ADVERTISEMENT

ಅಥ್ಲೆಟಿಕ್ಸ್: ಖುಶ್ಬೀರ್ ರಾಷ್ಟ್ರೀಯ ದಾಖಲೆ:ಅನಿತಾಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಪಟಿಯಾಲ (ಪಿಟಿಐ): ಕರ್ನಾಟಕದ ಅನಿತಾ ಇಲ್ಲಿ ನಡೆಯುತ್ತಿರುವ 16ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ 20 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಕೂಟದ ಮೂರನೇ ದಿನವಾದ ಸೋಮವಾರ ಈ ವಿಭಾಗದಲ್ಲಿ ಅಮೃತಸರದ ಕಾಲೇಜ್ ವಿದ್ಯಾರ್ಥಿ ಖುಶ್ಬೀರ್ ಕೌರ್ (1:37:28) ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಎರಡು ವರ್ಷಗಳ ಹಿಂದೆ ಜಪಾನ್‌ನ ನೋಮಿ ಸಿಟಿಯಲ್ಲಿ ನಡೆದ ಏಷ್ಯನ್ ರೇಸ್ ನಡಿಗೆ ಚಾಂಪಿಯನ್‌ಷಿಪ್‌ನಲ್ಲಿ ಎಲ್.ದೀಪಾಮಾಲ ದೇವಿ (1:37:44) ದಾಖಲೆಯನ್ನು ಅಳಿಸಿ ಹಾಕಿದರು.

ಒಲಿಂಪಿಕ್ಸ್‌ನ `ಬಿ~ ದರ್ಜೆ (1: 38:00)ಯ ಮಟ್ಟವನ್ನೂ 18ರ ಹರೆಯದ ಖುಶ್ಬೀರ್ ಮೀರಿ ನಿಂತರು. ಆದರೆ ನಡಿಗೆ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಮಟ್ಟ ನಿರ್ಧರಿಸುವ ಕೂಟ ಇದಲ್ಲ. ಹಾಗಾಗಿ ಈ ಸಾಧನೆಯನ್ನು ಲಂಡನ್ ಒಲಿಂಪಿಕ್ಸ್‌ಗೆ ಪರಿಗಣಿಸುವಂತಿಲ್ಲ.

ಎರಡನೇ ಸ್ಥಾನ ಪಡೆದ ಅನಿತಾ (1:44:19) ಚಿನ್ನದ ಪದಕ ವಿಜೇತೆ ಖುಶ್ಬೀರ್‌ಗೆ ಪೈಪೋಟಿ ನೀಡಿದರು.
ಪುರುಷರ ವಿಭಾಗದ ನಡಿಗೆ ಸ್ಪರ್ಧೆಯಲ್ಲೂ ಕೇರಳದ ಕೆ.ಟಿ.ಇರ್ಫಾನ್ (1:22:14) ಏಳು ವರ್ಷಗಳ ಹಳೆಯ ದಾಖಲೆ ಮುರಿದು ಅಚ್ಚರಿ ಮೂಡಿಸಿದರು. ತಮ್ಮ ರಾಜ್ಯದವರೇ ಆದ ಪಿ.ಎಸ್.ಜಲನ್ (1:30:17) ಅವರ ರಾಷ್ಟ್ರೀಯ ದಾಖಲೆ ಅಳಿಸಿ ಹಾಕಿದರು. ಜೊತೆಗೆ ಒಲಿಂಪಿಕ್ಸ್‌ನ `ಎ~ ದರ್ಜೆ (1:22:30)ಯ ಮಟ್ಟವನ್ನೂ ದಾಟಿ ನಿಂತರು. ಆದರೆ ಖುಶ್ಬೀರ್ ರೀತಿ ಇರ್ಫಾನ್ ಕೂಡ ನಿರಾಶೆ ಅನುಭವಿಸಬೇಕಾಯಿತು.

ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಚತ್ತೀಸ್‌ಘಡ ತಂಡ ಪ್ರತಿನಿಧಿಸುತ್ತಿರುವ ಜೋಜೆಫ್ ಜಿ. ಅಬ್ರಹಾಂ (49.98 ಸೆ.) ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಪಂಜಾಬ್‌ನ ಭೂಪಿಂದರ್ ಕೌರ್ ಮೊದಲ ಸ್ಥಾನ ಪಡೆದರು. ಕೂಟದಲ್ಲಿ ಒಎನ್‌ಜಿಸಿ (5 ಚಿನ್ನ, 5 ಬೆಳ್ಳಿ, 3 ಕಂಚು) ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೇರಳ ಆ ನಂತರದ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.