ADVERTISEMENT

ಅಪಾರ ಟಿಕೆಟ್ ಬೇಡಿಕೆ ಈಡೇರಿಸುವುದು ಕಷ್ಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:40 IST
Last Updated 26 ಫೆಬ್ರುವರಿ 2011, 18:40 IST
ಅಪಾರ ಟಿಕೆಟ್ ಬೇಡಿಕೆ ಈಡೇರಿಸುವುದು ಕಷ್ಟ
ಅಪಾರ ಟಿಕೆಟ್ ಬೇಡಿಕೆ ಈಡೇರಿಸುವುದು ಕಷ್ಟ   

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಲಾಠಿ ಏಟು ಬೀಳುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ಬಯಸದು. ಆದರೆ ದೊಡ್ಡ ಪಂದ್ಯಗಳು ನಡೆದಾಗ ಅಪಾರ ಸಂಖ್ಯೆಯಲ್ಲಿ ಟಿಕೆಟ್‌ಗಾಗಿ ಬೇಡಿಕೆ ಇರುತ್ತದೆ. ಅದನ್ನು ಈಡೇರಿಸುವುದೂ ಕಷ್ಟ.

-ಹೀಗೆ ಹೇಳಿದ್ದು ಐಸಿಸಿ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಹರೂನ್ ಲಾರ್ಗಟ್. ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಪಂದ್ಯದ ಟಿಕೆಟ್‌ಗಾಗಿ ಮೂವತ್ತು ಸಾವಿರದಷ್ಟು ಜನರು ಸರದಿಯಲ್ಲಿ ನಿಂತು, ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದ್ದಕ್ಕೆ ಅವರು ಶನಿವಾರ ಇಲ್ಲಿ ವಿಷಾದ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇಂಥ ಘಟನೆಗಳನ್ನು ನೋಡುವುದನ್ನು ಖಂಡಿತ ಇಷ್ಟಪಡುವುದಿಲ್ಲ. ಆದರೆ ಸ್ಥಳೀಯ ಆಡಳಿತದ ಮೇಲೆಯೂ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎನ್ನುವ ಜವಾಬ್ದಾರಿ ಇರುತ್ತದೆ’ ಎಂದು ತಮ್ಮ ಕಡೆಗೆ ತೂರಿಬಂದ ಟಿಕೆಟ್ ಮಾರಾಟಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಇಂಥ ಅನೇಕ ಸವಾಲುಗಳನ್ನು ಪತ್ರಕರ್ತರು ಕೇಳಿದರೂ ಅವುಗಳಿಗೆ ಲಾರ್ಗಟ್ ಅವರಿಂದ ಮನವರಿಕೆಯಾಗುವಂಥ ಉತ್ತರಗಳು ಮಾತ್ರ ಬರಲಿಲ್ಲ. ‘ಟಿಕೆಟ್ ಹಂಚಿಕೆ ವಿಷಯದಲ್ಲಿ ಐಸಿಸಿ ಕ್ರಮ ಸರಿಯಾಗಿಯೇ ಇದೆ. ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಕ್ಲಬ್‌ಗಳಿಗೆ ಟಿಕೆಟ್ ಕೊಡಲೇಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಮಾರುವ ಟಿಕೆಟ್‌ಗಳ ಸಂಖ್ಯೆ ಕಡಿಮೆಯೇ ಆಗಿರುತ್ತದೆ. ಮುಂಬೈನಲ್ಲಿ ಟಿಕೆಟ್ ಮಾರಾಟ ವಿಷಯದಲ್ಲಿ ಐಸಿಸಿ ಅಧ್ಯಕ್ಷ ಶರದ್ ಪವಾರ್ ಅವರಿಗೇ ಐಸಿಸಿ ಪತ್ರ ಬರೆದದ್ದು ದೊಡ್ಡ ವಿವಾದವೇನೂ ಇಲ್ಲ. ಹಾಗೆಯೇ ಕೋಲ್ಕತ್ತದಿಂದ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದರಲ್ಲಿ ಸಂಚಿದೆ ಎಂದು ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಹೇಳಿದ್ದರ ಬಗ್ಗೆ ಎನೂ ಗೊತ್ತಿಲ್ಲ, ಯಾವ ಸಂಚೂ ಇಲ್ಲ’ ಎಂದು ಅವರು ಹೇಳಿದರು.

‘ಸ್ಥಳೀಯರಿಗಾಗಿ ಮೀಸಲಿಟ್ಟ ಟಿಕೆಟ್‌ಗಳ ಮಾರಾಟದ ಜವಾಬ್ದಾರಿ ಆತಿಥೇಯರಿಗೆ ಇರುತ್ತದೆ. ಈ ವಿಷಯವಾಗಿ ಟೂರ್ನಿ ಸಂಘಟಿಸುವವರ ಜೊತೆಗೆ ಮೊದಲೇ ಒಪ್ಪಂದ ಆಗಿರುತ್ತದೆ. ಜೊತೆಗೆ ಲಭ್ಯವಾಗುವ ಟಿಕೆಟ್‌ಗಳ ಮಾಹಿತಿಯನ್ನೂ ಮೊದಲೇ ನೀಡಲಾಗಿರುತ್ತದೆ’ ಎಂದ ಅವರು ‘ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂಥ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಮುಂದಿನ ಪಂದ್ಯಗಳಿಗೆ ಮಾಡಲಾಗುತ್ತಿದೆ. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್‌ಗೆ ಕೂಡ ಅದೇ ರೀತಿಯಲ್ಲಿ ಟಿಕೆಟ್‌ಗಳನ್ನು ಕ್ರಿಕೆಟ್ ಪ್ರೇಮಿಗಳಿಗೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.