ADVERTISEMENT

ಅಥ್ಲೀಟ್‌ಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದೇವೆ: ರಾಥೋಡ್‌

ರಾಯಿಟರ್ಸ್
Published 9 ಮೇ 2018, 19:30 IST
Last Updated 9 ಮೇ 2018, 19:30 IST
ರಾಜ್ಯವರ್ಧನ್ ಸಿಂಗ್‌ ರಾಥೋಡ್‌
ರಾಜ್ಯವರ್ಧನ್ ಸಿಂಗ್‌ ರಾಥೋಡ್‌   

ನವದೆಹಲಿ: ‘2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ಅತ್ಯಾಧುನಿಕ ಮೂಲ ಸೌಕರ್ಯ ಕಲ್ಪಿಸಿದ್ದು, ಅಥ್ಲೀಟ್‌ಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದೇವೆ’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಥ್ಲೀಟ್‌ಗಳನ್ನು ಗುರುತಿಸಿ ಅವರಿಗೆ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆಯ ಅಡಿಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಗಾಯಗೊಂಡ ಅಥ್ಲೀಟ್‌ಗಳಿಗಾಗಿ ಪುನಶ್ಚೇತನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪರಿಣತರ ತಂಡವನ್ನು ನೇಮಿಸಿದ್ದೇವೆ. ಹೈ ಪರ್ಫಾರ್ಮನ್ಸ್‌ ಡೈರೆಕ್ಟರ್‌, ಸಿಇಒ, ಅಥ್ಲೀಟ್‌ ರಿಲೇಷನ್‌ಶಿಪ್‌ ಮ್ಯಾನೇಜರ್‌ಗಳು ಮತ್ತು ಸಂಶೋಧನಾ ಅಧಿಕಾರಿಗಳು ಈ ತಂಡದಲ್ಲಿದ್ದಾರೆ’ ಎಂದಿದ್ದಾರೆ.

‘ಶೂಟಿಂಗ್‌ ಫೆಡರೇಷನ್‌ಗೆ ನಾವು ₹200 ಕೋಟಿ ಅನುದಾನ ನೀಡಿದ್ದೇವೆ. ಹೀಗಾಗಿಯೇ ವಿಶ್ವಕಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟರ್‌ಗಳು ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಕುಸ್ತಿ, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌ ಮತ್ತು ಆರ್ಚರಿಯಲ್ಲೂ ನಮ್ಮವರು ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಈ ಕ್ರೀಡೆಗಳಲ್ಲಿ ‍ಪದಕದ ಸಾಧನೆ ಮಾಡಿದವರನ್ನು ಗುರುತಿಸಿ ಅವರನ್ನು ಟಾಪ್‌ ಯೋಜನೆಗೆ ಸೇರಿಸುವ ಜವಾಬ್ದಾರಿ ಟಾಪ್‌ ತಂಡದ್ದು. ಅದನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ಎರಡು ಪದಕ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.