್ ಕೊಹ್ಲಿ (63; 136 ನಿ., 114 ಎ., 3 ಬೌಂಡರಿ, 1 ಸಿಕ್ಸರ್). ಅವರೇ ತಂಡವನ್ನು ಜಯದ ದಡ ಸೇರಿಸುತ್ತಾರೆ ಎನ್ನುವ ವಿಶ್ವಾಸ ಬಲವಾಗಿದ್ದಾಗಲೇ ದೇವೇಂದ್ರ ಬಿಶೋಗೆ ಬಲಿ. ಅದೇ ಪಂದ್ಯದ ರೋಚಕ ತಿರುವು. ಆಗ ತುದಿಗಾಲಲ್ಲಿ ನಿಂತರು ಇಪ್ಪತ್ತು ಸಾವಿರದಷ್ಟಿದ್ದ ಪ್ರೇಕ್ಷಕರು. ಆದರೆ ಅವರ ನಿರೀಕ್ಷೆಯಂತೆ ಗೆಲುವು ಸಾಧ್ಯವಾಗಲಿಲ್ಲ!

ಸ್ಕೋರ್ ವಿವರ:

ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 184.1 ಓವರುಗಳಲ್ಲಿ 590
ಭಾರತ: ಮೊದಲ ಇನಿಂಗ್ಸ್ 135.4 ಓವರುಗಳಲ್ಲಿ 482
ವೆಸ್ಟ್ ಇಂಡೀಸ್: ಎರಡನೇ ಇನಿಂಗ್ಸ್ 57.2 ಓವರುಗಳಲ್ಲಿ 134
(ಶುಕ್ರವಾರದ ಆಟದಲ್ಲಿ: 34 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 81)
ಕ್ರೇಗ್ ಬ್ರಾಥ್‌ವೈಟ್ ಸಿ ಸಚಿನ್ ತೆಂಡೂಲ್ಕರ್ ಬಿ ಪ್ರಗ್ಯಾನ್ ಓಜಾ  35
ಡರೆನ್ ಬ್ರಾವೊ ಸಿ ಮತ್ತು ಬಿ ಪ್ರಗ್ಯಾನ್ ಓಜಾ  48
ಕೀರನ್ ಪೊವೆಲ್ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್  11
ಮರ್ಲಾನ್ ಸ್ಯಾಮುಯಲ್ಸ್ ಸ್ಟಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ಪ್ರಗ್ಯಾನ್ ಓಜಾ 00
ಕಾರ್ಲ್‌ಟನ್ ಬಾ ಬಿ ರವಿಚಂದ್ರನ್ ಅಶ್ವಿನ್  01
ಡರೆನ್ ಸಾಮಿ ಸಿ ಮಹೇಂದ್ರ ಸಿಂಗ್ ದೋನಿ ಬಿ ರವಿಚಂದ್ರನ್ ಅಶ್ವಿನ್  10
ರವಿ ರಾಂಪಾಲ್ ಸಿ ಸಚಿನ್ ತೆಂಡೂಲ್ಕರ್ ಬಿ ಪ್ರಗ್ಯಾನ್ ಓಜಾ  00
ಫಿಡೆಲ್ ಎಡ್ವರ್ಡ್ಸ್ ಔಟಾಗದೆ  02
ದೇವೇಂದ್ರ ಬಿಶೂ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್  00
ಇತರೆ: (ಬೈ-3, ಲೆಗ್‌ಬೈ-4)  07
ವಿಕೆಟ್ ಪತನ: 1-6 (ಆ್ಯಡ್ರಿನ್ ಭರತ್; 4.1), 2-30 (ಕ್ರಿಕ್ ಎಡ್ವರ್ಡ್ಸ್; 10.6), 3-91 (ಕ್ರೇಗ್ ಬ್ರಾಥ್‌ವೈಟ್; 38.5), 4-112 (ಡರೆನ್ ಬ್ರಾವೊ; 46.1), 5-112 (ಮರ್ಲಾನ್ ಸ್ಯಾಮುಯಲ್ಸ್; 46.5), 6-117 (ಕಾರ್ಲ್‌ಟನ್ ಬಾ; 47.5), 7-120 (ಕೀರನ್ ಪೊವೆಲ್; 49.3), 8-129 (ರವಿ ರಾಂಪಾಲ್; 52.4), 9-134 (ಡರೆನ್ ಸಾಮಿ; 57.1), 10-134 (ದೇವೇಂದ್ರ ಬಿಶೂ; 57.2).
