ADVERTISEMENT

ಅಥ್ಲೆಟಿಕ್ಸ್‌ನಲ್ಲೂ ಆಘಾತ: ಮಯೂಖಾ ಜಾನಿ, ಓಂ ಪ್ರಕಾಶ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಲಂಡನ್ (ಪಿಟಿಐ): ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಮೊದಲ ದಿನವೇ ಭಾರತಕ್ಕೆ ಹಿನ್ನಡೆ ಉಂಟಾಗಿದೆ. ಪುರುಷರ ಶಾಟ್‌ಪಟ್‌ನಲ್ಲಿ ಓಂ ಪ್ರಕಾಶ್ ಕರಾನಾ ಮತ್ತು ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಮಯೂಖಾ ಜಾನಿ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. ಇವರಿಬ್ಬರಿಗೆ ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶವನ್ನೂ ನೀಡಲು ಸಾಧ್ಯವಾಗಲಿಲ್ಲ.

ಓಂ ಪ್ರಕಾಶ್ ಶಾಟ್‌ಪಟ್‌ನಲ್ಲಿ `ಬಿ~ ಗುಂಪಿನಲ್ಲಿ 10ನೇ ಸ್ಥಾನ ಪಡೆದು, ಒಟ್ಟಾರೆಯಾಗಿ 19ನೇ ಸ್ಥಾನದಲ್ಲಿ ಕಾಣಿಸಿಕೊಂಡರು. 7.26 ಕೆ.ಜಿ. ಭಾರದ ಕಬ್ಬಿಣದ ಗುಂಡನ್ನು ಅವರು 19.86 ಮೀ. ದೂರ ಎಸೆಯುವಲ್ಲಿ ಯಶಸ್ವಿಯಾದರು. ಓಂ ಪ್ರಕಾಶ್ ಒಲಿಂಪಿಕ್ಸ್‌ಗೆ ಸಜ್ಜಾಗುವ ನಿಟ್ಟಿನಲ್ಲಿ ಹಂಗರಿಯಲ್ಲಿ ಎರಡು ವರ್ಷಗಳ ಕಾಲ ತರಬೇತಿ ನಡೆಸಿದ್ದರು.

ಮೇ ತಿಂಗಳಲ್ಲಿ ನಡೆದ ಸ್ಪರ್ಧೆಯಲ್ಲಿ 20.69 ಮೀ. ದೂರ ಎಸೆದು ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದ ಓಂಪ್ರಕಾಶ್ ಆ ಸಾಧನೆಯ ಸನಿಹವೂ ಬರಲಿಲ್ಲ. ವೈಯಕ್ತಿಕ ಶ್ರೇಷ್ಠ ಸಾಧನೆ ತೋರಿದ್ದರೆ ಅವರು ಫೈನಲ್ ಸುತ್ತು ಪ್ರವೇಶಿಸುತ್ತಿದ್ದರು. ಏಕೆಂದರೆ ಫೈನಲ್‌ಗೆ ಅರ್ಹತೆ ಪಡೆದ 12ನೇ ಹಾಗೂ ಕೊನೆಯ ಸ್ಪರ್ಧಿ ಗುಂಡನ್ನು 20.25 ಮೀ. ದೂರ ಎಸೆದಿದ್ದರು.

25ರ ಹರೆಯದ ಓಂ ಪ್ರಕಾಶ್ ಮೊದಲ ಪ್ರಯತ್ನದಲ್ಲಿ ಕಬ್ಬಿಣದ ಗುಂಡನ್ನು 19.40 ಮೀ. ದೂರ ಎಸೆದರು.

ಎರಡನೇ ಪ್ರಯತ್ನದಲ್ಲಿ 19.86 ಮೀ. ದೂರ ಕಂಡುಕೊಂಡರು. ಆದರೆ ಅವರ ಮೂರನೇ ಪ್ರಯತ್ನ ಫೌಲ್ ಆಯಿತು. ಅಮೆರಿಕದ ರೀಸ್ ಹೊಫಾ (21.36 ಮೀ.) ಅರ್ಹತಾ ಹಂತದಲ್ಲಿ ಅಗ್ರಸ್ಥಾನ ಪಡೆದರು. 

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಮಯೂಖಾ `ಬಿ~ ಗುಂಪಿನಲ್ಲಿ 13ನೇ ಹಾಗೂ ಒಟ್ಟಾರೆಯಾಗಿ 22ನೇ ಸ್ಥಾನ ಪಡೆದರು. ಮೊದಲ ಪ್ರಯತ್ನದಲ್ಲಿ 13.77 ಮೀ. ದೂರ ಜಿಗಿದ ಅವರು ಆ ಬಳಿಕ 13.68 ಮೀ. ಜಿಗಿದರು. ಮುಂದಿನ ಎರಡು ಪ್ರಯತ್ನಗಳಲ್ಲಿ ಅವರಿಗೆ 13.62 ಮೀ. ದೂರ ಜಿಗಿಯಲು ಮಾತ್ರ ಸಾಧ್ಯವಾಯಿತು.

ಕಜಕಸ್ತಾನದ ಓಲ್ಗಾ ರಿಪಕೋವಾ (14.79 ಮೀ) ಅರ್ಹತಾ ಹಂತದಲ್ಲಿ ಮೊದಲ ಸ್ಥಾನ ಪಡೆದರೆ, ಜಮೈಕದ ಕಿಂಬರ್ಲಿ ವಿಲಿಯಮ್ಸ (14.53) ಹಾಗೂ ಇಂಗ್ಲೆಂಡ್‌ನ ಅಲ್ಡಾಮಾ ಯಮಿಲಿ (14.45) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದೊಂದಿಗೆ ಫೈನಲ್ ಸುತ್ತು ಪ್ರವೇಶಿಸಿದರು.

ಹೋದ ವರ್ಷ ಜಪಾನ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 14.11 ಮೀ. ದೂರ ಜಿಗಿದದ್ದು ಮಯೂಖಾ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ ಬಳಿಕ ಅವರು ಒಮ್ಮೆಯೂ 14 ಮೀ. ಗಡಿಯನ್ನು ದಾಟಿಲ್ಲ. ಒಲಿಂಪಿಕ್ಸ್‌ಗೆ ಕೆಲವು ದಿನಗಳಿರುವಾಗ ಜರ್ಮನಿಯಲ್ಲಿ ನಡೆದಿದ್ದ ಸ್ಪರ್ಧೆಯೊಂದರಲ್ಲಿ 13.95 ಮೀ. ದೂರ ಜಿಗಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.