ADVERTISEMENT

ಅನೂಪ್‌ಗೆ ನಾಯಕತ್ವದ ಜವಾಬ್ದಾರಿ

ವಿಶ್ವಕಪ್‌ ಕಬಡ್ಡಿ ಟೂರ್ನಿಗೆ ಭಾರತ ತಂಡ ಪ್ರಕಟ

ಪಿಟಿಐ
Published 20 ಸೆಪ್ಟೆಂಬರ್ 2016, 19:30 IST
Last Updated 20 ಸೆಪ್ಟೆಂಬರ್ 2016, 19:30 IST
ಮಂಗಳವಾರ ನಡೆದ ಸಮಾರಂಭದಲ್ಲಿ ಕಬಡ್ಡಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸಲಾಯಿತು. ಈ ವೇಳೆ ಆಟಗಾರರು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ (ನಡುವೆ), ಭಾರತ ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಅಧ್ಯಕ್ಷೆ ಮೃದುಲಾ ಭಂಡುರಿಯಾ ಜೊತೆ ಒಟ್ಟಾಗಿ ಕಾಣಿಸಿಕೊಂಡರು. –ಪಿಟಿಐ ಚಿತ್ರ
ಮಂಗಳವಾರ ನಡೆದ ಸಮಾರಂಭದಲ್ಲಿ ಕಬಡ್ಡಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸಲಾಯಿತು. ಈ ವೇಳೆ ಆಟಗಾರರು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ (ನಡುವೆ), ಭಾರತ ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಅಧ್ಯಕ್ಷೆ ಮೃದುಲಾ ಭಂಡುರಿಯಾ ಜೊತೆ ಒಟ್ಟಾಗಿ ಕಾಣಿಸಿಕೊಂಡರು. –ಪಿಟಿಐ ಚಿತ್ರ   

ಮುಂಬೈ: ಮುಂದಿನ ತಿಂಗಳು ಅಹಮದಾಬಾದ್‌ನಲ್ಲಿ ನಡೆ ಯಲಿರುವ ವಿಶ್ವಕಪ್‌ ಕಬಡ್ಡಿ ಟೂರ್ನಿಗೆ 14 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ರೈಡರ್‌ ಅನೂಪ್ ಕುಮಾರ್ ಅವರಿಗೆ ನಾಯಕತ್ವ  ಲಭಿಸಿದೆ.

ಆಲ್‌ರೌಂಡ್‌ ಆಟಗಾರ ಪಂಜಾಬ್‌ನ ಮಂಜಿತ್‌ ಚಿಲಾರ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.  ಅಂತಿಮ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಒಂದು ತಿಂಗಳಿಂದ ರಾಷ್ಟ್ರೀಯ ತಂಡದ ಶಿಬಿರ ನಡೆದಿತ್ತು.

ಮಂಗಳವಾರ ಇಲ್ಲಿ ನಡೆದ ಸಮಾ ರಂಭದಲ್ಲಿ  ತಂಡ ಮತ್ತು  ಪೋಷಾಕು ಬಿಡುಗಡೆ ಮಾಡಲಾಯಿತು. ಅಕ್ಟೋಬರ್‌ 7ರಿಂದ ನಡೆಯಲಿರುವ ಟೂರ್ನಿಯಲ್ಲಿ 12 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಬಲ್ವಾನ್‌ ಸಿಂಗ್ ತಂಡದ ಮುಖ್ಯ ಕೋಚ್‌ ಆಗಿದ್ದು, ಭಾಸ್ಕರನ್‌ ಅವರನ್ನು ಸಹಾಯಕ ಕೋಚ್ ನೇಮಿಸಲಾಗಿದೆ.

ಆತಿಥೇಯ ಭಾರತ, ಇರಾನ್, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಪೋಲೆಂಡ್‌, ಥಾಯ್ಲೆಂಡ್, ಜಪಾನ್‌, ಅರ್ಜೆಂಟೀನಾ ಮತ್ತು ಕೆನ್ಯಾ ದೇಶಗಳು ಪಾಲ್ಗೊಳ್ಳಲಿವೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ಎದುರು ಪೈಪೋಟಿ ನಡೆಸಲಿದೆ.

‘ಅಹಮದಾಬಾದ್‌ನಲ್ಲಿ ನಡೆದ ಶಿಬಿರದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಅಂತಿಮ ತಂಡಕ್ಕೆ ಆಯ್ದುಕೊಳ್ಳಲಾಯಿತು. ಪ್ರತಿ ವಿಭಾಗದಲ್ಲಿ ಪರಿಣತಿ ಹೊಂದಿರುವ ವರನ್ನು ಆಯ್ಕೆ ಮಾಡಿ ಸಮತೋಲನದ ತಂಡ ಇರುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿತ್ತು. ಹಿಂದಿನ ಎಲ್ಲಾ ಟೂರ್ನಿಗಳಿಗಿಂತ ಈ ಬಾರಿಯ ವಿಶ್ವಕಪ್‌ ಟೂರ್ನಿ ಹೆಚ್ಚು ಪೈಪೋಟಿಯಿಂದ ಕೂಡಿರಲಿದೆ’ ಎಂದು ಬಲ್ವಾನ್‌ ಸಿಂಗ್ ಹೇಳಿದರು.

ಅನಾವರಣ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಅವರು ತಂಡದ ಪೋಷಾಕು ಬಿಡುಗಡೆ ಮಾಡಿದರು. ಕಪಿಲ್‌ ದೇವ್‌ ತಮ್ಮ ಹಸ್ತಾಕ್ಷರ ಒಳಗೊಂಡ ಟೀ ಶರ್ಟ್‌ ಅನ್ನು  ಅನೂಪ್‌ ಗೆ ನೀಡಿದರು. 

ತಂಡ ಇಂತಿದೆ: ಅನೂಪ್‌ ಕುಮಾರ್‌ (ನಾಯಕ, ಹರಿಯಾಣ), ಅಜಯ್‌ ಠಾಕೂರ್‌ (ಹಿಮಾಚಲ ಪ್ರದೇಶ), ದೀಪಕ್‌ ಹೂಡಾ (ಹರಿಯಾಣ), ಧರ್ಮರಾಜ್‌ ಚೇರಲಾತನ್‌ (ತಮಿಳು ನಾಡು), ಜಸ್ವೀರ್  ಸಿಂಗ್ (ಹರಿಯಾಣ), ಕಿರಣ್‌ ಪರ್ಮಾರ್‌ (ಗುಜರಾತ್‌), ಮಂಜೀತ್‌ ಚಿಲಾರ (ಪಂಜಾಬ್‌), ಮೋಹಿತ್‌ ಚಿಲಾರ (ಪಂಜಾಬ್‌), ನಿತಿನ್ ತೋಮಾರ್‌ (ಉತ್ತರ ಪ್ರದೇಶ), ಪರದೀಪ್‌ ನರ್ವಾಲ್‌ (ಹರಿಯಾಣ), ರಾಹುಲ್ ಚೌಧರಿ (ಉತ್ತರ ಪ್ರದೇಶ), ಸಂದೀಪ್‌ ನರ್ವಾಲ್‌ ಮತ್ತು  ಸುರೇಂದರ್‌ ನಾಡಾ (ಇಬ್ಬರೂ ಹರಿಯಾಣ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.