ADVERTISEMENT

ಅಜ್ಲಾನ್ ಷಾ ಹಾಕಿ: ಭಾರತಕ್ಕೆ ಕಂಚು

ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮಿಂಚಿದ ರೂಪಿಂದರ್‌ಪಾಲ್‌

ಪಿಟಿಐ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಗೋಲು ಗಳಿಸಿದ ಭಾರತದ ಎಸ್‌.. ವಿ. ಸುನಿಲ್ (ಎಡ)  ಅವರ ಸಂಭ್ರಮ  -ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಭಾರತದ ಎಸ್‌.. ವಿ. ಸುನಿಲ್ (ಎಡ) ಅವರ ಸಂಭ್ರಮ -ಎಎಫ್‌ಪಿ ಚಿತ್ರ   

ಇಪೊ, ಮಲೇಷ್ಯಾ: ಅಜ್ಲಾನ್ ಷಾ ಕಪ್‌ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸುವಲ್ಲಿ ವಿಫಲವಾದ ಭಾರತ ಹಾಕಿ ತಂಡ ಕಂಚಿನ ಪದಕ ಬಗಲಿಗೆ ಹಾಕಿಕೊಂಡಿತು.

ಮೂರನೇ ಸ್ಥಾನಕ್ಕಾಗಿ ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು  4-0 ಗೋಲುಗಳಿಂದ ಭಾರತ ಮಣಿಸಿತು. ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ ರೂಪಿಂದರ್‌ಪಾಲ್ ಸಿಂಗ್ ಭಾರತದ ಜಯದ ರೂವಾರಿ. 17 ಮತ್ತು 27ನೇ ನಿಮಿಷಗಳಲ್ಲಿ ಎದುರಾಳಿ ತಂಡದ ಗೋಲ್‌ಕೀಪರ್‌ ರಿಚರ್ಡ್ ಜಾಯ್ಸ್‌ ಅವರನ್ನು ವಂಚಿಸಿ ಗೋಲು ಗಳಿಸಿದ ರೂಪಿಂದರ್‌ಪಾಲ್‌ ತಮ್ಮ ತಂಡದಲ್ಲಿ ಆತ್ಮವಿಶ್ವಾಸ ತುಂಬಿದರು.

ಈ ಮುನ್ನಡೆಯ ನಂತರ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದ ಮನಪ್ರೀತ್ ಸಿಂಗ್ ಬಳಗ ನಿರಂತರ ಆಕ್ರಮಣ ನಡೆಸಿ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿತು. ಎಸ್‌.ವಿ.ಸುನಿಲ್‌ 48ನೇ ನಿಮಿಷದಲ್ಲಿ ಗೋಲು ಗಳಿಸಿ ಟೂರ್ನಿಯಲ್ಲಿ ತಮ್ಮ ಖಾತೆಯನ್ನು ತೆರೆದರು. 


ಕೊನೆಯ ನಿಮಿಷದಲ್ಲಿ ತಲ್ವಿಂದರ್ ಸಿಂಗ್‌ ಗಳಿಸಿದ ಗೋಲು ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿತು. ಅವರಿಗೂ ಇದು ಟೂರ್ನಿಯ ಚೊಚ್ಚಲ ಗೋಲು.
ಶುಕ್ರವಾರ ಸೋಲುಂಡ ಭಾರತ ಶನಿವಾರ ಪರಿಣಾಮಕಾರಿ ಆಟ ಪ್ರದರ್ಶಿಸಿತು.

