ADVERTISEMENT

`ಆಟದ ವಿಶ್ವಾಸಾರ್ಹತೆ ಮುಖ್ಯ'

ಬಿಸಿಸಿಐ ವಿರುದ್ಧ ದ್ರಾವಿಡ್ ಪರೋಕ್ಷ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಅತಿಯಾದ ನೋವುಂಟು ಮಾಡಿದೆ ಎಂದಿರುವ ರಾಹುಲ್ ದ್ರಾವಿಡ್, `ಆಟದ ವಿಶ್ವಾಸಾರ್ಹತೆ ಮರಳಿ ಪಡೆಯುವುದು ಮುಖ್ಯ' ಎಂದಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಪರೋಕ್ಷವಾಗಿ ಟೀಕಿಸಿದ್ದಾರೆ.

`ಕ್ರಿಕೆಟ್‌ಅನ್ನು ಅತಿಯಾಗಿ ಪ್ರೀತಿಸುವ ಹಲವು ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಿಂದಾಗಿ ನಾವು ಕ್ರಿಕೆಟ್ ಆಟಗಾರರಾಗಿ ಬೆಳೆದಿದ್ದೇವೆ. ಅಭಿಮಾನಿಗಳು ಮತ್ತು ಆಟಗಾರರು ಇರುವ ಕಾರಣ ಆಡಳಿತಗಾರರು ಇದ್ದಾರೆ. ಆದ್ದರಿಂದ ಆಟದ ಮತ್ತು ಮಂಡಳಿಯ ವಿಶ್ವಾಸಾರ್ಹತೆ ಕಾಪಾಡುವುದು ಬಲು ಮುಖ್ಯ' ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.

ಐಪಿಎಲ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ಬಳಿಕ ಬಿಸಿಸಿಐ ಎಲ್ಲರ ಟೀಕೆಗೆ ಗುರಿಯಾಗಿತ್ತು. ಎನ್. ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ದೂರ ಸರಿದಿದ್ದರು. ಆದರೆ ಅವರು ಮತ್ತೆ ಅಧ್ಯಕ್ಷಸ್ಥಾನ ವಹಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ದ್ರಾವಿಡ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

`ಐಪಿಎಲ್‌ನಲ್ಲಿ ನಡೆದಿರುವ ಘಟನೆಗಳು ನಿಜವಾಗಿಯೂ ನೋವು ತಂದಿತ್ತಿದೆ. ಈ ದೇಶದಲ್ಲಿ ಅಂತಹ ಘಟನೆ ನಡೆಯಬಾರದಿತ್ತು. ಕ್ರಿಕೆಟ್‌ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳದಿದ್ದರೆ, ಆಟಗಾರರು ಅಭಿಮಾನಿಗಳ ಗೌರವ ಕಳೆದುಕೊಳ್ಳುವ ಸಾಧ್ಯತೆಯಿದೆ' ಎಂದು ದ್ರಾವಿಡ್ ಎಚ್ಚರಿಸಿದ್ದಾರೆ.

`ಕ್ರಿಕೆಟ್‌ನಲ್ಲಿ ಎಷ್ಟೇ ಹಗರಣಗಳು ನಡೆದರೂ ಅಭಿಮಾನಿಗಳು ಮಾತ್ರ ಈ ಕ್ರೀಡೆಯ ಮೇಲಿನ ಪ್ರೀತಿ ಕಳೆದುಕೊಳ್ಳುವುದಿಲ್ಲ ಎಂಬ ಖಾತರಿ ಆಡಳಿತಗಾರರಿಗೆ ಇದೆ. ಆದ್ದರಿಂದ ಇಂತಹ ವಿವಾದಗಳು ಎದ್ದಾಗ ಅವರು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವುದಿಲ್ಲ' ಎಂದು ಇನ್ನೊಬ್ಬ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.

`1999-2000 ರಲ್ಲಿ ಭಾರತದ ಕ್ರಿಕೆಟ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್ ಪ್ರಕರಣ ನಡೆದಿತ್ತಲ್ಲದೆ, ಕೆಲವು ಆಟಗಾರರ ಮೇಲೆ ನಿಷೇಧ ಹೇರಲಾಗಿತ್ತು. ಇದರಿಂದ ಕ್ರಿಕೆಟ್‌ನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಲಿದ್ದು, ಈ ಕ್ರೀಡೆಯ ಜನಪ್ರಿಯತೆ ಕುಸಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಹಾಗಾಗಲಿಲ್ಲ' ಎಂದಿದ್ದಾರೆ.

`ಈ ಘಟನೆಯ ಕೆಲ ತಿಂಗಳ ಬಳಿಕ ಜಿಂಬಾಬ್ವೆ ತಂಡ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಪಂದ್ಯಗಳ ವೇಳೆ ಕ್ರೀಡಾಂಗಣಗಳು ಭರ್ತಿಯಾಗಿದ್ದವು. ಆದ್ದರಿಂದ ಕ್ರಿಕೆಟ್‌ನಲ್ಲಿ ಏನೇ ನಡೆದರೂ ಅಭಿಮಾನಿಗಳು ತಮ್ಮ ಪ್ರೀತಿ ಕಳೆದುಕೊಳ್ಳುವುದಿಲ್ಲ ಎಂಬುದು ಆಡಳಿತಗಾರರಿಗೆ ಚೆನ್ನಾಗಿ ತಿಳಿದಿದೆ' ಎಂದು ಮಾಂಜ್ರೇಕರ್ ತಿಳಿಸಿದ್ದಾರೆ.

`ದ್ರಾವಿಡ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿ'
ಬೆಂಗಳೂರು:
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ದ್ರಾವಿಡ್ ನೀಡಿರುವ ಹೇಳಿಕೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಲಿ ಎಂದು ಮಾಜಿ ಲೆಗ್‌ಸ್ಪಿನ್ನರ್ ಎರಪಳ್ಳಿ ಪ್ರಸನ್ನ ಹೇಳಿದ್ದಾರೆ.

`ದ್ರಾವಿಡ್ ಹೇಳಿಕೆಯ ಮರ್ಮವನ್ನು ಅರಿತುಕೊಂಡು ಬಿಸಿಸಿಐ ತನ್ನ ತಪ್ಪನ್ನು ಸರಿಪಡಿಸಲಿ' ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.