ADVERTISEMENT

ಅಣ್ಣಾಮಲೈ ವಿವಿ ತಂಡ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಮೂಡುಬಿದಿರೆ: ಉತ್ತಮ ಆಟದ ಜತೆಗೆ ಅದೃಷ್ಟದ ಬೆಂಬಲವನ್ನೂ ಪಡೆದ ತಮಿಳುನಾಡು ಚಿದಂಬರಮ್‌ನ ಅಣ್ಣಾಮಲೈ ವಿಶ್ವವಿದ್ಯಾಲಯ ತಂಡ ಬುಧವಾರ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಅಣ್ಣಾಮಲೈ ಮತ್ತು ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ಸೆಮಿಫೈನಲ್ ಲೀಗ್‌ನ ಮೂರು ಪಂದ್ಯಗಳಿಂದ ತಲಾ ಐದು ಪಾಯಿಂಟ್ಸ್ ಸಂಗ್ರಹಿಸಿದ್ದವು. ಹೀಗಾಗಿ ಲೀಗ್ ಪಂದ್ಯಗಳಲ್ಲಿ ಪಡೆದ ಮತ್ತು ವಿರುದ್ಧ ಪಾಯಿಂಟ್‌ಗಳ ಲೆಕ್ಕಾಚಾರ ಹಾಕಲಾಯಿತು. ಅಣ್ಣಾಮಲೈ ವಿ.ವಿ., ಆತಿಥೇಯ ತಂಡಕ್ಕಿಂತ ಕೇವಲ ಒಂದು ಅಂಕಗಳ ಅಂತರದಲ್ಲಿ ಮುಂದೆ ಇದ್ದ ಕಾರಣ ಆ ತಂಡವನ್ನು ವಿಜಯಿಯೆಂದು ಘೋಷಿಸಲಾಯಿತು.

ಮಂಗಳೂರು ವಿವಿ ಎರಡನೇ ಸ್ಥಾನ ಪಡೆದರೆ, ಚೆನ್ನೈನ ಎಸ್‌ಆರ್‌ಎಂ ವಿ.ವಿ. ಮೂರನೇ ಮತ್ತು ವಿಶಾಖಪಟ್ಟಣದ ಆಂಧ್ರ ವಿ.ವಿ. ನಾಲ್ಕನೇ ಸ್ಥಾನ ಪಡೆಯಿತು. ರಾಷ್ಟ್ರೀಯ ಸೀನಿಯರ್ ಆಟಗಾರ ರಾಜೇಶ್, ಮಂಗಳವಾರ ಒಂದಿಷ್ಟು ಸಪ್ಪೆಯಾಗಿ ಕಂಡರೆ, ಬುಧವಾರ ಅಣ್ಣಾಮಲೈ ತಂಡದ ಎರಡೂ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿ ಗಮನ ಸೆಳೆದರು. ಅರ್ಹವಾಗಿ ಟೂರ್ನಿಯ `ಆಲ್‌ರೌಂಡ್ ಆಟಗಾರ~ ಗೌರವ ಅವರಿಗೇ ದಕ್ಕಿತು.

ಮಂಗಳವಾರ, ಎಸ್.ಆರ್.ಎಂ. ವಿರುದ್ಧ ಅಪೂರ್ಣ ಲೀಗ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಮಂಗಳೂರು ವಿ.ವಿ. ನಿರೀಕ್ಷೆಯಂತೆ ಅಂತಿಮವಾಗಿ 24-29, 29-27, 29-16ರಲ್ಲಿ ಆ ಪಂದ್ಯದಲ್ಲಿ ಜಯಗಳಿಸಿತು. ಆದರೆ ಮುಂದಿನ ಪಂದ್ಯದಲ್ಲಿ ಅಣ್ಣಾಮಲೈ ವಿ.ವಿ. 29-21, 29-10ರಲ್ಲಿ ಮಂಗಳೂರು  ವಿ.ವಿ.ಗೆ ಸೋಲುಣಿಸಿತು.

ಇತರ ಪಂದ್ಯಗಳಲ್ಲಿ ಎಸ್.ಆರ್.ಎಂ. ವಿ.ವಿ. 29-20, 18-29, 29-8ರಲ್ಲಿ ಆಂಧ್ರ ವಿ.ವಿ. ವಿರುದ್ಧ; ಮಂಗಳೂರು ವಿ.ವಿ. 29-24, 29-20ರಲ್ಲಿ ಆಂಧ್ರ ವಿ.ವಿ. ವಿರುದ್ಧ ಜಯಗಳಿಸಿದವು. ಮಹತ್ವದ ಕೊನೆಯ ಪಂದ್ಯದಲ್ಲಿ ಅಣ್ಣಾಮಲೈ 22-29, 29-8, 29-23ರಲ್ಲಿ ಎಸ್.ಆರ್.ಎಂ. ವಿ.ವಿ. ವಿರುದ್ಧ ಗೆಲುವು ಪಡೆಯಿತು.

ಮಂಗಳೂರು ವಿ.ವಿ. ಮತ್ತು ಆಳ್ವಾಸ್ ಕಾಲೇಜು ಜಂಟಿ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಆತಿಥೇಯ ತಂಡದ (ಆಳ್ವಾಸ್ ಆಟಗಾರ) ಕಿರಣ್ ಕುಮಾರ್ `ಉತ್ತಮ ದಾಳಿಗಾರ~, ಎಸ್.ಆರ್.ಎಂ.ನ ವೆಂಗಲ ರಾವ್ `ಉತ್ತಮ ರಕ್ಷಣೆ ಆಟಗಾರ~ ಗೌರವಕ್ಕೆ ಪಾತ್ರರಾದರು.

ಹಿರಿಯ ಆಟಗಾರ ಮಾದೇಗೌಡ, ಕುವೆಂಪು ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಂ.ಪ್ರಕಾಶ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಚ್.ನಾಗಲಿಂಗಪ್ಪ, ಕುಲಸಚಿವ ಪ್ರೊ.ಚಿನ್ನಪ್ಪ ಗೌಡ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಮೋಹನ ಆಳ್ವ ಸಮಾರೋಪ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.