ADVERTISEMENT

`ಅಲೈಂಡರ್' ಮುಡಿಗೆ ಡರ್ಬಿ ಕಿರೀಟ

`ಕಿಂಗ್‌ಫಿಶರ್ ಡರ್ಬಿ ಬೆಂಗಳೂರು' ರೇಸ್‌ಪ್ರಿಯರ ರೋಮಾಂಚನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಬೆಂಗಳೂರು: ನಿರೀಕ್ಷೆ ಸುಳ್ಳಾಗಲಿಲ್ಲ. ಲೆಕ್ಕಾಚಾರದಂತೆಯೇ `ಅಲೈಂಡರ್' ಮಿಂಚಿನ ವೇಗದಲ್ಲಿ ಓಡಿ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ರೇಸ್ ಪ್ರಿಯರನ್ನು ರೋಮಾಂಚಿತಗೊಳಿಸಿತು. ಇದರ ಜೊತೆಗೆ ಭಾನುವಾರ ನಡೆದ `ಕಿಂಗ್‌ಫಿಶರ್ ಡರ್ಬಿ ಬೆಂಗಳೂರು' ಕಿರೀಟ ಮುಡಿಗೇರಿಸಿಕೊಂಡಿತು. ಈ ಚಾಂಪಿಯನ್ ಕುದುರೆ ಅಲ್ತಮಾಶ್ ಅಹ್ಮದ್ ಗರಡಿಯಲ್ಲಿ ಪಳಗಿತ್ತು.

ಈ ಗೆಲುವಿನೊಂದಿಗೆ `ಅಲೈಂಡರ್' ತನ್ನ ಮಾಲೀಕರಾದ ಡಾ.ನೆವಿಲ್ ಆರ್.ದಿವಾಳಿವಾಲಾ, ಮಿಸ್ ಅಮಿತ್ ಮೆಹ್ರಾ ಮತ್ತು ಗೌರವ್ ಸೇಥಿ ಅವರಿಗೆ ರೂ. 20 ಲಕ್ಷ ಮೌಲ್ಯದ ಸುಂದರ ಟ್ರೋಫಿ ಜೊತೆಗೆ ಮೊದಲನೇ ಬಹುಮಾನದ ಮೊತ್ತ ಒಂದು ಕೋಟಿ 35.36 ಲಕ್ಷಗಳನ್ನು ದೊರಕಿಸಿಕೊಟ್ಟಿತು.

`ಕೋಲ್ಟ್ಸ್ ಚಾಂಪಿಯನ್‌ಶಿಪ್' ಅನ್ನು ಸುಲಭವಾಗಿ ಗೆದ್ದಿದ್ದ ಈ ಮೂರು ವರ್ಷದ ಗಂಡು ಕುದುರೆಯ ಮೇಲೆ ಬಾರಿ ನಿರೀಕ್ಷೆ ಇತ್ತು. ಗೆಲ್ಲುವ ನೆಚ್ಚಿನ ಕುದುರೆ ಆಗಿದ್ದರೂ, ಬೆಟ್ಟಿಂಗ್  ಬೆಲೆ ಏರುತ್ತಲೆ ಇತ್ತು. `ಸ್ಟ್ಯಾರಿ ಐಸ್' ಮತ್ತು `ಮ್ಯುರಾಯ್' ಕುದುರೆಗಳ ಮೇಲೆ ಗಮನಾರ್ಹವಾಗಿ ಹಣ ಹರಿಯತೊಡಗಿದ್ದು ಇದಕ್ಕೆ ಕಾರಣ.

ದಾಖಲೆಯ 20,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ರೇಸ್‌ಪ್ರಿಯರ ಹರ್ಷೋದ್ಘಾರದ ಸಂಭ್ರಮದ ನಡುವೆ ರೇಸ್‌ಗೆ ಚಾಲನೆ ಸಿಕ್ಕಿತು. `ಅಲೈಂಡರ್' ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿತ್ತು. ಕೊನೆಯ ತಿರುವಿನಲ್ಲಿ ಬಿಟ್ಟ ಬಾಣದ ವೇಗದಂತೆ ಚುರುಕು ಪಡೆದ ಚಾಂಪಿಯನ್ ಕುದುರೆ ತನ್ನ ಪ್ರಾಬಲ್ಯವನ್ನು ಕೊನೆಯವರೆಗೂ ಮುಂದುವರಿಸಿ ಜಯಭೇರಿ ಮೊಳಗಿಸಿತು. ಈ ವೇಳೆ `ಅಲೈಂಡರ್' ಅಭಿಮಾನಗಳ ಮನದಲ್ಲಿ ಖುಷಿಯೋ ಖುಷಿ.

ಆದರೆ, ರೇಸ್ ಪ್ರಾರಂಭದಿಂದಲೂ ಈ ಕುದುರೆಗೆ ಸವಾಲು ಒಡ್ಡುತ್ತಿದ್ದ `ಟರ್ಫ್ ಸ್ಟ್ರೈಕರ್' ಕೊನೆಯ ಫರ್ಲಾಂಗ್‌ನಲ್ಲಿ ವೇಗ ಹೆಚ್ಚಿಸಿಕೊಂಡಾಗ `ಅಲೈಂಡರ್' ಬೆಂಬಲಿಗರ ಮನದಲ್ಲಿ ತಳಮಳ ಶುರುವಾಗಿತ್ತು. ಈ ವೇಳೆ ಕೊಂಚ ಒತ್ತಡಕ್ಕೆ ಒಳಗಾದಂತೆ ಕಂಡು ಬಂದ ಸವಾರ ಎ.ಸಂದೇಶ್ ದಿಟ್ಟತನ ತೋರಿ `ಅಲೈಂಡರ್' ಕೇವಲ ಅರ್ಧ ಲೆಂಗ್ತ್ ಅಂತರದಿಂದ ಗೆಲುವು ದೊರಕಿಸಿಕೊಡುವಲ್ಲಿ ಯಶಸ್ವಿಯಾದರು.

