ADVERTISEMENT

ಆತಿಥೇಯರಿಗೆ ಸರಣಿ ಗೆಲುವು

ಕ್ರಿಕೆಟ್‌: ಆ್ಯಂಡರ್‌ಸನ್‌, ಗುಪ್ಟಿಲ್‌ ಅಬ್ಬರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2016, 19:47 IST
Last Updated 22 ಜನವರಿ 2016, 19:47 IST
ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ನ್ಯೂಜಿಲೆಂಡ್‌ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು  ಎಎಫ್‌ಪಿ ಚಿತ್ರ
ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ನ್ಯೂಜಿಲೆಂಡ್‌ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ವೆಲ್ಲಿಂಗ್ಟನ್‌ (ಎಎಫ್‌ಪಿ): ವೇಗದ ಆಟಕ್ಕೆ ಹೆಸರಾಗಿರುವ ಮಾರ್ಟಿನ್‌ ಗುಪ್ಟಿಲ್‌ ಮತ್ತು ಕೋರಿ ಆ್ಯಂಡರ್‌ಸನ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಎದುರಿನ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–1ರಲ್ಲಿ ಗೆದ್ದುಕೊಂಡಿತು.

ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಆತಿಥೇಯರು 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 196 ರನ್ ಕಲೆ ಹಾಕಿದರು. ಸವಾಲಿನ ಗುರಿಯ ಎದುರು ಮುಗ್ಗರಿಸಿದ ಪಾಕ್‌ 16.1 ಓವರ್‌ಗಳಲ್ಲಿ 101 ರನ್‌ ಕಲೆ ಹಾಕುವಷ್ಟರಲ್ಲಿ ಆಲೌಟ್‌ ಆಯಿತು. 

ಅಬ್ಬರ: ಇತ್ತೀಚಿನ ಟೂರ್ನಿಗಳಲ್ಲಿ ಉತ್ತಮ ಬ್ಯಾಟಿಂಗ್ ತೋರುತ್ತಿರುವ ಗುಪ್ಟಿಲ್‌ ಮಹತ್ವದ ಪಂದ್ಯದಲ್ಲಿಯೂ ಉತ್ತಮ ಆರಂಭ ನೀಡಿದರು. ಗುಪ್ಟಿಲ್‌ ಕೇವಲ 19 ಎಸೆತಗಳಲ್ಲಿ 42 ರನ್‌ ಗಳಿಸಿದ್ದು ಇದಕ್ಕೆ ಸಾಕ್ಷಿ. ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಿಡಿಸಿದರು. ಇವರ ಆಟಕ್ಕೆ ಕೇನ್ ವಿಲಿಯಮ್ಸನ್‌ (33) ಕೂಡ ನೆರವಾದರು. ಈ ಜೋಡಿ ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 57 ರನ್ ಹಾಕಿತು. ಬಳಿಕ ಕೋರಿ ಆ್ಯಂಡರ್‌ಸನ್‌ ಸುಂದರ ರನ್‌ ಸೌಧ ನಿರ್ಮಿಸಿದರು.

42 ಎಸೆತಗಳನ್ನು ಎದುರಿಸಿದ ಆ್ಯಂಡರ್‌ಸನ್‌ 82 ರನ್‌ ಕಲೆ ಹಾಕಿದರು. ಬೌಂಡರಿ (6 ) ಮತ್ತು ಸಿಕ್ಸರ್‌ (4) ಮೂಲಕವೇ 48  ರನ್‌ ಬಾರಿಸಿದರು. ಈ ಬ್ಯಾಟ್ಸ್‌ಮನ್‌ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಬಾರಿಸಿದ ವೈಯಕ್ತಿಕ ಗರಿಷ್ಠ ಮೊತ್ತವಿದು.

ವೈಫಲ್ಯ:  ಪಾಕ್ ತಂಡಕ್ಕೆ ಆರಂಭದಲ್ಲಿಯೇ ಆಘಾತ ಕಾಡಿತು. ಮಹಮ್ಮದ್ ಹಫೀಜ್‌ (2), ಅಹ್ಮದ್ ಶೆಹ್ಜಾದ್‌ (8) ಮತ್ತು ಮಹಮ್ಮದ್‌ ರಿಜ್ವಾನ್‌ (4), ಉಮರ್ ಅಕ್ಮಲ್‌ (5) ಮತ್ತು ಶಾಹಿದ್‌ ಅಫ್ರಿದಿ (8) ಬ್ಯಾಟಿಂಗ್ ವೈಫಲ್ಯ ಕಂಡರು. ಇದಕ್ಕೆ ಕಾರಣವಾಗಿದ್ದು ಆ್ಯಡಮ್‌ ಮಿಲ್ನೆ ಮತ್ತು ಗ್ರಾಂಟ್‌ ಎಲಿಯಟ್ ಅವರ ಚುರುಕಿನ ಬೌಲಿಂಗ್‌.

ಇವರಿಬ್ಬರೂ ಬೌಲರ್‌ಗಳು ತಲಾ ಮೂರು ವಿಕೆಟ್‌ ಕಬಳಿಸಿದರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಆ್ಯಂಡರ್‌ಸನ್‌ ಎರಡು ವಿಕೆಟ್‌ ಕಬಳಿಸಿ ಬೌಲಿಂಗ್‌ನಲ್ಲೂ ಗಮನ ಸೆಳೆದರು. ಈ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಸೋಮವಾರ ಆರಂಭವಾಗಲಿದೆ. 

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 196 (ಮಾರ್ಟಿನ್ ಗುಪ್ಟಿಲ್‌ 42, ಕೇನ್‌ ವಿಲಿಯಮ್ಸನ್‌ 33, ಕೋರಿ ಆ್ಯಂಡರ್‌ಸನ್‌ ಔಟಾಗದೆ 82, ಗ್ರಾಂಟ್‌ ಎಲಿಯಟ್‌ 19; ವಹಾಬ್‌ ರಿಯಾಜ್‌ 43ಕ್ಕೆ2). ಪಾಕಿಸ್ತಾನ 16.1 ಓವರ್‌ಗಳಲ್ಲಿ 101 (ಶೊಯಬ್‌ ಮಲಿಕ್‌ 14, ಸರ್ಫರಾಜ್‌ ಅಹ್ಮದ್ 41; ಕೋರಿ ಆ್ಯಂಡರ್‌ಸನ್‌ 17ಕ್ಕೆ2, ಆ್ಯಡಮ್ ಮಿಲ್ನೆ 8ಕ್ಕೆ3, ಗ್ರಾಂಟ್ ಎಲಿಯಟ್‌ 7ಕ್ಕೆ3). ಫಲಿತಾಂಶ: ನ್ಯೂಜಿಲೆಂಡ್‌ ತಂಡಕ್ಕೆ 95 ರನ್ ಗೆಲುವು. ಪಂದ್ಯ ಶ್ರೇಷ್ಠ: ಕೋರಿ ಆ್ಯಂಡರ್‌ಸನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.