ADVERTISEMENT

ಅಫ್ರಿದಿ ದಾಳಿಗೆ ಕಂಗೆಟ್ಟ ಕೆನಡಾ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST


ಕೊಲಂಬೊ: ಶಾಹಿದ್ ಅಫ್ರಿದಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರಲ್ಲದೆ, ಸೋಲಿನ ಭೀತಿ ಎದುರಿಸಿದ್ದ ಪಾಕಿಸ್ತಾನ ತಂಡವನ್ನು ರಕ್ಷಿಸಿದರು. ಅವರ ಸೊಗಸಾದ ಬೌಲಿಂಗ್‌ನಿಂದ ಪಾಕ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಕೆನಡಾ ವಿರುದ್ಧ 46 ರನ್‌ಗಳ ಜಯ ಸಾಧಿಸಿತು.

ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 185 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೆನಡಾ 42.5 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟಾಯಿತು. ಅಫ್ರಿದಿ 23 ರನ್ ನೀಡಿ ಐದು ವಿಕೆಟ್ ಪಡೆದು ಕೆನಡಾ ತಂಡದ ಕುಸಿತಕ್ಕೆ ಕಾರಣರಾದರು. 

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವನ್ನು 43 ಓವರ್‌ಗಳಲ್ಲಿ 184 ರನ್‌ಗಳಿಗೆ ನಿಯಂತ್ರಿಸಿದ ಕೆನಡಾ ಅಚ್ಚರಿಯ ಫಲಿತಾಂಶದ ಸೂಚನೆ ನೀಡಿತ್ತು. ಐರ್ಲೆಂಡ್ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧ ಗೆಲುವು ಪಡೆದಂತೆ ಕೆನಡಾ ಕೂಡಾ ಎದುರಾಳಿಗಳಿಗೆ ಶಾಕ್ ನೀಡುವ ಎಲ್ಲ ಸಾಧ್ಯತೆಗಳಿತ್ತು. ಆದರೆ ಅಫ್ರಿದಿ ಅವರು ಆಶೀಶ್ ಬಾಗೈ ನೇತೃತ್ವದ ತಂಡದ ಕನಸನ್ನು ಪುಡಿಗಟ್ಟಿದರು.

ಪಾಕಿಸ್ತಾನಕ್ಕೆ ಪ್ರಸಕ್ತ ಟೂರ್ನಿಯಲ್ಲಿ ಲಭಿಸಿದ ಸತತ ಮೂರನೇ ಗೆಲುವು ಇದು. ಈ ಮೂಲಕ ತನ್ನ ಪಾಯಿಂಟ್‌ಗಳನ್ನು ಆರಕ್ಕೆ ಹೆಚ್ಚಿಸಿಕೊಂಡಿರುವ ಅಫ್ರಿದಿ ಬಳಗ ಕ್ವಾರ್ಟರ್ ಫೈನಲ್ ಸ್ಥಾನವನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿತು. ಕೀನ್ಯಾ (16ಕ್ಕೆ 5) ಮತ್ತು ಶ್ರೀಲಂಕಾ (34ಕ್ಕೆ 4) ವಿರುದ್ಧದ ಪಂದ್ಯದಲ್ಲೂ ಬೌಲಿಂಗ್‌ನಲ್ಲಿ ಮಿಂಚಿದ್ದ ಅಫ್ರಿದಿ ಇದೀಗ ಮೂರು ಪಂದ್ಯಗಳಿಂದ ಒಟ್ಟು 14 ವಿಕೆಟ್ ಕಲೆಹಾಕಿದ್ದಾರೆ.

ಕೆನಡಾ ತಂಡ ಒಂದು ಹಂತದಲ್ಲಿ ಮೂರು ವಿಕೆಟ್‌ಗೆ 104 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬಳಿಕ ಹಠಾತ್ ಕುಸಿತ ಕಂಡು 138 ರನ್‌ಗಳಿಗೆ ಮುಗ್ಗರಿಸಿತು.

ಜುಬಿನ್ ಸುರ್ಕರಿ (27) ಮತ್ತು ಜಿಮ್ಮಿ ಹಂಸ್ರಾ (43) ಅವರು ನಾಲ್ಕನೇ ವಿಕೆಟ್‌ಗೆ 60 ರನ್ ಸೇರಿಸಿ ಪಾಕ್ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದರು.

ಆದರೆ ಜುಬಿನ್ ವಿಕೆಟ್ ಪಡೆದ ಸಯೀದ್ ಅಜ್ಮಲ್ ಅವರು ಪಾಕ್‌ಗೆ ‘ಬ್ರೇಕ್’ ನೀಡಿದರು. ಬಳಿಕ ಅಫ್ರಿದಿ ತಮ್ಮ ಮಾರಕ ಎಸೆತಗಳ ಮೂಲಕ ಮೆರೆದಾಡಿದರು.

