ADVERTISEMENT

ಅಗ್ರಸ್ಥಾನಕ್ಕೇರಿದ ಆನಂದ್ ಕುಮಾರ್

ಪ್ಯಾರಾ ಬ್ಯಾಡ್ಮಿಂಟನ್ ರ‍್ಯಾಂಕಿಂಗ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಬೆಂಗಳೂರು: ಕರ್ನಾಟಕದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಬೋರೇಗೌಡ ಆನಂದ್ ಕುಮಾರ್ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ರ‍್ಯಾಂಕಿಂಗ್ ಪಟ್ಟಿಯ ಸಿಂಗಲ್ಸ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಎಸ್‌ಎಲ್-4 ವಿಭಾಗದಲ್ಲಿ ಮೊದಲ ಸ್ಥಾನದಲ್ಲಿರುವ ಆನಂದ್, ಡಬಲ್ಸ್‌ನಲ್ಲಿ ಏಳನೇ ಸ್ಥಾನ ಹೊಂದಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾಗ ಎರಡನೇ ಸ್ಥಾನದಲ್ಲಿದ್ದರು.
ಈ ಟೂರ್ನಿ ಮುಗಿದ ಕೆಲ ದಿನಗಳ ನಂತರ ಅಗ್ರಸ್ಥಾನಕ್ಕೇರುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಸೋಲ್‌ನಲ್ಲಿ ಜರುಗಿದ ಮೂರನೇ ವಿಕ್ಟರ್ ಏಷ್ಯನ್ ಪ್ಯಾರಾಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಚಿನ್ನ ಮತ್ತು ಡಬಲ್ಸ್‌ನಲ್ಲಿ ಕಂಚು ಜಯಿಸಿದ್ದರು.

`ಅಗ್ರಸ್ಥಾನ ಪಡೆಯಬೇಕೆನ್ನುವುದು ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ಆದರೆ, ಸಿಕ್ಕ ಸ್ಥಾನವನ್ನು ಉಳಿಸಿಕೊಂಡು ಹೋಗುವ ಸವಾಲಿದೆ. ನವೆಂಬರ್‌ನಲ್ಲಿ ಜರ್ಮನ್‌ಯಲ್ಲಿ ವಿಶ್ವ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಡೆಯಲಿದೆ. ಅಲ್ಲಿಯೂ ಪ್ರಶಸ್ತಿ ಗೆಲ್ಲಬೇಕೆಂಬ ಕನಸಿದೆ. ಅದಕ್ಕಾಗಿ ಈಗಿನಿಂದಲೇ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ' ಎಂದು ಆನಂದ್ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶಾಸಕ ಸಿ. ಎನ್. ಅಶ್ವತ್ಥ್ ನಾರಾಯಣ್, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಗೌರವ ಕಾರ್ಯದರ್ಶಿ ಸುಧೀರ್ ಮತ್ತು ಬೆಂಗಳೂರು ಉತ್ತರ ಜಿಲ್ಲೆ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.