ADVERTISEMENT

ಅರವಿಂದ್, ದಾಮಿನಿಗೆ ಚಿನ್ನ

ರಾಷ್ಟ್ರೀಯ ಜೂನಿಯರ್ ಈಜು: ಕರ್ನಾಟಕಕ್ಕೆ ಒಟ್ಟು 26 ಬಂಗಾರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST
ಎಂ.ಅರವಿಂದ್ ಗುರಿಯತ್ತ ಮುನ್ನುಗ್ಗಿದ ಕ್ಷಣ
ಎಂ.ಅರವಿಂದ್ ಗುರಿಯತ್ತ ಮುನ್ನುಗ್ಗಿದ ಕ್ಷಣ   

ಹೈದರಾಬಾದ್: ಕರ್ನಾಟಕದ ಎಂ. ಅರವಿಂದ್ ಹಾಗೂ ದಾಮಿನಿ ಕೆ. ಗೌಡ 40ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಈ ಇಬ್ಬರೂ ಸ್ಪರ್ಧಿಗಳು ಶನಿವಾರ ಎರಡು ಚಿನ್ನದ ಪದಕಗಳನ್ನು ಜಯಿಸಿದರು.

ಗಚಿಬೌಳಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಅರವಿಂದ್ ಮೊದಲ ದಿನವೇ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಬಸವನಗುಡಿ ಈಜು ಕೇಂದ್ರದ ಸ್ಪರ್ಧಿ ಶುಕ್ರವಾರ 200ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ದಾಖಲೆಯೊಂದಿಗೆ ಬಂಗಾರದ ಪದಕ ಜಯಿಸಿದರು.

ಅರವಿಂದ್ ನಿಗದಿತ ಗುರಿಯನ್ನು ಎರಡು ನಿಮಿಷ 11.30 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ 2007ರಲ್ಲಿ ದೆಹಲಿಯ ಟಿ. ಪ್ರವೀಣ್ (ಕಾಲ: 2:11.46ಸೆ.) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಈ ವಿಭಾಗದ ಕಂಚು ಬಿ. ಪ್ರಣಮ್ (ಕಾಲ: 2:13.78ಸೆ.) ಗೆದ್ದುಕೊಂಡರು.
ಅರವಿಂದ್ 200ಮೀ. ವೈಯಕ್ತಿಕ ಮೆಡ್ಲೆಯಲ್ಲೂ ಪ್ರಾಬಲ್ಯ ಮೆರೆದರು.

ಎರಡು ನಿಮಿಷ 11.13ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಐದು ವರ್ಷಗಳ ಹಿಂದಿನ ದಾಖಲೆಯ ಪತನಕ್ಕೆ ಕಾರಣರಾದರು. 2007ರಲ್ಲಿ ತಮಿಳುನಾಡಿನ ಜೆ. ಅಗ್ನಿಶ್ವರ್ (ಕಾಲ: 2:12.75ಸೆ.) ದಾಖಲೆ ಅಳಿಸಿದರು.

ಈ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರುತ್ತಿರುವ ದಾಮಿನಿ ಎರಡು ಸ್ವರ್ಣ ಪದಕಗಳನ್ನು ಬಾಚಿಕೊಂಡರು. ಗುಂಪು-2ರ 50ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ದಾಮಿನಿ (ಕಾಲ: 30.42ಸೆಕೆಂಡ್) ಮೊದಲ ಚಿನ್ನ ಗೆದ್ದರೆ, 200ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಎರಡು ನಿಮಿಷ 30.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದಿನದ ಎರಡನೇ ಚಿನ್ನ ಪಡೆದರು. ಇದರಿಂದ ಕರ್ನಾಟಕ ಜಯಿಸಿದ ಒಟ್ಟು ಪದಕಗಳ ಸಂಖ್ಯೆ 54 (26 ಬಂಗಾರ, 17ಬೆಳ್ಳಿ  ಹಾಗೂ 11 ಕಂಚು) ಆಯಿತು.

ಬಾಲಕರ ಗುಂಪು-1ರ ವಿಭಾಗದ 400ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕರ್ನಾಟಕದ ಮಿತೇಶ್ ಮನೋಜ್ ಕುಂಟೆ (ಕಾಲ: 4:13.04) ಬೆಳ್ಳಿ ಜಯಿಸಿದರೆ, ಗುಜರಾತ್‌ನ ಬಿ. ರಾಜ್ (ಕಾಲ: 4:12.14ಸೆ.) ಚಿನ್ನ ಜಯಿಸಿದರು. ಆದರೆ, ಈ ವಿಭಾಗದ ಕಂಚು ಕರ್ನಾಟಕದ ಮಹಮ್ಮದ್ ಯಾಕೂಬ್ ಸಲೀಂ (ಕಾಲ: 4:16.50ಸೆ.) ಪಾಲಾಯಿತು.

ಗುಂಪು-2ರ 400ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಆರ್. ಸಂಜೀವ್ (ಕಾಲ: 4:19.16ಸೆ.) ಬೆಳ್ಳಿ ಜಯಿಸಿದರು. 200ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ಎಸ್. ಶಿವಾ (ಕಾಲ: 2:24.90ಸೆ.) ಬಂಗಾರ ಗೆದ್ದುಕೊಂಡರೆ, ವಿ.ಬಿ. ಹೇಮಂತ್ (ಕಾಲ: 2:25.74ಸೆ.) ಬೆಳ್ಳಿ ಜಯಿಸಿದರು.

200ಮೀ. ವೈಯಕ್ತಿಕ ಮೆಡ್ಲೆಯಲ್ಲೂ ಮಿಂಚಿದ ಹೇಮಂತ್ (ಕಾಲ: 2:22.92ಸೆ.) ಚಿನ್ನ ಹಾಗೂ ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಸ್ಪಂದನ್ ಪ್ರತೀಕ್ (ಕಾಲ: 2:23.24ಸೆ.) ಬೆಳ್ಳಿ ಜಯಿಸಿದರು. ಈ ವಿಭಾಗದ ಕಂಚು ಸಮುಯ್ ವೊರಾ ಪಾಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.