ಬ್ಯಾಟಿಂಗ್ ವೈಫಲ್ಯ: ಇದಕ್ಕೂ ಮೊದಲು ಹರ್ವಿರ್ ಬೈಡ್ವಾನ್ (35ಕ್ಕೆ 3) ಮತ್ತು ರಿಜ್ವಾನ್ ಚೀಮಾ (33ಕ್ಕೆ 2) ಅವರು ಪಾಕ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ್ದರು.

ಅಫ್ರಿದಿ ಬಳಗ 67 ರನ್‌ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಮಿಸ್ಬಾ ಉಲ್ ಹಕ್ (68 ಎಸೆತಗಳಲ್ಲಿ 37) ಮತ್ತು ಉಮರ್ ಅಕ್ಮಲ್ (48, 68 ಎಸೆತ, 4 ಬೌಂ, 1 ಸಿಕ್ಸರ್) ಅವರು ಐದನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನೀಡಿದರು. ಇಲ್ಲದಿದ್ದಲ್ಲಿ ತಂಡ ಇನ್ನೂ ಕಡಿಮೆ ಮೊತ್ತಕ್ಕೆ ಕುಸಿತ ಕಾಣುವ ಸಾಧ್ಯತೆಯಿತ್ತು. ಪಾಕ್ ತಂಡದ ಕೊನೆಯ ಆರು ವಿಕೆಟ್‌ಗಳು 44 ರನ್‌ಗಳ ಅಂತರದಲ್ಲಿ ಉರುಳಿದವು.

ಸ್ಕೋರು ವಿವರ
ಪಾಕಿಸ್ತಾನ: 43 ಓವರ್‌ಗಳಲ್ಲಿ 184
ಮೊಹಮ್ಮದ್ ಹಫೀಜ್ ಎಲ್‌ಬಿಡಬ್ಲ್ಯು ಬಿ ಹೆನ್ರಿ ಒಸಿಂಡೆ  11
ಅಹ್ಮದ್ ಶೆಹಜಾದ್ ಸಿ ಗೊರ್ಡಾನ್ ಬಿ ಹರ್ವಿರ್ ಬೈಡ್ವಾನ್  12
ಕಮ್ರನ್ ಅಕ್ಮಲ್ ಸಿ ಕುಮಾರ್ ಬಿ ರಿಜ್ವಾನ್ ಚೀಮಾ  16
ಯೂನಿಸ್ ಖಾನ್ ಎಲ್‌ಬಿಡಬ್ಲ್ಯು ಬಿ ಹರ್ವಿರ್ ಬೈಡ್ವಾನ್  06
ಮಿಸ್ಬಾ ಉಲ್ ಹಕ್ ಸಿ ಬಾಗೈ ಬಿ ಬಾಲಾಜಿ ರಾವ್  37
ಉಮರ್ ಅಕ್ಮಲ್ ಎಲ್‌ಬಿಡಬ್ಲ್ಯು ಬಿ ಬಾಲಾಜಿ ರಾವ್  48
ಶಾಹಿದ್ ಅಫ್ರಿದಿ ಸಿ ಕುಮಾರ್ ಬಿ ರಿಜ್ವಾನ್ ಚೀಮಾ  20
ಅಬ್ದುಲ್ ರಜಾಕ್ ಎಲ್‌ಬಿಡಬ್ಲ್ಯು ಬಿ ಜಿಮ್ಮಿ ಹಂಸ್ರಾ  08
ಉಮರ್ ಗುಲ್ ಔಟಾಗದೆ  02
ವಹಾಬ್ ರಿಯಾಜ್ ಸಿ ಬಾಲಾಜಿ ರಾವ್ ಬಿ ಜಿಮ್ಮಿ ಹಂಸ್ರಾ  00
ಸಯೀದ್ ಅಜ್ಮಲ್ ಬಿ ಹರ್ವಿರ್ ಬೈಡ್ವಾನ್  00
ಇತರೆ: (ಬೈ-4, ಲೆಗ್‌ಬೈ-3, ವೈಡ್-16, ನೋಬಾಲ್-1)  24
ವಿಕೆಟ್ ಪತನ: 1-16 (ಹಫೀಜ್; 3.1), 2-42 (ಶೆಹಜಾದ್; 8.5), 3-55 (ಯೂನಿಸ್; 12.5), 4-67 (ಕಮ್ರನ್; 15.3), 5-140 (ಉಮರ್; 34.6), 6-165 (ಮಿಸ್ಬಾ; 38.2), 7-181 (ಅಫ್ರಿದಿ; 40.5), 8-181 (ರಜಾಕ್; 41.1), 9-181 (ರಿಯಾಜ್; 41.4), 10-184 (ಅಜ್ಮಲ್; 42.6).
ಬೌಲಿಂಗ್: ಖುರ್ರಮ್ ಚೋಹಾನ್ 3.3-0-10-0, ಹೆನ್ರಿ ಒಸಿಂಡೆ 7-1-25-1, ಟೈಸನ್ ಗೊರ್ಡಾನ್ 0.3-0-1-0, ಹರ್ವಿರ್ ಬೈಡ್ವಾನ್ 8-1-35-3, ರಿಜ್ವಾನ್ ಚೀಮಾ 8-0-33-2, ಬಾಲಾಜಿ ರಾವ್ 10-0-50-2, ಜಿಮ್ಮಿ ಹಂಸ್ರಾ 6-1-23-2

