ADVERTISEMENT

ಅಖಿಲ ಭಾರತ ಬಿಎಸ್‌ಎನ್‌ಎಲ್ ಹಾಕಿ: ಜಾರ್ಖಂಡ್ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಬೆಂಗಳೂರು: ಚಾಂಪಿಯನ್ಸ್ ಜಾರ್ಖಂಡ್ ತಂಡದವರು 11ನೇ ಅಖಿಲ ಭಾರತ ಬಿಎಸ್‌ಎನ್‌ಎಲ್ ಹಾಕಿ ಟೂರ್ನಿಯ ಪ್ರಶಸ್ತಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಖಂಡ್‌ನ ಆಟಗಾರರು ಆತಿಥೇಯ ಕರ್ನಾಟಕ ತಂಡವನ್ನು 3-0 ಗೋಲುಗಳಿಂದ ಸೋಲಿಸಿದರು.

ವಿಜಯೀ ತಂಡದ ಪರ ರೋಷನ್ ಭೆಂಗ್ರಾ (35ನೇ ನಿ.), ಗೇಂದ್ರಾ ಟಿಗ್ಗಾ (65ನೇ ನಿ.) ಮತ್ತು ಸುಧೀರ್ ಭೆಂಗ್ರಾ (69ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಇದಕ್ಕೆ ಮೊದಲು ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡದವರು 2-0 ಗೋಲುಗಳಿಂದ ಒಡಿಶಾ ತಂಡವನ್ನು ಸೋಲಿಸಿದ್ದರು. ಕರ್ನಾಟಕದ ಪರ 14ನೇ ನಿಮಿಷದಲ್ಲಿ ಜಾರ್ಜ್ ಡೊಮ್ನಿಕ್ ಮತ್ತು 21ನೇ ನಿಮಿಷದಲ್ಲಿ ಮಹಮ್ಮದ್ ನಜೀಮ್ ಬೆಪಾರಿ ತಲಾ ಒಂದು ಗೋಲು ಗಳಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಜಾರ್ಖಂಡ್ ತಂಡದವರು ನವದೆಹಲಿಯ ಎನ್‌ಟಿಆರ್ ತಂಡವನ್ನು 5-0 ಗೋಲುಗಳಿಂದ ಸುಲಭವಾಗಿ ಸೋಲಿಸಿದರು. ಜಾರ್ಖಂಡ್ ಪರ ಮೇಜಜ್ ಪ್ರಧಾನ್, ಗೇಂದ್ರಾ ಟಿಗ್ಗಾ, ಅಮೃತ್ ಟರ್ಕಿ, ಅನ್‌ಮೋಲ್ ಎಕ್ಕಾ, ಜಾಖಬ್ ಟೋಪ್ಪೊ ತಲಾ ಒಂದು ಗೋಲು ತಂದಿತ್ತರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಒಡಿಶಾ ಆಟಗಾರರು 2-1 ಗೊಲುಗಳಿಂದ ದೆಹಲಿ ತಂಡವನ್ನು ಸೋಲಿಸಿದರು.

ಕಳೆದ ವರ್ಷ ಜಾರ್ಖಂಡ್‌ನಲ್ಲಿ ನಡೆಯಬೇಕಿದ್ದ ಈ ಟೂರ್ನಿ ನಡೆದಿರಲಿಲ್ಲ. ಅದರ ಹಿಂದಿನ ವರ್ಷ ಬೆಂಗಳೂರಿನಲ್ಲಿಯೇ ಈ ಟೂರ್ನಿ ನಡೆದಿತ್ತು. ಆ ಸಲ ಕೂಡಾ ಫೈನಲ್‌ನಲ್ಲಿ ಕರ್ನಾಟಕ ತಂಡದವರು ಜಾರ್ಖಂಡ್ ಎದುರು ಸೋಲನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.