ಆಕ್ರಮಣ ಮತ್ತು ರಕ್ಷಣಾ ವಿಭಾಗದವರು ಉತ್ತಮ ಹೊಂದಾಣಿ ಕೆಯ ಆಟ ಪ್ರದರ್ಶಿಸಿದರು. ಎದು ರಾಳಿಗಳ ಗೋಲು ಪೆಟ್ಟಿಗೆ ಬಳಿ ನಿರಂತರ ದಾಳಿ ಇಟ್ಟ ಆಕ್ರಮಣ ವಿಭಾಗದವರು ಮೊದಲ ಕ್ವಾರ್ಟರ್‌ನಲ್ಲಿ ಲಭಿಸಿದ ಎರಡು ಅವಕಾಶಗಳನ್ನು ಕೈಚೆಲ್ಲಿದರು. ನಂತರ ಸುಧಾರಿಸಿಕೊಂಡು ಫಲ ಕಂಡರು. ಪಂದ್ಯದ ಎರಡನೇ ನಿಮಿಷ ದಲ್ಲಿ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಗೋಲಾಗಿ ಪರಿವರ್ತನೆಯಾಗಲಿಲ್ಲ.

ಮೂರನೇ ನಿಮಿಷದಲ್ಲಿ ಕಿವೀಸ್‌ ರಕ್ಷಣಾ ವಿಭಾಗದವರ ವೈಫಲ್ಯದ ಲಾಭ ಪಡೆದುಕೊಂಡ ಮನದೀಪ್ ಸಿಂಗ್ ಚೆಂಡಿನ ಮೇಲೆ ಹಿಡಿತ ಸಾಧಿಸಿದರು. ಆದರೆ ಈ ಅವಕಾಶದಲ್ಲೂ ಭಾರತ ಫಲ ಕಾಣಲಿಲ್ಲ. ಮನದೀಪ್‌ ಅವರ ‘ರಿವರ್ಸ್ ಡ್ರೈವ್‌’ ಅನ್ನು ತಡೆಯಲು ನ್ಯೂಜಿ ಲ್ಯಾಂಡ್‌ ಗೋಲ್‌ಕೀಪರ್‌ ಯಶಸ್ವಿಯಾದರು.

ಐದನೇ ನಿಮಿಷದಲ್ಲಿ ಮನಪ್ರೀತ್ ಸಿಂಗ್‌ ಉತ್ತಮ ಅವಕಾಶ ವನ್ನು ಒದಗಿಸಿಕೊಟ್ಟರು. ಆದರೆ ಪಾಸ್ ಪಡೆದ ಮನದೀಪ್‌ಗೆ ಅದನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸ ಲಾಗಲಿಲ್ಲ.  12ನೇ ನಿಮಿಷದಲ್ಲೂ ಈ ಜೋಡಿ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿತು.

ತಂಡಕ್ಕೆ ಲಭಿಸಿದ ಮೂರು ಮತ್ತು ನಾಲ್ಕನೇ ಪೆನಾಲ್ಟಿ ಕಾರ್ನರ್ ಅವ ಕಾಶಗಳಲ್ಲಿ ರೂಪಿಂದರ್ ಸಿಂಗ್‌ ಫಲ ಕಂಡರು.  ಐದನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ 3–1 ಗೋಲುಗಳಿಂದ ಜಪಾನ್ ವಿರುದ್ಧ ಜಯ ಸಾಧಿಸಿತು.

ಪ್ರಶಸ್ತಿ ಎತ್ತಿ ಹಿಡಿದ ಬ್ರಿಟನ್‌ 
ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾಗೆ ಸೋಲುಣಿಸಿದ ಬ್ರಿಟನ್‌ ತಂಡದವರು ಅಜ್ಲಾನ್ ಷಾ ಕಪ್‌ ಹಾಕಿ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು. ಶನಿವಾರ ನಡೆದ ಫೈನಲ್‌ನಲ್ಲಿ 4–3 ಅಂತರದ ಜಯ ಸಾಧಿಸಿದ ತಂಡದವರು 23 ವರ್ಷಗಳ ನಂತರ  ಪ್ರಶಸ್ತಿ ಗೆದ್ದು ಕೇಕೆ ಹಾಕಿದರು. ಎರಡು ಗೋಲು ಗಳಿಸಿದ ಡೇವಿಡ್‌ ಗುಡ್‌ಫೀಲ್ಡ್‌  ಬ್ರಿಟನ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.