ADVERTISEMENT

ಅಜಯ್, ದಿಜು ಭಾರತದ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಭಾರತದ ಅಜಯ್ ಜಯರಾಮನ್ ಹಾಗೂ ವಿ. ದಿಜು ಸೋಮವಾರ ಮಕಾವ್‌ನಲ್ಲಿ ಆರಂಭವಾಗುವ ಥಾಮಸ್ ಕಪ್ ಏಷ್ಯಾ ವಲಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆ ಎನಿಸಿದ್ದಾರೆ.

ಆದರೆ. ಈ ಸ್ಪರ್ಧಿಗಳಿಗೆ ಇಲ್ಲಿ ಪ್ರಬಲ ಸವಾಲು ಎದುರಾಗುವ ನಿರೀಕ್ಷೆಯಿದೆ. ಅಜಯ್ ಇಲ್ಲಿ ಅಗ್ನಿ ಪರೀಕ್ಷೆ ಎದುರಿಸಬೇಕಿದೆ. ಏಕೆಂದರೆ, ಈ ಸ್ಪರ್ಧಿ ಮೊದಲ ಸಲ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಲ್ಲಿ ಕನಿಷ್ಠ ಎಂಟರಘಟ್ಟಕ್ಕಾದರೂ ತಲುಪಬೇಕು ಎನ್ನುವ ಗುರಿ ಈ ಆಟಗಾರನದು.

`ಗುರಿ ಸಾಧನೆಗೆ ಕಠಿಣ ಅಭ್ಯಾಸ ನಡೆಸಿದ್ದೇನೆ~ ಎಂದು ಅವರು ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ದಿಜು `ಎಂಟರ ಘಟ್ಟ ತಲುಪುವುದು ಸುಲಭದ ಮಾತಲ್ಲ~ ಎಂದಿದ್ದಾರೆ. ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ಚೆನ್ನೈ ಮೂಲದ ಅಜಯ್ ಇಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸ ಮೂಡಿಸಿದ್ದಾರೆ.

ಪಿ. ಕಶ್ಯಪ್, ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ. ರೂಪೇಶ್ ಕುಮಾರ್-ಸನಾವೇ ಥಾಮಸ್ ಜೋಡಿ    ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಅಜಯ್ ಜೊತೆಗೂಡಿ ಆಡಲಿರುವ ದಿಜು ಯಾವ ರೀತಿಯ ಹೋರಾಟ ನಡೆಸುತ್ತಾರೆ ಎನ್ನುವ ಕುತೂಹಲವಿದೆ.
ಮೊದಲ ಪಂದ್ಯದಲ್ಲಿ ಭಾರತ ತಂಡ ಸಿಂಗಪುರ ತಂಡದ ಸವಾಲನ್ನು ಎದುರಿಸಲಿದೆ. ನಂತರ ಕ್ರಮವಾಗಿ ಮಕಾವ್ ಹಾಗೂ ಇಂಡೋನೇಷ್ಯಾದ ಜೊತೆ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.