ADVERTISEMENT

ಆತಿಥೇಯರಿಗೆ ಲಂಕಾ ಆಪತ್ತು?

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಅಡಿಲೇಡ್: ಫೈನಲ್‌ಗಳ ಫೈನಲ್! ಹೌದು; ಮೂರು ಪಂದ್ಯಗಳ ಅಂತಿಮ ಹಣಾಹಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾಕ್ಕೆ ತಲಾ ಒಂದು ಜಯ. ಆದ್ದರಿಂದ ಮೂರನೇ ಹಣಾಹಣಿ ನಿರ್ಣಾಯಕ. ಅದೇ ತ್ರಿಕೋನ ಸರಣಿಯ ವಿಜಯಿ ಯಾರೆಂದು ನಿರ್ಣಯಿಸುವ ಅಂತಿಮ ಕದನ.

ಭಾರತ ತಂಡವನ್ನು ಲೀಗ್ ಹಂತದಲ್ಲಿಯೇ ಹೊರಗೆ ಅಟ್ಟಿದ ಆತಿಥೇಯ ಆಸೀಸ್ ಹಾಗೂ ಸಿಂಹಳೀಯರ ನಾಡಿನ ಪಡೆಯ ನಡುವಣ ಫೈನಲ್ ಕುತೂಹಲಕಾರಿ. ಮೊದಲ ಎರಡು ಪಂದ್ಯ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಆಸ್ಟ್ರೇಲಿಯಾ ಆಸೆ ಈಡೇರಲಿಲ್ಲ. ತಿರುಗಿಬಿದ್ದ ಲಂಕಾ ತಂಡದವರು ಮೈಕಲ್ ಕ್ಲಾರ್ಕ್ ಬಳಗವನ್ನು ಕಾಡಿದರು. ಎರಡನೇ ಪಂದ್ಯದಲ್ಲಿ ನಿರಾಯಾಸವಾಗಿ ಗೆಲುವು ಕೂಡ ಪಡೆದರು. ಆದ್ದರಿಂದಲೇ ಗುರುವಾರದ ಪಂದ್ಯ ಅಗತ್ಯ ಎನಿಸಿದ್ದು.

ಗಾಯಾಳುಗಳ ಸಮಸ್ಯೆಯಿಂದ ಸಂಕಷ್ಟದಲ್ಲಿ ಸಿಲುಕಿರುವ ಹಾಗೂ ಬೌಲಿಂಗ್‌ನಲ್ಲಿ ಬಲ ಕಳೆದುಕೊಂಡಿರುವ ಆಸ್ಟ್ರೇಲಿಯಾಕ್ಕೆ ಮತ್ತೊಮ್ಮೆ ಆಪತ್ತು ಎದುರಾಗುವಂತೆ ಮಾಡುವ ಛಲವೂ ಸಿಂಹಳೀಯರಿಗಿದೆ. ಆದ್ದರಿಂದಲೇ ಆತಿಥೇಯ ಪಾಳಯದಲ್ಲಿ ಭಯದ ಸುಳಿಗಾಳಿ! ತನ್ನ ಬೌಲಿಂಗ್ ಶಕ್ತಿಯನ್ನು ನೆಚ್ಚಿಕೊಂಡಿದ್ದ ಕ್ಲಾರ್ಕ್ ಪಡೆಯು ಲಂಕಾ ವಿರುದ್ಧ ಎರಡನೇ ಯಶಸ್ಸಿನ ಹೆಜ್ಜೆ ಇಡಲಾಗದೇ ಎಡವಿತು. ಆದ್ದರಿಂದಲೇ ಈಗ ಒತ್ತಡ ಹೆಚ್ಚಿದೆ. ತಾಯ್ನಾಡಿನಲ್ಲಿ ಟ್ರೋಫಿ ಕೈತಪ್ಪುವ ಅಪಾಯವೂ ಎದುರಾಗಿದೆ. 

 ಮೊದಲ ಫೈನಲ್‌ನಲ್ಲಿ ಆಸ್ಟ್ರೇಲಿಯಾದವರು ಪಟ್ಟ ಕಷ್ಟಕ್ಕೆ ಹೋಲಿಸಿದರೆ ನಂತರ ಲಂಕಾ ಗೆದ್ದ ರೀತಿ ತೀರ ಸುಲಭ. ಈ ಅಂಶವನ್ನು ಗಮನಿಸಿದಾಗ ಕ್ಲಾರ್ಕ್ ನೇತೃತ್ವದ ತಂಡವು ಮಾಹೇಲ ಜಯವರ್ಧನೆ ಬಳಗದ ಎದುರು ದುರ್ಬಲವಾಗಿ ಕಾಣಿಸುವುದು ಸಹಜ. ಲಂಕಾದವರು ಭಾರಿ ವಿಶ್ವಾಸದಿಂದ ಬ್ಯಾಟಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯಾ ಬೌಲರ್‌ಗಳು ಅವರಿಗೆ ಅಪಾಯಕಾರಿಯಾಗಿ ಕಾಣಿಸುತ್ತಿಲ್ಲ.

ಒಂದೆಡೆ ಲಂಕಾ ಭರವಸೆ ಹೆಚ್ಚಿಸಿಕೊಂಡಿದ್ದರೆ; ಇನ್ನೊಂದೆಡೆ ಆಸೀಸ್ ಕಷ್ಟಗಳು ಹೆಚ್ಚಿವೆ. ನಿರ್ಣಾಯಕ ಪಂದ್ಯಕ್ಕೆ ಮುನ್ನವೇ ನಾಯಕ ಕ್ಲಾರ್ಕ್ ಬಲಗಾಲಿನ ಸ್ನಾಯು ಸೆಳೆತದಿಂದ ಬಳಲಿದ್ದಾರೆ. ಪ್ರಮುಖ ವೇಗಿ ಜೇಮ್ಸ ಪ್ಯಾಟಿನ್ಸನ್ ಅವರಿಗೂ ಗಾಯದ ಸಮಸ್ಯೆ ಕಾಡಿದೆ. ಚಪ್ಪೆಯ ನೋವಿನ ಕಾರಣ ಸರಾಗವಾಗಿ ಬೌಲಿಂಗ್ ಮಾಡುವುದು ಸಾಧ್ಯವಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಅಂತಿಮ ಹೋರಾಟಕ್ಕೆ ಯೋಜನೆ ಸಿದ್ಧಪಡಿಸುವುದು ಭಾರಿ ಕಷ್ಟದ ಕೆಲಸ.

ಸರಣಿಯಲ್ಲಿ ಎರಡು ಶತಕ ಗಳಿಸಿರುವ ಡೇವಿಡ್ ವಾರ್ನರ್ ಹಾಗೂ ವೇಗಿ ಬ್ರೆಟ್ ಲೀ ಅವರೂ ಗಾಯಾಳುಗಳ ಪಟ್ಟಿ ಸೇರಿದ್ದಾರೆ. ಸಿಂಹಳೀಯರಿಗೆ ಬ್ಯಾಟಿಂಗ್ ವಿಭಾಗದಲ್ಲಿ ಆತಂಕವಿಲ್ಲ. ಬೌಲಿಂಗ್‌ನಲ್ಲಿಯೂ ನಿರಾಸೆ ಕಾಡದೆನ್ನುವ ಭರವಸೆ ಇದೆ.

ಪಂದ್ಯ ಆರಂಭ: (ಭಾರತೀಯ ಕಾಲಮಾನ) ಬೆಳಿಗ್ಗೆ 8.50ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.