ADVERTISEMENT

ಆಯ್ಕೆ ಸಮಿತಿ ಏನು ಮಾಡಬಹುದು?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಕೋಲ್ಕತ್ತ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯಕ್ಕೆ ಮುಂಬೈನಲ್ಲಿ ಸೋಲು ಕಂಡ ತಂಡವನ್ನೇ ಉಳಿಸಿಕೊಂಡಿದ್ದ ಕಾರಣ ಟೀಕೆಗೆ ಗುರಿಯಾಗಿರುವ ರಾಷ್ಟ್ರೀಯ ಆಯ್ಕೆ ಸಮಿತಿ ಮುಂದೆ ಈಗ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ

ನಾಗಪುರದಲ್ಲಿ ನಡೆಯಲಿರುವ ಸರಣಿಯ ಅಂತಿಮ ಪಂದ್ಯಕ್ಕೆ ಭಾನುವಾರ ಭಾರತ ತಂಡದ ಆಯ್ಕೆ ನಡೆಯಲಿದ್ದು, ಆಯ್ಕೆ ಸಮಿತಿ ಯಾವ ರೀತಿಯ ಹೆಜ್ಜೆ ಇಡಲಿದೆ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸ್ವದೇಶದಲ್ಲಿಯೇ ದೋನಿ ಬಳಗ ಸತತ ಎರಡನೇ ಪಂದ್ಯದಲ್ಲಿ ಸೋಲಿನ ಅಪಾಯದಲ್ಲಿರುವುದರಿಂದ ಈಗ ಆಯ್ಕೆ ಸಮಿತಿ ಒತ್ತಡಕ್ಕೆ ಸಿಲುಕಿರುವುದು ನಿಜ. ಹಾಗಾಗಿ ಕೆಲ ಬದಲಾವಣೆ ನಿರೀಕ್ಷಿಸಲಾಗುತ್ತಿದೆ.

ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ. ಉಳಿದ ಸದಸ್ಯರು ಸಭೆಯ ವೇಳೆಗೆ ಆಗಮಿಸುವ ನಿರೀಕ್ಷೆ ಇದೆ.

ಪ್ರಮುಖವಾಗಿ ಕೊಹ್ಲಿ, ಯುವರಾಜ್, ಜಹೀರ್, ಇಶಾಂತ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹರಭಜನ್ ಬದಲು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅಥವಾ ಪಿಯೂಷ್ ಚಾವ್ಲಾಗೆ ಸ್ಥಾನ ಲಭಿಸುವ ನಿರೀಕ್ಷೆ ಇದೆ.

ಇಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಚಿನ್ 76 ರನ್ ಗಳಿಸಿದ್ದರಾದರೂ ಎರಡನೇ ಇನಿಂಗ್ಸ್‌ನಲ್ಲಿ ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ ಅವರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಕೂಡ ಕಡಿಮೆ.

ಮುಂಬೈನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಸೋತಿದ್ದರೂ ಆಯ್ಕೆ ಸಮಿತಿ ಅದೇ ತಂಡವನ್ನು ಉಳಿಸಿಕೊಂಡಿತ್ತು. ಇದಕ್ಕೆ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ವಿಶ್ಲೇಷಕರು ಟೀಕಾ ಪ್ರಹಾರ ನಡೆಸಿದ್ದರು. ಆದರೆ ಆಯ್ಕೆದಾರರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ದೋನಿ ಬಳಗ ವಿಫಲವಾಗಿದೆ. ಹಾಗಾಗಿ ಪಾಟೀಲ್ ಸಾರಥ್ಯದ ಸಮಿತಿ ಬದಲಾವಣೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆದರೆ ಯಾವ ರೀತಿ ಎಂಬುದು ಮಾತ್ರ ಇನ್ನೂ ನಿಗೂಢ. ನಾಲ್ಕನೇ ಟೆಸ್ಟ್ ನಾಗಪುರದಲ್ಲಿ (ಡಿ.13-17) ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.