ADVERTISEMENT

ಆಗಸ್ಟಿನ್, ತೇಜ್ ಸೇರಿ 7 ಮಂದಿ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST
ಆಗಸ್ಟಿನ್, ತೇಜ್ ಸೇರಿ 7 ಮಂದಿ ಮುನ್ನಡೆ
ಆಗಸ್ಟಿನ್, ತೇಜ್ ಸೇರಿ 7 ಮಂದಿ ಮುನ್ನಡೆ   

ಮಂಗಳೂರು: ಅಂತಿಮ ಸುತ್ತು ಉಳಿದಿರುವಂತೆ ಪ್ರಶಸ್ತಿಗೆ ಪೈಪೋಟಿ ತೀವ್ರವಾಗಿದ್ದು, ಕರ್ನಾಟಕದ ಎ.ಆಗಸ್ಟಿನ್ ಸೇರಿದಂತೆ 7 ಮಂದಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. 3ನೇ ಯುಕೆಸಿಎ ಕಪ್ ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಟೂರ್ನಿಯ ಎಂಟನೇ ಸುತ್ತಿನಲ್ಲಿ ಶುಕ್ರವಾರ ಐಎಂಗಳು ಸೇರಿದಂತೆ ಮೊದಲ ಕೆಲವು ಶ್ರೇಯಾಂಕ ಆಟಗಾರರು ಸಕಾರಾತ್ಮಕ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾದರು.

ನಗರದ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಐಎಂಗಳಾದ ತಮಿಳುನಾಡಿನ ಎಸ್.ನಿತಿನ್, ಮೈಸೂರಿನ ಎಂ.ಎಸ್.ತೇಜಕುಮಾರ್ (ನೈರುತ್ಯ ರೈಲ್ವೆ), ಕೇರಳದ ಕೆ.ರತ್ನಾಕರನ್ (ದಕ್ಷಿಣ ರೈಲ್ವೆ), ಅಗ್ರ ಶ್ರೇಯಾಂಕದ ಶ್ಯಾಮ್ ನಿಖಿಲ್ (ತಮಿಳುನಾಡು) ಜತೆ ಎಂ.ಕುನಾಲ್ (ತಮಿಳುನಾಡು), ಆಂಧ್ರ ಪ್ರದೇಶದ ಪ್ರವೀಣ್ ಪ್ರಸಾದ್ ಮತ್ತು ಆಗಸ್ಟಿನ್ ತಲಾ ಆರೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಆರು ಆಟಗಾರರು ತಲಾ ಆರು ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಬೆಳಿಗ್ಗೆ ಏಳನೇ ಸುತ್ತಿನಲ್ಲಿ ಐಎಂ ದಿನೇಶ್ ಕುಮಾರ್ ಶರ್ಮ ಅವರನ್ನು ಸೋಲಿಸಿ ಬೆರಗುಗೊಳಿಸಿದ್ದ ಆಗಸ್ಟಿನ್ ಎಂಟನೇ ಸುತ್ತಿನಲ್ಲಿ ಮತ್ತೊಬ್ಬ ಐಎಂ ರತ್ನಾಕರನ್ (ರೇಟಿಂಗ್: 2439) ಅವರನ್ನು 31 ನಡೆಗಳ ನಂತರ ಡ್ರಾಕ್ಕೆ ಒಪ್ಪುವಂತೆ ಆಡಿದರು. ಆಗಸ್ಟಿನ್ (2013), ಪ್ರಸ್ತುತ ಕರ್ನಾಟಕದ 15 ಮತ್ತು 17 ವರ್ಷದೊಳಗಿನವರ ಚಾಂಪಿಯನ್ ಆಗಿದ್ದಾರೆ.

ಮೊದಲ ಬೋರ್ಡ್‌ನಲ್ಲಿ ಎಸ್.ನಿತಿನ್ ಮತ್ತು ತೇಜಕುಮಾರ್ ಕೇವಲ 13 ನಡೆಗಳಲ್ಲಿ `ಕದನ ವಿರಾಮ~ಕ್ಕೆ ಒಪ್ಪಿಕೊಂಡರು. ಶ್ಯಾಮ್ ನಿಖಿಲ್ 71 ನಡೆಗಳ ದೀರ್ಘ ಪಂದ್ಯದಲ್ಲಿ ಮಹಾರಾಷ್ಟ್ರದ ಅನಿರುದ್ಧ ದೇಶಪಾಂಡೆ (6) ವಿರುದ್ಧ ಜಯಗಳಿಸಿದರೆ, ಕುನಾಲ್ ಎಂ., ತಮಿಳುನಾಡಿನ ಸುರೇಂದ್ರನ್ (5.5) ವಿರುದ್ಧ ಕೇವಲ 28 ನಡೆಗಳಲ್ಲಿ ಗೆಲುವಿನ ನಗೆ ಚೆಲ್ಲಿದರು.

ಪ್ರವೀಣ್‌ಪ್ರಸಾದ್ (6.5), ಕೇರಳದ ಎ.ಅಭಿಷೇಕ್ (5.5) ವಿರುದ್ಧ, ರೈಲ್ವೇಸ್‌ನ ಐಎಂ ಹಿಮಾಂಶು ಶರ್ಮ (6), ಗೋವಾದ ರೋಹನ್ ಅಹುಜ (5) ವಿರುದ್ಧ, ಎಲ್‌ಐಸಿಯ ಐಎಂ ದಿನೇಶ್ ಕುಮಾರ್ ಶರ್ಮ (6), ಕರ್ನಾಟಕದ ಪಿ.ಗೋಪಾಲಕೃಷ್ಣ (5) ವಿರುದ್ಧ, ಕರ್ನಾಟಕದ ರಘುನಂದನ್ ಕೆ.ಎಸ್. (6), ಅಜೇಶ್ ಅಂಥೋನಿ (5) ವಿರುದ್ಧ ಜಯಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.