ADVERTISEMENT

ಅಂಧರ ಟಿ-20 ವಿಶ್ವಕಪ್; ಭಾರತಕ್ಕೆ ಭರ್ಜರಿ ಗೆಲುವು

ಆರ್ಭಟಿಸಿದ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST
ಶತಕ ಗಳಿಸಿದ ಸಂಭ್ರಮದಲ್ಲಿ ಪ್ರಕಾಶ್ ಜಯರಾಮಯ್ಯ	-ಪ್ರಜಾವಾಣಿ ಚಿತ್ರ
ಶತಕ ಗಳಿಸಿದ ಸಂಭ್ರಮದಲ್ಲಿ ಪ್ರಕಾಶ್ ಜಯರಾಮಯ್ಯ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡಿಗ ಪ್ರಕಾಶ್ ಜಯರಾಮಯ್ಯ (172) ಅವರ ಶತಕದ ಬಲದಿಂದ ಭಾರತ ತಂಡ ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ 216 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯರು 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 341 ರನ್‌ಗಳ ಸವಾಲಿನ ಮೊತ್ತ ಪೇರಿಸಿದರು. ಆದರೆ, ಆಸೀಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ಕೇವಲ 126 ರನ್ ಮಾತ್ರ ಗಳಿಸಿತು.

ಮೂರನೇ ಶತಕ: ಪ್ರಕಾಶ್ ಗಳಿಸಿದ ಮೂರನೇ ಶತಕವಿದು. ಈ ಮೊದಲು  ಪಾಕಿಸ್ತಾನ ವಿರುದ್ಧ ಎರಡು ಹಾಗೂ ಇಂಗ್ಲೆಂಡ್ ವಿರುದ್ಧ ಒಂದು ಶತಕ ಗಳಿಸಿದ್ದರು. ಮಾಜಿ ಕ್ರಿಕೆಟಿಗ ಸಯ್ಯದ್ ಕೀರ್ಮಾನಿ ಟಾಸ್ ಚಿಮ್ಮುವ ಮೂಲಕ ಉದ್ಘಾಟನಾ ಪಂದ್ಯಕ್ಕೆ ಚಾಲನೆ ನೀಡಿದರು. ಸೋಮವಾರ ನಡೆಯುವ ಪಂದ್ಯದಲ್ಲಿ ಶೇಖರ್ ನಾಯ್ಕ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ಎದುರು ಸೆಣಸಲಿದೆ.

ADVERTISEMENT

ದಿನದ ಇತರ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 167 ರನ್ ಅಂತರದಿಂದ ಗೆಲುವು ಸಾಧಿಸಿದರೆ, ಶ್ರೀಲಂಕಾ ಏಳು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ನೇಪಾಳ ತಂಡ ಬಾಂಗ್ಲಾದೇಶದ ವಿರುದ್ಧ 9 ವಿಕೆಟ್‌ಗಳ ಜಯ ಪಡೆಯಿತು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 341 (ಪ್ರಕಾಶ್ ಜಯರಾಮಯ್ಯ 172, ಅಜಯ್ ರೆಡ್ಡಿ 52, ಕೇತನ್ ಪಟೇಲ್ 50). ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 126. ಫಲಿತಾಂಶ: ಭಾರತಕ್ಕೆ 216 ರನ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.