ಅಷ್ಟೇನು ನಿರೀಕ್ಷೆಯಿರದಿದ್ದ `ದುರ್ಬಲ' `ಟರ್ಫ್ ಸ್ಟ್ರೈಕರ್' ತೋರಿದ ಪ್ರದರ್ಶನವೂ ಮೆಚ್ಚುಗೆಗೆ ಕಾರಣವಾಯಿತು. `ಚಾರ್ಲತನ್' ಮತ್ತು `ಏಸ್ ಬೂಸ್‌ಫಾಲಸ್' ಶಕ್ತಿ ಮೀರಿ ಪ್ರಯತ್ನಪಟ್ಟರೂ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ  ಸ್ಥಾನಕ್ಕೆ ತೃಪ್ತಿ ಪಟ್ಟವು. ಹೋದ ಬಾರಿ ಕಳಪೆ ಪ್ರದರ್ಶನ ತೋರಿದ್ದ `ಸ್ಟ್ಯಾರಿ ಐಸ್' ಮತ್ತು `ಮ್ಯುರಾಯ್'ನಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ, ಗೆಲ್ಲುವ ಮಾತಿರಲಿ, ರೇಸ್‌ನ ಯಾವುದೇ ಸಂದರ್ಭದಲ್ಲೂ ಪೈಪೋಟಿ ನೀಡಲು ಅವಕ್ಕೆ ಸಾಧ್ಯವಾಗಲಿಲ್ಲ.

ಶನಿವಾರ ಬಿದ್ದ ಮಳೆಯಿಂದ ಟ್ರ್ಯಾಕ್ ಸ್ವಲ್ಪ ಒದ್ದೆಯಾಗಿತ್ತು. ಆ ಕಾರಣ ಗುರಿ ಮುಟ್ಟಲು ಎಲ್ಲಾ ಕುದುರೆಗಳು ಸಾಮಾನ್ಯ ಸಮಯಕ್ಕಿಂತ ಹೆಚ್ಚಿನ ಅವಧಿ ತೆಗೆದುಕೊಂಡವು.

ತಾರಾ ದಂಡು: ಡರ್ಬಿ ರೇಸ್ ನೋಡಲು ತಾರಾ ದಂಡೇ ನೆರೆದಿತ್ತು. ನಟ ಹಾಗೂ ವಸತಿ ಸಚಿವ ಅಂಬರೀಷ್, ಶಾಸಕ ಅನಿಲ್ ಲಾಡ್, ಸ್ಯಾಂಡಲ್‌ವುಡ್ ನಟಿ ಮೇಘನಾ, ತೆಲುಗು ನಟ ಮೋಹನ್ ಬಾಬು ಸೇರಿದಂತೆ ಅನೇಕ ಗಣ್ಯರು ರೇಸ್‌ನ ರಂಗು ಹೆಚ್ಚಿಸಿದರು.

ರೇಸ್ ಶುರುವಾಗಲು ಕೆಲ ನಿಮಿಷಗಳಿರುವಂತೆಯೇ ರೇಸ್ ಪ್ರಿಯರ ಮನದಲ್ಲಿದ್ದ ಸಂಭ್ರಮ ಚಪ್ಪಾಳೆಯಾಗಿ ಬದಲಾಯಿತು. ಭಾರಿ ಉತ್ಸಾಹ ಹಾಗೂ ಸಡಗರದಿಂದ ರೇಸ್ ವೀಕ್ಷಿಸಿದ ಪ್ರಿಯರಿಗೆ ವಾರದ ರಜಾ ದಿನ ಭರಪೂರ ಮನರಂಜನೆಯೂ ಲಭಿಸಿತು.

ಚಾಂಪಿಯನ್‌ಗೆ ರೂ.1.35 ಕೋಟಿ ಬಹುಮಾನ
ಮಿಂಚಿನ ವೇಗದಲ್ಲಿ ಓಡಿದ `ಅಲೈಂಡರ್' ಎರಡು ನಿಮಿಷ 7.51ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ `ಕಿಂಗ್‌ಫಿಶರ್ ಡರ್ಬಿ' ತನ್ನದಾಗಿಸಿಕೊಂಡಿತು.
ಪ್ರಶಸ್ತಿ ಗೆದ್ದ ಈ ಕುದುರೆ ತನ್ನ ಮಾಲೀಕರಿಗೆ ಒಂದು ಕೋಟಿ 35.36 ರೂಪಾಯಿ ಬಹುಮಾನವನ್ನು ದೊರಕಿಸಿಕೊಟ್ಟಿತು. ಟರ್ಫ್ ಸ್ಟ್ರೈಕರ್ ಎರಡನೇ ಬಹುಮಾನದ ಮೊತ್ತ 45 ಲಕ್ಷ 12 ಸಾವಿರ ಪಡೆದರೆ, ಮೂರನೇ ಸ್ಥಾನ ಪಡೆದ ಚಾರ್ಲತನ್ 22 ಲಕ್ಷ 56 ಸಾವಿರ ರೂ. ಬಹುಮಾನ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.