ಕೆನಡಾ: 42.5 ಓವರ್‌ಗಳಲ್ಲಿ 138
ರವಿಂದು ಗುಣಶೇಕರ ಎಲ್‌ಬಿಡಬ್ಲ್ಯು ಬಿ ಉಮರ್ ಗುಲ್  08
ನಿತೀಶ್ ಕುಮಾರ್ ಬಿ ಅಬ್ದುಲ್ ರಜಾಕ್  02
ಜುಬಿನ್ ಸುರ್ಕರಿ ಎಲ್‌ಬಿಡಬ್ಲ್ಯು ಬಿ ಸಯೀದ್ ಅಜ್ಮಲ್  27
ಆಶಿಶ್ ಬಾಗೈ ಎಲ್‌ಬಿಡಬ್ಲ್ಯು ಬಿ ಶಾಹಿದ್ ಅಫ್ರಿದಿ  16
ಜಿಮ್ಮಿ ಹಂಸ್ರಾ ಬಿ ಶಾಹಿದ್ ಅಫ್ರಿದಿ  43
ರಿಜ್ವಾನ್ ಚೀಮಾ ಬಿ ಶಾಹಿದ್ ಅಫ್ರಿದಿ  04
ಟೈಸನ್ ಗೊರ್ಡಾನ್ ಸಿ ರಿಯಾಜ್ ಬಿ ಶಾಹಿದ್ ಅಫ್ರಿದಿ  09
ಹರ್ವಿರ್ ಬೈಡ್ವಾನ್ ಬಿ ಶಾಹಿದ್ ಅಫ್ರಿದಿ  00
ಖುರ್ರಮ್ ಚೋಹಾನ್ ಔಟಾಗದೆ  05
ಬಾಲಾಜಿ ರಾವ್ ರನೌಟ್  01
ಹೆನ್ರಿ ಒಸಿಂಡೆ ಬಿ ವಹಾಬ್ ರಿಯಾಜ್  00
ಇತರೆ: (ಲೆಗ್‌ಬೈ-4, ವೈಡ್-19)  23
ವಿಕೆಟ್ ಪತನ: 1-16 (ಗುಣಶೇಖರ; 3.6), 2-16 (ಕುಮಾರ್; 4.5), 3-44 (ಬಾಗೈ; 17.1), 4-104 (ಸುರ್ಕರಿ; 33.3), 5-111 (ಚೀಮಾ; 34.6), 6-114 (ಹಂಸ್ರಾ; 36.4), 7-114 (ಬೈಡ್ವಾನ್; 36.5), 8-130 (ಗೊರ್ಡಾನ್; 38.4), 9-134 (ಬಾಲಾಜಿ ರಾವ್; 41.4), 10-138 (ಒಸಿಂಡೆ; 42.5).
ಬೌಲಿಂಗ್: ಅಬ್ದುಲ್ ರಜಾಕ್ 7-2-16-1, ಉಮರ್ ಗುಲ್ 7-1-20-1, ಶಾಹಿದ್ ಅಫ್ರಿದಿ 10-0-23-5, ವಹಾಬ್ ರಿಯಾಜ್ 5.5-0-23-1, ಸಯೀದ್ ಅಜ್ಮಲ್ 8-0-31-1, ಮೊಹಮ್ಮದ್ ಹಫೀಜ್ 5-0-21-0

ಫಲಿತಾಂಶ: ಪಾಕಿಸ್ತಾನಕ್ಕೆ 46 ರನ್ ಜಯ
ಪಂದ್ಯಶ್ರೇಷ್ಠ: ಶಾಹಿದ್ ಅಫ್ರಿದಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.