ಬೌಲಿಂಗ್: ಪ್ರಗ್ಯಾನ್ ಓಜಾ 27-5-47-6, ಇಶಾಂತ್ ಶರ್ಮ 8-2-15-0, ವರುಣ್ ಆ್ಯರನ್ 4-0-23-0, ರವಿಚಂದ್ರನ್ ಅಶ್ವಿನ್ 15.2-0-34-4, ವೀರೇಂದ್ರ ಸೆಹ್ವಾಗ್ 2-0-3-0, ಸಚಿನ್ ತೆಂಡೂಲ್ಕರ್ 1-0-5-0
ಭಾರತ: ಎರಡನೇ ಇನಿಂಗ್ಸ್ 64 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 242
ಗೌತಮ್ ಗಂಭೀರ್ ಸಿ ಡರೆನ್ ಸಾಮಿ ಬಿ ಫಿಡೆಲ್ ಎಡ್ವರ್ಡ್ಸ್  12
ವೀರೇಂದ್ರ ಸೆಹ್ವಾಗ್ ಸಿ ಡರೆನ್ ಸಾಮಿ ಬಿ ದೇವೇಂದ್ರ ಬಿಶೂ  60
ದ್ರಾವಿಡ್ ಸಿ ದೇನೇಶ್ ರಾಮ್ದಿನ್ (ಬದಲಿ ಆಟಗಾರ) ಬಿ ಸ್ಯಾಮುಯಲ್ಸ್  33
ಸಚಿನ್ ತೆಂಡೂಲ್ಕರ್ ಸಿ ಕ್ರಿಕ್ ಎಡ್ವರ್ಡ್ಸ್ ಬಿ ಮರ್ಲಾನ್ ಸ್ಯಾಮುಯಲ್ಸ್  03
ವಿ.ವಿ.ಎಸ್.ಲಕ್ಷ್ಮಣ್ ಸಿ ಆ್ಯಡ್ರಿನ್ ಭರತ್ ಬಿ ರವಿ ರಾಂಪಾಲ್  31
ವಿರಾಟ್ ಕೊಹ್ಲಿ ಸಿ ಡರೆನ್ ಸಾಮಿ ಬಿ ದೇವೇಂದ್ರ ಬಿಶೂ  63
ಮಹೇಂದ್ರ ಸಿಂಗ್ ದೋನಿ ಸಿ ಕ್ರಿಕ್ ಎಡ್ವರ್ಡ್ಸ್ ಬಿ ರವಿ ರಾಂಪಾಲ್  13
ರವಿಚಂದ್ರನ್ ಅಶ್ವಿನ್ ರನ್‌ಔಟ್ (ದೆನೇಶ್ ರಾಮ್ದಿನ್/ಕಾರ್ಲ್‌ಟನ್ ಬಾ)  14
ಇಶಾಂತ್ ಶರ್ಮ ಬಿ ರವಿ ರಾಂಪಾಲ್  10
ವರುಣ್ ಆ್ಯರನ್ ಔಟಾಗದೆ  02
ಇತರೆ: (ನೋಬಾಲ್-1)  01
ವಿಕೆಟ್ ಪತನ: 1-19 (ಗೌತಮ್ ಗಂಭೀರ್; 4.3), 2-101 (ವೀರೇಂದ್ರ ಸೆಹ್ವಾಗ್; 19.1), 3-106 (ಸಚಿನ್ ತೆಂಡೂಲ್ಕರ್; 20.5), 4-113 (ರಾಹುಲ್ ದ್ರಾವಿಡ್; 24.1), 5-165 (ವಿ.ವಿ.ಎಸ್.ಲಕ್ಷ್ಮಣ್; 39.3), 6-189 (ಮಹೇಂದ್ರ ಸಿಂಗ್ ದೋನಿ; 49.4), 7-224 (ವಿರಾಟ್ ಕೊಹ್ಲಿ; 59.1), 8-239 (ಇಶಾಂತ್ ಶರ್ಮ; 62.5), 9-242 (ರವಿಚಂದ್ರನ್ ಅಶ್ವಿನ್; 63.6).
ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 7-0-28-1 (ನೋಬಾಲ್-1), ರವಿ ರಾಂಪಾಲ್ 16-1-56-3, ಮರ್ಲಾನ್ ಸ್ಯಾಮುಯಲ್ಸ್ 25-0-93-2, ದೇವೇಂದ್ರ ಬಿಶೂ 16-0-65-2
ಫಲಿತಾಂಶ: ಅಂತಿಮ ಟೆಸ್ಟ್ `ಡ್ರಾ~; ಭಾರತಕ್ಕೆ ಮೂರು ಪಂದ್ಯಗಳ ಸರಣಿಯಲ್ಲಿ 2-0ಯಿಂದ ವಿಜಯ.
ಪಂದ್ಯ ಹಾಗೂ ಸರಣಿ ಶ್ರೇಷ್ಠ: ರವಿಚಂದ್ರನ್ ಅಶ್ವಿನ್ (ಭಾರತ).
ಏಕದಿನ ಸರಣಿಯ ಮೊದಲ ಪಂದ್ಯ: ನವೆಂಬರ್ 29 (ಬಾರಾಬತಿ ಕ್ರೀಡಾಂಗಣ, ಕಟಕ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.