ADVERTISEMENT

ಅಪ್ಪನ ಎದುರಲ್ಲೇ ಅಸುನೀಗಿದ ಮಗ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST
ಅಪ್ಪನ ಎದುರಲ್ಲೇ ಅಸುನೀಗಿದ ಮಗ!
ಅಪ್ಪನ ಎದುರಲ್ಲೇ ಅಸುನೀಗಿದ ಮಗ!   

ಬೆಂಗಳೂರು: ಎಲ್ಲಾ ಹುಡುಗರಂತೆ ದೇಶ ತಂಡವನ್ನು ಪ್ರತಿನಿಧಿಸಬೇಕು ಎಂಬ ಕನಸು ಹೊತ್ತು ಕಣಕ್ಕಿಳಿದಿದ್ದ ಪ್ರತಿಭಾವಂತ ಆಟಗಾರ ಡಿ.ವೆಂಕಟೇಶ್ ಆಡುವುದನ್ನು ಗ್ಯಾಲರಿಯಲ್ಲಿ ಕುಳಿತ ಅಪ್ಪ ಆರ್.ಧನರಾಜ್ ತುಂಬಾ ಆಸಕ್ತಿಯಿಂದಲೇ ವೀಕ್ಷಿಸುತ್ತಿದ್ದರು.

ಆದರೆ ವೆಂಕಟೇಶ್ ಹಣೆಯಲ್ಲಿ ವಿಧಿ ಬರೆದಿದ್ದೇ ಬೇರೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ 23 ವರ್ಷ ವಯಸ್ಸಿನ ವೆಂಕಟೇಶ್ ಆಡುತ್ತಲೇ ಅಪ್ಪನ ಎದುರು ವಿಧಿವಶವಾದರು. ಹಾಗಾಗಿ ಬುಧವಾರ ಮಧ್ಯಾಹ್ನ ಕ್ರೀಡಾ ವಲಯದಲ್ಲಿ ಶೋಕ ಮಡುಗಟ್ಟಿತ್ತು. ಜೊತೆಗೆ ಫುಟ್‌ಬಾಲ್ ಸಂಸ್ಥೆ ವಿರುದ್ಧ ಆಕ್ರೋಶ ಕಟ್ಟೆಯೊಡೆಯಿತು.

`ನನ್ನ ಮಗನ ಸಾವಿಗೆ ಫುಟ್‌ಬಾಲ್ ಸಂಸ್ಥೆಯೇ ಕಾರಣ. ಆ್ಯಂಬುಲೆನ್ಸ್ ಹಾಗೂ ವೈದ್ಯರು ಇದ್ದಿದ್ದರೆ ನನ್ನ ಮಗ ಬದುಕುತ್ತಿದ್ದ. ಈಗ ನನ್ನ ಪುತ್ರನನ್ನು ಯಾರು ತಂದುಕೊಡುತ್ತಾರೆ ಹೇಳಿ? ಯಾವುದೇ ಸೌಲಭ್ಯವಿಲ್ಲದ ಇವರು ಟೂರ್ನಿ ಆಯೋಜಿಸಿದ್ದೇಕೆ~ ಎಂದು ತಂದೆ ಧನರಾಜ್ ನೋವಿನೊಂದಿಗೆ `ಪ್ರಜಾವಾಣಿ~ ಜೊತೆ ತಮ್ಮ ಅಳಲು ತೋಡಿಕೊಂಡರು.

ಟೂರ್ನಿ ನಡೆಯುವಾಗ ಅನುಸರಿಬೇಕಾದ ನಿಯಮ ಹಾಗೂ ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಹಾಗೂ ಬಿಡಿಎಫ್‌ಎ ಮರೆತಿದ್ದು ಇದಕ್ಕೆಲ್ಲಾ ಕಾರಣ ಎಂದು ಆಟಗಾರರು, ಪ್ರೇಕ್ಷಕರು ಹಾಗೂ ಕುಟುಂಬವರ್ಗದವರು ಆರೋಪಿಸಿದರು. ಕೆಲವರು ಕುರ್ಚಿ ಎಸೆದು ತಮ್ಮ ಕೋಪ ವ್ಯಕ್ತಪಡಿಸಿದರು.

`ವೆಂಕಟೇಶ್ ಅಂಗಣದಲ್ಲಿ ಕುಸಿದ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಸರಿಯಾದ ವೈದ್ಯರೇ ಇರಲಿಲ್ಲ. ಜೊತೆಗೆ ಸ್ಥಳದಲ್ಲಿ ಸರಿಯಾದ ಚಿಕಿತ್ಸಾ ಸಾಧನೆಗಳು ಕೂಡ ಇಲ್ಲಿರಲಿಲ್ಲ. ಆಟಗಾರರೇ ಅವರನ್ನು ಆಟೋದಲ್ಲಿ ಮಲಗಿಸಿಕೊಂಡು ಆಸ್ಪತ್ರೆಗೆ ಹೋಗಬೇಕಾಯಿತು. ಉಸಿರಾಡಲು ಕಷ್ಟಪಡುವ ವ್ಯಕ್ತಿಯನ್ನು ಆಟೋದಲ್ಲಿ ಕರೆದುಕೊಂಡು ಹೋದರೆ ಉಳಿಯುತ್ತಾನೆಯೇ? ಆ್ಯಂಬುಲೆನ್ಸ್ ಇದ್ದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ~ ಎಂದು ಚಿಕ್ಕಪ್ಪ ಮುನಿರಾಜ್ ಹೇಳಿದರು.

ಮುನಿಸ್ವಾಮಿ ಎಂ.ಜಿ.ರಸ್ತೆಯಲ್ಲಿ ದಿನ ರಾತ್ರಿ ಸೈಕಲ್‌ನಲ್ಲಿ ಚಹಾ ಮಾರಿ ಜೀವನ ಸಾಗಿಸುತ್ತಿದ್ದಾರೆ. ಧನರಾಜ್ ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿ ಉದ್ಯೋಗಿ. `ನನ್ನ ಮಗನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಸಂಸ್ಥೆಯು ಪದಾಧಿಕಾರಿಗಳು ಸರಿಯಾದ ಸೌಲಭ್ಯ ಕಲ್ಪಿಸದೇ ನನ್ನ ಮಗನ ಪ್ರಾಣವನ್ನು ಕಸಿದುಕೊಂಡರು~ ಎಂದು ಧನರಾಜ್ ನುಡಿದರು. 

ವೆಂಕಟೇಶ್ ಹಲಸೂರಿನ ಗೌತಮಪುರದ ಹುಡುಗ. ಫುಟ್‌ಬಾಲ್ ಕ್ರೀಡೆಯನ್ನೇ ಜೀವಾಳವಾಗಿಸಿಕೊಂಡಿರುವ ಇವರು ಈ  ಮೊದಲು ಎಲ್‌ಆರ್‌ಡಿಎ ತಂಡವನ್ನು ಪ್ರತಿನಿಧಿಸುತ್ತಿದ್ದರು. 

 ಕರ್ನಾಟಕದ ಸ್ಥಳೀಯ ಫುಟ್‌ಬಾಲ್ ಲೀಗ್‌ನಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲ ಬಾರಿ. ಆದರೆ ಕಂಠೀರವ ಕ್ರೀಡಾಂಗಣದಲ್ಲಿ 2004 ರಲ್ಲಿ ನಡೆದ ಫೆಡರೇಷನ್ ಕಪ್ ಟೂರ್ನಿಯ ವೇಳೆ ವಿದೇಶದ ಆಟಗಾರ ಕ್ರಿಸ್ಟಿಯಾನೊ ಜೂನಿಯರ್ ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.