ADVERTISEMENT

ಅಭ್ಯಾಸ ಪಂದ್ಯದಲ್ಲಿ ಎಡವಿದ ಭಾರತ

ಕ್ರಿಕೆಟ್‌: ಮಿಂಚಿದ ಲಸಿತ್‌ ಮಾಲಿಂಗ; ಶ್ರೀಲಂಕಾ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಮೀರ್‌ಪುರ (ಪಿಟಿಐ): ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಎದುರು ಐದು ರನ್‌ಗಳ ಸೋಲು ಅನುಭವಿಸಿತು.

ಷೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 153 ರನ್‌ ಪೇರಿಸಿತು. ಭಾರತ ತಂಡ ನಿಗದಿತ ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟಾಯಿತು. ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂಬ ಭಾರತದ ಕನಸಿಗೆ ಲಸಿತ್‌ ಮಾಲಿಂಗ (30ಕ್ಕೆ 4) ಅಡ್ಡಿಯಾದರು.

ಟಾಸ್‌ ಗೆದ್ದ ದೋನಿ ಮೊದಲು ಫೀಲ್ಡಿಂಗ್‌ ಮಾಡುವ ನಿರ್ಧಾರ ಕೈಗೊಂಡರು.  ಜಯವರ್ಧನೆ (30, 20 ಎಸೆತ) ಮತ್ತು ಚಂಡಿಮಾಲ್‌ (29, 25 ಎಸೆತ) ಲಂಕಾ ಪರ ಉತ್ತಮ ಆಟ ತೋರಿದರು.

ದಿಲ್ಶಾನ್‌ (9) ಮತ್ತು  ಸಂಗಕ್ಕಾರ (4) ವಿಫಲರಾ ದರು. ತಿಸಾರ ಪೆರೇರಾ (ಔಟಾಗದೆ 18, 11 ಎಸೆತ) ಹಾಗೂ ನುವಾನ್‌ ಕುಲಶೇಖರ (ಔಟಾಗದೆ 21, 14 ಎಸೆತ) ಕೊನೆಯಲ್ಲಿ ಅಬ್ಬರದ ಆಟವಾಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟಿತು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಶಿಖರ್‌ ಧವನ್‌ (2) ಮತ್ತು ರೋಹಿತ್‌ ಶರ್ಮ (4) ಬೇಗನೇ ಪೆವಿಲಿಯನ್‌ಗೆ ಮರಳಿದರು. ಇವರು ಕ್ರಮವಾಗಿ ಕುಲಶೇಖರ ಹಾಗೂ ಲಸಿತ್‌ ಮಾಲಿಂಗಗೆ ವಿಕೆಟ್‌ ಒಪ್ಪಿಸಿದರು.

ಸುರೇಶ್‌ ರೈನಾ (41, 31 ಎಸೆತ, 5 ಬೌಂ, 1 ಸಿಕ್ಸರ್‌) ಮತ್ತು ಯುವರಾಜ್‌ ಸಿಂಗ್‌ (33, 28 ಎಸೆತ, 2 ಬೌಂ, 2 ಸಿಕ್ಸರ್‌) ಮೂರನೇ ವಿಕೆಟ್‌ಗೆ 35 ರನ್‌ ಸೇರಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ರೈನಾ ವಿಕೆಟ್‌ ಪಡೆದ ಅಜಂತಾ ಮೆಂಡಿಸ್‌ ಲಂಕಾ ತಂಡಕ್ಕೆ ಮೇಲುಗೈ ತಂದಿತ್ತರು.

ಅಜಿಂಕ್ಯ ರಹಾನೆ (0) ವಿಫಲರಾದರೆ, ವಿರಾಟ್‌ ಕೊಹ್ಲಿ (17) ಮತ್ತು ರವೀಂದ್ರ ಜಡೇಜ (12) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯಲ್ಲಿ ಸ್ಟುವರ್ಟ್‌ ಬಿನ್ನಿ (14, 10 ಎಸೆತ) ಮತ್ತು ಆರ್‌. ಅಶ್ವಿನ್‌ (19, 12 ಎಸೆತ, 2 ಬೌಂ, 1 ಸಿಕ್ಸರ್‌) ಹೋರಾಟ ನಡೆಸಿದರೂ ಗೆಲುವು ಮಾತ್ರ ಒಲಿಯಲಿಲ್ಲ.

ಭಾರತದ ಜಯಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ 26 ರನ್‌ಗಳು ಬೇಕಿದ್ದವು. ಕುಲಶೇಖರ ಎಸೆದ 19ನೇ ಓವರ್‌ನಲ್ಲಿ ಅಶ್ವಿನ್‌ ಸಿಕ್ಸರ್‌ ಹಾಗೂ ಬೌಂಡರಿ ಸಿಡಿಸಿದ ಕಾರಣ 14 ರನ್‌ಗಳು ಬಂದವು. ಅಂತಿಮ ಓವರ್‌ನಲ್ಲಿ 12 ರನ್‌ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಸ್ಟುವರ್ಟ್‌ ಬಿನ್ನಿ ಒಂದು ರನ್‌ ಗಳಿಸಿದರೆ, ಎರಡನೇ ಎಸೆತದಲ್ಲಿ ಅಶ್ವಿನ್‌ ಬೌಂಡರಿ ಗಳಿಸಿದರು. ಆದರೆ ಮುಂದಿನ ನಾಲ್ಕು ಎಸೆತಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡ ಭಾರತ ಸೋಲು ಅನುಭವಿಸಿತು.

ಬುಧವಾರ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ‘ಮಹಿ’ ಬಳಗ ಇಂಗ್ಲೆಂಡ್‌ ತಂಡದ ಸವಾಲನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 153 (ಕುಶಾಲ್‌ ಪೆರೇರಾ 21, ಮಾಹೇಲ ಜಯವರ್ಧನೆ 30, ದಿನೇಶ್‌ ಚಂಡಿಮಾಲ್‌ 29, ತಿಸಾರ ಪೆರೇರಾ ಔಟಾಗದೆ 18, ನುವಾನ್‌ ಕುಲಶೇಖರ ಔಟಾಗದೆ 21, ಆರ್‌. ಅಶ್ವಿನ್‌ 22ಕ್ಕೆ 3, ವರುಣ್‌ ಆ್ಯರನ್‌ 18ಕ್ಕೆ 1, ಅಮಿತ್‌ ಮಿಶ್ರಾ 38ಕ್ಕೆ 1); ಭಾರತ: 20 ಓವರ್‌ಗಳಲ್ಲಿ 148 (ಸುರೇಶ್‌ ರೈನಾ 41, ಯುವರಾಜ್‌ ಸಿಂಗ್‌ 33, ವಿರಾಟ್‌ ಕೊಹ್ಲಿ 17,  ಸ್ಟುವರ್ಟ್‌ ಬಿನ್ನಿ 14, ಆರ್‌. ಅಶ್ವಿನ್‌ 19, ಲಸಿತ್‌ ಮಾಲಿಂಗ 30ಕ್ಕೆ 4, ನುವಾನ್‌ ಕುಲಶೇಖರ 37ಕ್ಕೆ 2) ಫಲಿತಾಂಶ: ಶ್ರೀಲಂಕಾಕ್ಕೆ 5 ರನ್‌ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.